ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆಕೋಣೆಯೊಳಗಿನ ಎಡವಟ್ಟುಗಳು

Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಡುಗೆ ಎಂದರೆ ಎಲ್ಲಾ ಹದವರಿತು ಸಾವಧಾನದಿಂದ ಮಾಡುವ ಸಮಪಾಕ. ಹಾಗೆಂದು ನಾವು ಎಷ್ಟೇ ಬಡಬಡಿಸಿಕೊಂಡರೂ, ಅಡುಗೆಯ ಬಗೆಗೆ ಉದ್ದುದ್ದ ವ್ಯಾಖ್ಯಾನ ಕೊಯ್ದರೂ ಅಡುಗೆಯೆಂಬುದು ಗಡಿಬಿಡಿಯಲ್ಲಿ ತಯಾರಿಯಾಗುವುದೇ ಹೆಚ್ಚು. ಯಾಕೆಂದರೆ ಬೆಳಗ್ಗೆ ಎದ್ದೊಡನೆ ಸಾವಕಾಶವಾಗಿ ಯಾರೂ ಅಡುಗೆ ತಯಾರಿ ಮಾಡುವುದಕ್ಕೆ ಸಿದ್ಧರಾಗುವುದಿಲ್ಲ. ನಾಳೆ ಇಂತಹುದೇ ಅಡುಗೆ ಅಂತ ಮನಸಿನೊಳಗೆ ಸಾವಿರದ ಒಂದು ಬಾರಿ ರಿಹರ್ಸಲ್ ಮಾಡಿಕೊಂಡು ಮಲಗಿದರೂ ಬೆಳಗ್ಗೆ ಎದ್ದು ಮುಖಮಾರ್ಜನೆ ಮಾಡಿ ಅಡುಗೆಮನೆಯೊಳಗೆ ಹೊಕ್ಕಿದೆವು ಅಂದರೆ ಅನಾಯಾಸವಾಗಿ ಸೆರಗು ಸೊಂಟಕ್ಕೆ ಬಿಗಿದುಕೊಳ್ಳುತ್ತದೆ.

ಕಾಲುಗಳು ನರ್ತಿಸಲು ಶುರು ಮಾಡುತ್ತವೆ. ಏಕಾಂಕ ಶುರುವಾಗಿ ಬಿಡುತ್ತದೆ. ಏಕಪಾತ್ರಾಭಿನಯದ ಪ್ರದರ್ಶನ ಅದ್ಭುತವಾಗಿ ಪ್ರಧರ್ಶನಗೊಳ್ಳುವುದು ಅಡುಗೆಮನೆಯಲ್ಲಿಯೇ. ಅಷ್ಟರಲ್ಲಿ ಭರವಸೆಯ ಬೆಳಕಿನಂತಿದ್ದ ಕರೆಂಟು ಏಕ್ ದಂ ತವರುಮನೆಗೆ ಹೊರಟು ಹೋದ ಕಾರಣ ಮತ್ತಷ್ಟು ಗಡಿಬಿಡಿಯಾಗಿ ಧಿಡೀರ್ ಅಡುಗೆಗೆ ಕೈ ಸಿದ್ಧತೆ ನಡೆಸಿಕೊಳ್ಳುತ್ತದೆ. ಏಕಕಾಲದಲ್ಲಿ ಈರುಳ್ಳಿ ಹೆಚ್ಚುತ್ತಾ ಎಣ್ಣೆಗೆ ಒಗ್ಗರಣೆ ಸಿಡಿಸುತ್ತಾ ಅದೇ ಕೈಯಲ್ಲಿ ರುಬ್ಬುವ ಕಲ್ಲಿನ ಮುಂದೆ ಕೈಯಾಡಿಸುತ್ತಾ ಕಾದ ಕಾವಲಿಯ ಮೇಲೆ ದೋಸೆ ಹೊಯ್ಯುತ್ತಾ, ಅದು ಬೇಯುವ ಅಂತರದೊಳಗೆ ಮನೆಯ ಮೂಲೆ ಮೂಲೆಗೊಮ್ಮೆ ಹಿಡಿಸುಡಿಯ ತೋರಿಸುತ್ತಾ ಸ್ವಚ್ಛತಾ ಕಾರ್ಯಕ್ರಮವೂ ನೆರವೇರಿ ಬಿಡುತ್ತದೆ.

ಬಹುಶಃ ಬದುಕಿನಲ್ಲಿ ಬಂದೊದಗಿಬಿಡುವ ಎಲ್ಲಾ ಸಂದರ್ಭಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಿಕೊಳ್ಳುವುದನ್ನು ನಮ್ಮ ಹೆಣ್ಣುಮಕ್ಕಳು ಕಲಿತುಕೊಳ್ಳುವುದು ಅಡುಗೆಮನೆಯಲ್ಲಿಯೇ. ಎಷ್ಟೇ ಅಡುಗೆ ಕಲಿತರೂ ಮೂರು ಹೊತ್ತು ಒಂದೇ ಪಾಕ ಮಾಡಿದರೂ ಅಡುಗೆಯಲ್ಲಿ ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಹೆಂಗಳೆಯರ ಅಂಬೋಣ. ದಿನ ಇಷ್ಟೇ ಉಪ್ಪು, ಹುಳಿ, ಖಾರ ಅಂತ ಕೈ ಒಗ್ಗಿ ಹೋಗಿದ್ದರೂ ಒಮ್ಮೊಮ್ಮೆ ಗಡಿಬಿಡಿಯಲ್ಲಿ ಎಡವಟ್ಟಾಗಿ ಹೊಸ ರುಚಿ ಸಿದ್ಧಗೊಳ್ಳುವುದುಂಟು. ಹೊಸ ಹೊಸ ಅನುಭವದ ರಸಪಾಕವೇ ಅಡುಗೆ ತಾನೇ?!

ಅಡುಗೆಯೆಂಬುದು ಅಜನ್ಮಸಿದ್ಧ ಹಕ್ಕು ಎಂಬಂತೆ ನಮಗೆ ಬಳುವಳಿಯಾಗಿ ಅಂಟಿಕೊಂಡು ಬಂದರೂ ಯಾಕೋ ನನಗೂ ಮತ್ತು ಅಡುಗೆಗೂ ಅಷ್ಟಕ್ಕಷ್ಟೆ. ಕೆಲವೊಮ್ಮೆ ಏನೋ ಹುಕಿ ಬಂದು ಯಾವುದೋ ಮಾಡೋಕೆ ಹೋಗಿ ಮತ್ಯಾವುದೋ ಮಾಡಿ ಬಿಡೋದೇ ಹೆಚ್ಚು. ತಮಾಷೆಯ ಸಂಗತಿಯೆಂದರೆ ನಾನು ಅನ್ನ ಸಾರು ಮಾಡಲು ಕಲಿಯೋಕೆ ಮುಂಚೆ ಕಲಿತ ಅಡುಗೆಯೆಂದರೆ ಉಪ್ಪಿಟ್ಟು ಮತ್ತು ಕೇಸರಿಭಾತ್. ಅವೆರಡನ್ನು ಜೊತೆಯಲ್ಲಿಯೇ ಮಾಡಲು ಕಲಿತು ಅದನ್ನು ನನ್ನ ಗೆಳತಿಯರಿಗೆ ಉಣಬಡಿಸಿದ್ದು ಅದೆಷ್ಟೋ ಭಾರಿ. ನನ್ನ ಕೇಸರಿಭಾತಿನ ಪಾಕ ಹೇಗಿತ್ತೆಂದರೆ ಮೆಣಸು, ಈರುಳ್ಳಿ ಹಾಕಿದರೆ ಉಪ್ಪಿಟ್ಟು. ಹದಮೀರಿ ಸಕ್ಕರೆ ಸುರಿದರೆ ಕೇಸರಿಭಾತು.

ಇಂತಿಪ್ಪ ನನ್ನ ಕೇಸರಿಭಾತು ಮತ್ತು ಉಪ್ಪಿಟ್ಟಿನ ಪ್ರಯೋಗಕ್ಕೆ ಮೊದಲು ಒಡ್ಡಿಕೊಂಡವಳೆಂದರೆ ನನ್ನ ತಂಗಿ. ಇವತ್ತಿಗೂ ಉಪ್ಪಿಟ್ಟು ಕೇಸರಿಭಾತೆಂದರೆ ಆಕೆ ಕಣ್ಣೆತ್ತಿಯೂ ನೋಡದಿರುವುದ್ದಕ್ಕೆ ನಾನು ಅದೆಂಥಾ ಅಮೋಘ ರುಚಿ ತೋರಿಸಿದ್ದೇನೆಂಬುದು ಖಾತ್ರಿಯಾಗಿ ಬಿಡುತ್ತದೆ. ಹಾಡಿ ಹಾಡಿ ತಾನೇ ರಾಗ. ಆದರೆ ನಾನೀಗ ಚೆನ್ನಾಗಿ ಕೇಸರಿಭಾತು ಮಾಡುತ್ತೇನೆಂದು ಸವಿದವರ ಬಾಯಿಂದ ತಾರೀಫು ಪಡೆದುಕೊಂಡು ಅದರ ರುಚಿಯನ್ನು ತಂಗಿಗೊಮ್ಮೆ ತೋರಿಸಬೇಕೆಂದು ಹಠಕ್ಕೆ ಬಿದ್ದವಳಂತೆ ಅವಳ ಮುಂದೆ ತಟ್ಟೆಯಿಟ್ಟರೆ ಅವಳು ಉಪ್ಪಿಟ್ಟು-ಕೇಸರಿಭಾತು ಕಾಣುವಾಗ ಮಾತ್ರ ತೆನಾಲಿರಾಮನ ಬೆಕ್ಕಿನ ಹಾಗೆ ಯಾಕೆ ಮಾಡುತ್ತಾಳೋ ಗೊತ್ತಿಲ್ಲ. ಒಮ್ಮೆ ಹೀಗಾಗಿತ್ತು.

ತಾಳ್ಮೆಯಿಂದ ಮಾಡಿದ ಹೆಸರು ಬೇಳೆಪಾಯಸಕ್ಕೆ ಗಡಿಬಿಡಿಯಲ್ಲಿ ಚೊಂಯ್ಯ ಅಂತ ಸಾಸಿವೆ ಒಗ್ಗರಣೆ ಹಾಕಿದ ಮೇಲೆಯೇ ಪ್ರಮಾದದ ಅರಿವಾಗಿದ್ದು. ಪಾಯಸದ ಮೇಲೆ ಗೋಡಂಬಿ ದ್ರಾಕ್ಷಿ ಕಾಣುವ ಬದಲಾಗಿ ಕಪ್ಪು ಕಪ್ಪು ಸಾಸಿವೆಗಳು ದೃಷ್ಟಿ ಬೊಟ್ಟಿನಂತೆ ತೇಲುತ್ತಾ ಹೊಸ ರೂಪದಲ್ಲಿ ಬಂದು ನಿಂತಿತ್ತು. ಇವೆಲ್ಲಾ ಪ್ರಮಾದವಶಾತ್ ಆದರೂ ತುಂಬಾ ಮುಜುಗರಕ್ಕೆ ಎಡೆ ಮಾಡಿಕೊಡುವುದು ಮಾತ್ರ ಯಾಕೋ ಗೊತ್ತಿಲ್ಲ. ಒಮ್ಮೊಮ್ಮೆ ಆಕಸ್ಮಾತ್ತಾಗಿ ಹೇಳದೆ ಕೇಳದೆ ನಂಟರು ದಿಢೀರ್ ಎಂದು ಆಗಮಿಸುವುದುಂಟು. ಆಗ ವಿಶೇಷವಾದದ್ದು ಏನೂ ಇಲ್ಲದಿರುವಾಗ ನಮಗೆಲ್ಲಾ ತಕ್ಷಣಕ್ಕೆ ಒದಗಿ ಬರುತ್ತಿದ್ದದ್ದು ಮೊಟ್ಟೆಯ ಆಮ್ಲೇಟ್ ಒಂದೇ.

ಇಂತಹ ಹೊತ್ತಿನಲ್ಲಿ ಒಮ್ಮೆ ನನ್ನಮ್ಮ ಆಮ್ಲೇಟಿಗೆ ಹಾಕಲು ಕಾಯಿಮೆಣಸು ಇಲ್ಲದೆ ಪರದಾಡುತ್ತಿದ್ದಳು. ನಮ್ಮ ಮನೆಯ ಹಿತ್ತಲಿನಲ್ಲಿ ಆಪತ್ತಿಗಾಗುವ ನಂಟನಂತೆ ಮೆಣಸಿನ ಮತ್ತೊಂದು ಜಾತಿಯ ಗಿಡದಲ್ಲಿ ಸಣ್ಣ ಸಣ್ಣ ಮೆಣಸು ಆಗುತ್ತದೆ. ಅದಕ್ಕೆ ಗಾಂಧಾರಿ–ಮೆಣಸು ಎಂದು ಹೆಸರು. ಅಮ್ಮ ಪಕ್ಕನೆ ಓಡಿ ಹೋಗಿ ಅದನ್ನೇ ತಂದು ಚಕಚಕನೆ ಆಮ್ಲೇಟ್ ತಯಾರಿ ಮಾಡಿಬಿಟ್ಟಳು. ಗಾಂಧಾರಿ ಮೆಣಸು ಹಾಕಿ ಮಾಡಿದ್ದು ಅಂತ ನಂಟರ ಮುಂದೆ ಹೇಳಿ ನನ್ನ ಮರ್ಯಾದೆ ತೆಗೀಬೇಡಿ ಅಂತ ಮೊದಲೇ ತಾಕೀತು ಕೂಡ ಮಾಡಿಬಿಟ್ಟಿದ್ದಳು. ಬಹುಶಃ ಮನೆಯಲ್ಲಿ ಯಾವುದೇ ವಸ್ತು ಕಡಿಮೆಯಾದರೂ ಅದನ್ನು ಬಂದವರೆದು ತೋರಿಸಿಕೊಳ್ಳುವುದು ಅವಮಾನದ ಪ್ರಸಂಗವೇ ಅಂತ ಭಾವಿಸಿಕೊಂಡಿರಬೇಕು. ಅದೇನೇ ಇರಲಿ, ಒಂದು ವಸ್ತುವಿನ ಅನುಪಸ್ಥಿತಿಯಲ್ಲಿ ಅದಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತು ಹಾಕಿ ಅಡುಗೆ ತಯಾರಿ ಮಾಡಿ ಬಿಡುವ ಕುಶಲಿಗರೂ ಹೌದು ಅಮ್ಮಂದಿರು.

ಇನ್ನು ಕೆಲವರ ಮನೆಯಲ್ಲಿ ಕೆಲವು ನಿರ್ದಿಷ್ಟ ರೀತಿಯ ಪಾನೀಯಗಳಿಗೆ ಒಗ್ಗಿ ಹೋಗಿರುತ್ತಾರೆ. ಕೆಲವರು ಟೀ ಪ್ರಿಯರಾದರೆ ಇನ್ನೊಂದಷ್ಟು ಜನರು ಕಾಫಿಪ್ರಿಯರು. ಆದರೆ ವಿಷಯ ಅದಲ್ಲ, ಇದು ಸಾಮಾನ್ಯ ಸಂಗತಿ. ಆದರೆ ನನಗೆ ವಿಶೇಷ ಅನ್ನಿಸಿದ್ದು ನಮ್ಮ ಪರಿಚಿತ ಕುಟುಂಬದವರೊಬ್ಬರು ಕಾಫಿ-ಚಹ ಎರಡನ್ನು ಮಿಶ್ರ ಮಾಡಿ ಕುಡಿಯುತ್ತಿದ್ದದ್ದು ಮತ್ತು ಬಂದವರಿಗೂ ಅದನ್ನೇ ಮಾಡಿ ಸತ್ಕರಿಸುತ್ತಿದ್ದದ್ದು. ನಾವುಗಳೆಲ್ಲಾ ಕುಡಿಯಲೇಬೇಕಾದ ಅನಿವಾರ್ಯತೆಗೆ ಕಟ್ಟು ಬಿದ್ದು ಗಟಗಟನೆ ಒಂದೇ ಗುಟುಕಿಗೆ ಹೀರಿ ಮತ್ತೆ ಅದು ತಮಾಷೆಯಾಗಿ ನೆನೆಯುವ ವಸ್ತುವಾಗಿ ಬಿಡುತ್ತಿತ್ತು.

ಮೊದಲೆಲ್ಲಾ ಕೂಡು ಕುಟುಂಬ. ಮನೆ ತುಂಬಾ ಪಿಳ್ಳೆ ಮಕ್ಕಳು, ಸಾಕಷ್ಟು ಜನ, ಆಳು, ಕಾಳು, ನಂಟರಿಷ್ಟರು ತುಂಬಿ ತುಳುಕುತ್ತಿರುವಾಗ ಅಡುಗೆಮನೆಯಲ್ಲಿ ಕೆಲಸ–ಕಾರ್ಯಕ್ಕೆ ಬಿಡುವೇ ಇರುತ್ತಿರಲಿಲ್ಲ. ಮೂರು ಹೊತ್ತು ಒಲೆಯ ಮುಂದೆ ಅಡುಗೆ ಬೇಯಿಸುತ್ತಾ ತಾವು ಬೇಯುತ್ತಿದ್ದರು. ರೊಟ್ಟಿ ದೋಸೆ ಹೊಯ್ಯುತ್ತಾ ಉರಿಯ ಮುಂದೆ ಹೈರಾಣಾಗುವುದ ತಪ್ಪಿಸುವ ಸಲುವಾಗಿ ನಮ್ಮ ಕಡೆ ಹೆಚ್ಚಾಗಿ ಬೆಳಗಿನ ತಿಂಡಿಗೆ ಪುಂಡಿಯನ್ನೇ (ಕಡುಬು) ತಯಾರಿಸುತ್ತಿದ್ದರು.

ಒಮ್ಮೆ ಹೀಗೆ ದೊಡ್ಡ ಕಡಾಯಿಯಲ್ಲಿ ಅಕ್ಕಿ ಹಿಟ್ಟು ಅರ್ಧ ಕಲಸಿ ಆಗಿತ್ತು. ಇದೇ ಕೆಲಸದಲ್ಲಿದ್ದ ಅಮ್ಮನಿಗೆ ಆತುಕೊಂಡಿದ್ದ ಪುಟ್ಟ ಮಗುವೊಂದು ‘ಸೊರ..’ ಅಂತ ಸುಸ್ಸು ಮಾಡಿಯೇ ಬಿಟ್ಟಿತ್ತು. ಮೊದಲೇ ತಡವಾಗಿದೆ. ಅಷ್ಟೂ ಗಾತ್ರದ ಹಿಟ್ಟಿನುಂಡೆ! ಅದನ್ನು ಎತ್ತಿ ಎಸೆಯಲಾದೀತೇ? ಮಗು ಸಣ್ಣದ್ದು, ದೇವರಿಗೆ ಸಮಾನ ಅಂತ ಮನದೊಳಗೆ ಸಮಜಾಯಿಷಿ ಕೊಟ್ಟು ಅದರಲ್ಲೇ ಪುಂಡಿ ಬೇಯಿಸಿ ಬಡಿಸಿ ಮರೆವಿಗೆ ಸಂದ ಹಳೆ ಕತೆಯನ್ನು ಈಗ ಮತ್ತೊಮ್ಮೆ ನೆನಪಿನಲೆಯೊಳಗೆ ತರಿಸಿಕೊಂಡು ಕತೆಯಂತೆ ಹೇಳತೊಡಗಿದಾಗ ತಿಂದ ನಾಲಗೆಗೂ ಪುಂಡಿಯ ರುಚಿ ಹೇಗಿತ್ತು ಎಂಬುದು ಮರೆತೇ ಹೋಗಿತ್ತು. ಆದರೂ ಪುಟ್ಟ ಮಕ್ಕಳು ತಿಂಡಿ ಮಾಡುವಾಗ ಅತ್ತ ಇತ್ತ ಸುಳಿದಾಡಿದರೆ ಇಂತಹ ಕತೆಗಳೆಲ್ಲಾ ನೆನಪಿಗೆ ನುಗ್ಗಿ ಕಿರು ನಗೆಯೊಂದು ಸುಳಿದುಹೋಗಿಬಿಡುತ್ತದೆ.

ಬೇಕರಿಯಲ್ಲಿ ತಯಾರಾಗುವ ಬ್ರೆಡ್ ಬನ್ನುಗಳನ್ನೆಲ್ಲಾ ಕಾಲಿನಲ್ಲಿ ನಾದಿ ನಾದಿ ಮಾಡಿದ ಹಿಟ್ಟಿನುಂಡೆಯಿಂದ ಮಾಡುತ್ತಾರೆಂದು ಊಹಿಸಿಕೊಂಡದ್ದನ್ನು ಕಣ್ಣಾರೆ ಕಂಡಂತೆ ಅವರಿವರು ಬಣ್ಣಿಸಿ ಹೇಳಿದ ಮೇಲೆ ಇನ್ನು ಬ್ರೆಡ್, ಬನ್ನು ತಿನ್ನಲೇಬಾರದು ಅಂತ ಶಪಥ ಮಾಡಿಕೊಂಡರೂ ಆಮೇಲೆ ಗಡಿಬಿಡಿಯಲ್ಲಿ ದಿಢೀರ್ ತಿಂಡಿಗೆ ಬ್ರೆಡ್, ಬನ್ನು ಒದಗಿ ಬರುವುದಂತೂ ಸಾರ್ವಕಾಲಿಕ ಸತ್ಯ.

ತೋಟದಲ್ಲಿ ಮದ್ದು ಸಿಂಪಡಿಸಲು ತರುವ ಸುಣ್ಣದ ರೂಪವೂ ಮತ್ತು ನಾವು ತಿನ್ನುವ ಅವಲಕ್ಕಿಯ ರೂಪವೂ ಒಂದೇ ರೀತಿ ಇರುವುದರಿಂದ ಸಣ್ಣ ಮಕ್ಕಳಿಗೆ ಅದನ್ನು ಸುಲಭಕ್ಕೆ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಎಳವೆಯಲ್ಲೊಮ್ಮೆ ಆಡಿ ಆಡಿ ಸುಸ್ತಾಗಿ ಹಸಿವೆಯಾದ ಕಾರಣ ನಾನು ಅಲ್ಲೇ ಮನೆಯ ಜಗಲಿಯ ಮೇಲೆ ಇಟ್ಟಿದ್ದ ಸುಣ್ಣದ ಚೀಲಕ್ಕೆ ಏಕ್ ದಂ ಕೈ ಹಾಕಿ ಬಾಯೊಳಗೆ ತುಂಬಿಸಿ ಬಾಯೆಲ್ಲಾ ಬೆಂದಂತಾಗಿ ಬೊಬ್ಬೆ ಹಾಕತೊಡಗಿದಾಗ, ಭಯಗೊಂಡ ಅಮ್ಮ ಬಾಯಿ ತುಂಬಾ ಸಕ್ಕರೆ ತುಂಬಿಸಿ ವೈದ್ಯರ ಬಳಿ ಕರೆದುಕೊಂಡು ಹೋದದ್ದು ಕನಸಿನಂತೆ ಭಾಸವಾಗುತ್ತಿದೆ. ಬ್ರಹ್ಮಾಂಡದಷ್ಟು ಹಸಿವು ಎದ್ದಾಗ ಒಮ್ಮೊಮ್ಮೆ ಇಂತಹ ಎಡವಟ್ಟಿನ ಪ್ರಸಂಗಗಳು ಆಗಾಗ್ಗೆ ಸಂಭವಿಸುತ್ತಲೇ ಇರುವುದಂತೂ ಯಾರೂ ಅಲ್ಲಗಳೆಯಲಾಗದ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT