ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಿಲ ಶಿಲ್ಪದ ‘ರಾಬಿನ್ ಹುಡ್’ ಕಥನ

Last Updated 2 ಸೆಪ್ಟೆಂಬರ್ 2017, 13:21 IST
ಅಕ್ಷರ ಗಾತ್ರ

ಚಿತ್ರ: ಬಾದ್‌ಶಾಹೊ (ಹಿಂದಿ)
ನಿರ್ಮಾಣ: ಭೂಷಣ್ ಕುಮಾರ್, ಕೃಷನ್ ಕುಮಾರ್, ಮಿಲನ್ ಲೂಥ್ರಿಯ
ನಿರ್ದೇಶನ: ಮಿಲನ್ ಲೂಥ್ರಿಯ
ತಾರಾಗಣ: ಅಜಯ್ ದೇವಗನ್, ಇಮ್ರಾನ್ ಹಶ್ಮಿ, ಇಲಿಯಾನಾ ಡಿ ಕ್ರೂಸ್, ವಿದ್ಯುತ್ ಜಾಮ್ವಲ್, ಸಂಜಯ್ ಮಿಶ್ರ, ಇಶಾ ಗುಪ್ತ

**

ಒಂದೂರಲ್ಲಿ ಒಬ್ಬ ರಾಣಿ ಇದ್ದಳು. ಅವಳ ಅರಮನೆಯಲ್ಲಿ ಬಂಗಾರದ ಖಜಾನೆ ಇತ್ತು. ಅದನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಅರ್ಥಾತ್ ಸರ್ಕಾರ ನಡೆಸುತ್ತಿದ್ದವನು ತನ್ನ ತೆಕ್ಕೆಗೆ ರಾಣಿ ಸಿಗಲಿಲ್ಲ ಎಂದು ಖಜಾನೆ ಲೂಟಿ ಮಾಡುವ ಹುನ್ನಾರ ಹೂಡಿದ. ಆ ರಾಣಿಗೊಬ್ಬ ಅಂಗರಕ್ಷಕ. ಅವಳಿಗಾಗಿ ಜೀವ ಕೊಡಲೂ ಸಿದ್ಧ. ಲೂಟಿಯಾಗುವ ಖಜಾನೆಯ ಬಂಗಾರ ರಾಜಸ್ಥಾನದ ಒಂದೂರಿನಿಂದ ದೆಹಲಿ ತಲುಪಬೇಕು. ಅಷ್ಟರೊಳಗೆ ಅದನ್ನು ‘ಹಡಪ್’ ಮಾಡಬೇಕು. ಅಂಗರಕ್ಷಕ ಹಾಗೂ ಸ್ನೇಹಿತರು ಒಂದು ಕಡೆ. ಸೇನೆಯವರು ಇನ್ನೊಂದು ಕಡೆ. ಆ ಸೇನೆಯ ಅಧಿಕಾರಿ ಕೂಡ ರಾಣಿಯ ಕಡೆಯವನೇ. ಮುಂದಿನದು ಕಳ್ಳ-ಪೊಲೀಸ್ ಆಟ.

ಕನ್ನಡದಲ್ಲಿ ಬಂದಿದ್ದ ‘ಮಿಂಚಿನ ಓಟ’ ಚಿತ್ರವನ್ನು ನೆನಪಿಸುವ ‘ಬಾದ್‌ಶಾಹೊ’, ಆ ಚಿತ್ರಕ್ಕೆ ಇದ್ದ ವೇಗದಿಂದ ವಿಮುಖವಾಗುವುರೊಂದಿಗೆ ಕೊರತೆಯನ್ನು ಅರುಹುತ್ತಾ ಹೋಗುತ್ತದೆ.

ಕಳ್ಳ-ಪೊಲೀಸರ ಥ್ರಿಲ್ಲರ್ ಸದಾ ಕಾಲ ಹಿಡಿದಿಟ್ಟುಕೊಳ್ಳಬಲ್ಲ ವಸ್ತುವೇ. ಆದರೆ, ಅದು ಯಾವಾಗಲೂ ಹಿಂದಿಯ ‘ಶೋಲೆ’ಯೋ, ಕನ್ನಡದ ‘ಮಿಂಚಿನ ಓಟ’ವೋ, ‘ಜಾಕಿ’ಯೋ ಆಗಲಾರದು.

ತಾಂತ್ರಿಕವಾಗಿ ‘ಬಾದ್‌ಶಾಹೊ’ ಹೊಸಕಾಲದ ಪಟ್ಟುಗಳನ್ನೆಲ್ಲ ಅಳವಡಿಸಿದ ಸಿನಿಮಾ ಏನೋ ಹೌದು. ಆದರೆ, ನೋಡಿಸಿಕೊಳ್ಳುವುದರಲ್ಲಿನ ಅಸ್ಥಿರತೆಯಿಂದ ಕಥನದ ಶಿಲ್ಪ ಇನ್ನೂ ಗಟ್ಟಿಯಾಗಿರಬೇಕಿತ್ತು ಎನಿಸುತ್ತದೆ. ಕುರ್ಚಿಯ ತುದಿಗೆ ತಂದು ಕೂರಿಸುವ, ಮೈಮರೆಸುವ ದೃಶ್ಯಗಳು ಚಿತ್ರದಲ್ಲಿ ವಿರಳ. ಹಾಗಂತ ರಜತ್ ಅರೊರಾ ಚಿತ್ರಕಥಾ ಕೌಶಲವನ್ನು ಅನುಮಾನಿಸಲಾಗದು. ಅವರು ಸಾಕಷ್ಟು ಬುದ್ಧಿ ಖರ್ಚು ಮಾಡಿಯೇ ದೃಶ್ಯಗಳನ್ನು ಬರೆದಿದ್ದಾರೆ. ಕೌಶಲ ಕೇಂದ್ರಿತವಾದ ಸ್ಕ್ರಿಪ್ಟ್ ಕಥಾಲಯವನ್ನು ಅಲ್ಲಲ್ಲಿ ಕಳೆದುಕೊಳ್ಳುವುದು ಈ ಕಾಲಮಾನದಲ್ಲಿ ಅಪರೂಪವೇನಲ್ಲ.

ಚಿತ್ರದಲ್ಲಿ ಪಯಣವಿದೆ. ನಾಲ್ಕಾರು ಬಗೆಯ ಪಾತ್ರಗಳಿವೆ. ಅನಿರೀಕ್ಷಿತ ಹುನ್ನಾರಗಳಿವೆ. ತುಟಿಬಟ್ಟಲ ಒಡ್ಡಿಕೊಳ್ಳುವ ಸಪೂರ ಸೊಂಟದ ನಾಯಕಿ ಇದ್ದಾಳೆ. ಐಟಂ ಹಾಡಿನಲ್ಲಿ ಸ್ನಾನ ಮಾಡುವ ಸನ್ನಿ ಲಿಯೊನ್ ಮಾದಕತೆಯ ಉಪ್ಪಿನಕಾಯಿಯೂ ಇದೆ. ಇವೆಲ್ಲವನ್ನೂ ಮೀರಿದ ‘ಕಾಮಿಕ್ ರಿಲೀಫ್’ ಅನ್ನು ಮುದಿ ಉತ್ಸಾಹಿ ಪಾತ್ರದಲ್ಲಿ ಸಂಜಯ್ ಮಿಶ್ರ ಒದಗಿಸಿದ್ದಾರೆ. ‘ಮಿಂಚಿನ ಓಟ’ದ ಲೋಕನಾಥ್ ಅವರನ್ನು ನೆನಪಿಸುವಷ್ಟೇ ತೀವ್ರವಾಗಿ ಅವರು ಅಭಿನಯಿಸಿದ್ದಾರೆ. ಇಮ್ರಾನ್ ಹಶ್ಮಿ ಕೂಡ ಮನರಂಜನೆಯ ಸರಕು ತುಂಬಿಕೊಂಡ ಪಾತ್ರಕ್ಕೆ ಜೀವ ನೀಡಿದ್ದಾರೆ.

ಅಜಯ್ ದೇವಗನ್ ಚುರುಕು ಕಣ್ಣುಗಳಿಗೆ ತಕ್ಕ ತೂಕದ ಪಾತ್ರ ಚಿತ್ರದಲ್ಲಿ ಇಲ್ಲ. ವಿದ್ಯುತ್ ಜಾಮ್ವಲ್ ಕಟೆದ ದೇಹ ಹಾಗೂ ಬಂಡೆಗಲ್ಲಿನಂಥ ನಿಲುವು ಮನರಂಜನೆಯ ಭಾಗವಾಗಿ ವಿಫಲ. ಇಲಿಯಾನ ಸುಮ್ಮನಿದ್ದರಷ್ಟೆ ಚೆಂದ. ಇಶಾ ಗುಪ್ತ ಅಭಿನಯವೂ ನೆನಪಿನಲ್ಲಿ ಉಳಿಯುವುದಿಲ್ಲ.
ಜಾನ್ ಸ್ಟಿವರ್ಟ್ ಎಡ್ಯುರಿ ಹಿನ್ನೆಲೆ ಸಂಗೀತ ಚಿತ್ರಕ್ಕೆ ಲಯ ದಕ್ಕಿಸಿಕೊಡಲು ಹೆಣಗಾಡಿದೆ. ಸುನೀತಾ ರಾಡಿಯಾ ಸಿನಿಮಾಟೊಗ್ರಫಿಯ ಭಾರಕ್ಕೆ ಹೆಗಲು ಕೊಟ್ಟಿರುವ ರೀತಿ ಶ್ಲಾಘನೀಯ.

ಹೆದ್ದಾರಿಯಲ್ಲಿ ಸರ್ರನೆ ಸಾಗುವ ವಾಹನ ಟೋಲ್ ಗೇಟ್ ಸಂಚಾರ ದಟ್ಟಣೆಯಲ್ಲಿ ದಿಢೀರನೆ ಸಿಲುಕಿದರೆ ಹೇಗಾಗುತ್ತದೋ ಈ ಸಿನಿಮಾ ದರ್ಶನವೂ ಅದೇ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT