ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌ ಸಡಗರಕ್ಕೆ ಸಜ್ಜಾದ ಕೆಎಸ್‌ಸಿಎ

Last Updated 1 ಸೆಪ್ಟೆಂಬರ್ 2017, 4:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹತ್ತು ದಿನ ಇಲ್ಲಿ ನಡೆಯಲಿರುವ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಗೆ ರಾಜನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣ ಸಜ್ಜಾಗುತ್ತಿದೆ. ಈಗಾಗಲೇ ಪಿಚ್‌ ಸಿದ್ಧತೆ ಕಾರ್ಯ ಪೂರ್ಣಗೊಂಡಿದೆ.

ಮೈದಾನದಲ್ಲಿ ನಿತ್ಯ ನೀರು ಹಾಕುವುದು, ಗ್ಯಾಲರಿಗಳ ನಿರ್ಮಾಣ ಮತ್ತು ನೇರ ಪ್ರಸಾರದ ವ್ಯವಸ್ಥೆ ಕಾರ್ಯ ನಡೆಯುತ್ತಿದೆ. ಟೂರ್ನಿ ಸೆಪ್ಟೆಂಬರ್‌ 1ರಂದು ಬೆಂಗಳೂರಿನಲ್ಲಿ ಆರಂಭವಾಗಲಿದ್ದು ಅಲ್ಲಿ ಎರಡು ಪಂದ್ಯಗಳು ನಡೆಯಲಿವೆ. ನಂತರ ಮೈಸೂರಿನಲ್ಲಿ ಪಂದ್ಯಗಳು ಜರುಗಲಿವೆ. ಸೆ. 14ರಿಂದ ವಾಣಿಜ್ಯ ನಗರಿಯಲ್ಲಿ ಕೆಪಿಎಲ್‌ ಕಲರವ ಆರಂಭವಾಗಲಿದೆ.

ಕರ್ನಾಟಕ ತಂಡದ ನಾಯಕರಾಗಿರುವ ಆರ್‌. ವಿನಯ್‌ ಕುಮಾರ್‌ ಈ ಬಾರಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹುಬ್ಬಳ್ಳಿ ತಂಡ ಸದ್ಯಕ್ಕೆ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದು  ಸೆ.11ರಂದು ಇಲ್ಲಿಗೆ ಬರಲಿದೆ. ಕಳೆದ ವರ್ಷ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಉಂಟಾಗಿದ್ದರಿಂದ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಕೆಪಿಎಲ್‌ನ ಎಲ್ಲಾ ಪಂದ್ಯಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿತ್ತು.

ಈ ಬಾರಿಯೂ ನಾಕೌಟ್ ಹಂತದ ಪಂದ್ಯಗಳು ಇಲ್ಲಿ ಜರುಗಲಿವೆ. ಪೆವಿಲಿಯನ್‌, ಗಣ್ಯ ವ್ಯಕ್ತಿಗಳಿಗೆ ಕೂರಲು ಆಸನ ವ್ಯವಸ್ಥೆ, ಟೂರ್ನಿಯ ಪ್ರಾಯೋಜಕರಿಗೆ, ನೇರ ಪ್ರಸಾರ ಮಾಡಲಿರುವ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಗೆ ಸಿಬ್ಬಂದಿಗೆ ಹೀಗೆ ಎಲ್ಲರಿಗೂ ಪ್ರತ್ಯೇಕ ಸ್ಥಳದ ಸೌಲಭ್ಯ ಕಲ್ಪಿಸಲಾಗುತ್ತದೆ. ಕ್ರೀಡಾಂಗಣವು 8 ರಿಂದ 10 ಸಾವಿರ ಆಸನ ವ್ಯವಸ್ಥೆ ಹೊಂದಿದೆ. ನಿರ್ಮಾಣ ಹಂತದಲ್ಲಿರುವ ಕ್ಲಬ್‌ ಹೌಸ್‌ ಹಿಂಭಾಗದಲ್ಲಿ ಹೊಸ ಮಾಧ್ಯಮ ಕೊಠಡಿ ಮತ್ತು ವೀಕ್ಷಕ ವಿವರಣೆಗಾರರಿಗೆ ತಾತ್ಕಾಲಿಕ ಕೊಠಡಿ ಕಾರ್ಯ ಕೂಡ ಅಂತಿಮ ಹಂತದಲ್ಲಿದೆ.

ಇದರ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ ‘ಹುಬ್ಬಳ್ಳಿಯಲ್ಲಿ ಪಂದ್ಯ ಆರಂಭವಾಗಲು ಹತ್ತು ದಿನಗಳು ಬಾಕಿ ಉಳಿದಿವೆ. ನೇರ ಪ್ರಸಾರದ ಹೊಣೆ ಹೊತ್ತಿರುವ ವಾಹಿನಿಯವರೇ ತಮಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ನಾವು ಸ್ಥಳೀಯವಾಗಿ ಸೌಲಭ್ಯ         ಗಳನ್ನು ಕೊಟ್ಟರೆ ಸಾಕು. ಕ್ರೀಡಾಂಗಣದ ಸುತ್ತಲೂ ಗ್ಯಾಲರಿ ಸರಿಪಡಿಸುವ ಕೆಲಸ ಬಹುತೇಕ ಮುಗಿಯುವ ಹಂತದಲ್ಲಿದೆ’ ಎಂದರು.

‘ತವರಿನಲ್ಲಿ ಆಡಲು ಕಾತರ’
‘ಆರಂಭದ ಟೂರ್ನಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದಲ್ಲಿ ಆಡಿದ್ದೆ. ಎರಡು ವರ್ಷಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿದ್ದೇನೆ. ಇದುವರೆಗಿನ ಕೆಪಿಎಲ್‌ನ ಒಂದಲ್ಲಾ ಒಂದು ಟೂರ್ನಿಗಳಲ್ಲಿ ಉತ್ತರ ಕರ್ನಾಟಕದ ತಂಡಗಳಲ್ಲಿಯೇ ಆಡಿದ್ದರಿಂದ ನಾನೂ ಹುಬ್ಬಳ್ಳಿಯವನೇ ಆಗಿ ಹೋಗಿದ್ದೇನೆ. ತವರ ಅಭಿಮಾನಿಗಳ ಎದುರು ಆಡಲು ಕಾಯುತ್ತಿದ್ದೇನೆ’ ಎಂದು ಹುಬ್ಬಳ್ಳಿ ಟೈಗರ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಅಭಿಷೇಕ್‌ ರೆಡ್ಡಿ ಹೇಳಿದರು.

‘ಕೆಪಿಎಲ್‌ ಪಂದ್ಯಗಳನ್ನು ನೋಡಲು ಬೆಂಗಳೂರು, ಮೈಸೂರಿಗಿಂತ ಹುಬ್ಬಳ್ಳಿಯಲ್ಲಿಯೇ ಹೆಚ್ಚು ಜನ ಬರುತ್ತಾರೆ. ಇಲ್ಲಿನ ಆಕರ್ಷಕ ಕ್ರೀಡಾಂಗಣ, ಇಲ್ಲಿನ ಜನರು ನೀಡುವ ಬೆಂಬಲ ಮರೆಯಲು ಸಾಧ್ಯವೇ ಇಲ್ಲ. ನನ್ನ ಅದೃಷ್ಟಕ್ಕೆ ಈಗ ಅದೇ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದೆ’ ಎಂದು ಅವರು ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT