ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಸ್ಮಾರಕಗಳ ಜೀರ್ಣೋದ್ಧಾರ

Last Updated 2 ಸೆಪ್ಟೆಂಬರ್ 2017, 6:33 IST
ಅಕ್ಷರ ಗಾತ್ರ

ಬೀದರ್‌: ಭಾರತೀಯ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯು ಬಹಮನಿ ಸುಲ್ತಾನರ ಕಾಲದ ಕೋಟೆ, ಅರಮನೆಯ ಭಗ್ನಾವಶೇಷಗಳಿಗೆ ಜೀವ ತುಂಬುವ ಕಾರ್ಯದಲ್ಲಿ ತೊಡಗಿದೆ. ಇದೀಗ ಇಲ್ಲಿನ ಕೋಟೆಯೊಳಗಿನ ಐತಿಹಾಸಿಕ ಮಹತ್ವದ ಸ್ಮಾರಕಗಳ ಜೀರ್ಣೋದ್ಧಾರ ಮಾಡುತ್ತಿದೆ.

ಪಾರಂಪರಿಕ ಪದ್ಧತಿಯಲ್ಲಿಯೇ ಕಟ್ಟಡಗಳನ್ನು ದುರಸ್ತಿಪಡಿಸಲು ಗಾರೆ ಕೆಲಸಗಾರರಿಗೆ ತರಬೇತಿ ನೀಡಿ ಈಗ ಅವರಿಂದಲೇ ಶಿಥಿಲಗೊಂಡ ಸ್ಮಾರಕ ಗಳನ್ನು ಗಚ್ಚು ಬಳಸಿ ಗಟ್ಟಿಗೊಳಿಸುತ್ತಿದೆ. ಈಗಾಗಲೇ ಸೋಲಾಗುಂಬಜ್‌ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ.

‘ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯಕ್ಕೆ ಎಎಸ್‌ಐ ₹1 ಕೋಟಿ ಅನುದಾನ ನೀಡಿದೆ. ಈ ಅನುದಾನದಲ್ಲಿ ನೌಬತ್‌ಖಾನಾ, ತರ್ಕಿಶ್ ಮಹಲ್, ರಂಗಿನ್‌ ಮಹಲ್, ದಿವಾನ್‌–ಎ–ಖಾಸ್‌ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೋಟೆ ಮಹಾದ್ವಾರ ಶಾರ್ಜಾ ದರ್ವಾಜಾದ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ’ ಎಂದು ಎಎಸ್‌ಐನ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

ಕೋಟೆ ಗೋಡೆಗೆ ಹೊಂದಿಕೊಂಡು ಕಂದಕದ ಅಂಚಿನ ಮೇಲೆ ನಿರ್ಮಿಸಿ ರುವ ನೌಬತ್‌ ಖಾನಾ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ. ನಾಜೂಕಿ ನಿಂದ ಕಾಮಗಾರಿ ಕೈಗೊಂಡಿರುವ ಕಾರಣ ಸ್ಮಾರಕ ಮೂಲಸ್ವರೂಪಕ್ಕೆ ಮರಳಿದೆ.

ಅಹಮ್ಮದ್‌ಷಾ ವಲಿ ಬಹಮನಿ 1422ರಲ್ಲಿ ಗುಲ್ಬರ್ಗದಿಂದ ಬೀದರ್‌ಗೆ ರಾಜಧಾನಿ ಸ್ಥಳಾಂತರಿಸುವ ಎರಡು ವರ್ಷ ಮೊದಲೇ ತಖ್ತ್‌ ಮಹಲ್ (ಸಿಂಹಾಸನ ಅರಮನೆ) ನಿರ್ಮಿಸಿದ್ದ. ಭವ್ಯವಾದ ಕಟ್ಟಡದೊಳಗೆ ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದ. 100 ಅಡಿ ಎತ್ತರದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಅರಮನೆ ಒಳಗಿನ ಈಜುಕೊಳವೂ ಆಕರ್ಷಣೆ ಕಳೆದುಕೊಂಡಿಲ್ಲ.

‘ಕ್ರಿ.ಶ 1656ರಲ್ಲಿ ಔರಂಗಜೇಬ್‌ ಬೀದರ್‌ ಕೋಟೆಗೆ ಮುತ್ತಿಗೆ ಹಾಕಿದ್ದ. 27 ದಿನಗಳವರೆಗೆ ಯುದ್ಧ ನಡೆಯಿತು. ತಖ್ತ್‌ ಮಹಲ್ ಔರಂಗಜೇಬ್‌ನನ್‌ ಅಧೀನಕ್ಕೆ ಬಂದರೂ ಆತ ಇಲ್ಲಿಯೇ ನೆಲೆಯೂರುವ ಭಯದಿಂದ ಸುಲ್ತಾನ್ ಇಬ್ರಾಹಿಂ ಆದಿಲ್‌ಷಾನ ಕಾರ್ಯಭಾರ ನೋಡಿಕೊಳ್ಳುತ್ತಿದ್ದ ಮಲಿಕ್‌ಮಿರ್ಜಾ ಸಿಡಿಮದ್ದಿನಿಂದ ಅರಮನೆಯನ್ನು ಸ್ಫೋಟಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ’ ಎಂದು ಇತಿಹಾಸಕಾರ ಸಮದ್ ಭಾರತಿ ಹೇಳುತ್ತಾರೆ.

ತುರ್ಕಿಯ ರಾಣಿಗಾಗಿ ಬಹಮನಿ ಸುಲ್ತಾನರು ತರ್ಕಿಶ್‌ ಮಹಲ್‌ ನಿರ್ಮಿಸಿ ದರು. ತುರ್ಕಸ್ಥಾನ, ಪರ್ಷಿಯಾ, ಜೋರ್ಡಾನ್‌ನಿಂದ ಬರುತ್ತಿದ್ದ ಹೆಣ್ಣುಮಕ್ಕಳು ಇದೇ ಮಹಲ್‌ನಲ್ಲಿ ವಾಸ ಮಾಡುತ್ತಿದ್ದರು ಎಂದು ಇತಿಹಾಸಕಾರರು ತಿಳಿಸುತ್ತಾರೆ.

ತರ್ಕಿಶ್‌ ಮಹಲ್‌ ದುರಸ್ತಿಗೊಳಿಸಿ ಆವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಹೀಗಾಗಿ ತರ್ಕಿಶ್‌ ಮಹಲ್‌ಗೆ ಇನ್ನಷ್ಟು ಜೀವಕಳೆ ಬಂದಿದೆ.ಕ್ರಿ.ಶ.1429–1432ರ ಅವಧಿಯಲ್ಲಿ ಅಹಮ್ಮದ್‌ಷಾ ಬಹಮನಿ ರಂಗಿನ್‌ ಮಹಲ್‌ ಕಟ್ಟಿಸಿದ. ಕ್ರಿ.ಶ.1543ರಿಂದ 1580ರ ವರೆಗೆ ಆಡಳಿತ ನಡೆಸಿದ ಅಲಿಬರೀದ್‌ ಕಟ್ಟಡದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ.

ರಂಗಿನ್‌ ಮಹಲ್‌ ಛಾವಣಿಯ ಮೇಲೆ ಸಾಗವಾನಿ ತೊಲಗಳನ್ನು ಹಾಕಿ ಅದರ ಮೇಲೆ ಪರಸಿ ಕಲ್ಲು ಇಟ್ಟು ಗಚ್ಚು ಸುರಿಯಲಾಗಿದೆ. ಕಂಬಗಳನ್ನು ದುರಸ್ತಿಗೊಳಿಸಲಾಗಿದೆ. ಈ ಸುಂದರ ಸ್ಮಾರಕವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಕ್ರಿ.ಶ. 1503ರಲ್ಲಿ ಆಡಳಿತ ನಡೆಸಿದ ಮಹಮ್ಮದ್‌ಷಾ ಬಹಮನಿ ಶಾರ್ಜಾ ದರ್ವಾಜಾ ನಿರ್ಮಿಸಿ ದ್ದಾನೆ. ನಿಜಾಮರು ಕೋಟೆಯನ್ನು ವಶಪಡಿಸಿಕೊಂಡ ನಂತರ ಕೋಟೆ ಮಹಾದ್ವಾರದಲ್ಲಿ ಇಟ್ಟಿಗೆ ಬಳಸಿ ವಾಸ್ತುಶಿಲ್ಪದಲ್ಲಿ ಕೆಲ ಬದಲಾವಣೆ ಮಾಡಿದರು. ಅದು ಇಂದಿಗೂ ಕಾಣಸಿಗುತ್ತದೆ. ಮೂರು ತಿಂಗಳಿಂದ ಶಾರ್ಜಾ ದರ್ವಾಜಾದ ದುರಸ್ತಿ ಕಾರ್ಯ ನಡೆದಿದೆ.

‘ಪುರಾತನ ಕಟ್ಟಡಗಳ ಜೀರ್ಣೋ ದ್ಧಾರ ಸವಾಲಿನ ಕೆಲಸ. 20 ವರ್ಷ ಗಳಿಂದ ಪುರಾತನ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳ ವಿನ್ಯಾಸ ಅದ್ಭುತವಾಗಿದೆ’ ಎಂದು ಗುತ್ತಿಗೆದಾರ ಮಹಮ್ಮದ್‌ ಆರೀಫ್ ಹೇಳುತ್ತಾರೆ.

‘ಬಹಮನಿ ಸುಲ್ತಾನರು ಕಟ್ಟಡ ನಿರ್ಮಾಣಕ್ಕೆ ಕಲ್ಲುಗಳನ್ನು ಬಳಸಿದರೆ, ನಿಜಾಮರು ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಬಹಮನಿ ವಾಸ್ತುಶಿಲ್ಪ ಎಲ್ಲ ದೃಷ್ಟಿಯಿಂದಲೂ ಶ್ರೇಷ್ಠವಾಗಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT