ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ ಮುನ್ಸೂಚನೆ ಬೇಕಾಗಿದೆ ಸನ್ನದ್ಧತೆ

Last Updated 31 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಿರೋಧಾಭಾಸ ಎಂದರೆ ಇದು. ದೇಶದ ವಾಣಿಜ್ಯ ರಾಜಧಾನಿ ಎಂದೇ ಹೆಸರಾದ ಮುಂಬೈ ಮಹಾನಗರ ಮಹಾಮಳೆಗೆ ತತ್ತರಿಸಿ ಹೋಗಿದೆ. ಆದರೆ ನಮ್ಮ ರಾಜ್ಯದಲ್ಲಿ ನಾವು ಅಗತ್ಯದಷ್ಟು ಮಳೆ ಇಲ್ಲದೆ ತಲ್ಲಣಿಸಿದ್ದೇವೆ. ಮೋಡ ಬಿತ್ತನೆಯ ಮೂಲಕ ಮಳೆ ಬರಿಸುವ ಪ್ರಯತ್ನಗಳೂ ಪೂರ್ಣ ಫಲಕೊಟ್ಟಿಲ್ಲ. ಈಗೇನೋ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳು ನಮ್ಮಲ್ಲಿ ಒಳ್ಳೆಯ ಮಳೆಯಾಗಲಿದೆ ಎಂಬ ಮುನ್ಸೂಚನೆ ಕೊಟ್ಟಿದೆ. ‘ಪ್ರವಾಹ ಉಂಟಾಗಬಹುದು; ಆದ್ದರಿಂದ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಸಾಧಾರಣ ಮಳೆಗೇ ಬೆಂಗಳೂರಿನಂತಹ ಮಹಾನಗರ ತರಗುಟ್ಟಿದ ವಿದ್ಯಮಾನಗಳು ನಮ್ಮ ಕಣ್ಣಮುಂದೆಯೇ ಇವೆ. ಬೆಂಗಳೂರಿನಲ್ಲಿ ಈಚೆಗೆ ಬಿದ್ದ ಮಳೆಯಿಂದ ಜನಜೀವನವೇ ಅಸ್ತವ್ಯಸ್ತವಾಗಿತ್ತು. ರಾಜಕಾಲುವೆಗಳ ಒತ್ತುವರಿ, ಕೆರೆಗಳ ಗುಳುಂ, ಅವ್ಯವಸ್ಥಿತ ರೀತಿಯಲ್ಲಿ ಕಟ್ಟಡಗಳ ನಿರ್ಮಾಣ, ನೀರು ಇಂಗುವ ಅವಕಾಶಗಳನ್ನೆಲ್ಲ ಮುಚ್ಚಿ ಹಾಕಿದ್ದರ ಪರಿಣಾಮ ಇದು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೀಗಾಗಿ, ಮುಂಬೈಯ ಮಹಾಮಳೆ ಮತ್ತು ಅದರಿಂದ ಸೃಷ್ಟಿಯಾದ ಸಮಸ್ಯೆಗಳಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ.

ಮುಂಬೈ ವಿಚಾರಕ್ಕೆ ಬಂದರೆ, ಅಲ್ಲಿನ ಮಳೆಯ ರೌದ್ರಾವತಾರ ಮತ್ತು ಅದರ ಭೀಕರ ಪರಿಣಾಮಗಳಿಗೂ, ಬದಲಾಗುತ್ತಿರುವ ಜೀವನಶೈಲಿ ಮತ್ತು ಅಲ್ಲಿ ಅನುಸರಿಸುತ್ತಿರುವ ನಗರೀಕರಣಕ್ಕೂ ಸಂಬಂಧ ಇದೆ. ಅದು ಸಮುದ್ರಕ್ಕೆ ಹೊಂದಿಕೊಂಡ ನಗರ. ಅಡ್ಡಡ್ಡವಾಗಿ ಬೆಳೆಯಲು ಅವಕಾಶ ಕಡಿಮೆ. ಹೀಗಾಗಿ ಇರುವ ಜಾಗವನ್ನೇ ಹೆಚ್ಚು ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಬಳಸಿಕೊಳ್ಳಬೇಕಾಗಿತ್ತು. ಆದರೆ ವಾಸ್ತವದಲ್ಲಿ ಹಾಗೆ ಆಗುತ್ತಿಲ್ಲ. ಕಟ್ಟಡ ನಿರ್ಮಾಣ ಮಾಫಿಯಾ ಮತ್ತು ಭೂ ಮಾಫಿಯಾಗಳಿಗೆ ಅದೆಲ್ಲ ಬೇಕೂ ಇಲ್ಲ. ಭೂಮಿಗೆ ಬಿದ್ದ ಮಳೆ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದ್ದಬದ್ದ ಚರಂಡಿಗಳಲ್ಲಿ ಪ್ಲಾಸ್ಟಿಕ್‌ ಕಸಗಳು ತುಂಬಿಕೊಂಡು ನೀರಿನ ಸರಾಗ ಹರಿವಿಗೆ ಅಡ್ಡಿ ಮಾಡುತ್ತಿವೆ. ಇದರ ಜತೆಗೆ ಪ್ರಾಕೃತಿಕ ಸಮಸ್ಯೆಯೂ ಇದೆ. ಮಳೆ– ಗಾಳಿಯ ಜತೆಗೆ ಆಗಾಗ ಸಮುದ್ರದ ಸಹಜ ಉಬ್ಬರ. ಆ ಸಮಯದಲ್ಲಿ ಮಳೆ ನೀರು ಸಮುದ್ರ ಸೇರುವ ಬದಲು ವಾಪಸ್‌ ನಗರಕ್ಕೇ ನುಗ್ಗುತ್ತದೆ. ಹೀಗಿರುವಾಗ ಮಳೆ ಬಂದರೆ ಮುಂಬೈ ಮುಳುಗದೇ ಬೇರೆ ದಾರಿ ಏನಿದೆ? 2005ರ ಜುಲೈ 26ರಂದು ಅಲ್ಲಿ ಒಂದೇ ದಿನ 944 ಮಿ.ಮೀ. ಮಳೆ ಸುರಿದಿತ್ತು. ಶತಮಾನದ ದಾಖಲೆ ಮುರಿದ ಆ ಮಹಾಮಳೆಗೆ ಇಡೀ ನಗರದಲ್ಲಿ ಬದುಕೇ ಸ್ತಬ್ಧಗೊಂಡಿತ್ತು. ನೂರಾರು ಜನ ಸಾವಿಗೀಡಾಗಿದ್ದರು. ಈ ಸಲದ್ದು ಅಲ್ಲಿ 15 ವರ್ಷಗಳ ನಂತರದ ದೊಡ್ಡ ಮಳೆ. ದೇಶದ ಅತ್ಯಂತ ಸಿರಿವಂತ ಮಹಾನಗರ ಪಾಲಿಕೆಯನ್ನು ಹೊಂದಿದ್ದರೂ ಸನ್ನದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಕರಾವಳಿಗೆ ಹೊಂದಿಕೊಂಡ ನಗರಗಳಲ್ಲೆಲ್ಲ ಮಳೆ ಬಂದರೆ ನೀರು ನಿಲ್ಲುವುದು ಸಹಜ ಎಂದು ನಮಗೆ ನಾವೇ ಹೇಳಿಕೊಳ್ಳುವಂತೆಯೂ ಇಲ್ಲ. ಏಕೆಂದರೆ ಸಿಂಗಪುರ, ಹಾಂಕಾಂಗ್‌ನಂತಹ ನಗರಗಳು ಕೂಡ ಸಮುದ್ರ ದಂಡೆಯಲ್ಲಿವೆ. ಸರಿಸುಮಾರು ನಮ್ಮ ಬೆಂಗಳೂರಿನಷ್ಟಿರುವ ಸಿಂಗಪುರವಂತೂ ಸಮುದ್ರದಿಂದಲೇ ಸುತ್ತವರಿದಿದೆ. ಆದರೆ ಅಲ್ಲೆಲ್ಲ ಹೀಗೆ ನೀರು ನುಗ್ಗಿ ನಿಲ್ಲುವುದು ಕಡಿಮೆ. ಅದಕ್ಕೆ ಕಾರಣ ಅವರ ದೂರದೃಷ್ಟಿ, ಯೋಜನಾಬದ್ಧ ನಗರೀಕರಣ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಆಗುವುದಿಲ್ಲ?

ಈಗಿನ ಮಳೆಯ ಆರ್ಭಟ ಮುಂಬೈ ಮಾತ್ರವಲ್ಲ ನಮ್ಮ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಲ್ಲೂ ಸಾಕಷ್ಟು ಅನಾಹುತವನ್ನೇ ಮಾಡಿದೆ. ಒಟ್ಟೂ 18 ಸಾವಿರ ಶಾಲಾ ಕಟ್ಟಡಗಳು ಕುಸಿದಿವೆ ಅಥವಾ ಜಖಂಗೊಂಡಿವೆ. ಬಾಂಗ್ಲಾದಲ್ಲಂತೂ ದೇಶದ ಮೂರನೇ ಒಂದು ಭಾಗ ನೀರಲ್ಲಿ ನಿಂತಿದೆ. ಪಾಕಿಸ್ತಾನದ ಕರಾಚಿ ನಗರದೊಳಗೆ ಸಮುದ್ರದ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಸೃಷ್ಟಿಸಿತ್ತು. 150ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮಳೆ ನೇಪಾಳದ ಮಟ್ಟಿಗಂತೂ ಒಂದು ದಶಕದಲ್ಲಿ ಅತ್ಯಂತ ಭೀಕರ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಅಮೆರಿಕದ ಹೂಸ್ಟನ್‌ ಕೂಡ ಮಳೆ, ಚಂಡಮಾರುತದಿಂದ ಮುಳುಗಿತ್ತು. ಮನುಷ್ಯನ ದುರಾಸೆ, ತಪ್ಪುಗಳಿಂದಾಗಿ ಹವಾಮಾನವೇ ಬದಲಾಗುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಬರುತ್ತದೆ ಅಥವಾ ಅಗತ್ಯ ಇದೆ ಎನ್ನುವಾಗಲೇ ಕೈಕೊಡುತ್ತದೆ. ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಿಸದೇ ಹೋದರೆ, ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಗೋರಿ ನಾವೇ ತೋಡಿಕೊಂಡಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT