ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ, ಪ್ರೀತಿ, ಕುತೂಹಲ, ವಿಚಿತ್ರಗಳ ಮಿಶ್ರಣ ‘ಹ್ಯಾಪಿ ಜರ್ನಿ’

Last Updated 2 ಸೆಪ್ಟೆಂಬರ್ 2017, 13:18 IST
ಅಕ್ಷರ ಗಾತ್ರ

ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ದೇರಾಜೆ ಸೀತಾರಾಮಯ್ಯ ಅವರ ಬಹುಶ್ರುತ ಕೃತಿಯೊಂದಿದೆ. ಅದರ ಹೆಸರು ‘ಕುರುಕ್ಷೇತ್ರಕ್ಕೊಂದು ಆಯೋಗ’. ಕುರುಕ್ಷೇತ್ರ ಯುದ್ಧಕ್ಕೆ ಕಾರಣ ಯಾರು, ಅವರು ಯುದ್ಧಕ್ಕೆ ಎಷ್ಟರಮಟ್ಟಿಗೆ ಕಾರಣರು ಎಂಬ ಬಗ್ಗೆ ನ್ಯಾಯದೇವತೆಯ ಎದುರಿನಲ್ಲಿ ವಿಚಾರಣೆ ನಡೆಯುತ್ತದೆ. ಆ ಸುಂದರ ಕೃತಿಯಲ್ಲಿ ಮಹಾಭಾರತದ ಪ್ರಮುಖ ಪಾತ್ರಗಳು ನ್ಯಾಯದೇವತೆಯ ಎದುರು ಬಂದು, ತಮ್ಮ ಪಾಲಿನ ವಾದ–ಮಾತುಗಳನ್ನು ಹೇಳುತ್ತವೆ.

ಟಿ.ವಿ. ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ನಟ ಸೃಜನ್ ಲೋಕೇಶ್ ಅವರು ನಾಯಕನಾಗಿ ಅಭಿನಯಿಸಿರುವ ಸಿನಿಮಾ ‘ಹ್ಯಾಪಿ ಜರ್ನಿ’ಯ ಕೊನೆಯ ದೃಶ್ಯಗಳನ್ನು ವೀಕ್ಷಿಸುವಾಗ ‘ಕುರುಕ್ಷೇತ್ರಕ್ಕೊಂದು ಆಯೋಗ’ದ ನೆನಪು ಆಗುವುದು ಅಸಹಜವೇನೂ ಅಲ್ಲ! ಭೂತವೂ, ಅತೃಪ್ತ ಆತ್ಮವೋ ಏನೋ ಒಂದು ಚಿತ್ರದ ಕೊನೆಯಲ್ಲಿ, ಕೊಲೆ ಮಾಡಿದ್ದು ಏಕೆ ಎಂದು ಆರು ಜನರನ್ನು ಪ್ರಶ್ನಿಸುವಾಗ ‘... ಆಯೋಗ’ದ ನೆನಪುಗಳು ಮನಸ್ಸನ್ನು ಬಡಿಯಬಹುದು!

ಆರಂಭದಲ್ಲಿ ಪ್ರೇಮಕಥೆಯಂತೆ, ಯುವ ಸ್ನೇಹಿತರ ನಡುವಿನ ಸಂಬಂಧಗಳ ಬಗ್ಗೆ ಮಾತನಾಡುವ ಸಿನಿಮಾದಂತೆ ಆರಂಭವಾಗುವ ‘ಹ್ಯಾಪಿ ಜರ್ನಿ’ ಸಿನಿಮಾಕ್ಕೆ ಮಧ್ಯಂತರದ ವೇಳೆಗೆ ಹಾರರ್‌ ಲೇಪ ಸಿಕ್ಕಂತೆ ಭಾಸವಾಗುತ್ತದೆ. ಇದರ ಜೊತೆಯಲ್ಲೇ, ಕೊಲೆ ಪ್ರಕರಣವೊಂದರ ತನಿಖೆ ಈ ಎರಡು ಎಳೆಗಳ ನಡುವೆ ಸಾಗುತ್ತಿರುತ್ತದೆ – ಆದರೆ ಕೊಲೆಯ ತನಿಖೆ ನಡೆಯುತ್ತಿದೆ ಎಂಬುದು ಗೊತ್ತಾಗುವುದು ಸಿನಿಮಾದ ಕೊನೆಯಲ್ಲಿ.

ಸೃಜನ್ ಅವರು ಆರ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಮಿತಾ ಕುಲಾಲ್ ಅವರು ಶ್ರಾವಣಿಯ ಪಾತ್ರ ನಿಭಾಯಿಸಿದ್ದಾರೆ. ಹ್ಯುಂಡಾಯ್ ಕಂಪೆನಿಯಲ್ಲಿ ಕೆಲಸ ಮಾಡುವ ಏಳು ಜನ ಎಂಜಿನಿಯರ್‌ಗಳಲ್ಲಿ ಇವರೂ ಇಬ್ಬರು. ಈ ಏಳೂ ಜನ ಸ್ನೇಹಿತರು. ಆರ್ಯ ಮತ್ತು ಶ್ರಾವಣಿ ನಡುವೆ ಪ್ರೀತಿ ಅಂಕುರಿಸುತ್ತದೆ. ಆದರೆ, ಕೆಲವು ನಾಟಕೀಯ ಸಂಗತಿಗಳ ಕಾರಣದಿಂದಾಗಿ ಪ್ರೀತಿಗೆ ವಿಘ್ನ ಉಂಟಾಗುತ್ತದೆ. ಇದರಿಂದ ಮನನೊಂದು ಆರ್ಯ ತನ್ನ ಊರಿಗೆ ಮರಳಿ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆದರೆ ಆತ ಸಾಯುವುದಿಲ್ಲ. ‘ನಾನು ಇನ್ನು ಮುಂದೆ ಸಾಯುವ ಯತ್ನ ಮಾಡುವುದಿಲ್ಲ’ ಎಂದು ಪೊಲೀಸ್ ಅಧಿಕಾರಿ ಶಿವಧ್ವಜ್ ಅವರಿಗೆ ಆರ್ಯ ಮಾತು ಕೊಡುತ್ತಾನೆ.

ಇಷ್ಟೆಲ್ಲ ಆದ ನಂತರ, ಆರ್ಯ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪುತ್ತಾನೆ. ಅವನ ಸಾವಿಗೆ ಕಾರಣ ಯಾರು, ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದೆಲ್ಲ ಸಸ್ಪೆನ್ಸ್‌ – ಈ ಬರಹದಲ್ಲೂ, ಸಿನಿಮಾದಲ್ಲೂ. ಆರ್ಯ ಸಾವಿನ ನಂತರ, ಆರ್ಯನಿಂದ ಸ್ನೇಹಿತರಿಗೆ ದೂರವಾಣಿ ಕರೆ ಬರುತ್ತದೆ! (ಹೌದು, ಸಾವಿನ ನಂತರ.) ತನ್ನ ಹಳ್ಳಿ ಮನೆಗೆ ಬರುವಂತೆ ಆರ್ಯ ಸ್ನೇಹಿತರನ್ನು ಆಹ್ವಾನಿಸುತ್ತಾನೆ! ಅಲ್ಲಿಗೆ ಹೋದ ಆರ್ಯನ ಸ್ನೇಹಿತರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ತೊಂದರೆಗೆ ಸಿಲುಕಿಕೊಂಡ ಸ್ನೇಹಿತರು ಪೊಲೀಸ್ ಅಧಿಕಾರಿ ಶಿವಧ್ವಜ್ ಕೈಗೆ ಸಿಗುತ್ತಾರೆ. ಆರ್ಯನ ಸಾವಿನ ರಹಸ್ಯ, ಆರ್ಯ ಸತ್ತ ನಂತರವೂ ಅವನಿಂದ ಸ್ನೇಹಿತರಿಗೆ ಕರೆ ಬಂದಿದ್ದು ಹೇಗೆ ಎಂಬುದನ್ನೆಲ್ಲ ಸಿನಿಮಾ ನೋಡಿ ತಿಳಿದುಕೊಳ್ಳಬಹುದು. ಸೃಜನ್ ಲೋಕೇಶ್ ಅಭಿನಯ ವೀಕ್ಷಕರಲ್ಲಿ ಬೇಸರ ಮೂಡಿಸುವುದಿಲ್ಲ. ಸಿನಿಮಾದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲವಾದರೂ, ಹಾಡುಗಳನ್ನು ಚಿತ್ರೀಕರಿಸಿದ ಸ್ಥಳಗಳು ನೆನಪಿನಿಂದ ಮರೆಯಾಗುವುದಿಲ್ಲ. ಒಂದಿಷ್ಟು ಹಾಸ್ಯ, ಒಂಚೂರು ಕುತೂಹಲ, ತುಸು ಪ್ರೀತಿ, ಸ್ವಲ್ಪ ವಿಚಿತ್ರ ಎನಿಸುವ ದೃಶ್ಯಗಳನ್ನು ಒಳಗೊಂಡ ಸಿನಿಮಾ ‘ಹ್ಯಾಪಿ ಜರ್ನಿ’.

ಭೂತವೂ, ಅತೃಪ್ತ ಆತ್ಮವೋ ಏನೋ ಒಂದು ಚಿತ್ರದ ಕೊನೆಯಲ್ಲಿ, ಕೊಲೆ ಮಾಡಿದ್ದು ಏಕೆ ಎಂದು ಆರು ಜನರನ್ನು ಪ್ರಶ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT