ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಪ್ರೌಢಶಾಲೆಗಳಿಗೆ ಬಯೊಮೆಟ್ರಿಕ್‌

Last Updated 1 ಸೆಪ್ಟೆಂಬರ್ 2017, 4:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬರಲಿ ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳು ಬಯೊಮೆಟ್ರಿಕ್‌ ಯಂತ್ರಗಳನ್ನು ಅಳವಡಿಸಿಕೊಂಡಿವೆ.
ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ.

ಧಾರವಾಡ ಜಿಲ್ಲೆಯ ಹಲವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ, ಅಂತಹ ಶಿಕ್ಷಕರಿಗೆ ‘ಪಾಠ’ ಕಲಿಸುವ ಸಲುವಾಗಿ ಗ್ರಾಮಸ್ಥರೇ ಕೊಠಡಿ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಇವೆ.

ಈ ವಿಷಯ ಕೆಲ ದಿನಗಳ ಹಿಂದೆ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಶಿಕ್ಷಕರನ್ನು ಶಿಸ್ತಿಗೆ ಒಳಪಡಿಸುವ ಸಲುವಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್‌ ರಾಯಮಾನೆ ಅವರು ಮೊದಲ ಹಂತದಲ್ಲಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಬಯೊಮೆಟ್ರಿಕ್‌ ಯಂತ್ರಗಳನ್ನು ಅಳವಡಿಸುವಂತೆ ಡಿಡಿಪಿಐ ಎನ್‌.ಎಚ್. ನಾಗೂರಗೆ ಸೂಚಿಸಿದ್ದರು.

ಈ ಸೂಚನೆಯನ್ವಯ ನಾಗೂರ ಇದೇ 26ರಂದು ಜಿಲ್ಲೆಯ ಎಲ್ಲ ಏಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಿಗೆ ಜ್ಞಾಪನ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿರುವ 108 ಸರ್ಕಾರಿ, 144 ಅನುದಾನಿತ ಹಾಗೂ 134 ಅನುದಾನರಹಿತ ಪ್ರೌಢಶಾಲೆಗಳಲ್ಲಿ ಸೆಪ್ಟೆಂಬರ್‌ ಅಂತ್ಯದ ಒಳಗಾಗಿ ಬಯೊಮೆಟ್ರಿಕ್‌ ಅಳವಡಿಸಲು ನಿರ್ದೇಶನ ನೀಡುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಎಲ್ಲ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಹಾಜರಿರಬೇಕು. ಬೆಳಿಗ್ಗೆ ಹಾಗೂ ಸಂಜೆ ಬಯೊಮೆಟ್ರಿಕ್‌ ಒತ್ತುವುದು ಕಡ್ಡಾಯ.
ಶಾಲಾ ಅನುದಾನದಲ್ಲೇ ಖರೀದಿ: ಸರ್ಕಾರಿ ಪ್ರೌಢಶಾಲೆಗಳಿಗೆ ಅಗತ್ಯವಿರುವ ಬಯೊಮೆಟ್ರಿಕ್‌ ಯಂತ್ರಗಳನ್ನು ಶಾಲಾ ಅನುದಾನ, ನಿರ್ವಹಣೆ ಅನುದಾನ ಅಥವಾ ಲಭ್ಯವಿರುವ ಸಂಚಿತ ನಿಧಿಯನ್ನು ಬಳಸಿಕೊಂಡು ಖರೀದಿಸಬೇಕು. ಇಲ್ಲವೇ ದಾನಿಗಳನ್ನು ಸಂಪರ್ಕಿಸಿ ಇದಕ್ಕೆ ಹಣ ಹೊಂದಿಸಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

* * 

ಶಿಕ್ಷಕರು ಸಕಾಲಕ್ಕೆ ತರಗತಿಗೆ ಬರಲು ಬಯೊಮೆಟ್ರಿಕ್‌ ಅಳವಡಿಸಲಾಗುತ್ತಿದೆ. ಸಮಯ ಪಾಲಿಸದಿದ್ದರೆ ನೋಟಿಸ್‌ ನೀಡಿ ಶಿಸ್ತುಕ್ರಮ ಜರುಗಿಸಲಾಗುವುದು
ಎನ್.ಎಚ್. ನಾಗೂರ
ಡಿಡಿಪಿಐ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT