ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋನು ಮಾಸ್ಟ್ರೂ, ಗುಪ್ಪಿ ಭಟ್ರೂ

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ಸಂಪೂರ್ಣಾನಂದ ಬಳ್ಕೂರು

ಮೋನಪ್ಪ ಶೆಟ್ಟಿ ಎಂಬ ಹೆಸರಿನವರಾದ ಮೋನು ಮಾಸ್ಟ್ರು ಅಂಪಾರು ಹತ್ರ ವಾಲ್ತೂರು ಎಂಬಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿ ಹೆಚ್ಚು ಕಮ್ಮಿ ಅದೇ ಶಾಲೆಯಲ್ಲೇ ಸರ್ವಿಸ್ ಮುಗಿಸಿದವರು.

ಒಂದೇ ಶಾಲೆಯಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಇದ್ದವರ ಹೆಸರು ಕಳಿಸಿ ಅಂತ ಯೇಯೀಯೋಗೋ, ಬೀಯೀಯೋಗೋ ಸುತ್ತೋಲೆ ಬರುವುದರೊಳಗೇ ಆ ಬಗ್ಗೆ ತಿಳಿದು, ಆ ಪಟ್ಟಿಯಲ್ಲಿ ತನ್ನ ಹೆಸರು ಸೇರದ ಹಾಗೆ ನೋಡಿಕೊಳ್ಳುತ್ತಿದ್ದರು. ಅಕಸ್ಮಾತ್ ಅಂಥ ಪಟ್ಟಿಯಲ್ಲಿ ತನ್ನ ಹೆಸರೇನಾದರೂ ಸೇರಿದ್ದರೆ ಎಮ್ಮೆಲ್ಲೇಗೋ, ಯೆಂಪೀಗೋ ದುಂಬಾಲು ಬಿದ್ದು ಪಟ್ಟಿಯಿಂದ ತನ್ನ ಹೆಸರು ಹೊಡೆದು ಹಾಕುವಂತೆ ಮಾಡಿಸುತ್ತಿದ್ದರು. ಕೆಲವೊಮ್ಮೆ ದರಿದ್ರ ಆಫೀಸರುಗಳ ಕಾಟ ತಡೆಯಲಾರದಾಗ ಶಾಸ್ತ್ರಕ್ಕಾದರೂ ಡೆಪ್ಯುಟೇಶನ್ ಅಂತ ಇಡೂರು ಕುಂಞ್ಞಾಡಿಗೋ, ನೆಲ್ಲಿಕಟ್ಟೆಗೋ ಹೋಗಿ ಬಂದು ಟ್ರಾಸ್‍ಫರ್ ಶಾಸ್ತ್ರ ಮುಗಿಸುತ್ತಿದ್ದರು.

ವೃತ್ತಿಯಿಂದ ಇವರು ನೂರಕ್ಕೆ ನೂರು ಅಧ್ಯಾಪಕರೇ ಆದರೂ ಪ್ರವೃತ್ತಿಯಿಂದ ರಂಗುರಂಗಾದ ವ್ಯಕ್ತಿತ್ವವುಳ್ಳವರಾಗಿದ್ದರು. ಅಧ್ಯಾಪಕ ವೃತ್ತಿಯಲ್ಲಿದ್ದುದರಿಂದ ಊರ ಜನ ಗೌರವದಿಂದ ಮಾಸ್ಟ್ರು-ಮಾಸ್ಟ್ರು ಎನ್ನುತ್ತಿದ್ದರೂ ವೃತ್ತಿ ಜೀವನದಲ್ಲಿ ಶಾಲೆಯಲ್ಲಿದ್ದುದಕ್ಕಿಂತ ಹೊರಗಿದ್ದು ಕಲ್ಲು ಕಡಿಸಿದ್ದೇ ಹೆಚ್ಚು. ಕೆಂಪು ಕಡಗಲ್ಲಿನ ಕ್ವಾರೆ ವಹಿಸಿಕೊಂಡು, ಕಲ್ಲು ಕಡಿಸಿ, ಲೋಡು ಮಾಡಿಸುವ ಗೌರವ ವೃತ್ತಿಯನ್ನು ಮೊನ್ನೆ ಮೊನ್ನೆಯ ತನಕವೂ ಬಿಟ್ಟಿರಲಿಲ್ಲ. ಇನ್ನು ಊರಲ್ಲಿ, ಸುತ್ತಮುತ್ತಲು ಹಳ್ಳಿಗಳಲ್ಲಿ ವಾರದ ಕೋಳಿ ಪಡೆಯೋ, ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿಯ ನಿರಖು ಪಡೆಯೋ ಇದ್ದರೆ ಮುಗಿಯಿತು. ಅಂಥ ದಿನಗಳಲ್ಲಿ ಇವರು ಶಾಲೆಯ ಕಡೆ ಸುಳಿಯುವುದು ಸಾಧ್ಯವಿಲ್ಲ ಎಂಬುದು ಘನ ಸರ್ಕಾರದ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೂ ಗೊತ್ತಿರುತ್ತಿತ್ತು.

ಪಂಚಾಯ್ತಿ ಇಲೆಕ್ಷನ್ನಿನಿಂದ ಹಿಡಿದು, ಎಂ.ಪಿ. ಇಲೆಕ್ಷನ್‌ವರೆಗೆ ಇವರು ಡ್ಯೂಟಿ ಮಾಡಿದ ಇಲೆಕ್ಷನ್‍ಗಳಿಗೆ ಲೆಕ್ಕವಿಲ್ಲ. ಮನೆ ಬದಿಯಲ್ಲಿ, ಗೆಳೆಯರು, ನೆಂಟ್ರ ಜೊತೆ ಇರುವಾಗೆಲ್ಲ ಯಾವುದಾದರೂ ಪಾರ್ಟಿಯ ಪರವಾಗೇ ಮಾತನಾಡುತ್ತಿದ್ದರೂ ಇಲೆಕ್ಷನ್ ಡ್ಯುಟಿಯಲ್ಲಿ ಮಾತ್ರ ಸ್ವಲ್ಪವೂ ಹೆಚ್ಚು ಕಡಿಮೆ ಮಾಡಿದವರಲ್ಲ.

ಇಲೆಕ್ಷನ್ ಡ್ಯುಟಿಗೆ ಹೋಗುವಾಗ ಮೋನು ಮಾಸ್ಟ್ರು ಸಕಲಾಯುಧ ಸನ್ನದ್ಧರಾಗಿಯೇ ಹೋಗುತ್ತಿದ್ದರು. ಇಲೆಕ್ಷನ್ ಆಯುಧಗಳಲ್ಲಿ ಬಹಳ ಪ್ರಮುಖವಾದುದು ಅಂದು ರಾತ್ರಿಯ ನಿದ್ರೆಗೆ ಅನುಕೂಲ ಕಲ್ಪಿಸುವ ಎಣ್ಣೆ ವ್ಯವಸ್ಥೆಯದೇ ಆಗಿತ್ತು. ಒಮ್ಮೆ ಒಂದು ಎಂ.ಪಿ. ಕ್ಷೇತ್ರದ ನೌಕರರನ್ನು ಇನ್ನೊಂದು ಎಂ.ಪಿ. ಕ್ಷೇತ್ರದ ಮತಗಟ್ಟೆಗೆ ನೇಮಿಸುವ ಶೇಷನ್ ಕಾಲದಲ್ಲಿ ಇವರಿಗೆ ಮಂಗಳೂರಿನ ಶಾಲೆಯೊಂದು ಸಿಕ್ಕಿತ್ತು. ಬ್ಯಾಗೇಜುಗಳನ್ನೆಲ್ಲ ಬಿಚ್ಚಿ ಮಲಗುವುದಕ್ಕೆ ಸಿದ್ಧತೆ ನಡೆಸುತ್ತಾ ಪ್ಲಾಸ್ಟಿಕ್ ತೊಟ್ಟೆಯೊಂದರ ಮೇಲ್ಭಾಗ ಅಂತ ಭಾವಿಸಿ ಕೆಳಭಾಗ ಹಿಡಿದು ಎತ್ತಿದಾಗ ಅದರೊಳಗಿದ್ದ ತುಂಬಿದ ಬಾಟ್ಲಿ ಫಳಾರೆಂದು ಬಿದ್ದು ದೊಡ್ಡ ಶಬ್ದವುಂಟಾಗಿ ಆಚೀಚಿನ ಮಾಸ್ತರು ಅಧಿಕಾರಿಗಳೆಲ್ಲ ಗಾಬರಿಯಲ್ಲಿ ಧಾವಿಸಿದ್ದರು. ಸಹಿಸಲಸದಳವಾದ ವಾಸನೆ ಮತ್ತು ಗಾಜಿನ ಚೂರುಗಳ ನಡುವೆ ಚಿಂತಾಕ್ರಾಂತರಾಗಿ ಕೂತಿದ್ದ ಮಾಸ್ಟ್ರು, ‘ನನ್ ಇಡೀ ಜೀವ್‍ಮಾನ್ದಗೇ ಇಂಥ ಕೊಳಕು ಕೆಲಸ ಮಾಡ್ದವ ಅಲ್ಲ. ಇವತ್ತೇ ಫಸ್ಟ್, ಇವತ್ತೇ ಹಿಂಗಾಯ್ಲಕ್ಕಾ?’ ಎಂದು ಅವಮಾನಿತರಾಗಿ ಕೇಳಿದ್ದರು.

ಅಲ್ಲೇ ಇದ್ದ ಪೊಲೀಸೊಬ್ಬ, ‘ಅದಕ್ಕೆ ನಿಮಗೆ ಬೇರೆ ವ್ಯವಸ್ಥೆ ಮಾಡುವ ಮಾಸ್ಟ್ರೇ’ ಎಂದು ಸಹಾನುಭೂತಿಯಿಂದ ನುಡಿದು ಸಹಕರಿಸಿದ್ದ. ಈ ಕಾಲದಲ್ಲಿ ಅಷ್ಟಬಂಧ, ಬ್ರಹ್ಮಕಲಶ, ನಾಗಮಂಡಲಾದಿಗಳಿಗೆ ಇಡೀ ಊರಿಗೆ ಊರೇ ನೆರೆದು ಹಬ್ಬವನ್ನಾಚರಿಸುವಂತೆ ಆ ದಿನಗಳಲ್ಲಿ ಊರ ಹಬ್ಬದಂತೆ ಮೋನು ಮಾಸ್ಟ್ರ ‘ಸ್ಕೂಲ್‍ಡೇ’ ಸಂಭ್ರಮ ನಡೆಯುತ್ತಿತ್ತು. ಸ್ಕೂಲ್‍ಡೇಗೆ ದಿನ ಇಡುವುದಕ್ಕೆ ಮುಂಚೆ; ಚೀಫ್ ಗೆಸ್ಟ್ ಯಾರೆಂದು ನಿರ್ಧರಿಸುವುದಕ್ಕೆ ಮುಂಚೆ ಆ ವರ್ಷ ಯಾವ ನಾಟಕವೆಂದೂ, ಯಾರ್ಯಾರು ಯಾವ್ಯಾವ ಪಾತ್ರ ವಹಿಸುವುದೆಂದೂ ಲೆಕ್ಕಾಚಾರ ಹಾಕಿಬಿಡುತ್ತಿದ್ದರು. ಹೆಸರಿಗೆ ಹಳೆ ವಿದ್ಯಾರ್ಥಿಗಳಿಂದ ನಾಟಕ ಎಂದಿರುತ್ತಿದ್ದರೂ ಇಡೀ ತಾಲೂಕಿನ ನಾಟಕದ ಘಟಾನುಘಟಿಗಳನ್ನೆಲ್ಲ ಒಟ್ಟು ಹಾಕುತ್ತಿದ್ದರು. ಹಾರ್ಮೋನಿಯಂ, ತಬಲಕ್ಕೆ ರಾಮ ನಾಯ್ಕರು ಮತ್ತು ಆನಂದ ಬಸ್ರೂರು, ವೇಷ ಭೂಷಣಗಳಿಗೆ ಬಾರ್ಕೂರು ಬುಡಾನ್ ಸಾಯ್ಬರು ಖಾಯಂ.

ಪಾತ್ರಧಾರಿಗಳು ಆರಿಸಿಕೊಂಡ ನಾಟಕದಂತೆ. ದೇವದಾಸಿ ನಾಟಕವಾದರೆ ನಾಜೂಕಯ್ಯನ ಪಾತ್ರಕ್ಕೆ ಕಂದಾವರ ರಘು ಮಾಸ್ಟ್ರೇ ಆಗಬೇಕು. ಮುದುಕನ ಮದುವೆ ನಾಟಕವಾದರೆ ಅಚ್ಚಮ್ಮನ ಪಾತ್ರಕ್ಕೆ ಕುಂದಾಪುರ ಕುಳ್ಳಪ್ಪು ಆಗಲೇ ಬೇಕು. ಮುದುಕನ ಪಾತ್ರಕ್ಕೆ ಅಪ್ಪೂ ಮಾಸ್ಟ್ರೋ, ಶೇಟ್ ಮಾಸ್ಟ್ರೋ ಬೇಕು. ಊರಿನ ಬಣ್ಣ ಹಚ್ಚುವ ಹುಚ್ಚಿದ್ದವರಿಗೆಲ್ಲ ಅವರ ನಾಟಕದಲ್ಲಿ ಸಣ್ಣಪುಟ್ಟ ಪಾತ್ರವಾದರೂ ಸಿಕ್ಕೇ ಸಿಗುತ್ತಿತ್ತು. ಪಾರ್ಟು ಹುಡುಕಿ ಬಂದವರ ಸಂಖ್ಯೆ ಹೆಚ್ಚಾದರೆ ತಾವೇ ಚಂದ್ರ ಡಾಕ್ಟರ್ ಹತ್ರ ಹೋಗಿ ಒಂದಷ್ಟು ಪಾತ್ರ ಸೇರಿಸಿ ಎಲ್ಲರಿಗೂ ಎರಡೆರಡಾದರೂ ಮಾತು ಬರೆಸಿಕೊಂಡು ಬರುತ್ತಿದ್ದರು. ಮೋನು ಮಾಸ್ಟ್ರಿಗೆ ಅಭಿನಯವೂ ಬರುತ್ತದಾದರೂ ಅವರು ಇಷ್ಟ ಪಡುವುದು ಪ್ರಾಂಪ್ಟಿಂಗ್ ಮತ್ತು ಪರದೆ ಎಳೆಯುವುದು. ಬಂದ ಪ್ರೇಕ್ಷಕರಿಗೂ ಪ್ರಾಂಪ್ಟ್ ಮಾಡಿದ್ದು ಇಂಥವರೇ ಎಂದು ಗೊತ್ತಾಗುವಷ್ಟು ಸ್ಪಷ್ಟವಾಗಿ ಪ್ರಾಂಪ್ಟ್ ಮಾಡುತ್ತಿದ್ದರು. ಸುತ್ತ ಹತ್ತೂರಲ್ಲಿ ಎಲ್ಲಿ ನಾಟಕವಾದರೂ ಮಾಸ್ಟ್ರಿಗೆ ಪರದೆ ಎಳೆಯುವ ಕೆಲಸ. ಆಗೆಲ್ಲ ಸ್ಪಷ್ಟವಾಗಿ ‘ರಂಗ ಸಜ್ಜಿಕೆ: ಮೋನಪ್ಪ ಶೆಟ್ಟಿ’ ಅಂತ ಎರಡೆರಡು ಸಲ ಎನೌನ್ಸ್ ಮಾಡುತ್ತಿದ್ದರು.

ಒಮ್ಮೆ ನಾಟಕ ಮಾಡಿಸಲಿಕ್ಕೆ ಇಳಿದರು ಅಂದ್ರೆ ಖರ್ಚಿಗೆ ಹಿಂದೆ ಮುಂದೆ ನೋಡುವ ಜನವೇ ಅಲ್ಲ. ಪ್ರತಿದಿನ ರಾತ್ರಿ ಟ್ರಯಲ್ಲಿಗೆ ಬಿಸಿ ಬಿಸಿ ಇಡ್ಲಿ ಚಾ. ಇದು ಕೇವಲ ಕಲಾವಿದರಿಗೆ ಮಾತ್ರವಲ್ಲ ಟ್ರಯಲ್ ನೋಡಲು ಬರುವ ಪ್ರೇಕ್ಷಕರಿಗೂ ಕೂಡ. ಗ್ರಾಂಡ್ ಟ್ರಯಲ್ಲಿನ ಕೋಳಿ, ನೀರು ದೋಸೆ ಕಲಾವಿದರಿಗೆ ಮಾತ್ರ.

ಶಾಲೆ ಮಕ್ಕಳ ನಾಟಕಕ್ಕೆ ಮೋನು ಮಾಸ್ಟ್ರದ್ದೇ ದಿಗ್ದರ್ಶನ. ನಾಟಕಕ್ಕೆ ಇನ್ನೂ ತಿಂಗಳಿದೆ ಎನ್ನುವಾಗಲೇ ಪಾಠ ಪ್ರವಚನಾದಿಗಳೆಲ್ಲ ಬಂದ್ ಆಗಿ ಬೆಳಗಿಂದ ಸಂಜೆವರೆಗೂ ನಾಟಕ ಟ್ರಯಲ್ಲೇ ಆಗುತ್ತಿತ್ತು. ಅವರ ಟ್ರಯಲ್ ಅಂದರೆ ಎಷ್ಟು ಗಟ್ಟಿಯಾಗಿ ಸಾಧ್ಯವೋ ಅಷ್ಟು ಗಟ್ಟಿಯಾಗಿ ಹೇಳಿಕೊಡುವುದು. ಅದನ್ನು ವಿದ್ಯಾರ್ಥಿ ಹೇಗೇ ಹೇಳಿದರೂ ಸರಿಯಾಗಲಿಲ್ಲವೆಂದು ಮತ್ತೂ ಗಟ್ಟಿಯಾಗಿ ಹೇಳಿಕೊಡುವುದು. ಹೀಗೆ ತಿಂಗಳ ಟ್ರಯಲ್ ಮುಗಿಯುವಾಗ ನಾಟಕದ ಎಲ್ಲಾ ಸಂಭಾಷಣೆಗಳೂ ಶಾಲೆಯ ಎಲ್ಲ ಮಕ್ಕಳಿಗೂ ಬಾಯಿಪಾಠವಾಗಿರುತ್ತಿತ್ತು.

ಎಲ್ಲರೂ ಹೇಳುವಂತೆ ಮೋನು ಮಾಸ್ಟ್ರು ಉಬ್ಬಾಳು. ಅಂದರೆ ‘ನೀವ್ ಇಲ್ದೇ ಇದ್ರ್ ಆಪ್ದೇ ಅಲ್ಲ; ಒಂದುಪ್ಕಾರ ಮಾಡುದಿಲ್ಯ’ ಕೇಳಿದರೆ ‘ನೀವ್ ಕೇಂಬ್ದ ಹೆಚ್ಚಾ ನಾ ಮಾಡುದ್ ಹೆಚ್ಚಾ’ ಎಂಬಂತೆ ಆ ಕೆಲಸ ಮಾಡಿಕೊಡುತ್ತಿದ್ದರು. ಯಾರಿಗೇ ಆದರೂ ನಾಕು ಜನರ ಎದುರು ಇನಾಮು ಕೊಡುವುದು ಮಾಸ್ಟ್ರಿಗೆ ತುಂಬ ಖುಷಿಯ ಕೆಲಸ. ಹಾಗೆ ಕೊಡುವುದಕ್ಕೆ ಅಂತಲೇ ಗರಿಗರಿಯಾದ ನಾಲ್ಕು ನೋಟುಗಳನ್ನು ಯಾವಾಗಲೂ ಎದುರು ಕಿಸೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಯಾವುದೇ ಮೇಳದ ಕಲಾವಿದರು ಕಂಡರೂ ಅವರನ್ನು ನಾಲ್ಕು ಜನರ ಎದುರು ಕರೆದು ನೂರರ ನೋಟು ಕೊಟ್ಟು ‘ಇಗಣಿ, ಕಮ್ತಿಯರಲ್ ಒಂದ್ ಚಾ ಹಾಕಿ’ ಅನ್ನದೇ ಇರುತ್ತಿರಲಿಲ್ಲ.

***

ಮನೆಯಲ್ಲಿ ಹೆಂಡತಿ ಮಕ್ಕಳು ಎಲ್ಲ ಇರುವ ಮೋನು ಮಾಸ್ಟ್ರ ಹೊರಚಾಳಿಯದ್ದು ಬೇರೆಯೇ ಒಂದು ಅಧ್ಯಾಯವಾಗುತ್ತದೆ. ಜಡ್ಕಲ್ ಹತ್ರದ ಮಲಯಾಳಿ ಕ್ರಿಶ್ಚಿಯನ್ ಕುಟುಂಬವೊಂದರ ಬಿಜ್ಜೂ ಎಂಬವಳು ಕಟ್ಟಿಕೊಂಡವಳಂತೆ ಖಾಯಂ ಇಟ್ಟು ಕೊಂಡವಳಾಗಿದ್ದಳು. ಅವಳ ಗಂಡನ ದರ್ಖಾಸ್ತು ಜಾಗಕ್ಕೆ ತಾಗಿಕೊಂಡಿದ್ದ ಮಾಸ್ಟ್ರ ಕುಟುಂಬದ ಪಿತಾೃರ್ಜಿತ ಆಸ್ತಿಯ ಆರ್‍ಟಿಸಿಯಲ್ಲಿ ಅವಳ ಹೆಸರು ಬಂದಿದ್ದನ್ನು ಕಂಡ ಸಂಬಂಧಿಯೊಬ್ಬ ಮುನ್ಸೀಫ್ ಕೋರ್ಟಿನಲ್ಲಿ ನಂಬ್ರ ಮಾಡಿದ್ದ. ಸ್ಥಿರಾಸ್ಥಿಯ ಮಾತೇ ಹೀಗಾದರೆ ಚರಾಸ್ಥಿಯ ಮಾತಿಗೆ ಲೆಕ್ಕ ಇಟ್ಟವರಿಲ್ಲ. ಇದೆಲ್ಲ ಕಂಡು ಹೇಸಿಕೊಂಡ ಹೆಂಡತಿ ವೈರಾತಿಂದ, ‘ನನ ಗಂಡ ಕನ್ನೆ ತಿಂಗ್ಳ್ ನಾಯಿಗೂ ಕಡೆ’ ಅಂದದ್ದನ್ನು ಕೇಳಿಸಿಕೊಂಡ ಕಮಲ ಅದನ್ನು ಊರೆಲ್ಲ ಹೇಳಿದ್ದಳು. ಈ ಮಾತನ್ನು ಕೇಳಿದ ಬಿಜ್ಜವೂ ಅದು ಹೌದೆಂದು ಒಪ್ಪಿದ್ದಳು.

ಮೋನು ಮಾಸ್ಟ್ರು ಪ್ರತಿ ದಿನವೂ ಹೊಸ ಹೊಸ ಮಾಲು ಸಿಕ್ಕಿದ್ರೆ ಆಗಬಹುದು ಎಂಬಂಥ ಜಾತಿ. ಅದರಲ್ಲೂ ಎಣ್ಣೆ ಪವರ್ ಒಡಲಿಗೆ ಹೋಗುತ್ತಲೂ ಅದು ಬೇಕೇ ಬೇಕು ಮತ್ತು ಅದು ಹೊಸದೇ ಆಗಿದ್ದರೆ ಒಳ್ಳೆಯದು. ಅಂಥದ್ದು ಯಾವುದೂ ಇಲ್ಲದಿದ್ದರೆ ಬಿಜ್ಜುವಂಥವು. ಅದಕ್ಕೇ ಅವರ ಹೆಂಡತಿ ಅಂಥಾ ಮಾತಾಡಿದ್ದು ಹಾಗೂ ಮತ್ತೊಬ್ಬಳು ಅದನ್ನು ಅನುಮೋದಿಸಿದ್ದು. ಒಮ್ಮೆ ಹಕ್ಲಾಡಿ ಹತ್ರ ಅಂಥ ಒಂದು ಕುಳ ಉಂಟು ಅಂತ ಗೊತ್ತಾಗಿ ಬೈಂದೂರಿಗೆ ಹೋಗಿದ್ದವರು ರಾತ್ರಿ ಹೊತ್ತಲ್ಲಿ ದುರ್ಗಿ ಮನೆ ಅಂತ ಮತ್ತೊಬ್ಬಳ ಮನೆ ಹೊಕ್ಕು, ಆ ಮನೆಯಲ್ಲಿದ್ದವರು ಟೈಟಾಗಿದ್ದ ಮಾಸ್ಟ್ರಿಗೆ ಗೊಂಯ್ಕ ತೊಳ್ದು, ಮುಖ ಯಾವುದು ಮುಕುಳಿ ಯಾವುದು ನೋಡದೆ ಬಡ್ತಿಗೆ ಬಿಟ್ಟಿದ್ದರು. ಬಿಸಿನೀರು ಶಾಖ ಕೊಡುತ್ತ ಇನ್ನಾದ್ರೂ ಇವ್ರಿಗೆ ಬುದ್ಧಿಕೊಡು ಅಂತ ಹೆಂಡತಿ ಮಾಂಕಾಳಿ ಗಯ್ಡಿಗೆ ಹರಕೆ ಹೊತ್ತಿದ್ದಳು. ಸ್ವಲ್ಪ ಕಾಲ ಅದು ಸರಿಯಾಗಿಯೂ ಇತ್ತು.

ಈ ವಿಷಯದಲ್ಲಿ ಮಾಸ್ಟ್ರಿಗೆ ಯಾರಾದ್ರೂ ಪೈಪೋಟಿ ಕೊಡುವವರು ಇದ್ದರೆ ಅದು ಗುಪ್ಪಿ ವೆಂಕು ಭಟ್ರು ಮಾತ್ರ. ಮಾಸ್ಟ್ರಿಗೆ ಭಟ್ಟರ ಇಂಚಿಂಚು ಗೊತ್ತಿದ್ರೂ, ಮಾಸ್ಟ್ರು ಭಟ್ಟರ ಈ ವಿದ್ಯೆಯನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳದೇ ‘ಉತ್ತಮರು ಮಾಡಿದರೂ ನಮಗೆ ಅದನ್ನೆಲ್ಲ ಹೇಳುವ ಯೋಗ್ಯತೆ ಇಲ್ಲ’ ಅಂತ ಸಮ್ಮನಾಗುತ್ತಿದ್ದರು. ಭಟ್ರಿಗೆ ಗುಪ್ಪಿ ಎಂಬ ವಿಶೇಷಣ ಅವರ ಮನೆಯ ಸ್ಥಳದಿಂದಲೇ ಬಂದದ್ದು. ಬಸ್ರೂರು ಹತ್ತಿರದ ಒಂದು ಗುಡ್ಡವೇ ಗುಪ್ಪಿ ಹಾಡಿ. ಅದರ ಒಂದು ಮಗ್ಗುಲಲ್ಲಿ ಸ್ಮಶಾನವಿದ್ದರೆ ಇನ್ನೊಂದು ಮಗ್ಗುಲಲ್ಲಿ ಭಟ್ಟರ ಮನೆಯಿತ್ತು. ಈ ಗುಡ್ಡದ ನೆತ್ತಿಯಲ್ಲಿ ಪಾಳುಬಿದ್ದ ದೇಗುಲವೊಂದಿದ್ದು ಛತ್ರಪತಿ ಶಿವಾಜಿ ಬಸ್ರೂರಿನ ಮೇಲೆ ದಂಡೆತ್ತಿ ಬಂದ ಕಾಲದಲ್ಲಿ ಸಂಪತ್ತಿಗಾಗಿ ಈ ದೇಗುಲದ ಮೇಲೆ ಧಾಳಿ ಮಾಡಿ ಹಾಳುಗೆಡವಿದ ಎಂದು ಇತಿಹಾಸ ಹೇಳುತ್ತದೆ. ಒಂದು ಕಾಲದಲ್ಲಿ ಮೆರೆದಿದ್ದಿರಬಹುದಾದ ಆ ದೇಗುಲದ ವೈಭವವನ್ನು ಅದರ ಹಾಳುಬಿದ್ದ ನೃತ್ಯದಿಬ್ಬವೇ ಮೊದಲಾದವುಗಳ ಕುರುಹುಗಳು ಇಂದಿಗೂ ಸಾರುತ್ತಿವೆ.

ಭಟ್ಟರ ಮುಖ್ಯ ಉದ್ಯೋಗ ಜ್ಯೋತಿಷ್ಯ. ಅದರ ಜೊತೆಗೆ ಯಾರಾದರೂ ಹರ್ಕತ್ತಾಯಿತೆಂದರೆ ಪೌರೋಹಿತ್ಯವನ್ನೂ ಮಾಡುತ್ತಾರೆ. ನಮ್ಮ ಕುಂದಾಪುರ ಸಾಮ್ರಾಜ್ಯದಲ್ಲೇ ಪ್ರೇತ ಬಿಡಿಸುವುದು ಮತ್ತು ಕೃತಿಮ ತೆಗೆಯುವುದಕ್ಕೆ ಗುಪ್ಪಿ ಭಟ್ರೇ ಪೇಟೆಂಟ್ ಮಾಡಿಸಿದಂತೆ ಇತ್ತು. ಮೋನು ಮಾಸ್ಟ್ರೂ ಸೇರಿದಂತೆ ಹೆಚ್ಚಿನವರು ಹೆದರುತ್ತಿದ್ದುದು ಅವರ ಈ ವಿದ್ಯೆಗೇ.

ಎಣ್ಣೆ ಪವರ್ ವಿಷಯದಲ್ಲಿ ಭಟ್ರೂ ಮಾಸ್ಟ್ರೂ ಹತ್ತಿರ ಹತ್ತಿರ ಒಂದೇ ಜಾತಿಗೆ ಸೇರಿದವರಾಗಿದ್ದರು. ಘಟ್ಟದ ಮೇಲಿಂದ ಕೆಲಸಕ್ಕೆ ಅಂತ ಇವರ ಮನೆಗೆ ಬಂದ ಒಂದು ಚಿಕ್ಕ ಹೆಣ್ಣು ಮನೆಯ ಬಾವಿಗೆ ಹಾರಿದ ಕತೆಯ ಹಿಂದೆ ಓಸಿ ಎಣ್ಣೆ ಪವರ್ ಇದೆ ಎಂಬುದು ಕೇವಲ ಗುಸುಗುಸುವಷ್ಟೇ ಆಗಿ ಉಳಿಯುವುದಕ್ಕಂತೂ ಭಟ್ಟರ ಅಥರ್ವ ವಿದ್ಯೆಯೇ ಕಾರಣವಾಗಿತ್ತು. ಮತ್ತೆ ನಾಲ್ಕೈದು ವರ್ಷಗಳಲ್ಲೇ ಅವರ ಧರ್ಮಪತ್ನಿಯೂ ಅದೇ ಬಾವಿ ಹಾರಿದಾಗ, ‘ಆ ಪ್ರೇತವೇ ಇವಳನ್ನು ಎಳೆದುಕೊಂಡದ್ದು, ನನಗೆ ಮುಂಚೇ ಗೊತ್ತಾಗಿ ನನ್ನ ಕೈಲಿ ಆಗುವಷ್ಟು ಬಂದೋಬಸ್ತ್ ಮಾಡಿದ್ದೆ. ಆದರೆ ಆ ಗಟ್ಟದ ಹೆಣ್ಣಿನ ಜೊತೆ ಗಟ್ಟದ ಭೂತ ಗಾಮವೂ ಬಂದಿತ್ತು. ಅದು ನನ್ನ ಮಾತು ಕೇಳಲಿಲ್ಲ...’ ಅಂತ ಗುಪ್ಪಿ ಭಟ್ರು ಹೇಳಿದ್ದನ್ನು ಮೋನು ಮಾಸ್ಟ್ರೂ ಸೇರಿದಂತೆ ಹೆಚ್ಚಿನವರೆಲ್ಲ ನಂಬಿದ್ದರು.

ಗುಪ್ಪಿ ಭಟ್ರ ಹೆಂಡತಿ ಭಾಗಮ್ಮನಿಗೆ ಗಂಡನ ಸ್ವಭಾವ ಚೂರೂ ಹಿಡಿಸುತ್ತಿರಲಿಲ್ಲ. ಹಾಗಂತ ಏನಾದರೂ ಸಣ್ಣಗೆ ಮಾತಾಡಿದರೂ, ಮಾಡು ಹಾರಿಹೋಗುವ ಹಾಗೆ ಅಬ್ಬರಿಸುವ ಭಟ್ರು ‘ಹೆಂಗಸರು ಎಲ್ಲಿರಬೇಕೋ ಅಲ್ಲೇ ಇರಬೇಕು. ಬೇಡದ್ದಕ್ಕೆಲ್ಲ ಬಾಯಿ ಹಾಕಬಾರದು’ ಎನ್ನುತ್ತಿದ್ದರು. ಅಷ್ಟಕ್ಕೂ ಹೆಂಡತಿ ಬಾಯಿ ಮುಚ್ಚದಿದ್ದರೆ, ‘ಇದೊಂದ್ ಹಪ್‍ಹಿಡಿದ್ ನಂಗ್ ಎಲ್ ಸಾರ್ತಿಯಾಯ್ತೋ ಏನೊ ಮುಲ್ಲೆ ಹಿಡ್ದ್ ಬಿದ್ಕಂತ್ಯ, ಎರಡ್ ಬಿಡ್ಕ?’ ಎಂದು ಬೈಯ್ಯುತ್ತ, ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಆಗೆಲ್ಲ ಭಾಗಮ್ಮ, ‘ನಾ ಪಡ್ಕಂಡ್ ಬಂದದ್ದೇ ಅಷ್ಟ್, ಹೇಳಿ ಏನ್ ಪ್ರಯೋಜ್ನ?’ ಎನ್ನುತ್ತ ಮರಕುತ್ತಿದ್ದರು. ಮೋನು ಮಾಸ್ಟ್ರನ್ನು ಕಂಡೂ ಗೊತ್ತಿಲ್ಲದ ಭಾಗಮ್ಮ, ‘ಅದೊಂದ್ ವಿಷಯ್ದಲ್ ಮೋನು ಮಾಸ್ಟನಿಗೂ ಕಡೆ’ ಎಂದು ತನ್ನ ಓರಗೆಯವರೊಂದಿಗೆ ಪಬ್ಲಿಕ್ ಆಗಿಯೇ ಹೇಳುತ್ತಿದ್ದರು.

ಕಿರುಕುಳವೊ, ಆತ್ಮಹತ್ಯೆಯೋ, ಭೂತಪ್ರೇತವೊ ಅಂತೂ ಭಾಗಮ್ಮ ಇನ್ನಿಲ್ಲವಾದುದು ಭಟ್ಟರಿಗೆ ನಿರಾಳವಾಗಿತ್ತು. ಈ ಮಧ್ಯೆ ವಂಡ್ಸೆ ಹತ್ರದ ಇಡೂರು ಹೊಸೂರಿನ ರುಕ್ಕು ಎಂಬ ಸುರ ಸುಂದರಿ ಹೆಣ್ಣಿಗೆ ಒಂದು ದೊಡ್ಡ ಗ್ರಾಚಾರ ವಕ್ರಿಸಿದಾಗ ಯಾರೋ ಸದುದ್ದೇಶದಿಂದ ಗುಪ್ಪಿ ಭಟ್ರಲ್ಲಿಗೆ ಹೋಗವಂತೆ ಶಿಫಾರಸು ಮಾಡಿದ್ದರು. ಅವರು ನಿಮಿತ್ಯ ಕಂಡು ಇಂತಿಂಥಾದ್ದೆಲ್ಲ ದೋಷವಿದೆಯೆಂತಲೂ, ಇಂತಿಂಥಾದ್ದು ಪರಿಹಾರವೆಂತಲೂ ಗಂಭೀರವಾಗಿ ತಿಳಿಸಿದ ನಂತರ, ‘ನೋಡು ರುಕ್ಕು ಈ ಗ್ರಾಚಾರ ಪರಿಹಾರಕ್ಕೆ ನೀನು ಹೆದ್ರಿಕೊಳ್ಳುದು ಬೇಡ, ಒಬ್ಬ ಯೋಗ್ಯ ಬ್ರಾಹ್ಮಣನನ್ನು ನಿನ್ನ ಮನೆಗೆ ಕರೆದು ಒಂದು ಒಳ್ಳೇ ಊಟ ಹಾಕು’ ಎಂದಾಗ ರುಕ್ಕು ಕಂಗಾಲಾಗಿದ್ದಳು.

‘ಅಲ್ಲ ಅಯ್ಯ ಯಂತ ಅಂತ್ರ್ಯೆ ನೀವ್, ನಮ್ಮನಿ ಹೊಕ್ಡ್ ಸಾ ಬತ್ತಿಲ್ಲ ಭಟ್ರ್, ಇನ್ನ್ ನಮ್ಮನ್ಯಗ್ ಉಂತ್ರಾ?’ ಅಂತ ಅಸಡ್ಡೆಯಿಂದ ಕೇಳಿದ್ದಳು.

ಅದಕ್ಕೆ ಗುಪ್ಪಿ ಭಟ್ರು, ‘ಅಲ್ಲ ಹೆಣೆ ರುಕ್ಕು, ನೀ ಚಂದ ಗೊಂಬೆ ಕಾಂಬ್ಕ್ ಮಾತ್ರ. ಮಂಡಿ ಓಡುದಿಲ್ಲಲ...? ಉಂಬ್ ಊಟ ಕೊಟ್ರ್ ಉಂತ್ರ್...’ ಅಂತ ವಿವರಿಸಿದಾಗಲೂ ಅರ್ಥವಾಗದ ಹೆಡ್ಡಿಯಾಗಿರಲಿಲ್ಲ ರುಕ್ಕು. ಚಿಕ್ಕ ಪ್ರಾಯದಲ್ಲೇ ಯಾರ ಜೊತೆಗೋ ಓಡಿ ಹೋಗಿ, ಅವ ಕೈಬಿಟ್ಟಾಗ ಚಿಂದಿ ಚಿತ್ರಾನ್ನವಾಗಿದ್ದ ಬದುಕನ್ನು ಮತ್ತೊಂದೇ ಬಗೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಳು. ವ್ಯಾಪಾರ ಕುದುರಿದ ಮೇಲೆ ತಮ್ಮ ಗುಪ್ಪಿಹಾಡಿ ಬುಡದಲ್ಲೇ ಐದು ಸೆಂಟ್ಸ್ ಜಾಗದಲ್ಲಿ ಮನೆಯನ್ನೂ ಕಟ್ಟಿಸಿಕೊಟ್ಟು ತಮ್ಮ ಹೊರಗಿನ ಕೆಲಸಕ್ಕೆ ಅಂತ ಅವಳನ್ನು ಖಾಯಂ ಮಾಡಿದ್ದರು. ಆದರೆ ಈಗಾಗಲೇ ಕಾಡು ಬಾ ಎಂಬಷ್ಟು ವಯಸ್ಸಾದ ತನ್ನೊಬ್ಬನನ್ನೇ ನಂಬಿ ಕುಳಿತುಕೊಳ್ಳುವಷ್ಟು ಪೆದ್ದಿ ರುಕ್ಕುವಲ್ಲ ಎಂಬುದು ಗುಪ್ಪಿ ಭಟ್ರಿಗೆ ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಹಾಗಾಗಿಯೇ ಅವರು ಜೋಡಿ ಭೂತದ ಸಂಗತಿಯನ್ನು ಜನರ ಬಾಯಿಗೆ ಹಬ್ಬಿಸಿ ಬಿಡುವುದಕ್ಕೆ ತಡಮಾಡಲಿಲ್ಲ. ಘಟ್ಟದ ಮೇಲಿನ ಭೂತ ಮತ್ತು ಭಟ್ರ ಹೆಂಡ್ತಿ ಭೂತ ನಾನಾ ರೂಪಗಳಲ್ಲಿ, ನಾನಾ ಶಬ್ದಗಳಲ್ಲಿ, ನಾನಾ ಹೊತ್ತಲ್ಲಿ ಗುಪ್ಪಿಹಾಡಿ ಸುತ್ತ ಸುತ್ತುವ ಮಾತು ಸುತ್ತ ಹತ್ತೂರಲ್ಲೂ ಸುತ್ತತೊಡಗಿತು.

ರುಕ್ಕು ಎಂಬ ಸುರ ಸುಂದರಿ ಹೆಣ್ಣಿನ ವಾಸನೆ ವಾಲ್ತೂರು ಮೋನು ಮಾಸ್ಟ್ರವರೆಗೂ ಹಬ್ಬುವುದಕ್ಕೆ ತಡವಾಗಲಿಲ್ಲ. ಆದರೆ, ಯಾವುದಾದರೂ ಆಗಬಹುದು ಈ ಭೂತದ ಸಹವಾಸವೊಂದಲ್ಲ ಎಂದು ಸುಮ್ಮನಾದರು. ಆದರೂ ಈ ಭೂತ ಪ್ರೇತಗಳಿಗೆ ಪರಿಹಾರೋಪಾಯಗಳೇನೂ ಇಲ್ಲವೇ ಎಂದೂ ಮನದೊಳಗೇ ಚಿಂತಿಸುತ್ತಿದ್ದರು. ಈ ನಡುವೆಯೇ ಒಮ್ಮೆ ಓಸಿಯಂಥದೆಂತದ್ದೋ ಎಣ್ಣೆ ಒಡಲೊಳಗೆ ಹೋದಾಗ ಎಲ್ಲ ಭಯ ಭೀತ್ಯಾದಿ ಸಮಸ್ಯೆಗಳೂ ತನ್ನಿಂದ ತಾನೇ ದೂರಾಗಿ ಅದೇ ಹಳೇ ಚೇತಕ್ ಸ್ಕೂಟರೇರಿಕೊಂಡು ಗುಪ್ಪಿಹಾಡಿ ಕಡೆಗೆ ಹೊರಟರು. ಸಂಜೆಯಷ್ಟೇ ಬಚ್ಚನ ಹತ್ರ ಭೂತಗಳೊಂದಿಗಿನ ವ್ಯವಹಾರದ ಬಗ್ಗೆ ಮಾತಾಡಿದ್ದನ್ನೇ ಮೆಲುಕು ಹಾಕುತ್ತಿದ್ದರು. ಅಡಕೆ ಹೋಳು ಕೇಳಿದರೆ ಕೊಡಬಹುದು, ಅದು ಬಿತ್ತು ಹೆಕ್ಕಿ ಕೊಡು ಎಂದರೆ ಬಾಗಬಾರದು. ಭೂತದ ಎದುರು ಬಾಗಿದರೆ, ಬಿದ್ದರೆ, ಬೆನ್ನು ಅಡಿಯಾದರೆ ಹೋಯಿತು. ಅದೇ ಕೊನೆ, ಅಲ್ಲಿಗೆ ಮುಗಿಯಿತು. ನಾವೇ ಅದನ್ನು ಕೆಡೆದರೆ ಅದರ ಕತೆ ಅಲ್ಲಿಗೆ ಮುಗಿಯಿತು.

ಗುಪ್ಪಿ ಭಟ್ಟರು ಜೋಡಿ ಭೂತಗಳ (ಪ್ರೇತಗಳ) ವಿಚಾರ ಎಷ್ಟು ಹಬ್ಬಿಸಿಬಿಟ್ಟಿದ್ದರೆಂದರೆ ಅದು ತಾನು ಹಬ್ಬಿಸಿದ್ದಾ, ಅಲ್ಲ ನಿಜವಾ ಎಂಬುದು ತನಗೇ ಸಂಶಯವಾಗುವಷ್ಟು. ಅಂದು ರಾತ್ರಿಯೂ ಸ್ವಲ್ಪ ಹೀಟು ಬೇಕು ಅಂತ ಸ್ವಲ್ಪ ಹೆಚ್ಚಾಗಿಯೇ ಓಸಿ ಸೇವಿಸಿ, ಓಸಿ ಪವರಲ್ಲೇ ಹೊರಟಿದ್ದರು ಭಟ್ಟಗಚ್ಚೆ, ಬರಿ ಮೈಯ್ಯಲ್ಲೇ, ರುಕ್ಕು ಮನೆ ಕಡೆಗೆ.

ಮೋನು ಮಾಸ್ಟ್ರು ಸ್ಕೂಟರನ್ನು ಗಾಡಿಪಾಯಿಂಟಿನ ಕೊನೆಯಲ್ಲಿ ನಿಲ್ಲಿಸಿ ಕಾಲುದಾರಿಯಲ್ಲಿ ಗುಪ್ಪಿಹಾಡಿ ಒಳಗೆ ಬರುತ್ತಿದ್ದಾರೆ. ಅದರ ಇನ್ನೊಂದು ತುದಿಯಲ್ಲಿ ಭಟ್ರು... ಎದುರು ಬದುರಾಗಿ ಮೋನು ಮಾಸ್ಟ್ರು, ಗುಪ್ಪಿ ಭಟ್ರೂ... ಭಟ್ರ ಓಸಿ ಕಣ್ಣು, ಮಿದುಳಿಗೆ ಶುದ್ಧ ಉಜಾಲ ಹಾಕಿದ ಬಿಳಿ ದೇಹ ಕಾಣುತ್ತಿದೆ, ಅಯ್ಯೋ ದೇವರೆ, ಒಂದು ವೇಳೆ ಇದು ಭೂತವೇ ಆಗಿದ್ದರೆ...

ಮಾಸ್ಟ್ರ ಎದುರಿಗೆ ಒಂದು ಬರಿಮೈ... ಭಟ್ರ ಭೂತ ಹೀಗೇ ಇರುತ್ತದೇನೋ... ಹಿಂದಿರುಗಿದರೆ ಕಲಾಸ್, ಅಡಿಯಾದರೂ ಹೋಯ್ತ ಏನು ಮಾಡಬೇಕೀಗ, ಏನೇ ಆಗಲಿ ಎದುರಿಗಿದ್ದ ಭೂತವನ್ನೇ ಕೆಡೆದು ಬೀಳಿಸಬೇಕು ತಾನಂತೂ ಬೀಳಬಾರದು... ತನ್ನ ಕಾಲಿಂದ ಭಟ್ರ ಕಾಲಿಗೆ ಕೊಕ್ಕೆ ಹಾಕಿ ಕೆಡೆಯ ತೊಡಗಿದರು... ಭಟ್ರು ಮಾಡಿದ್ದೂ ಅದನ್ನೇ... ಕೊನೆಗೂ ಎಣ್ಣೆ ಪವರಿನ ಇಬ್ರೂ ಒಮ್ಮೆಗೇ ಬಿದ್ದರು. ಮಾಸ್ಟ್ರ ಮುಖವನ್ನೇ ನೋಡಿದ ಭಟ್ರು,

‘ಓ ಮೋನು ಮಾಸ್ಟ್ರ...’

ಭಟ್ಟರ ದನಿ ಗೊತ್ತಾದ ಮಾಸ್ಟ್ರು

‘ಗುಪ್ಪಿ ಭಟ್ರಾ...’

ಭಟ್ಟರು ಔದಾರ್ಯ ತೋರಿದರು, ‘ನೀವು ಹೋಗಿ ಬನ್ನಿ ಶೆಟ್ರೆ. ನಾನು ಕಡೆಗೆ ಬರ್ತೇನೆ.’ ಅದಕ್ಕೆ ಮೋನು ಮಾಸ್ಟ್ರು, ‘ಎಲ್ಲಾರೂ ಇತ್ತಾ... ಪಸ್ಟ್ ನೀವ್ ಹೋಯ್ನಿ, ಭಟ್ರಲ್ದ? ನಾಯಿಲ್ಲೆ ಕಾಯ್ತೆ’ ಎಂದು ಗೌರವ ತೋರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT