ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ, ಲಿಂಗಾಯತ ಎರಡೂ ಒಂದೇ

Last Updated 2 ಸೆಪ್ಟೆಂಬರ್ 2017, 5:38 IST
ಅಕ್ಷರ ಗಾತ್ರ

ಇಳಕಲ್‌: ‘ಶಿವಯೋಗಮಂದಿರದಲ್ಲಿ ಶ್ರೀಮದ್ವೀರಶೈವ ಆಚಾರ್ಯ ಪಾಠಶಾಲೆ ಆರಂಭಿಸುವಾಗ ಹಾನಗಲ್ ಕುಮಾರೇಶ್ವರ ಸ್ವಾಮಿಗಳಿಗೆ  ಇಳಕಲ್‌ ಶ್ರೀಮಠದ ಲಿಂ.ವಿಜಯ ಮಹಾಂತ ಶಿವಯೋಗಿಗಳು ಮಾರ್ಗದರ್ಶನ ಮಾಡಿದ್ದರು. ವೀರಶೈವ ಲಿಂಗಾಯತದ ಆ ಪರಂಪರೆ ಮುಂದುವರಿಯಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ ಹೇಳಿದರು.

ಶಿವಯೋಗಮಂದಿರದಲ್ಲಿ ಇದೇ 4ರಂದು ನಡೆಯಲಿರುವ ಗುರು ವಿರಕ್ತರ ಹಾಗೂ ಸದ್ಭಕ್ತರ ಸದ್ಭಾವನಾ ಸಮಾವೇಶದ ಅಂಗವಾಗಿ ಇಲ್ಲಿಯ ಬಸವನಗರದಲ್ಲಿ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ, ‘ವೀರಶೈವ ಲಿಂಗಾಯತ ಎರಡೂ ಒಂದೇ. ರೇಣುಕಾಚಾರ್ಯರು ಹಾಗೂ ಬಸವಣ್ಣನವರು ಈ ಸಮಾಜದ ಎರಡು ಕಣ್ಣುಗಳು. ಅಧಿಕಾರ ಹಿಡಿಯುವ ಆಸೆಗೆ ರಾಜಕಾರಣಿಗಳು ಬೀಸಿದ ಜಾಲಕ್ಕೆ ಬಲಿಯಾಗುವುದು ಹಾಗೂ ಎರಡು ಕಣ್ಣುಗಳಲ್ಲಿ ಒಂದು ಕಣ್ಣು ಕಳೆದುಕೊಳ್ಳುವುದು ವಿವೇಕವಲ್ಲ. ಒಂದಾಗಿ ಇರುವವರನ್ನು ಒಡೆಯುವುದು ಯಾರಿಗೂ ಶ್ರೇಯಸ್ಸು ತರುವುದಿಲ್ಲ’ ಎಂದು ಹೇಳಿದರು.

ಉಪ್ಪಿನಬೇಟಗೇರಿಯ ಕುಮಾರ ವಿರುಪಾಕ್ಷ ಶ್ರೀಗಳು ಮಾತನಾಡಿ, ‘ವೀರಶೈವ, ಲಿಂಗಾಯತ ಒಂದೇ ಅರ್ಥ, ಸಂಸ್ಕೃತಿ, ಭಾವ ಸೂಚಿಸುವ ಎರಡು ಪದಗಳು. ಯಾವುದೂ ಹೆಚ್ಚಲ್ಲ, ಕಡಿಮೆಯಲ್ಲ. ಭಕ್ತಿ ಭಂಡಾರಿ ಬಸವಣ್ಣನವರಿಗಿಂತ ಮುಂಚೆಯೇ ಈ ಧರ್ಮ ಇತ್ತು’ ಎಂದರು.

ಬಸವಕಲ್ಯಾಣದ ಗಡಿಗೌಡಗಾಂವದ ಶಾಂತವೀರ ಶಿವಾಚಾರ್ಯರು ಮಾತನಾಡಿ, ‘ಮಾತೆ ಮಹಾದೇವಿ ಅವರು ವಚನಾಂಕಿತ ತಿದ್ದಿ ಶರಣರಿಗೆ ದ್ರೋಹ ಮಾಡಿದ್ದಾರೆ. ಬೀದರ್‌ ಸಮಾವೇಶಕ್ಕೆ ಮಹಾರಾಷ್ಟ್ರ ದಿಂದ ಜನರಿಗೆ ಹಣ ಕೊಟ್ಟು ಕರೆ ತಂದಿದ್ದರು’ ಎಂದು ಹೇಳಿದರು.

ದಿಂಡವಾರದ ಕುಮಾರಲಿಂಗ ಶಿವಾಚಾರ್ಯರು, ಹಿರೇನಾಗಾಂವದ ಜಯಶಾಂತಲಿಂಗ ಶಿವಾಚಾರ್ಯರು, ಅಮೀನಗಡದ ಶಂಕರ ರಾಜೇಂದ್ರ ಶ್ರೀಗಳು, ಅಂಟರಠಾಣದ ಸದಾಶಿವಯ್ಯ ಶರಣರು, ಮಹಾಂತೇಶ ಅಂಗಡಿ, ಸರಗಣಾಚಾರಿ, ಶಿವಕುಮಾರ ಹಿರೇಮಠ, ಮಲ್ಲಿಕಾರ್ಜುನ ಶೆಟ್ಟರ್‌, ವಿರೇಶ ಕೂಡಲಗಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT