ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

51ಮದ್ಯದ ಅಂಗಡಿಗೆ ಮತ್ತೆ ಜೀವಕಳೆ

Last Updated 2 ಸೆಪ್ಟೆಂಬರ್ 2017, 7:15 IST
ಅಕ್ಷರ ಗಾತ್ರ

ಹಾಸನ: ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಿಲ್ಲೆಯ 51 ಮದ್ಯದ ಅಂಗಡಿಗಳಿಗೆ ಮತ್ತೆ ಜೀವಕಳೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದು ನಗರದೊಳಗಿನ ಮದ್ಯ ಮಾರಾಟದ ಮಳಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬಳಿಕ ಹೊಸ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ 66 ಮದ್ಯದಂಗಡಿ ಪೈಕಿ 51 ಮತ್ತೆ ಆರಂಭಗೊಂಡು, ಗ್ರಾಹಕರಿಂದ ಗಿಜಿಗುಡಲಾರಂಭಿಸಿವೆ.

ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬಳಿಕ ಅಬಕಾರಿ ಇಲಾಖೆಯು ಬಾರ್‌ ಅಂಡ್‌ ರೆಸ್ಟೋರೆಂಟ್‌, ವೈನ್ ಶಾಪ್, ಎಂಎಸ್‌ಐಎಲ್‌ ಮದ್ಯ ಮಾರಾಟದ ಪರವಾನಗಿಯನ್ನು ನವೀಕರಿಸಿದೆ. ಎರಡು ತಿಂಗಳಿನಿಂದ ರಂಗು ಕಳೆದುಕೊಂಡಿದ್ದ ಅವುಗಳು ಮತ್ತೆ ಜೀವಕಳೆ ಪಡೆಯುತ್ತಿವೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಅರಸೀಕೆರೆ, ಸಕಲೇಶ ಪುರ, ಬೇಲೂರು ಪಟ್ಟಣ ವ್ಯಾಪ್ತಿಯ 51 ಬಾರ್‌ಗಳ ಮಾಲೀಕರು ಕೋರ್ಟ್‌ ಆದೇಶದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇಲಾಖೆ ಅಂಕಿ ಅಂಶ ಪ್ರಕಾರ ಬಾರ್‌ಗಳು ಬಂದ್‌ ಆದಾಗಿನಿಂದ ಶೇ 15ರಿಂದ 20ರಷ್ಟು ಆದಾಯ ಖೋತಾ ಆಗಿದೆ. ಪರವಾನಗಿ ನವೀಕರಣ ಶುಲ್ಕ ₹ 4 ರಿಂದ ₹ 4.50 ಲಕ್ಷ ಇದ್ದು, ₹ 3 ಕೋಟಿ ನಷ್ಟ ಅಂದಾಜಿಸಲಾಗಿತ್ತು.

ಈಗಾಗಲೇ ಹಿರೀಸಾವೆ, ಶ್ರವಣ ಬೆಳಗೊಳ, ಹಳೇಬೀಡು, ಮಗ್ಗೆ, ಬಾಳುಪೇಟೆ, ರಾಮನಾಥಪುರ, ಕೊಣ ನೂರು, ಹೊಳೆನರಸೀಪುರ, ಅಗ್ರಹಾರ ಗೇಟ್‌ ಹಾಗೂ ಇತರ ಪ್ರದೇಶದ 58 ಬಾರ್‌ಗಳು ಸ್ಥಳಾಂತರಗೊಂಡಿವೆ. ಜಿಲ್ಲೆಯಾದ್ಯಂತ 299 ಮದ್ಯದ ಅಂಗಡಿಗಳಿದ್ದು, ಈವರೆಗೆ 284 ಬಾರ್‌ಗಳ ಪರವಾನಗಿ ನವೀಕರಣಗೊಂಡಿವೆ.

ಕಳೆದ ವರ್ಷ ಜೂನ್, ಜುಲೈನಲ್ಲಿ 7,19,135 ಬಾಕ್ಸ್‌ ಮದ್ಯ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಜೂನ್‌, ಜುಲೈನಲ್ಲಿ 6,87,908 ಬಾಕ್ಸ್‌ ಮಾರಾಟವಾಗಿದ್ದು, 31,426 ಬಾಕ್ಸ್‌ ಕಡಿಮೆ ಆಗಿದೆ. ಬೇಲೂರು ಶೇ 9, ಅರಸೀಕೆರೆಯಲ್ಲಿ ಶೇ 15 ಮತ್ತು ಸಕಲೇಶಪುರದಲ್ಲಿ ಶೇ 6ರಷ್ಟು ಕುಸಿತವಾಗಿದೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅಬಕಾರಿ ಉಪಆಯುಕ್ತ ಗೋಪಾಲಕೃಷ್ಣ ಗೌಡ, ‘ಎರಡು ತಿಂಗಳು ಮದ್ಯದಂಗಡಿ ಬಂದ್‌ನಿಂದಾಗಿ ಆದಾಯ ಕಡಿಮೆ ಆಗಿದೆ. 66 ಪರವಾನಗಿಗಳ ನವೀಕರಣ ಪೈಕಿ 51 ನವೀಕರಿಸಲಾಗಿದೆ. ಉಳಿದ 15 ಮದ್ಯದಂಗಡಿ ಸ್ಥಳಾಂತರ ಆಗಬೇಕು. ಸ್ಥಳಾಂತರಗೊಂಡ ಬಾರ್‌ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆ ಯುವುದಕ್ಕೆ ಸಾರ್ವಜನಿಕರು, ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ನಿಯಮಗಳ ಪ್ರಕಾರ ಧಾರ್ಮಿಕ ಸ್ಥಳ, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆಗಳಿಂದ 100 ಮೀಟರ್‌ ದೂರದಲ್ಲಿ ಇರಬೇಕು. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮದ್ಯದ ಅಂಗಡಿ ಬಂದ್‌ ಆಗಿದ್ದರಿಂದ ಬೇರೆ ಕೆಲಸ ಸಿಕ್ಕಿರ ಲಿಲ್ಲ. ಜೀವನ ನಡೆಸುವುದೇ ಕಷ್ಟ ವಾಗಿತ್ತು. ಮಾಲೀಕರು ಜಾಗ ಹುಡುಕಾಟದಲ್ಲಿ ಬ್ಯುಸಿ ಆಗಿದ್ದರು. ಮತ್ತೆ ಆರಂಭಗೊಂಡಿರುವುದು ಸಂತಸ ಎಂದಿದೆ’ ಎಂದು ಬಾರ್‌ ನೌಕರ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT