ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾನಸ್‌ನ ರುಚಿಕರ ಪೌಷ್ಟಿಕ ಅಡುಗೆಗಳು

Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅನಾನಸ್‌ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ ಎನ್ನುವುದುಂಟು. ಈ ಹಣ್ಣಿನ ಶರಬತ್ತು, ಸಾರು, ಗೊಜ್ಜುಗಳು ರುಚಿಯೋ ರುಚಿ! ಶುಭಕಾರ್ಯಗಳಿಗೆ ಅನಾನಸಿನ ಯಾವುದಾದರೊಂದು ಖಾದ್ಯ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇದು ಅಡುಗೆಮನೆಯನ್ನು ಆವರಿಸಿಕೊಂಡಿದೆ. ರುಚಿಗೂ ಆರೋಗ್ಯಕ್ಕೂ ಒದಗುವ ಅನಾನಸ್‌ ಹಣ್ಣಿನ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ, ಸರಸ್ವತಿ ಎಸ್‌. ಭಟ್‌.

ಅನಾನಸ್‌ ರಸಂ
ಬೇಕಾಗುವ ಸಾಮಗ್ರಿಗಳು: ಸಿಪ್ಪೆ ಮತ್ತು ತಿರುಳು ತೆಗದು ಸಣ್ಣಗೆ ತುಂಡು ಮಾಡಿದ ಅನಾನಸ್‌ ಹಣ್ಣು –1 ಕಪ್‌, ಎಣ್ಣೆ –1 ಚಮಚ, ತುಪ್ಪ –1 ಚಮಚ, ಕೊತ್ತುಂಬರಿ – 2 ಚಮಚ, ಮೆಂತೆ – 1/4 ಚಮಚ, ಜೀರಿಗೆ – 1/4 ಚಮಚ, ಕಾಳುಮೆಣಸು – 1/4 ಚಮಚ, ಒಣಮೆಣಸು – 2ರಿಂದ3, ಕರಿಬೇವು – 1 ಎಸಳು, ಟೊಮೆಟೊ –1, ಇಂಗು –ಚಿಟಿಕೆ, ಕೊತ್ತಂಬರಿ ಸೊಪ್ಪು– 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಬೆಲ್ಲ – 1 ಚಮಚ, ತೊಗರಿಬೇಳೆ – 1/2 ಕಪ್‌.

ತಯಾರಿಸುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕೊತ್ತಂಬರಿ, ಜೀರಿಗೆ, ಮೆಂತೆ, ಕಾಳುಮೆಣಸು, ಕೆಂಪುಮೆಣಸು ಹಾಕಿ ಹುರಿದು, ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬಾಣಲೆಗೆ ತುಪ್ಪ ಹಾಕಿ. ಬಿಸಿಯಾದ ಮೇಲೆ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಒಣಮೆಣಸು ತುಂಡು, ಕರಿಬೇವು, ಇಂಗು, ಟೊಮೆಟೊ ಪೇಸ್ಟ್ ಹಾಕಿ. ನಂತರ ತುಂಡು ಮಾಡಿ ಇರಿಸಿಕೊಂಡ ಅನಾನಸು ಹಾಕಿ. ನಂತರ ಬೆಂದ ಬೇಳೆ ಮಿಶ್ರಣ, ಬೆಲ್ಲ, ಉಪ್ಪು ಹಾಕಿ. 5-10 ನಿಮಿಷ ಕುದಿಸಿ. ನಂತರ ಕೊತ್ತಂಬರಿಸೊಪ್ಪನ್ನು ಹಾಕಿ ಒಲೆಯಿಂದ ಕೆಳಗಿಳಿಸಿ. ಈ ಸಾರು ಅನ್ನದೊಂದಿಗೆ ಸವಿದಷ್ಟೂ ಸವಿಯ ಬೇಕೆನಿಸುತ್ತದೆ.

ಅನಾನಸ್‌ ಕೂರ್ಮ
ಬೇಕಾಗುವ ಸಾಮಗ್ರಿಗಳು: ಎಣ್ಣೆ – 2 ಚಮಚ, ಸಾಸಿವೆ – 1/2 ಚಮಚ, ಈರುಳ್ಳಿ –1 (ಕ್ತತರಿಸಿದ್ದು), ಶುಂಠಿ –ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಬೆಲ್ಲ – 1 ಚಮಚ, ಕೆಂಪುಮೆಣಸು ಪುಡಿ –1 ಚಮಚ, ತೆಂಗಿನಹಾಲು –1 ಕಪ್, ಉಪ್ಪು– ರುಚಿಗೆ, ಸಣ್ಣಗೆ ಹೆಚ್ಚಿದ ಅನಾನಸ್‌ – 1 ಕಪ್‌.

ತಯಾರಿಸುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಈರುಳ್ಳಿ ಚೂರು ಹಾಕಿ ಹುರಿದು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಬೆಲ್ಲ, ಅರಸಿನಪುಡಿ, ಉಪ್ಪು, ಕೆಂಪುಮೆಣಸು ಪುಡಿ ಹಾಕಿ. ಈಗ ಅನಾನಸ್‌ ತುಂಡು, ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ತೆಂಗಿನ ಹಾಲು ಹಾಕಿ ಒಂದು ಕುದಿ ಕುದಿಸಿ ಪಾತ್ರೆಯನ್ನು ಕೆಳಗಿಳಿಸಿ. ಈ ಕೂರ್ಮ ಚಪಾತಿ, ನೀರುದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಅನಾನಸ್‌ ಚಟ್ನಿ
ಬೇಕಾಗುವ ಸಾಮಗ್ರಿಗಳು: ಅನಾನಸ್‌ ತುಂಡುಗಳು – 1ಕಪ್‌, ತೆಂಗಿನತುರಿ – 1/4ಕಪ್‌,. ಉದ್ದಿನಬೇಳೆ – 2 ಚಮಚ, ಕೆಂಪುಮೆಣಸು – 3ರಿಂದ 4, ಉದ್ದದ ಶುಂಠಿ – 1/4, ನಿಂಬೆರಸ – 1 ಚಮಚ, ಕೊತ್ತುಂಬರಿ ಸೊಪ್ಪು–1 ಚಮಚ, ಸಾಸಿವೆ – 1/2 ಚಮಚ, ಕೆಂಪುಮೆಣಸು – ಸಣ್ಣ ತುಂಡು, ಕರಿಬೇವು – 1 ಎಸಳು, ಎಣ್ಣೆ – 1ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬಾಣಲೆಗೆ ಉದ್ದಿನಬೇಳೆ, ಕೆಂಪುಮೆಣಸನ್ನು ಹಾಕಿ ಹುರಿಯಿರಿ. ನಂತರ ಎಣ್ಣೆ ಹಾಕಿ, ಅನಾನಸ್‌ ತುಂಡಗಳನ್ನು ಹಾಕಿ ಹುರಿದು, ತೆಂಗಿನ ತುರಿ, ಶುಂಠಿ, ನಿಂಬೆರಸ, ಕೊತ್ತಂಬರಿ ಸೊಪ್ಪು, ಉಪ್ಪು, ಹುರಿದ ಉದ್ದಿನ ಬೇಳೆ, ಕೆಂಪುಮೆಣಸುಗಳನ್ನು ಸೇರಿಸಿ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು ತುಂಡು, ಕರಿಬೇವನ್ನು ಹಾಕಿ ಒಗ್ಗರಣೆ ಕೊಡಿ. ತೆಂಗಿನ ತುರಿ ಹಾಕದೆಯೂ ಚಟ್ನಿ ಮಾಡಬಹುದು. ದೋಸೆ, ಇಡ್ಲಿಯೊಂದಿಗೆ ತಿನ್ನಲು ಚೆನ್ನ. ಅನಾನಸ್‌ ತುಂಬ ಹುಳಿಯಿದ್ದರೆ ಒಂದು ತುಂಡು ಬೆಲ್ಲ ಹಾಕಬಹುದು

ಅನಾನಸ್‌ ಗೊಜ್ಜು
ಬೇಕಾಗುವ ಸಾಮಗ್ರಿಗಳು: ಸಿಪ್ಪೆ ತೆಗೆದು ಹೆಚ್ಚಿದ ಅನಾನಸ್‌ ತುಂಡು – 1 ಕಪ್‌. ಬೆಲ್ಲ –1 ಚಮಚ, ತೆಂಗಿನತುರಿ – 4 ಕಪ್‌, ಉದ್ದಿನಬೇಳೆ – 1 ಚಮಚ, ಕಡಲೆಬೇಳೆ – 1/2 ಚಮಚ, ಕೆಂಪುಮೆಣಸು – 4ರಿಂದ 5, ಧನಿಯಾ – ಚಿಟಿಕೆ, ಮೆಂತೆ – ಚಿಟಿಕೆ, ಸಾಸಿವೆ – ಚಿಟಿಕೆ, ಇಂಗು – ಚಿಟಿಕೆ, ಎಣ್ಣೆ – 4 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕರಿಬೇವು – ಸ್ವಲ್ಪ, ಕೊತ್ತುಂಬರಿ ಸೊಪ್ಪು – ಸ್ವಲ್ಪ.

ತಯಾರಿಸುವ ವಿಧಾನ: ಅನಾನಸ್‌ ತುಂಡು, ಸ್ವಲ್ಪ ನೀರನ್ನು ಸೇರಿಸಿ ಬೇಯಿಸಿ. ಉದ್ದಿನಬೇಳೆ, ಕಡಲೆಬೇಳೆ, ಕೆಂಪುಮೆಣಸು, ಧನಿಯಾ, ಮೆಂತೆ, ಜೀರಿಗೆ ಇವಿಷ್ಟನ್ನು ಎಣ್ಣೆಯಲ್ಲಿ ಕೆಂಪಗೆ ಹುರಿದು ಪುಡಿ ಮಾಡಿ. ತೆಂಗಿನ ತುರಿಯನ್ನು ಸೇರಿಸಿ ರುಬ್ಬಿ. ಬೆಂದ ಅನಾನಸ್‌ ತುಂಡಿಗೆ ಸೇರಿಸಿ. ಬೆಲ್ಲ, ಉಪ್ಪು ಸೇರಿಸಿ ರುಬ್ಬಿದ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಸೇರಿಸಿ, ಅರಶಿಣ, ಇಂಗಿನ ಪುಡಿ, ಕರಿಬೇವುಗಳನ್ನು ಸೇರಿಸಿ ಒಗ್ಗರಣೆ ಕೊಡಿ. ರುಚಿಯಾದ ಈ ಗೊಜ್ಜು ತಿನ್ನಲು ಅನ್ನ, ದೋಸೆಯ ಜೊತೆ ಬಲು ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT