ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ ಕುಮಾರಸ್ವಾಮಿ ನಮಗೆ ಬೇಕಾದ ಬೆಳಕು

Last Updated 4 ಸೆಪ್ಟೆಂಬರ್ 2017, 13:59 IST
ಅಕ್ಷರ ಗಾತ್ರ

ಆಧುನಿಕ ಜಗತ್ತಿನ ಎಲ್ಲ ದುರಂತಗಳ ಮೂಲ ಯಾವುದು? 'ಧಾರ್ಮಿಕತೆಯಿಂದ ಈ ಕಾಲ ದೂರ ಸರಿದಿರುವುದೇ ಮೂಲಕಾರಣ.' ಇತಿಹಾಸತಜ್ಞ ಮತ್ತು ಚಿಂತಕ ವಿಲ್‌ ಡ್ಯೂರಂಟ್‌ ಹೀಗೆಂದು ಒಂದೆಡೆ ಒಕ್ಕಣಿಸಿದ್ದಾರೆ. ಆದರೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಪರಿಶೀಲಿಸಿದರೆ ‘ಧಾರ್ಮಿಕತೆ’ಯ ಬಗ್ಗೆ ಜನರಲ್ಲಿ ಆವರಿಸಿರುವ ಆವೇಶವೇ ಎಲ್ಲ ದುರಂತಗಳ ಸೆಲೆಯಾಗುತ್ತಿದೆ ಎನ್ನುವುದು ಮನದಟ್ಟಾಗುತ್ತದೆ. ಧಾರ್ಮಿಕತೆಯನ್ನು ವಿರೋಧಿಸುವುದು ಕೂಡ ಮತ್ತೊಂದು ವಿಧದಲ್ಲಿ ‘ಧಾರ್ಮಿಕಪಂಥ’ವೇ ಆಗುತ್ತಿದೆಯೆನ್ನಿ! ‘ಜನರ ನಂಬಿಕೆಗಳನ್ನು ಪ್ರಶ್ನಿಸುತ್ತ, ಅವರ ಧಾರ್ಮಿಕ ನಂಬಿಕೆಗಳನ್ನು ಅವೈಜ್ಞಾನಿಕ ಎಂದು ತಿರಸ್ಕರಿಸುವುದು ವಿಜ್ಞಾನದ ಆರಾಧಕರ ಇಂದಿನ ಉತ್ಸಾಹವಾಗಿದೆ. ಆದರೆ ಅವರ ಅತಿಯಾದ ವರ್ತನೆಯು ಹೇಗಿದೆಯೆಂದರೆ, ಒಂದು ಮೌಢ್ಯವನ್ನು ಕಿತ್ತೊಗೆದು ಅದರ ಸ್ಥಾನದಲ್ಲಿ ಮತ್ತೊಂದು ಮೌಢ್ಯವನ್ನು ಪ್ರತಿಷ್ಠಾಪಿಸುವುದೇ ಆಗುತ್ತಿದೆ. ಹೀಗೇ ಆದರೆ ವಿಜ್ಞಾನವೂ ಕೂಡ ಮೌಢ್ಯದ ಸಿಂಹಾಸನವನ್ನು ಅಲಂಕರಿಸಬೇಕಾಗುತ್ತದೆ’ ಎಂಬಂಥ ಮಾತನ್ನು ಬಹಳ ಹಿಂದೆಯೇ ಹೇಳಿದ್ದರು, ಭೌತವಿಜ್ಞಾನಿ ಡೇವಿಡ್‌ ಬಾಮ್‌.

ಇಂದಿನ ಭಾರತವನ್ನು ನೋಡಿದರೆ ಧಾರ್ಮಿಕತೆ ಇಲ್ಲಿ ದೂರವಾಗಿದೆ ಎಂದು ಹೇಳಲು ಆಗದು. ದೇವಾಲಯಗಳು ಜನರಿಂದ ತುಂಬಿರುತ್ತವೆ; ತೀರ್ಥಕ್ಷೇತ್ರಗಳಲ್ಲಿ ಜನಪ್ರವಾಹವನ್ನೇ ಕಾಣಬಹುದು; ಹಬ್ಬ–ಹರಿದಿನಗಳಲ್ಲಿ ಮಾರುಕಟ್ಟೆಗಳ ಒಳಗೆ ಕಾಲಿಡಲು ಕೂಡ ಆಗದಷ್ಟು ಜನದಟ್ಟಣೆಯಿರುತ್ತದೆ; ನಮ್ಮ ರಾಜ್ಯದಲ್ಲಿಯೇ ಸಾವಿರಾರು ಮಠಗಳಿವೆ; ಧಾರ್ಮಿಕ ಪ್ರವಚನಗಳಿಗೆ ಜನರು ಸಾವಿರ ಸಾವಿರ ಸಂಖೈಯಲ್ಲಿ ಸೇರುತ್ತಿದ್ದಾರೆ; ಆಧ್ಯಾತ್ಮಿಕ ಕೇಂದ್ರಗಳೆಂಬ ಫಲಕಗಳನ್ನು ಹೊತ್ತ ಸಂಘ–ಸಂಸ್ಥೆಗಳಿಗೇನೂ ಕೊರತೆಯಿಲ್ಲ; ನೂತನ ಧರ್ಮಗಳ ಸ್ಥಾಪನೆಗೂ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಇಷ್ಟೆಲ್ಲ ನೋಡಿದ ಮೇಲೆ ಜನರಲ್ಲಿ ಧಾರ್ಮಿಕತೆ ಇಲ್ಲ; ಅಧ್ಯಾತ್ಮದಲ್ಲಿ ಆಸ್ಥೆ ಇಲ್ಲ – ಎಂದು ಹೇಗೆ ಹೇಳುವುದು?

ಧರ್ಮ ಎನ್ನುವುದು ಇಂದು ಎಲ್ಲೆಡೆ ಹೆಚ್ಚೆಚ್ಚು ಸಾಂಸ್ಥಿಕ ಸ್ವರೂಪವನ್ನು ಪಡೆಯುತ್ತಿರುವುದು ಸ್ಪಷ್ಟ; ಭಾರತದಲ್ಲಿ ಅದು ಇನ್ನಷ್ಟು ತೀವ್ರವಾಗಿ ನಡೆಯುತ್ತಿದೆ. ಸಾಂಸ್ಥಿಕತೆಯಿಂದ ಉಂಟಾಗಬಹುದಾದ ಎಲ್ಲ ರೀತಿಯ ದೋಷಗಳೂ ‘ಧರ್ಮ’ವನ್ನು ಹಿಂಸಿಸುತ್ತಿವೆ. ಧರ್ಮಕ್ಕೆ ಸಾಂಸ್ಥಿಕತೆಯ ಆಯಾಮ ಇದ್ದರೂ ಅದರ ಪ್ರಧಾನ ನಿಲುವು ಅದಲ್ಲ. ನೂರಾರು ವರ್ಷಗಳಲ್ಲಿ ಹತ್ತಾರು ವಿಧಗಳಲ್ಲಿ ದಾಸ್ಯದಲ್ಲಿದ್ದ ಭಾರತದಲ್ಲಿ ಧರ್ಮವೂ ಸೇರಿದಂತೆ ಅದರ ಎಲ್ಲ ಅಸ್ಮಿತೆಗಳು ಮರೆಯಾಗಿದ್ದುದು ಐತಿಹಾಸಿಕ ಸತ್ಯ. ಹೀಗಾಗಿ ಸ್ವತಂತ್ರ ಭಾರತದಲ್ಲಿ ಈ ಅಸ್ಮಿತೆಗಳನ್ನು ಮರಳಿ ಸಂಪಾದಿಸಿ ಹಲವು ರೀತಿಯ ಉಪಕ್ರಮಗಳು ನಡೆದವು. ಸಂಘಟನೆಗಳು ಬಹಳ ಬೇಗನೆ ಇಂಥದೊಂದು ವಾತಾವರಣವನ್ನು ನಿರ್ಮಾಣ ಮಾಡಬಲ್ಲವಷ್ಟೆ. ಸಂಘಟಿತವಾದ ಅಂಥ ಪ್ರಯತ್ನಗಳಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ಕಾರಣಗಳ ದೆಸೆಯಿಂದಾಗಿ ರಾಜಕೀಯ, ಸಾಮಾಜಿಕ ಮನ್ನಣೆ ಧಾರಾಳವಾಗಿಯೇ ದೊರೆತದ್ದರಲ್ಲಿ ಆಶ್ವರ್ಯವೇನಿಲ್ಲ.

ಆದರೆ ಇಷ್ಟು ಗಾಢವಾದ ‘ಧಾರ್ಮಿಕ’ ವಾತಾವರಣ ಇದ್ದರೂ ಧರ್ಮದ ಪರಿಮಳ ಇಲ್ಲಿದೆಯೆ? ಇದು ನಮ್ಮನ್ನು ಆಲೋಚನೆಗೆ ತೊಡಗಿಸಬೇಕಾದ ಪ್ರಶ್ನೆ. ಭಾರತೀಯರಾಗಬೇಕು ಎಂಬ ಹಟಕ್ಕೆ ಬಿದ್ದವರಂತೆ ನಾವು ಇಂದು ‘ಅಭಾರತೀಯವಾದ ಭಾರತೀಯತೆ’ಯ ವಿವರಗಳಿಗೆಲ್ಲ ವಶವಾಗುತ್ತಿದ್ದೇವೇನೋ ಎಂಬ ಆತಂಕ ಕಾಡದಿರದು. ಹಾಗಾದರೆ ಇಂದಿನ ವಾತಾವರಣದಲ್ಲಿ ಯಾವುದು ದಿಟವಾದ ಧರ್ಮ, ಯಾವುದು ಅಲ್ಲ– ಎಂದು ಹೇಗೆ ನಿರ್ಧರಿಸುವುದು? ಇದೇನೂ ಅಷ್ಟು ಸುಲಭದ ಪ್ರಶ್ನೆಯಲ್ಲ. ಹೀಗೆಂದು ಈ ಪ್ರಶ್ನೆಯನ್ನು ಹಾಕಿಕೊಳ್ಳದೆಯೂ ವಿಧಿಯಿಲ್ಲ. ಆದರೆ ಇಲ್ಲೊಂದು ತೊಡಕುಂಟು. ಇಂಥ ಪ್ರಶ್ನೆಗಳನ್ನು ಸ್ವೀಕರಿಸುವಂಥ, ವಿಶ್ಲೇಷಿಸುವಂಥ, ಉತ್ತರಗಳಿಗೆ ಪ್ರಾಮಾಣಿಕವಾಗಿ ಹುಡುಕುವಂಥ ಮಾನಸಿಕತೆಯನ್ನು ನಾವು ಇನ್ನೂ ಜೀವಂತವಾಗಿಸಿಕೊಂಡಿದ್ದೇವೆಯೆ? ಈ ಮಾನಸಿಕತೆಯನ್ನು ಭಾರತೀಯ ಪರಂಪರೆಯೇ ಹೇಳುವಂಥ ಶ್ರವಣ, ಮನನ ಮತ್ತು ನಿಧಿಧ್ಯಾಸಗಳಿಗೆ ಹೋಲಿಸಬಹುದೆನಿಸುತ್ತದೆ.

ಇಂಥ ವಿಚಾರ–ಆಚಾರಗಳ ಮಥನ ಈ ನೆಲಕ್ಕೆ ಹೊಸದೂ ಅಲ್ಲ; ಅಥವಾ ಅದು ನಮ್ಮ ಕಾಲಕ್ಕಷ್ಟೆ ಆವರಿಸಿಕೊಂಡ ಅನಿವಾರ್ಯತೆಯೂ ಅಲ್ಲ. ಹತ್ತನೆಯ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಮಹಾದಾರ್ಶನಿಕ ಅಭಿನವಗುಪ್ತ; ಹತ್ತಾರು ಗುರುಗಳಿಂದ ಹಲವು ಶಾಸ್ತ್ರಗಳನ್ನು ಕಲಿತು ತಾವೇ ಆಚಾರ್ಯರೂ ಆದವರು. ಆಗಲೂ ಧಾರ್ಮಿಕ ಕ್ಷೇತ್ರದಲ್ಲಿ ಆಘಾತಕಾರಿಯಾದ ಘಟನೆಗಳು ಎದುರಾಗಿದ್ದವೆನಿಸುತ್ತದೆ. ಆ ಕಾಲದ ಧಾರ್ಮಿಕ–ಆಧ್ಯಾತ್ಮಿಕ ಪರಿಸರವನ್ನೆಲ್ಲ ವಿಮರ್ಶಿಸುವಂಥ ಅವರ ಉದ್ಗಾರವೊಂದು ನಮಗೆ ಬೆಳಕಾಗಬಲ್ಲದು: ‘ಬಹುಭಿರಪಿ ಸೋsಹಮೇವ ಭ್ರಮಿತಸ್ತತ್ತ್ವೋಪದೇಶಕಂಮನ್ಯೈಃ/ ತತ್ತ್ವಮಿತಿ ವರ್ಣಯುಗಮಪಿ ಯೇಷಾಂ ರಸನಾ ನ ಸ್ಪರ್ಶ //’ ಇದರ ತಾತ್ಪರ್ಯ: ‘ನಾನೇ ಶಿವ – ಎಂದು ಪಟ್ಟವೇರಿದ ಸ್ವಯಂಘೋಷಿತ ಗುರುಗಳನ್ನು ಹಿಂಬಾಲಿಸಿ ಗೊಂದಲದಲ್ಲಿ ಬಿದ್ದೆ; ತತ್ತ್ವ – ಎಂಬ ಪದಗಳನ್ನು ಇವರ ನಾಲಗೆ ಕೂಡ ಮುಟ್ಟಿರಲಿಲ್ಲ.’ ಇದು ನಮ್ಮ ಕಾಲದ ಧಾರ್ಮಿಕತೆಯ ಆತ್ಮಾವಲೋಕನಕ್ಕೂ ನಮಗೆ ಸ್ಫೂರ್ತಿಯನ್ನು ಒದಗಿಸೀತು.

ಇದರ ಜೊತೆಗೆ ನಮ್ಮದೇ ಸಂದರ್ಭವೊಂದು ರೂಪಕವಾಗಿಯೂ ದಿಕ್ಸೂಚಿಯಾಗಿಯೂ ನಮಗೆ ಒದಗಬಲ್ಲದು ಎನಿಸುತ್ತದೆ. ಆನಂದ ಕುಮಾರಸ್ವಾಮಿ ನಮ್ಮ ಕಾಲದ ಶ್ರೇಷ್ಠ ವಿದ್ವಾಂಸ; ಭಾರತೀಯತೆಯನ್ನು ಆಧುನಿಕತೆಗೆ ಅರ್ಥ ಮಾಡಿಸುವಲ್ಲಿ ಅವರ ಕೊಡುಗೆ ಅಪೂರ್ವವಾದುದು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಅವರು ಅಮೆರಿಕದಲ್ಲಿದ್ದರು. ಅಲ್ಲಿದ್ದ ಭಾರತೀಯರು ಸಂದೇಶವನ್ನು ಕೊಡುವಂತೆ ಅಂದು ಅವರನ್ನು ಕೇಳಿದರು. ಆಗ ಅವರು ಹೇಳಿದ ಮಾತುಗಳಲ್ಲಿ ಕೆಲವು: ‘ನೀವು ನೀವಾಗಿರಿ. ಕೆಳದರ್ಜೆಯ ತತ್ತ್ವಜ್ಞಾನಿಗಳನ್ನು ಏಕಾದರೂ ಆರಾಧಿಸುತ್ತೀರಿ? ಮೋಸ ಹೋಗದಿರಿ; ಕೆಟ್ಟ ಸಂವಹನಗಳು ಸಂಸ್ಕೃತಿಯನ್ನು ನಾಶ ಮಾಡುತ್ತವೆಯಷ್ಟೆ.’

ಆನಂದ ಕುಮಾರಸ್ವಾಮಿ (ಆ. 22, 1887–ಸೆ. 9, 1947) ಜೀವನದುದ್ದಕ್ಕೂ ಅಧ್ಯಯನ ಮಾಡುತ್ತ, ಧರ್ಮ–ಸಂಸ್ಕೃತಿ–ಕಲೆ–ಅಧ್ಯಾತ್ಮ–ಸಮಾಜಕ್ಕೂ ಮನುಷ್ಯನಿಗೂ ಇರುವ ಸಂಬಂಧಗಳ ಬಗ್ಗೆ ಬೆಳಕು ಕಾಣಿಸಿದವರು. ಸನಾತನ ಧರ್ಮವನ್ನು ಆಳವಾದ ಒಳನೋಟಗಳಿಂದ ಅನುಸಂಧಾನಿಸಿದವರು.

ಅಂಥವರ ದಾರ್ಶನಿಕತೆಯ ನೋಟ ನಮ್ಮ ದೃಷ್ಟಿಕೋನವನ್ನು ವಿಸ್ತರಿಸಬಲ್ಲದು. ಇದೇ ಸೆಪ್ಟೆಂಬರ್‌ 9ಕ್ಕೆ ಅವರು ತೀರಿಕೊಂಡು ಎಪ್ಪತ್ತು ವರ್ಷಗಳಾಗುತ್ತವೆ. ಆದರೆ ಅವರ ಚಿಂತನೆ ಈಗಲೂ ನಮಗೆ ಪ್ರಸ್ತುತವಾಗಿದೆ; ಸನಾತನಧರ್ಮದ ಭಿತ್ತಿಯಲ್ಲಿ ಭಾರತೀಯತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಒದಗುವಂತಿದೆ.

ಸನಾತನ ಧರ್ಮವನ್ನು ಅವರು ಭಾರತಕ್ಕೆ ಸೀಮಿತ ಮಾಡಿ ವ್ಯಾಖ್ಯಾನಿಸಿದವರಲ್ಲ; ಅದನ್ನೊಂದು ವಿಶ್ವವ್ಯವಸ್ಥೆ; ‘ಋತ’ ಎಂದು ಕಾಣಿಸಿದರು. ಮಾತ್ರವಲ್ಲ, ಭಾರತೀಯತೆಯನ್ನೂ ಅವರು ಭೌಗೋಳಿಕ ವಿವರವಾಗಿ ಪರಿಗಣಿಸದೆ ಅದನ್ನೊಂದು ಮಾನಸಿಕತೆಯನ್ನಾಗಿ ಎತ್ತಿಹಿಡಿದರು. ಅವರ ಚಿಂತನೆಗಳ ಒಟ್ಟು ನಿಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಒದಗುವಂಥವೇ ಸರಿ.

ಇಂದು ಧರ್ಮ ಅಥವಾ ಅಧ್ಯಾತ್ಮ – ಇವುಗಳ ಮುಸುಕಿನಲ್ಲಿ ಹಲವಾರು ವಿಕೃತಿಗಳು ನಡೆಯುತ್ತಿರುವುದನ್ನು ಯಾವ ಪ್ರಜ್ಞಾವಂತನೂ ನಿರಾಕರಿಸಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಸಾಗಿರುವ ಬಾಲಿಶ ಆಚರಣೆ–ಆರಾಧನೆಗಳು, ಮತಾಂತರದ ಉದ್ಯಮ ಮತ್ತು ಭಯೋತ್ಪಾದನೆಯ ಅಟ್ಟಹಾಸಗಳು ಕೇವಲ ಯಾವುದೋ ಒಂದು ದೇಶದ ಸಮಸ್ಯೆಯಾಗಿ ಉಳಿದಿಲ್ಲ; ಇಡಿಯ ಪ್ರಪಂಚವನ್ನೇ ಈ ವ್ರಣಗಳು ಆಕ್ರಮಿಸಿವೆ. ಆದರೆ ಈ ಕರಾಳಮುಖಗಳ ಹಿಂದಿರುವುದು ‘ಧರ್ಮ’ ಅಲ್ಲ; ‘ಮತ’. ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ಕೇವಲ ಶಬ್ದಗಳ ಆಟವನ್ನಾಗಿಯಷ್ಟೆ ನೋಡುವುದಲ್ಲ; ಎರಡು ಭಿನ್ನ ಮಾನಸಿಕತೆ, ವಿಚಾರಧಾರೆ ಮತ್ತು ಅನುಷ್ಠಾನ ವಿಧಾನಗಳನ್ನಾಗಿ ವಿಶ್ಲೇಷಿಸಬೇಕಾಗುತ್ತದೆ. ಇಂಥದೊಂದು ವಿವೇಕದ ವಿಕಾಸಕ್ಕೆ ಬೇಕಾದ ಗಾಳಿ–ಬೆಳಕುಗಳನ್ನು ಆನಂದ ಕುಮಾರಸ್ವಾಮಿಯವರಂಥ ದಾರ್ಶನಿಕರು ನಮಗೆ ಒದಗಿಸಬಲ್ಲರು. ‘ಮತ’ ಹೇಗೆ ಸಂಕುಚಿತವಾದದ್ದು; ‘ಧರ್ಮ’ ಹೇಗೆ ವಿಶಾಲವಾದದ್ದು – ಎಂಬುದಕ್ಕೆ ಆನಂದ ಕುಮಾರಸ್ವಾಮಿಯವರ ಮಾತನ್ನು ಇಲ್ಲಿ ಉಲ್ಲೇಖಿಸಬಹುದು:

'The traditional Metaphysics (Philosophia Perennis or Sanatana Dharma) is not an omnium gatherum of "what men have believed", nor it is a systematic "'philosophy''; it is a consistent and always self-consistent doctrine which can be recognized always and everywhere and is quite independent of any concept of "progress" in material comfort or the accumulation of empirical knowledge; neither opposed to nor to be confused with either of these.'

ಎಲ್ಲ ಕಾಲದಲ್ಲೂ ಎಲ್ಲೆಲ್ಲೂ ಎಲ್ಲರಲ್ಲೂ ಇರುವ ಶಾಶ್ವತ ಸತ್ಯವೇ ಸನಾತನ ಧರ್ಮದ ಅಡಿಪಾಯ; ಹೀಗಾಗಿ ಅದು ದೇಶವನ್ನೂ ದೇಹವನ್ನೂ ಮೀರಿದ ತತ್ತ್ವ. ಅದನ್ನು ಕಂಡುಕೊಳ್ಳುವ ಎಲ್ಲ ದಾರಿಗಳೂ ಸಾಪೇಕ್ಷವಾದವು; ಹೀಗಾಗಿ ‘ನನ್ನ ದಾರಿಯಷ್ಟೆ ಸತ್ಯ’ ಎನ್ನುವುದು ಸರಿಯಲ್ಲ– ಎಂದು ಪ್ರತಿಪಾದಿಸಿದವರು ಅವರು. ಪ್ರತ್ಯೇಕತೆಯ ಬಗ್ಗೆ ಒತ್ತುನೀಡುವಂಥ ‘ಚಿಂತಕ’ರನ್ನು ತಿರಸ್ಕರಿಸುವಂತೆಯೂ ಘೋಷಿಸಿದರು. ಹಾಗಾದರೆ ಸನಾತನ ಧರ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ಯಾವುದು? ಇದು ಎರಡು ನೆಲೆಗಳಲ್ಲಿ ನಡೆಯಬೇಕು; ಆದರೆ ಈ ಎರಡು ಕೂಡ ಒಂದೇ ತತ್ತ್ವದ ಅಂತರಂಗ–ಬಹಿರಂಗದ ರೂಪಗಳಷ್ಟೆ ಎನ್ನುವುದನ್ನು ಅಪೂರ್ವವಾಗಿ ನಿರೂಪಿಸಿದರು. ಒಂದು ರಾಷ್ಟ್ರ (ಪುರ); ಮತ್ತೊಂದು ವ್ಯಕ್ತಿ (ಪುರುಷ) – ಈ ಎರಡು ಅಭಿವ್ಯಕ್ತಿಗಳಲ್ಲಿ  ಪ್ರಕಟವಾಗಬೇಕಾದ ಸತ್ಯ–ಶಿವ–ಸೌಂದರ್ಯದ ಮೂರ್ತರೂಪವೇ ಧರ್ಮ ಎನ್ನುವುದು ಅವರ ಕಾಣ್ಕೆ. ಧರ್ಮಕ್ಕೂ ಕಲೆಗೂ ಸಮಾಜಕ್ಕೂ ಇರುವ ನಂಟನ್ನು ಕುರಿತು ಅದ್ಭುತ ಒಳನೋಟಗಳನ್ನು ಅವರ ಬರಹಗಳ ಉದ್ದಕ್ಕೂ ಕಾಣುತ್ತೇವೆ. ಹೀಗಾಗಿಯೇ ಅವರು ರಾಷ್ಟ್ರವೊಂದರ ನಿರ್ಮಾಣ ಕವಿ–ಕಲಾವಿದರಿಂದಲೇ ಹೊರತು ರಾಜಕಾರಣಿಗಳು–ಉದ್ಯಮಿಗಳಿಂದ ಅಲ್ಲ ಎಂದು ಘೋಷಿಸಿದರು. ’ವಿಶ್ವವ್ಯಾಪಾರ ಮತ್ತು ವಿಶ್ವಯುದ್ಧ – ಇವೆರಡೂ ಒಂದೇ ಜಾತಿಯ ಕೇಡುಗಳು’ (World trade and world war are congeneric evils) ಎಂದು ಆಧುನಿಕ ಜಗತ್ತಿನ ಆರ್ಥಿಕ ಅನೈತಿಕತೆಯನ್ನು ಒಂದೇ ಮಾತಿನಲ್ಲಿ ಧ್ವನಿಸಿದರು. ಎಲ್ಲ ವಿಧದ ಅನೈತಿಕತೆಯಿಂದ ನಮ್ಮನ್ನು ಪಾರು ಮಾಡಿ ಉದ್ಧರಿಸಬಲ್ಲದ್ದೇ ಕಲೆ; ಹೀಗಾಗಿ ಕಲಾವಿದನಾಗದ ಯಾವೊಬ್ಬ ವ್ಯಕ್ತಿಗೂ ಸಮಾಜದ ಯಾವ ಸೌಲಭ್ಯವನ್ನು ಪಡೆಯಲೂ ಅರ್ಹತೆಯೇ ಒದಗದು ಎಂದರು. ಆದರೆ ಕಲೆ ಎಂದರೆ ಸಂಗೀತವೋ ಸಾಹಿತ್ಯವೋ ಚಿತ್ರವೋ ಶಿಲ್ಪವೋ ಅಷ್ಟೇ ಅಲ್ಲ; ಪ್ರತಿಯೊಂದು  ವೃತ್ತಿಯೂ – ಅದು ಕೃಷಿ, ಕುಂಬಾರಿಕೆ, ವೈದ್ಯ, ಅಡುಗೆ, ನಡಿಗೆ – ಎಲ್ಲವೂ ಕಲೆಯೇ ಹೌದು; ರಾಜನೀತಿಯೂ ಕೂಡ ಕಲೆಯೇ ಸರಿ ಎಂದು ಒತ್ತಿಹೇಳಿದರು. ಭಾರತೀಯ ರಾಷ್ಟ್ರೀಯ ಆಂದೋಲನದಲ್ಲಿ ಸೌಂದರ್ಯಪ್ರಜ್ಞೆಗೆ ಸ್ಥಾನ ಸಿಗದೇ ಹೋದದ್ದು ರಾಷ್ಟ್ರೀಯ ದುರಂತವೇ ಹೌದು ಎಂದು ಪರಿತಪಿಸಿದರು. ಭಾರತವನ್ನು ದಿಟವಾಗಿ ಪ್ರೀತಿಸುವವರೆಲ್ಲರೂ ಮೊದಲಿಗೆ ದಕ್ಕಿಸಿಕೊಳ್ಳಬೇಕಾದ ಅರ್ಹತೆ ಎಂದರೆ ಸೌಂದರ್ಯಾನುಭೂತಿಯ ಸಹೃದಯತತ್ತ್ವ ಎಂದರು. ಜೀವನವೇ ಒಂದು ಕಲೆಯಾಗತಕ್ಕದ್ದು; ಇದೇ ಸನಾತನ ಧರ್ಮದ ತಿರುಳು ಎನ್ನುವುದು ಅವರ ಮಾತಿನ ಸಾರಾಂಶ.

ನಾವು ಸನಾತನ ಧರ್ಮಕ್ಕೆ ಹಿಂದಿರುಗದ ಹೊರತು ವ್ಯಷ್ಟಿ–ಸಮಷ್ಟಿಗಳ ಹಿತ ಸಾಧಿತವಾಗದು ಎಂದು ಬಲವಾಗಿ ನಂಬಿದ್ದವರು; ಅದನ್ನು ಹಲವು ಸಂಸ್ಕೃತಿಗಳ ಮೂಲಗ್ರಂಥಗಳ ಆಧಾರದಿಂದಲೂ ಚಿಂತನೆಯಿಂದಲೂ ಜಗತ್ತಿಗೆ ಸಾರಿದವರು, ಆನಂದ ಕುಮಾರಸ್ವಾಮಿ. ಬೇರೆ ಬೇರೆ ಮತಗಳು ಒಂದೇ ಮೂಲಭಾಷೆಯ ಉಪಭಾಷೆಗಳಷ್ಟೆ ಎನ್ನುವುದನ್ನು ಧೀಮಂತಿಕೆಯಿಂದ ಪ್ರತಿಪಾದಿಸಿದರು. ಆನಂದ ಕುಮಾರಸ್ವಾಮಿಯವರ ದಾರ್ಶನಿಕತೆ ನಮ್ಮ ಕಾಲಕ್ಕೆ - ಪೂರ್ವಕ್ಕೂ ಪಶ್ಚಿಮಕ್ಕೂ – ಏಕೆ ಹೆಚ್ಚು ಪ್ರಸ್ತುತ ಎನ್ನುವುದನ್ನು ರೇ ಲಿವಿಂಗ್‌ಸ್ಟನ್‌ ಎಂಬ ವಿದ್ವಾಂಸರ ಮಾತುಗಳು ಅರ್ಥವತ್ತಾಗಿ ಹೇಳುವಂತಿವೆ:

'Let it be noted at the outset that Coomaraswamy cannot be lumped with those swamis East or West, or like types, who peddle a bogus "spirituality'' that is vague, delusory, and deceitful.'

ಈ ಮಾತಿನ ತಾತ್ಪರ್ಯ: ‘ನೈಜವಲ್ಲದ, ಆದರೆ ಅಸ್ಪಷ್ಟವೂ ವಂಚನೆ–ಕಪಟತನದಿಂದಲೂ ಕೂಡಿದ ‘ಆಧ್ಯಾತ್ಮಿಕತೆ’ಯನ್ನು ಪ್ರತಿಪಾದಿಸುವ ಪೂರ್ವದ ಅಥವಾ ಪಶ್ಚಿಮದ ಸ್ವಾಮಿಗಳ ರಾಶಿಗೆ ಸೇರಿದವರಲ್ಲ ಆನಂದ ಕುಮಾರಸ್ವಾಮಿ.’

***

ದಿಟವಾದ ಸ್ವದೇಶೀ ಎಂಬುದು ಜೀವನವನ್ನು ನೋಡುವ ಒಂದಾನೊಂದು ದೃಷ್ಟಿ. ಇದು ಆವಶ್ಯಕ ಪ್ರಾಮಾಣಿಕತೆಯೂ ಹೌದು. ಮೊದಲು ಇದನ್ನು ತಿಳಿದು, ಜೀವನಕಲೆಯನ್ನು ಮತ್ತೊಮ್ಮೆ ಸಿದ್ಧಿಸಿಕೊಳ್ಳಬೇಕಾಗಿದೆ. ಆಗ ಮಾತ್ರವೇ, ನಮ್ಮ ಪರಂಪರೆಯಲ್ಲಿ ಆಧ್ಯಾತ್ಮಿಕ ಭೂಮಿಕೆಯ ಮೇಲೆ ಮೂಡಿಕೊಂಡಿದ್ದ ಕೈಗಾರಿಕೆಗಳು ಈಗ ನಮ್ಮಲ್ಲಿ ಆವರಿಸಿರುವ ಅಸಭ್ಯತೆ ಮತ್ತು ಪರೋಪಜೀವಿಕೆ ಎಂಬ ಬೂದಿಯಿಂದ ಮೇಲೆದ್ದು ಮತ್ತೆ ಜೀವವನ್ನು ಪಡೆದುಕೊಂಡಾವು.

=======================

ಆಧ್ಯಾತ್ಮಿಕ ಪೂರ್ವ ಮತ್ತು ಭೌತಿಕ ಪಶ್ಚಿಮ - ಈ ಸಮಸ್ಯೆಯನ್ನು ಬಹಳ ಸುಭದಲ್ಲಿ ತಪ್ಪಾಗಿ ಆರ್ಥೈಸಿಕೊಳ್ಳುವ ಸಾಧ್ಯತೆಯಿದೆ. ಇದೊಂದು ಭೌಗೋಳಿಕ ಅಥವಾ ಜನಾಂಗೀಯ ಸಮಸ್ಯೆಯಾಗಿ ತೋರುವುದು ಕೇವಲ ಆಕಸ್ಮಿಕವಾದುದು ಎಂಬುದನ್ನು ನಾನು ಮತ್ತೆ ಮತ್ತೆ ಒತ್ತಿ ಹೇಳುತ್ತಲೇ ಬಂದಿರುವೆ. ದಿಟವಾದ ಸಂಘರ್ಷ ಇರುವುದು ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಕಲ್ಪನೆ–ಸಂಸ್ಕೃತಿಗಳ ನಡುವೆಯೇ ಸರಿ. ಇದು ಭೌತಿಕ ಅಥವಾ ಇಂದ್ರಿಯ ದೃಷ್ಟಿಕೋನಗಳ ಹಾಗೂ ಆಧ್ಯಾತ್ಮಿಕತೆ ಮತ್ತು ಸೈದ್ಧಾಂತಿಕತೆಗಳ ನಡುವಣ ಸಂಘರ್ಷವೇ ಹೌದು ಎನ್ನುವುದು ಪ್ರಶ್ನಾತೀತವಾದುದು.

==========================

ಆಸ್ತಿ ಎನ್ನುವುದು ನಮ್ಮ ಬಳಕೆಯನ್ನು ಆಧರಿಸಿ ನಿರ್ಧಾರವಾಗಬೇಕಾದ ಆವಶ್ಯಕತೆ. ನಾವು ಬಳಸುವಂಥದ್ದನ್ನು ಸುಖಿಸುವುದು ನ್ಯಾಯಯುತವಾದುದೇ; ಆದರೆ ನಾವು ಯಾವುದನ್ನು ಬಳಸುವುದಿಲ್ಲವೋ ಅಥವಾ ಯಾವುದನ್ನು ಸಂತೋಷಪಡಲಾರೆವೋ ಅಂಥವನ್ನು ಪಡೆದುಕೊಳ್ಳುವುದು ಅಕ್ರವೇ ಹೌದು. ಎಲ್ಲ ಸಂಪತ್ತು ಕೂಡ ಏಕಕಾಲದಲ್ಲಿ ಸುಂದರವೂ ಉಪಯುಕ್ತವೂ ಆಗಿರತಕ್ಕದ್ದು; ಹಾಗಿಲ್ಲದಿದ್ದಾಗ ಅದನ್ನು ಪಡೆಯುವುದು ಮಾನವನ ಘನತೆಗೆ ಮಾಡವಂಥ ಅಪಮಾನವೇ ಸರಿ. ಕೆಲವೊಂದು ವಸ್ತುಗಳನ್ನು ಸುಂದರವಾಗಿಯೂ, ಮತ್ತೆ ಕೆಲವೊಂದು ವಸ್ತುಗಳನ್ನು ಉಪಯುಕ್ತವನ್ನಾಗಿಯೂ ಪ್ರತ್ಯೇಕಿಸಿ ನೋಡುತ್ತಿರುವ ಮೊದಲ ಸಮಾಜ ಎಂದರೆ ಬಹುಶಃ ನಮ್ಮದೇ ಎನಿಸುತ್ತದೆ. ಯಾವುದು ನಮ್ಮ ಪ್ರಶಂಸೆಗೂ ಪ್ರಯೋಜನಕ್ಕೂ ಒಂದೇ ಬಾರಿಗೆ ದಕ್ಕುವುದಿಲ್ಲವೋ ಅಂಥವನ್ನು ತಿರಸ್ಕರಿಸುವುದೇ ಆತ್ಮಸಂತೋಷದಿಂದ ಸ್ವೀಕರಿಸಿದ ಬಡತನ. ಈ ಲಕ್ಷಣ ಕೊಟ್ಯಧಿಪತಿಗೂ ಸನ್ಯಾಸಿಗೂ ಇಬ್ಬರಿಗೂ ಸಮಾನವಾಗಿ ಅನ್ವಯವಾಗುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT