ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ್ಕರ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

Last Updated 1 ಸೆಪ್ಟೆಂಬರ್ 2017, 5:28 IST
ಅಕ್ಷರ ಗಾತ್ರ

ಹಾವೇರಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ನೇತೃತ್ವದಲ್ಲಿ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ‘ಕರ್ನಾಟಕದಲ್ಲಿ ಹುಟ್ಟಿ, ಕನ್ನಡದ ಅನ್ನ ತಿಂದು, ಕನ್ನಡದ ವಿರುದ್ಧವೇ ಉದ್ಧಟತನದ ಹೇಳಿಕೆ ನೀಡುವ ಲಕ್ಷ್ಮಿ  ಹೆಬ್ಬಾಳ್ಕರ ಕನ್ನಡ ವಿರೋಧಿಯಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂಜುಂಡೇಶ ಕಳ್ಳೇರ ಮಾತನಾಡಿ, ‘ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಗಡಿಭಾಗದಲ್ಲೂ ರಾಜಕೀಯ ಮಾಡುವ ಮೂಲಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ’ ಎಂದರು.

‘ಕಾಂಗ್ರೆಸ್‌ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾರಣ ಕೇಂದ್ರದ ಸರ್ಕಾರವನ್ನು ಜನತೆ ತಿರಸ್ಕರಿಸಿದ್ದಾರೆ. ಆದರೆ, ರಾಜ್ಯದ ಸರ್ಕಾರವೂ ಅದೇ ನೀತಿ ಮುಂದುವರಿಸಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೂ ಜನತೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ‘ಜೈ ಮಹಾರಾಷ್ಟ್ರ’ ಎಂದು ಹೇಳುವುದಾಗಿ ಕಾಂಗ್ರೆಸ್‌ ನಾಯಕಿ ಲಕ್ಷ್ಮಿ  ಹೆಬ್ಬಾಳ್ಕರ ಹೇಳಿದ್ದಾರೆ. ಇವರು ಹಿಂದಿ- ಮತ್ತು ಕನ್ನಡ, ಕೇಂದ್ರ ಮತ್ತು ರಾಜ್ಯ, ಹಿಂದೂ ಧರ್ಮದೊಳಗಿ ಜಾತಿಗಳ ಮಧ್ಯೆ ವಿಷದ ಬೀಜ ಬಿತ್ತುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಮುಖಂಡರು ಕನ್ನಡಿಗರು ಮತ್ತು ಮರಾಠರ ಮಧ್ಯೆ ಬೆಂಕಿ ಹಚ್ಚುವ ಹೇಳಿಕೆ ನೀಡಿ, ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು. ಸುರೇಶ ಹೊಸ್ಮನಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ದೈವಜ್ಞ, ಸಾಗರ ಅಂಗಡಿ, ಸತೀಶ್‌ ನಾಗನೂರ, ಪ್ರಕಾಶ ಉಜನಿಕೊಪ್ಪ, ಚನ್ನು ಮತ್ತಿಹಳ್ಳಿ, ಮಧುಕರ ನವಲೆ, ಶಶಿಧರ ಮುಗದೂರ, ಮಹಾದೇವಪ್ಪ ನಾಗಮ್ಮನವರ ಇದ್ದರು.

ಮಹಾರಾಷ್ಟ್ರ ಪರ ಹೇಳಿಕೆಗೆ ಆಕ್ರೋಶ
ಬ್ಯಾಡಗಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ  ಹೆಬ್ಬಾಳ್ಕರ  ಮಹಾರಾಷ್ಟ್ರ ಪರ ಹೇಳಿಕೆ ನೀಡಿರುವುದನ್ನು ಖಂಡಿಸಿ ಇಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ, ‘ಕರ್ನಾಟಕದವರಾದ ಲಕ್ಷ್ಮಿ ಹೆಬ್ಬಾಳ್ಕರ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜ್ಯದ ಜನರ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ.

ಕೂಡಲೇ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವೀರೇಂದ್ರ ಶೆಟ್ಟರ, ಎಪಿಎಂಸಿ ಮಾಜಿ ಸದಸ್ಯ ರವೀಂದ್ರ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಮಲ್ಲೇಶಪ್ಪ ಬಣಕಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ’
ಹಾನಗಲ್: ‘ಕನ್ನಡ ವಿರೋಧಿ ಹೇಳಿಕೆ ನೀಡಿರುವ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ ಅವರ ಮೇಲೆ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕವು ಗುರುವಾರ ಇಲ್ಲಿನ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ‘ರಾಜ್ಯ ವಿರೋಧಿ ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ ಅವರನ್ನು ಗಡಿ ಪಾರು ಮಾಡಬೇಕು. ಅವರ ಹೇಳಿಕೆಯನ್ನು ಸಚಿವ ಡಿಕೆಶಿ ಸಮರ್ಥಿಸುತ್ತಿರುವುದು ಖಂಡನಿಯ’ ಎಂದು ಟೀಕಿಸಿದರು.

ಮಾಜಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ‘ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ. ಅಭಿಮಾನ ಶೂನ್ಯ ಲಕ್ಷ್ಮಿ ಹೆಬ್ಬಾಳ್ಕರ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರು ನೀಡಿರುವ ಹೇಳಿಕೆ ನಾಚಿಕೆ ಹುಟ್ಟಿಸುವಂತಿದೆ. ಕನ್ನಡಿಗರ ಅಭಿಮಾನಕ್ಕೆ ಕಿಚ್ಚು ಹಚ್ಚುವ ಹೇಳಿಕೆಯನ್ನು ಬಿಜೆಪಿಯು ಖಂಡಿಸುತ್ತದೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಕಾರ್ಯದರ್ಶಿ ರಾಜು ಗೌಳಿ, ಶಿವಲಿಂಗಪ್ಪ ತಲ್ಲೂರ, ಮುಖಂಡರಾದ ಎ.ಎಸ್.ಬಳ್ಳಾರಿ, ಬಿ.ಎಸ್‌.ಅಕ್ಕಿವಳ್ಳಿ, ಪದ್ಮನಾಭ ಕುಂದಾಪುರ, ಕಲ್ಯಾಣಕುಮಾರ ಶೆಟ್ಟರ, ರಾಜಣ್ಣ ಪಟ್ಟಣದ, ರಾಜಣ್ಣ ಗೌಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT