ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲವೇ ಹಾಸಿಗೆ; ಬಯಲೇ ಶೌಚಾಲಯ!

Last Updated 2 ಸೆಪ್ಟೆಂಬರ್ 2017, 7:05 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಜಿಲ್ಲೆಯ ಮೋಟ್ನಳ್ಳಿ ಮೊರಾರ್ಜಿ ವಸತಿ ಶಾಲೆಯ ವಸತಿ ನಿಲಯದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೇ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಶಾಲೆಯ ವಸತಿ ನಿಲಯದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಒಟ್ಟು 230 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯಗಳಿವೆ. ಆದರೆ, ಬಾಲಕರ ವಸತಿ ನಿಲಯದಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಈ ವಸತಿ ನಿಲಯ ನಿರ್ವಹಣೆ ಮಾಡಲು ಸರ್ಕಾರ ಕಾಯಂ ವಾರ್ಡನ್‌ ಕೂಡ ನೇಮಿಸಿಲ್ಲ. ನಿಲಯ ನಿರ್ವಹಣೆ ಕೊರತೆಯಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ವಸತಿ ನಿಲಯದ ಅವ್ಯವಸ್ಥೆ ಕಂಡು ಅನೇಕ ಪೋಷಕರು ಮಕ್ಕಳನ್ನು ವಸತಿ ಶಾಲೆ ಬಿಡಿಸಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.

‘ರಾತ್ರಿ–ಹಗಲು ಸೇರಿ ಒಂದೆರಡು ತಾಸು ವಿದ್ಯುತ್‌ ಸಂಪರ್ಕ ಇರುತ್ತದೆ. ನಿರಂತರ ವಿದ್ಯುತ್‌ ಕೊರತೆ ನೀರಿನ ಅಭಾವ ಸೃಷ್ಟಿಸಿದೆ. ಇದರಿಂದ ಎಲ್ಲಾ ವಿದ್ಯಾರ್ಥಿಗಳು ಬಯಲು, ಕೆರೆ, ಕಟ್ಟೆ, ಬಾವಿಗಳನ್ನೇ ಆಶ್ರಯಿಸಿದ್ದಾರೆ’ ಎಂದು ವಿದ್ಯಾರ್ಥಿಗಳಾದ ಸುರೇಶ್, ರವಿ, ವೆಂಕಟೇಶ ಅಳಲು ತೋಡಿಕೊಂಡರು.

‘ಜಿಲ್ಲೆಯಲ್ಲಿ ಒಟ್ಟು 13 ಮೊರಾರ್ಜಿ ವಸತಿ ಶಾಲೆಗಳು ಇದ್ದು, ವಡಗೇರಾ ಮತ್ತು ಮೋಟ್ನಳ್ಳಿ ವಸತಿ ಶಾಲೆಗಳು ಹಿಂದುಳಿದ ವರ್ಗಗಗಳ ಇಲಾಖೆ ಅಧೀನದಲ್ಲಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ, ವಸತಿ ನಿಲಯದ ಅವ್ಯವಸ್ಥೆಯಿಂದ ಶಾಲೆಗೆ ಕೆಟ್ಟ ಹೆಸರು ಅಂಟಿಕೊಂಡಿದೆ’ ಎನ್ನುತ್ತಾರೆ ವಿದ್ಯಾರ್ಥಿ ಪೋಷಕ ದೇವಿಂದ್ರಪ್ಪ.

ನೆಲವೇ ಹಾಸಿಗೆ: ‘ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಮಲಗಲು ಮಂಚ ಹಾಸಿಗೆ ವ್ಯವಸ್ಥೆಯನ್ನು ಜವಾಬ್ದಾರಿ ಹೊತ್ತ ಇಲಾಖೆ ಮಾಡಿಲ್ಲ. ಪರಿಣಾಮವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ನೆಲವೇ ಹಾಸಿಗೆ! ಕೊಠಡಿಗಳ ಕಿಟಕಿ ಗಾಜುಗಳು ಒಡೆದಿರುವ ಕಾರಣ ಮಳೆ–ಗಾಳಿಗೆ ವಿದ್ಯಾರ್ಥಿಗಳ ಬದುಕು ಹೈರಾಣಾಗಿದೆ. ಟ್ರಂಕ್‌ಗಳಲ್ಲಿ ಪುಸ್ತಕ, ಬಟ್ಟೆಗಳನ್ನು ಇಟ್ಟುಕೊಳ್ಳುವುದರಿಂದ ಅವು ರಕ್ಷಿಸಲ್ಪಟ್ಟಿದೆ’ ಎಂದು 10ನೇ ತರಗತಿ ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಸುಳಿಯದ ಅಧಿಕಾರಿ: ಕನಿಷ್ಠ ಸೌಲಭ್ಯಗಳಿಂದ ವಸತಿನಿಲಯದ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದರೂ, ಹಿಂದುಳಿದ ವರ್ಗಗಳ ಇಲಾಖೆ ಪ್ರಭಾರ ಉಪ ನಿರ್ದೇಶಕ ಮಾರುತಿ ಹುಜರತಿ ಅತ್ತ ಸುಳಿದಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ. ಜಿಲ್ಲಾಧಿಕಾರಿ ಒಮ್ಮೆ ಮೊರಾರ್ಜಿ ವಸತಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಬೇಕು ಎಂಬುದಾಗಿ ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT