ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ್‌’ನ 24X7 ಕಾಮಗಾರಿ ಅನುಷ್ಠಾನ

Last Updated 2 ಸೆಪ್ಟೆಂಬರ್ 2017, 5:34 IST
ಅಕ್ಷರ ಗಾತ್ರ

ವಿಜಯಪುರ: ದಿನದ 24 ತಾಸು ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕೇಂದ್ರ ಪುರಸ್ಕೃತ ‘ಅಮೃತ್‌’ ಯೋಜನೆ ಕಾಮಗಾರಿ ನಗರ ವ್ಯಾಪ್ತಿಯಲ್ಲಿ ಆರಂಭಗೊಂಡಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆ ಅನುಷ್ಠಾನದ ಮೇಲುಸ್ತುವಾರಿ ಹೊತ್ತಿದೆ. ಸಮರ್ಪಕ ಜಾರಿಗಾಗಿ 21 ವಲಯಗಳನ್ನಾಗಿ ವಿಭಜಿಸಿಕೊಂಡು, ಕಾಮಗಾರಿ ಆರಂಭಿಸಿದೆ. ಈಗಾಗಲೇ ನಾಲ್ಕು ವಲಯದಲ್ಲಿ ಕಾಮಗಾರಿ ಪೂರ್ಣಗೊಂಡಿವೆ.

‘15 ವಲಯದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಹೊಸದಾಗಿ ರಸ್ತೆ ನಿರ್ಮಿಸುವ ಬಡಾವಣೆಗಳಲ್ಲಿ ಪೈಪ್‌ಲೈನ್‌ ಅಳವಡಿಸಲು ಆದ್ಯತೆ ನೀಡಲಾಗುತ್ತಿದೆ. ನಗರದ 1, 4, 9, 12, 13, 14, 21, 22, 27ನೇ ವಾರ್ಡ್‌ಗಳಲ್ಲಿ ಕಾಮಗಾರಿ ನಡೆದಿದ್ದು, ಇದುವರೆಗೂ 118 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿದೆ’ ಎಂದರು.

‘ಮುಂದಿನ ಐದಾರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಈ ವಾರ್ಡ್‌ಗಳ ಜನರಿಗೆ ನೀರು ನೀಡಲಾಗುವುದು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪೈಪ್‌ಲೈನ್‌ ಅಳವಡಿಕೆ ಬಳಿಕ ನೀರಿನ ಪ್ರೆಶರ್‌ ಪರೀಕ್ಷೆ ನಡೆಸುತ್ತೇವೆ. ಸೊಲ್ಲಾಪುರ ರಸ್ತೆಯ ಐಟಿಐ ಕಾಲೇಜು ಬಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಿಂಭಾಗ, ಜುಮ್ಮಾ ಮಸೀದಿ ಹಿಂಭಾಗ, ಜಲ ನಗರದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗುವುದು’ ಎಂದರು.

‘ಪೂರ್ಣಗೊಂಡಿರುವ ನಾಲ್ಕು ವಲಯದ ವ್ಯಾಪ್ತಿಯಲ್ಲಿ ಐದು ವಾರ್ಡ್‌ಗೆ ಸಂಪೂರ್ಣವಾಗಿ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಮೂರು ವಾರ್ಡ್‌ಗೆ ಭಾಗಶಃ ಸಂಪರ್ಕ ನೀಡಲಾಗಿದೆ. ಒಟ್ಟು 9000ಕ್ಕೂ ಅಧಿಕ ನಳ ಸಂಪರ್ಕ ಕಲ್ಪಿಸಿ, ದಿನದ ಇಪ್ಪತ್ನಾಲ್ಕು ತಾಸು ನೀರು ಪೂರೈಸಲಾಗುತ್ತಿದೆ’ ಎಂದರು.

‘ನಗರದ ವ್ಯಾಪ್ತಿಯಲ್ಲಿ ಒಟ್ಟು 609 ಕಿ.ಮೀ. ದೂರ ಪೈಪ್‌ಲೈನ್‌ ಅಳವಡಿಸಬೇಕಿದೆ. 57773 ನಲ್ಲಿ ಸಂಪರ್ಕ ಕಲ್ಪಿಸಿ ದಿನದ 24 ತಾಸು ಶುದ್ಧ ಕುಡಿಯುವ ನೀರು ಪೂರೈಸುವುದು ಯೋಜನೆಯ ಆಶಯ’ ಎಂದು ಅವರು ಹೇಳಿದರು.

ಸ್ಮಾರ್ಟ್‌ ಮೀಟರ್‌: ‘ಸಂಪರ್ಕ ಕಲ್ಪಿಸುವ ಪ್ರತಿ ನಲ್ಲಿಗೂ ಮೀಟರ್‌ ಅಳವಡಿಸಲಾಗುವುದು. ಎಷ್ಟು ನೀರಿನ ಬಳಕೆ ಮಾಡುತ್ತಾರೆ ಅದಕ್ಕನುಗುಣವಾಗಿ ಬಿಲ್‌ ಬರುತ್ತದೆ. ನಲ್ಲಿಗೆ ಅಳವಡಿಸುವ ಸಾಮಾನ್ಯ ಮೀಟರ್‌ ದರ ₹ 1800 ಇದೆ.

ವಲಯ 16ರ ಜಲನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಲಾಗುವುದು. 1500 ನಲ್ಲಿಗಳಿಗೆ ಈ ಮೀಟರ್‌ ಕೂರಿಸುತ್ತೇವೆ. ಒಂದು ಮೀಟರ್‌ ಬೆಲೆ ₹ 13000 ಇದೆ. ಇದು ಪ್ರೀಪೇಯ್ಡ್‌ ಕರೆನ್ಸಿ ತರಹ ಕೆಲಸ ನಿರ್ವಹಿಸಿಲಿದೆ.

ಮಾಸಿಕ ಶುಲ್ಕ ತುಂಬಲಿಲ್ಲ ಎಂದರೇ ತಾನೇ ನೀರು ಪೂರೈಕೆ ಸ್ಥಗಿತಗೊಳಿಸುತ್ತದೆ. ಮೀಟರ್‌ ಬೆಲೆ ದುಬಾರಿಯಿರುವುದರಿಂದ ಒಂದೆಡೆ ಮಾತ್ರ ಪ್ರಾಯೋಗಿಕವಾಗಿ ಕೂರಿಸಲಾಗುವುದು. ಮೀಟರ್‌ ಖರೀದಿ ವೆಚ್ಚವನ್ನು ಯೋಜನೆಯಲ್ಲಿಯೇ ಅಡಕಗೊಳಿಸಲಾಗಿದೆ’ ಎಂದು ಎಇಇ ತಿಳಿಸಿದರು.

* * 

ವಿಜಯಪುರ ನಗರ ದಶಕದ ಬೇಡಿಕೆಗೆ ಮನ್ನಣೆ ದೊರೆತಿದೆ. ಶಾಶ್ವತ ಕಾಮಗಾರಿಯಾಗಿ ದಶಕಗಳ ಕಾಲ ಜನರಿಗೆ ನೀರು ಪೂರೈಸಲಿ. ಈ ನಿಟ್ಟಿನಲ್ಲಿ ಪಾಲಿಕೆಯ ಕಣ್ಗಾವಲಿರಲಿ
ರೇಣುಕಾ
ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT