ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ನಿಷ್ಠೆಗೆ ದೊರೆತ ಬಳುವಳಿ!

Last Updated 2 ಸೆಪ್ಟೆಂಬರ್ 2017, 5:42 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಪರಿಷತ್ ಸದಸ್ಯರಾಗಿ ನೇಮಕಗೊಳ್ಳುವ ಮೂಲಕ ಇತ್ತೀಚೆಗಷ್ಟೇ ಅಧಿಕಾರ ರಾಜ ಕಾರಣದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಮುಧೋಳದ ಆರ್‌.ಬಿ.ತಿಮ್ಮಾಪುರ ಅವರಿಗೆ ಇದೀಗ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ‘ಬೋನಸ್‌’ ರೀತಿ ಅನಾಯಾಸವಾಗಿ ಒಲಿದು ಬಂದಿದೆ.

ಇದರೊಂದಿಗೆ ಸಚಿವ ಸ್ಥಾನಕ್ಕೆ ಎಚ್‌.ವೈ.ಮೇಟಿ ರಾಜೀನಾಮೆಯಿಂದ ಜಿಲ್ಲೆಯ ಕೈ ತಪ್ಪಿ ಹೋಗಿದ್ದ ಅಬಕಾರಿ ಖಾತೆಯ ಹೊಣೆ ಮತ್ತೆ ಮರಳಿದಂತಾಗಿದೆ. ‘ಸತತ ಮೂರು ಬಾರಿಯ ಸೋಲಿನಿಂದ ಕಂಗೆಟ್ಟಿರುವ ತಿಮ್ಮಾಪುರ ಅವರಿಗೆ ರಾಜಕೀಯ ಅಸ್ತಿತ್ವವೇ ಇಲ್ಲದಂತಾಯಿತು’ ಎಂದು ವಿರೋಧಿಗಳು ಹೇಳುತ್ತಿರುವಾಗಲೇ ಕಾಂಗ್ರೆಸ್ ಹೈಕಮಾಂಡ್ ಅವರ ಕೈ ಹಿಡಿದಿತ್ತು.

ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿನ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ತಿಮ್ಮಾಪುರ ಅವರನ್ನು ಅದೇ ಕೋಟಾದಡಿ ವಿಧಾನಪರಿಷತ್‌ಗೆ ಕಳುಹಿಸಲಾಗಿತ್ತು. ಇದೀಗ ಸಚಿವ ಖಾತೆಯ ಹೊಣೆ ನೀಡುವ ಮೂಲಕ ಪಕ್ಷ ಅವರಿಗೆ ಮತ್ತಷ್ಟು ಬಲ ತುಂಬಿದೆ.ಆ ಮೂಲಕ  ಪಕ್ಷ ನಿಷ್ಠೆ ಹೊಂದಿದ್ದರೆ ಮತದಾರರು ಬಿಟ್ಟರೂ ನಾವು ಕೈ ಬಿಡುವುದಿಲ್ಲ ಎಂಬ ಪರೋಕ್ಷ ಸಂದೇಶ ನೀಡಿದೆ.

ಪ್ರಯಾಣ ಭತ್ಯೆ ವಿವಾದ: ಸಚಿವ ಸ್ಥಾನಕ್ಕೆ ತಿಮ್ಮಾಪುರ ಅವರ ಹೆಸರು ಮುಂಚೂ ಣಿಗೆ ಬರುತ್ತಿದ್ದಂತೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಿದ್ದರೂ ಮುಧೋಳ ದಿಂದ ಓಡಾಡುತ್ತಿರುವುದಾಗಿ ಹೇಳಿ ಅಲ್ಲಿನ ವಿಳಾಸ ನೀಡಿ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯಪಾಲರಿಗೂ ದೂರು ನೀಡಿತ್ತು. ಇದರಿಂದ ಬೆಂಬಲಿಗರಲ್ಲಿ ಕವಿದಿದ್ದ ಆತಂಕದ ಕಾರ್ಮೋಡ ಸಂಜೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದಂತೆಯೇ ಕರಗಿತು.

ಜಿಲ್ಲೆಗೆ ಇಬ್ಬರಿಗೆ ಸ್ಥಾನಮಾನ: ತಿಮ್ಮಾಪುರ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲೆಯ ನಾಲ್ವರಿಗೆ ಸಚಿವರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದಂತಾಗಿದೆ. ಆರಂಭದಲ್ಲಿ ಎಸ್.ಆರ್.ಪಾಟೀಲ ಹಾಗೂ ಉಮಾಶ್ರೀ ಇಬ್ಬರಿಗೂ ಮಂತ್ರಿ ಸ್ಥಾನ ಸಿಕ್ಕಿತ್ತು. ಕಳೆದ ವರ್ಷ ಸಂಪುಟ ಪುನರ್‌ರಚನೆ ವೇಳೆ ಎಸ್.ಆರ್. ಪಾಟೀಲ ಮಂತ್ರಿ ಸ್ಥಾನ ತ್ಯಾಗ ಮಾಡಿ ಎಚ್.ವೈ.ಮೇಟಿ ಅವರಿಗೆ ಬಿಟ್ಟುಕೊಟ್ಟಿದ್ದರು.

ನಂತರ ಮೇಟಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ತಿಮ್ಮಾಪುರ ಅವರಿಗೆ ಅವಕಾಶ ನೀಡುವ ಮೂಲಕ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ ಎನ್ನಲಾಗುತ್ತಿದೆ.

13 ವರ್ಷಗಳ ವನವಾಸ ಅಂತ್ಯ
ಆರ್.ಬಿ.ತಿಮ್ಮಾಪುರ ಮುಧೋಳ ತಾಲ್ಲೂಕು ಉತ್ತೂರಿನವರು. ಪರಿಶಿಷ್ಟ ಜಾತಿಗೆ ಮೀಸಲಾದ ಮುಧೋಳ ಕ್ಷೇತ್ರದಿಂದ 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1994ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ 1999ರಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಕೆಲಸ ಮಾಡಿದ್ದಾರೆ.

ಮುಂದೆ 2004ರಿಂದ 2013ರವರೆಗೆ ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿ 13 ವರ್ಷ ರಾಜಕೀಯ ವನವಾಸ ಅನುಭವಿಸಿದ್ದ ತಿಮ್ಮಾಪುರ ಅವರಿಗೆ ಈ ಅವಧಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬೇರೆ ಬೇರೆ ಸ್ಥಾನಮಾನಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಶಾಸಕ ಗೋವಿಂದ ಕಾರಜೋಳ ವಿರುದ್ಧ ಐದು ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ತಿಮ್ಮಾಪುರ ಗೆಲುವು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT