ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗೆ ಸಿಗುತ್ತಿಲ್ಲ ಕಾಯಕಲ್ಪ

Last Updated 1 ಸೆಪ್ಟೆಂಬರ್ 2017, 7:09 IST
ಅಕ್ಷರ ಗಾತ್ರ

ಹನೂರು: ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಂದ ಆವೃತವಾಗಿದ್ದು, ಈ ಮಾರ್ಗದಲ್ಲಿ ಚಾಲಕರು ಭಯದಿಂದಲೇ ವಾಹನ ಚಾಲನೆ ಮಾಡುವಂತಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಿದ್ದ ಅಲ್ಪ ಮಳೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಗುಂಡಿಗಳು ನಿರ್ಮಾಣವಾಗಿವೆ. ತುಸು ಜೋರು ಮಳೆ ಸುರಿದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಚಾಲನೆ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿತಕ್ಕೊಳಗಾಗಿರುವ ಘಟನೆ ನಡೆದಿವೆ.

ಬಹುಕಾಲದ ಹಿಂದೆಯೇ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಅದನ್ನು ಕಾಟಾಚಾರಕ್ಕೆ ಮನಬಂದಂತೆ ಜಲ್ಲಿಕಲ್ಲು, ಮಣ್ಣು ತುಂಬಿ ಕಾಮಗಾರಿ ನಡೆಸಲಾಗಿದೆ. ಹಾಗಾಗಿ, ಮಳೆ ಬಂದಾಗ ಮತ್ತೆ, ಮಣ್ಣು ಕೊರೆದು ಗುಂಡಿಗಳು ನಿರ್ಮಾಣವಾಗಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಹೆದ್ದಾರಿ ದುರಸ್ತಿಪಡಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಹಲವು ಬಾರಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿವೆ. ಇಷ್ಟಾದರೂ ಸಂಬಂಧಿಸಿದ ಇಲಾಖೆ ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಳ್ಳೇಗಾಲದಿಂದ ಹನೂರುವರೆಗೆ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ ಎಂಬ ಮಾತನ್ನು 2 ವರ್ಷಗಳಿಂದಲೂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ರಸ್ತೆ ದಿನೇ ದಿನೇ ಹದಗೆಡುತ್ತಿದ್ದು, ವಾಹನ ಸವಾರರು ಹೆಣಗಾಡುವಂತಾಗಿದೆ.

ಮಾರ್ಗ ಬದಲಿಸಿದ ಬಸ್‌ಗಳು: ರಸ್ತೆಯ ಅಧ್ವಾನಕ್ಕೆ ಬೇಸೆತ್ತಿರುವ ಬಸ್ ಚಾಲಕರು ತಮ್ಮ ಸಂಚಾರ ಮಾರ್ಗವನ್ನೇ ಬದಲಾಯಿದ್ದಾರೆ. ಮಧುವನಹಳ್ಳಿಯಿಂದ ಚಿಕ್ಕಿಂದು ವಾಡಿ ಮಾರ್ಗವಾಗಿ ತೆರಳುತ್ತಿದ್ದ ಬಸ್‌ಗಳು ಈಗ ಲೊಕ್ಕನಹಳ್ಳಿ ರಸ್ತೆಯಲ್ಲಿ ತೆರಳಿ ದೊಡ್ಡಿಂದುವಾಡಿ ಮಾರ್ಗವಾಗಿ ಚಲಿಸುತ್ತಿವೆ.

ಇದರಿಂದ ಚಿಕ್ಕಿಂದುವಾಡಿ ಗ್ರಾಮದ ಜನರು ಬಸ್ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಬೇರೆ ಮಾರ್ಗದಲ್ಲಿ ಬಸ್ ಸಂಚರಿಸುತ್ತಿ ರುವುದರ ಬಗ್ಗೆ ಮಾಹಿತಿಯಿಲ್ಲದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ರಾಜ್ಯದಲ್ಲೇ ಹೆಚ್ಚು ಆದಾಯ ಗಳಿಸುವ ದೇವಾಲಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮಲೆಮಹ ದೇಶ್ವರ ಬೆಟ್ಟದಲ್ಲಿ ಮುಂಬರುವ ಆಯುಧಪೂಜೆ ಹಾಗೂ ದೀಪಾವಳಿ ವಿಶೇಷ ಪೂಜೆಗೆ ತೆರಳುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ಕಾಮಗಾರಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT