ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಿ ಪದ್ಧತಿ ರಾಗಿ ಮೊರೆ ಹೋದ ರೈತ

Last Updated 2 ಸೆಪ್ಟೆಂಬರ್ 2017, 8:46 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಗುಡ್ನಹಳ್ಳಿ ಗ್ರಾಮದ ಪ್ರಗತಿಪರ ರೈತ ವೆಂಕಟೇಶಪ್ಪ ಗುಣಿ ಪದ್ಧತಿಯಲ್ಲಿ ರಾಗಿ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಕೌಶಲವನ್ನು ಕಂಡುಕೊಂಡಿದ್ದಾರೆ.

ವೆಂಕಟೇಶಪ್ಪ ಐದಾರ ವರ್ಷಗಳಿಂದ ರಾಗಿ ಬೆಳೆಯನ್ನು ಈ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ರಾಗಿಯಿಂದ 10 ರಿಂದ 15 ಕ್ವಿಂಟಲ್ ಇಳುವರಿ ಪಡೆಯಬಹುದು. ಆದರೆ ಗುಣಿ ಪದ್ಧತಿಯಲ್ಲಿ ಬೆಳೆದರೆ ಒಂದು ಎಕರೆ 35ರಿಂದ40 ಕ್ವಿಂಟಲ್ ರಾಗಿ ಸಿಗಲಿದೆ.

ಇದನ್ನು ಗಮನಿಸಿದ ಸುತ್ತ–ಮುತ್ತಲ ಗ್ರಾಮಗಳ ರೈತರು ಈ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಇಳವರಿ ಪಡೆಯುತ್ತಿದ್ದಾರೆ. ತಾಲ್ಲೂಕಿನ ವಡಗನಹಳ್ಳಿ, ದೊಡ್ಡಕಡತೂರು, ಬರಗೂರು, ತಂಬಹಳ್ಳಿ, ಬ್ಯಾಟರಾಯನಪುರ, ಚಿಂತಾಮಣಿ, ಶಿಡ್ಲಘಟ್ಟ, ದೇವನಹಳ್ಳಿ ಮತ್ತು ಕೋಲಾರ, ಮುಳಬಾಗಿಲು, ಬಂಗಾರುಪೇಟೆತಾಲ್ಲೂಕಿನ ಹಲವು ಗ್ರಾಮಗಳಲ್ಲೂ ಗುಣಿ ಪದ್ಧತಿಯನ್ನು ಕೆಲ ರೈತರು ಅಳವಡಿಸಿಕೊಂಡು ರಾಗಿ ಬೆಳೆಯುತ್ತಿದ್ದಾರೆ.

ಬಯಲುಸೀಮೆಯಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ಗುಣಿ ಪದ್ಧತಿ ರೈತರಲ್ಲಿ ಆಶವಾದ ಮೂಡಿಸಿದೆ. ಜಿಲ್ಲೆಯ ಒಂದೂವರೆ ಸಾವಿರ ಎಕರೆಯಲ್ಲಿ ಈ ಪದ್ಧತಿ ಅಳವಡಿಸಿಕೊಂಡು ರಾಗಿ ಬೆಳೆಯಲಾಗುತ್ತಿದೆ’ ಎಂದು ವೆಂಕಟೇಶಪ್ಪ ತಿಳಿಸುವರು.

ಸಾಮಾನ್ಯವಾಗಿ ಒಂದು ಎಕರೆಗೆ 10 ರಿಂದ 12 ಕೆ.ಜಿ, ರಾಗಿ ಬಿತ್ತನೆ ಮಾಡಲಾಗುತ್ತದೆ. ಆದರೆ ವೆಂಕಟೇಶಪ್ಪ ಎಂ.ಆರ್–6 ತಳಿ 50 ಗ್ರಾಂ ರಾಗಿಯನ್ನು ಒಂದು ರಾತ್ರಿ ನೆನೆ ಹಾಕಿದರು. ಬೆಳಿಗ್ಗೆ ಒಂದು ಕ್ರೇಟ್ ನಲ್ಲಿ ರಾಗಿ ಕಾಳನ್ನು ಬಿತ್ತನೆ ಮಾಡಿ ಪೈರು ಬೆಳೆಸಿದ್ದಾರೆ. 20 ದಿನ ಪೈರನ್ನು ಪೋಷಿಸಿ ನಂತರ ನಾಟಿ ಮಾಡಿದ್ದಾರೆ.

ಒಂದು ಎಕರೆಗೆ 10, 880 ರಾಗಿ ಪೈರು ಮತ್ತು ಒಂದು ಗುಂಟೆಗೆ 272 ರಾಗಿ ಪೈರುಗಳು ನಾಟಿ ಮಾಡಲಾಗಿದೆ. 2X2 ಅಡಿ ಅಂತರದಲ್ಲಿ ಅರ್ಧ ಅಡಿ ಆಳ ಗುಣಿ ತೆಗೆದು ಕೊಟ್ಟಿಗೆ ಗೊಬ್ಬರ, ಎರೆ ಹುಳು ಗೊಬ್ಬರ, ಜಿಂಕ್, ಬೋರಾನ್ ಹಾಗೂ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ನೀಡಿದ್ದಾರೆ. ಪೈರನ್ನು ನಾಟಿ ಮಾಡಿದ 40 ದಿನಗಳ ನಂತರ ಅದನ್ನು ತುಳಿದು ಬಗ್ಗಿಸುವುದರಿಂದ ಒಂದು ಪೈರು ಸುಮಾರು 25ರಿಂದ 30 ತೆನೆ ಮೂಡುತ್ತದೆ. ಇದರಿಂದ ಇಳುವರಿ ಹೆಚ್ಚಾಗುತ್ತದೆ.

ರಾಗಿ ಬೆಳೆ ಸಮಾನ್ಯವಾಗಿ ಒಂದೇ ಬಾರಿಗೆ ತೆನೆ ಕಟಾವು ಮಾಡಿ ಒಕ್ಕಣೆ ಕಾರ್ಯ ನಡೆಸುತ್ತಾರೆ. ಆದರೆ ಗುಣಿ ಪದ್ಧತಿಯಲ್ಲಿ ಬೆಳೆಯುವ ರಾಗಿ ಬೆಳೆಯಲ್ಲಿ ಬಲಿತ ತೆನೆಗಳನ್ನು ಮಾತ್ರ ಹಂತ ಹಂತವಾಗಿ ಕಟಾವು ಮಾಡಲಾಗುತ್ತದೆ. ರಾಗಿ ಪೈರು 5ರಿಂದ 6ಅಡಿ ಎತ್ತರ ಬೆಳೆಯುವುದರಿಂದ ಜಾನುವಾರುಗಳಿಗೆ ಸಾಕಷ್ಟು ಮೇವು ಸಿಗಲಿದೆ.

‘ರೈತರು ಸಾಂಪ್ರದಾಯಿಕ ರಾಗಿ ಬಿತ್ತನೆ ಪದ್ಧತಿ ಬಿಟ್ಟು ವೈಜ್ಙಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಸರ್ಕಾರದ ಕೃಷಿ ಭಾಗ್ಯ ಯೋಜನೆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ವೆಂಕಟೇಶಪ್ಪ ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT