ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಯಾಗದ ಭೂಮಿ 25 ಸಾವಿರ ಹೆಕ್ಟೇರ್

Last Updated 2 ಸೆಪ್ಟೆಂಬರ್ 2017, 9:45 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಈ ಬಾರಿ ಶೇ 26ರಷ್ಟು ಮಳೆ ಕೊರತೆಯಾಗಿದೆ. ಕಳೆದ ಬಾರಿಗಿಂತ ಶೇ 6ರಷ್ಟು ಹೆಚ್ಚು ಮಳೆಯಾದರೂ, ಶೇ 14ರಷ್ಟು ಭೂಮಿ ಬಿತ್ತನೆಯಾಗದೇ ಉಳಿದಿದೆ. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಆರ್. ಮಧುಸೂದನ್ ಮಾಹಿತಿ ನೀಡಿದರು.
ವಾಡಿಕೆಯಂತೆ ಆಗಸ್ಟ್ ಅಂತ್ಯದ ಒಳಗೆ 1,856 ಮಿ.ಮೀ. ಮಳೆಯಾಗಬೇಕಿತ್ತು. ಸುರಿದ ಮಳೆ 1,368 ಮಿ.ಮೀ. ಕಳೆದ ವರ್ಷ ಈ ಅವಧಿಯಲ್ಲಿ 1,210 ಮಿ.ಮೀ ಮಳೆಯಾಗಿತ್ತು.

ಈ ಬಾರಿ ಶೇ 6ರಷ್ಟು ಹೆಚ್ಚು ಮಳೆಯಾದರೂ ಕೆರೆ, ಕಟ್ಟೆಗಳು ಬರಿದಾಗಿವೆ ಎಂದು ವಿವರ ನೀಡಿದರು. ಜಿಲ್ಲೆಯಲ್ಲಿನ 1.69 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ 1.44 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಉಳಿದ 25 ಸಾವಿರ ಹೆಕ್ಟೇರ್ ಖಾಲಿ ಉಳಿದಿದೆ. 1.07 ಲಕ್ಷ ಹೆಕ್ಟೇರ್ ಭತ್ತದ ಪ್ರದೇಶದಲ್ಲಿ 70 ಸಾವಿರ ಮಾತ್ರ ಭತ್ತ ನಾಟಿಯಾಗಿದೆ. ಉಳಿದ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಬಾರಿ ನಿಗದಿತ ಗುರಿಗಿಂತ 15 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಹೆಚ್ಚು ಬಿತ್ತನೆಯಾಗಿದೆ. ಹಿಂಗಾರು ಬೆಳೆಗೆ ಅಗತ್ಯ ಬೀಜಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.

ಬಾರದ ಟ್ಯಾಂಕರ್ ನೀರಿನ ಹಣ: ಭದ್ರಾವತಿ ತಾಲ್ಲೂಕು ಸೈದರಕಲ್ಲಹಳ್ಳಿ ಗ್ರಾಮಕ್ಕೆ 20015–16ನೇ ಸಾಲಿನಲ್ಲಿ ಟ್ಯಾಂಕರ್ ಮೂಲಕ ಪೂರೈಸಿದ ಕುಡಿಯುವ ನೀರಿನ ಬಾಕಿ ಹಣ ಬಿಡುಗಡೆ ಆಗಿಲ್ಲ ಎಂದು ಕೆಡಿಪಿ ಸದಸ್ಯ ಗುಡುಮಗಟ್ಟೆ ಮಲ್ಲಯ್ಯ ಆರೋಪಿಸಿದರು. 15–16ನೇ ಸಾಲಿನಲ್ಲಿ ಕುಡಿಯುವ ನೀರಿನ ಎಲ್ಲಾ ಅನುದಾನ ವಿತರಿಸಲಾಗಿದೆ. ಯಾವುದೇ ಬಾಕಿ ಉಳಿದಿಲ್ಲ ಎಂದು ಸಿಇಒ ಡಾ. ರಾಕೇಶ್‌ಕುಮಾರ್ ಪ್ರತಿಕ್ರಿಯಿಸಿದರು.

ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಎರಡು, ಮೂರು ತಿಂಗಳಾದರೂ ಪರವಾಗಿಲ್ಲ. ವರ್ಷದವರೆಗೆ ಹಣ ನೀಡಲಿಲ್ಲ ಎಂದರೆ ಹೇಗೆ? ಇದಕ್ಕೆ ಆಡಳಿತ ವ್ಯವಸ್ಥೆ ಎನ್ನುತ್ತಾರೆಯೇ? ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ತಾಕೀತು ಮಾಡಿದರು.

167 ಶೌಚಾಲಯ ಬಾಕಿ: ಸ್ವಚ್ಛ ಭಾರತ್ ಮಿಷನ್ ಅಡಿ ಜಿಲ್ಲೆಯ 271 ಗ್ರಾಮ ಪಂಚಾಯ್ತಿ 2,490 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿತ್ತು. ಜುಲೈ ಅಂತ್ಯದವರೆಗೆ 1,035 ಗುರಿ ಇರಿಸಿಕೊಳ್ಳಲಾಗಿತ್ತು. ಇದುವರೆಗೆ 868 ಶೌಚಾಲಯ ನಿರ್ಮಿಸಲಾಗಿದೆ. ಶೇ 83–86 ಗುರಿ ಸಾಧಿಸಲಾಗಿದೆ. ಉಳಿದ 167 ಶೌಚಾಲಯ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಇಒ ಮಾಹಿತಿ ನೀಡಿದರು.

ಆರು ಸಾವಿರ ಮೇವಿನ ಕಿಟ್‌ ವಿತರಣೆ:  ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಭಾಸ್ಕರನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. 6 ಸಾವಿರ ಮಿನಿಕಿಟ್‌ ವಿತರಿಸಲು ಅನುಮತಿ ನೀಡಿದೆ. ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ಭಾಗಗಳಲ್ಲಿ ಮೇವು ಪೂರೈಕೆಯ ಅಗತವಿದೆ ಎಂದರು.

ಜಾನುವಾರಿಗೆ ಕೃತಕ ಗರ್ಭಧಾರಣೆ ಮಾಡುವಾಗ ಹೆಣ್ಣುಕರುವಿಗೆ ಹೆಚ್ಚಿನ ಬೇಡಿಕೆ ಇದೆ. ಆ ಚುಚ್ಚುಮದ್ದಿಗೆ ₹ 1 ಸಾವಿರ ವೆಚ್ಚ ತಗುಲುತ್ತದೆ. ಫಲಾನುಭವಿಗಳು ₹ 800ಕ್ಕೆ ನೀಡಲು ಕೇಳುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡಿ, ಗಂಡು ಜಾನುವಾರಿನಿಂದ ಲಾಭವಿಲ್ಲ ಎಂದು ವಯಸ್ಸಾದ ನಂತರ ಮಾರಾಟ ಮಾಡುತ್ತಾರೆ. ಅದರ ಬದಲು ಹೆಣ್ಣು ಜಾನುವಾರು ಚುಚ್ಚುಮದ್ದುಗಳನ್ನೇ ಫಲಾನುಭವಿಗಳಿಗೆ ದೊರೆಯಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ಮಾತನಾಡಿ, ಮಳೆ ಕೊರತೆ ಕಾರಣ ಗೇರು ಬೆಳೆಯಲು ಆದ್ಯತೆ ನೀಡಲಾಗಿದೆ ಎಂದರು. ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿ, ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ಜಾಗೃತಿ ಕಾರ್ಯಾಗಾರ ಆಯೋಜಿಸಲು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಉಪ ನಿರ್ದೇಶಕ ಶೇಷಪ್ಪ ಮಾತನಾಡಿ, ಆ.2ರಿಂದ ಜಾರಿಗೆ ಬರುವ ಮಾತೃಪೂರ್ಣ ಯೋಜನೆಯ ವಿವರಗಳನ್ನು ನೀಡಿದರು.
ಭಾನುಪ್ರಕಾಶ್ ಮಾತನಾಡಿ, ಎಂಟು ತಿಂಗಳು ಪೂರ್ಣಗೊಂಡ ಗರ್ಭಿಣಿಯರು ಹಾಗೂ 90 ದಿನಗಳ ಬಾಣಂತಿಯರು ಅಂಗನವಾಡಿಗಳಿಗೆ ಬಂದು ಆಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಮನೆಯ ಸದಸ್ಯರೇ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.

ಕುಟುಂಬ ಸದಸ್ಯರನ್ನು ಕಳುಹಿಸಬಹುದು. ಬಾಣಂತಿಯರಿಗೆ ಹೆರಿಗೆಯಾದ 40 ದಿನಗಳವರೆಗೆ ಮಾತ್ರ ಅವಕಾಶವಿದೆ. ಆನಂತರ ವೈದ್ಯರ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ ಎಂದು ಅಧಿಕಾರಿಗಳು ವಿವರ ನೀಡಿದರು.

ಫಲಾನುಭವಿಗಳ ಕೊರತೆ: ಬಸವವಸತಿ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ 7,601 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 1,160 ಫಲಾನುಭವಿಗಳು ಸಿಗದ ಕಾರಣ ನಿಗಮಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಜತೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಅರ್ಹ ಫಲಾನುಭವಿಗಳ ಪಟ್ಟಿ ಮಾಡಲು ಸಚಿವರು ಸೂಚಿಸಿದರು.

ಕೆರೆ ಸಂರಕ್ಷಣೆಗೆ ಸೂಚನೆ: ಕೆರೆ ಸಂರಕ್ಷಣೆ ಎಲ್ಲರ ಕರ್ತವ್ಯ. ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜಲಮೂಲಗಳಾದ ಬ್ಯಾರೇಜ್‌ ದುರಸ್ತಿ ಮಾಡಬೇಕು. ಅಗತ್ಯವಿರುವ ಭಾಗಗಳಲ್ಲಿ ಸೆಪ್ಟೆಂಬರ್ ಒಳಗೆ ಗೇಟ್‌ ಅಳವಡಿಸಬೇಕು ಎಂದು ಕಾಗೋಡು ತಿಮ್ಮಪ್ಪ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಕೊಳವೆ ಬಾವಿಗೂ ಮುನ್ನವೇ ಪೈಪ್‌ಲೈನ್: ವಿವಿಧ ಯೋಜನೆಗಳಲ್ಲಿ ಕೊಳವೆಬಾವಿ ಕೊರೆಸುವ ಮುನ್ನವೇ ಪೈಪ್‌ಲೈನ್ ಅಳವಡಿಕೆ, ಕೇಸಿಂಗ್, ವಿದ್ಯುತ್ ಸಂಪರ್ಕಕ್ಕೆ ಹಣ ವಿನಿಯೋಗಿಸಿರುವ ವಿಚಾರ ಸಭೆಯಲ್ಲಿ ಬೆಳಕಿಗೆ ಬಂತು. ಕೊಳವೆಬಾವಿಯಲ್ಲಿ ನೀರುಬಂದ ನಂತರವೇ ಮುಂದಿನ ಕ್ರಮ ಅನುಸರಿಸುವಂತೆ ಸಚಿವರು ಎಂಜಿನಿಯರ್‌ ಹರೀಶ್ ಅವರಿಗೆ ಸೂಚಿಸಿದರು.

ಷೇರು ಮೊತ್ತ ಹಿಂದಿರುಗಿಸಲು ಆಗ್ರಹ: ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆಯುವಾಗ ಶೇ 10ರಷ್ಟು ಷೇರು ಮುರಿದುಕೊಳ್ಳಲಾಗುತ್ತದೆ. ಸಾಲ ತಿರುವಳಿಯ ವೇಳೆ ಈ ಷೇರು ಪರಿಗಣಿಸುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ದೂರಿದರು.

ಶಾಸಕರಾದ ಶಾರದಾ ಪೂರ್‍ಯಾನಾಯ್ಕ, ಆರ್. ಪ್ರಸನ್ನಕುಮಾರ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT