ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟತೆ ಮೆರೆದ ಶತಮಾನದ ಸ್ಮೃತಿಹಬ್ಬ

Last Updated 1 ಸೆಪ್ಟೆಂಬರ್ 2017, 9:09 IST
ಅಕ್ಷರ ಗಾತ್ರ

ಬೈಂದೂರು: ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂಟಪದ ಬವುಳಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ಈಚೆಗೆ ನಡೆದ ಉಳ್ಳೂರು ಮೂಕಾಂಬಿಕೆ ಅಮ್ಮ, ಮೊಗೇರಿ ಗೋಪಾಲಕೃಷ್ಣ ಅಡಿಗ, ಬಿ. ಎಚ್. ಶ್ರೀಧರರ ಶತಮಾನದ ಸ್ಮೃತಿಹಬ್ಬ ಆಪ್ತ ವಾತಾವರಣದಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ ಸಂಪನ್ನವಾಯಿತು.
ಪರಿಸರದ ಪರೋಪಕಾರಿ ಶತಾ ಯುಷಿ ವೈದ್ಯ ಸದಾನಂದ ಹೊಸ್ಕೋಟೆ ಸಮಾರಂಭದ ಉದ್ಘಾಟನೆ ಭಾಷಣ ರಹಿತವಾಗಿತ್ತು.

ಅದನ್ನನುಸರಿಸಿದ ವಿವಿಧ ಕಾರ್ಯಕ್ರಮಗಳ ಸರಣಿ ಬಿಡುವಿಲ್ಲದೆ ನಡೆದುವು. ವಿದ್ವತ್ಪೂರ್ಣ ವಿಚಾರ ಮಂಡನೆ, ನಡುನಡುವೆ ರಾಘವೇಂದ್ರ ಉಪಾಧ್ಯಾಯರ ಸಂಗೀತ, ಚಂದ್ರಶೇಖರ ಕೆದಿಲಾಯ ಮತ್ತು ಗರ್ತಿಕೆರೆ ರಾಘಣ್ಣ ಅವರ ಗಾಯನ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ. ರಾಮಕೃಷ್ಣ ಪೆಜತ್ತಾಯ, ಮಹೇಶ ಭಟ್ಟ ನಡೆಸಿಕೊಟ್ಟ ಅಪೂರ್ವದ ಆಶು ಕಾವ್ಯ ಮಂಡಲ, ಘಟಂ ವಾದನದಲ್ಲಿ ಜಾಗತಿಕ ಮಟ್ಟಕ್ಕೇರಿರುವ ಉಳ್ಳೂರು ಗಿರೀಶ ಉಡುಪರ ಲಯ ನಾದನಮನ, ನಾಗೂರು ಗಿರೀಶ ಐತಾಳ್ ನಿರ್ದೇಶನದಲ್ಲಿ ಪ್ರಸ್ತುತಗೊಂಡ ’ಮೂಕಜ್ಜಿ ಹಾಡು-ಪಾಡು’ ರೂಪಕ, ಭಾಗವತ ಹೇರಂಜಾಲು ಗೋಪಾಲ ಗಾಣಿಗ ಬಳಗ ಪ್ರದರ್ಶಿಸಿದ ಅಡಿಗರ ಹಾಡಿನ ಯಕ್ಷ ನೃತ್ಯಾಭಿನಯ ಸಮರಸವಾಗಿ ಬೆರೆತು ಸಭಾಸದರನ್ನು ಮುದಗೊಳಿಸಿದುವು.

ಭಾಗವಹಿಸಿದವರ ವಿಶೇಷ ಗಮನ ಸೆಳೆದುದು ಊಟದ ವಿಭಾಗ. ಮೆನುವನ್ನು ಭೋಜನ ಶಾಲೆಯಲ್ಲಿ ಎಲ್ಲರಿಗೆ ಕಾಣುವಂತೆ ಪ್ರದರ್ಶಿಸಿದ್ದಲ್ಲದೆ ಊಟದ ಮುನ್ನ ಅದರ ಮುದ್ರಿತ ಪ್ರತಿಯನ್ನು ಎಲ್ಲರಿಗೆ ವಿತರಿಸಲಾಗಿತ್ತು. ಪ್ರತಿ ಖಾದ್ಯಕ್ಕೆ ಸಾಹಿತಿ ಅಥವಾ ಅವರ ಕೃತಿಗಳ ಹೆಸರು ನೀಡಿ ಅದಕ್ಕೆ ಸಮರ್ಥನೆ ನೀಡಲಾಗಿತ್ತು.

ಉಪ್ಪು ಕಾದಂಬರಿಯ ಕಾರಣ ’ಮೊಗಸಾಲೆ ಉಪ್ಪು’, ಕೆಂಪು ಸೀರೆಯ ಮೂಕಜ್ಜಿಯನ್ನು ನೆನಪಿಸುವ ’ಮೂಕಜ್ಜಿ ಉಪ್ಪಿನಕಾಯಿ’, ಲಂಕೇಶರ ಹುಳಿಮಾವಿನ ಮರದಿಂದ ’ಲಂಕೇಶ್ ಉಪ್ಪಿನಕಾಯಿ’, ರವಿ ಬೆಳಗೆರೆ ಭಾಷೆಯ ಕಾರಣ ’ಬೆಳಗೆರೆ ಹಪ್ಪಳ’, ಶ್ರೀಧರರ ಹೆಸರಿನಲ್ಲಿ ’ಬವುಲಾಡಿ ಪಲ್ಯ’, ರನ್ನನ ಹುಟ್ಟೂರನ್ನು ಸ್ಮರಿಸಿ ’ಬೆಳಗಲಿ ಅನ್ನ’, ನಿಸಾರ್ ಅವರ ಕುರಿಗಳು ಸಾರ್ ಕವನದ ಸ್ಫೂರ್ತಿಯಿಂದ ’ನಿಸಾರ್ ಸಾರು’, ಪ್ರಾಸಕ್ಕೊಪ್ಪುವ ’ಕುಪ್ಪಳಿ ಹುಳಿ’, ಜಯಂತರ ’ಜಿಲೇಬಿ’, ಮೊಗೇರಿ ಪಾಯಸ, ಮಜ್ಜಿಗೆ ಇಲ್ಲದ ಊಟ ಎಂಬ ತ್ರಿಪದಿಯಿಂದಾಗಿ ’ಸರ್ವಜ್ಞ ಮಜ್ಜಿಗೆ’, ಇತ್ಯಾದಿ.

ಇವುಗಳ ಹಿಂದೆ ಹಾಸ್ಯ ಪ್ರಜ್ಞೆಯ ಜತೆಗೆ ಸಂಘಟಕರ ಸಾಹಿತ್ಯಾಭಿರುಚಿಯೂ ಪ್ರಕಟವಾಯಿತು. ಭಾಗಿಗಳಾದ ಹಲವರು ಇವೆಲ್ಲ ಕಾರಣಗಳಿಂದ ಸ್ಮೃತಿಹಬ್ಬ ಸ್ಮರಣೀಯವಾಯಿತು ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT