ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಅಂಗಳದ ಮಾಂತ್ರಿಕ ಅಹಮದ್ ಖಾನ್

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಆ ಕಾಲದಲ್ಲಿ ಹಿಂದಿ ಚಿತ್ರನಟ ದಿಲೀಪ್ ಕುಮಾರ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಆದರೆ, ಅದೇ ದಿಲೀಪ್‌ ಕುಮಾರ್ ಅವರು ಅಹಮದ್ ಖಾನ್‌ ಅವರ ಆಟಕ್ಕೆ ಮನಸೋತಿದ್ದರು. ಕೋಲ್ಕತ್ತದಲ್ಲಿ ಖಾನ್‌ ಅವರನ್ನು ಭೇಟಿ ಮಾಡಲು ಕೂಡ ಬರುತ್ತಿದ್ದರು’–

ಭಾರತದ ಫುಟ್‌ಬಾಲ್‌ ಲೋಕ ಕಂಡ ದಿಗ್ಗಜ ಆಟಗಾರ ಒಲಿಂಪಿಯನ್ ಅಹಮದ್‌ ಖಾನ್ ಅವರ ತಮ್ಮ ಅಮ್ಜದ್‌ ಖಾನ್ ಅವರು ಹೇಳಿದ ಮಾತುಗಳಿವು. ಹೋದ ವಾರ ಇಹಲೋಕ ಯಾತ್ರೆ ಮುಗಿಸಿದ ಅಹಮದ್ ಖಾನ್ ಅವರ ಸಾಧನೆಗಳನ್ನು ಅಮ್ಜದ್ ಎಳೆಎಳೆಯಾಗಿ ಬಿಡಿಸಿಡುತ್ತಾರೆ.

ಬೆಂಗಳೂರಿನ ಫುಟ್‌ಬಾಲ್ ಶ್ರೀಮಂತಿಕೆಗೆ ಅಮೋಘ ಕಾಣಿಕೆ ನೀಡಿದ ಕುಟುಂಬಗಳಲ್ಲಿ ಖಾನ್ ಅವರದ್ದು ಪ್ರಮುಖವಾದದ್ದು. ಅಹಮದ್ ಅವರ ತಂದೆ ಮೆಹಮೂದ್ ಬಾಬಾ ಖಾನ್ ಅವರು ಬೆಂಗಳೂರು ಕ್ರೆಸೆಂಟ್ಸ್‌ ತಂಡದ ನಾಯಕರಾಗಿದ್ದರು.

ಅವರ ಇಬ್ಬರು ಚಿಕ್ಕಪ್ಪಂದಿರು ಕೋಲ್ಕತ್ತದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ಗೆ ಆಡಿದ್ದರು. ಅಹಮದ್ ಖಾನ್ ಅವರ ಫುಟ್‌ಬಾಲ್ ಅಭಿಯಾನ ಕ್ರೆಸೆಂಟ್ ತಂಡದಿಂದ ಆರಂಭವಾಗಿತ್ತು. ಏಳನೇ ವಯಸ್ಸಿನಲ್ಲಿ ಕ್ರೀಡಾಂಗಣಕ್ಕೆ ಇಳಿದ ಅಹಮದ್ ಎರಡು ಒಲಿಂಪಿಕ್ಸ್‌ಗಳಲ್ಲಿ ಆಡುವ ಮಟ್ಟಕ್ಕೆ ಬೆಳೆದಿದ್ದು ಅದ್ಭುತ. ಅವರ ಮೂವರು ಸಹೋದರರಾದ ಅಮ್ಜದ್ ಖಾನ್, ಶರ್ಮತ್ ಖಾನ್ ಮತ್ತು ಲತೀಫ್ ಖಾನ್ ಅವರೂ ಉತ್ತಮ ಫುಟ್‌ಬಾಲ್ ಆಟಗಾರರಾಗಿದ್ದರು.

ಸ್ವತಂತ್ರ ಭಾರತದ ಮೊದಲ ಫುಟ್‌ಬಾಲ್ ತಂಡದೊಂದಿಗೆ 1948ರಲ್ಲಿ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅಹಮದ್ ಆಡಿದ್ದರು. ಆಗಿನ ಭಾರತ ತಂಡದ ಆಟಗಾರರು ಬರಿಗಾಲಿನಲ್ಲಿಯೇ ಕಣಕ್ಕಿಳಿದಿದ್ದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ. ಆಗ ತಂಡದಲ್ಲಿ ಅಹಮದ್ ಅವರೊಂದಿಗೆ ಸೈಲೆನ್ ಮನ್ನಾ, ತಾಲಿಮೆರಿನ್ ಆವೊ, ಬಿ.ಎನ್‌. ವಜ್ರವೇಲು ಮತ್ತು ಸಾರಂಗಪಾಣಿ ರಾಮನ್ ಅವರು ಇದ್ದರು. ಲೆಫ್ಟ್‌ ಪೊಸಿಷನ್‌ನಲ್ಲಿ ಆಡುತ್ತಿದ್ದ ಅಹಮದ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಗಮನ ಸೆಳೆಯವ ಆಟವಾಡಿದ್ದರು.

ಆದರೂ ತಂಡವು 1–2 ಗೋಲುಗಳಿಂದ ಫ್ರಾನ್ಸ್‌ ಎದುರು ಸೋತು ನಿರ್ಗಮಿಸಿತ್ತು. ಅಹಮದ್ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಕೌಶಲವು ಅಮೋಘವಾಗಿತ್ತು. ಸಾಕಷ್ಟು ದೂರದವರೆಗೆ ಚೆಂಡನ್ನು ನಿಯಂತ್ರಿಸುತ್ತ ಸಾಗುವ ಕಾಲ್ಚಳಕ ಅವರದ್ದಾಗಿತ್ತು ಎಂದು ಅವರ ಆಟವನ್ನು ನೋಡಿದ ಹಲವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರ ಓಟದ ಪರಿ ಮತ್ತು ಚಾಣಾಕ್ಷತನಕ್ಕೆ ಹಲವು ವಿದೇಶಿ ತಂಡಗಳ ಕೋಚ್‌ಗಳೂ ತಲೆದೂಗಿದ್ದರು.

‘ಅಹಮದ್ ಅವರು ಬರಿಗಾಲಿನ ಫುಟ್‌ಬಾಲ್ ಮಹಾಮೋಡಿಗಾರ’ ಎಂದು ಈಸ್ಟ್ ಬೆಂಗಾಲ್ ತಂಡದ ಕಲ್ಯಾಣ್ ಮುಜುಂದಾರ್ ಅವರೂ ಈ ಹಿಂದೆ ಶ್ಲಾಘಿಸಿದ್ದರು.

1950ರಲ್ಲಿ ಫಿಫಾ ಚತುಷ್ಕೋನ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಆಹ್ವಾನ ಸಿಕ್ಕಿತ್ತು. ಆ ಟೂರ್ನಿಯಲ್ಲಿ ಇಟಲಿ, ಪರುಗ್ವೆ ಮತ್ತು ಸ್ವೀಡನ್ ತಂಡಗಳು ಭಾರತ ಇದ್ದ ಗುಂಪಿನಲ್ಲಿ ಇದ್ದವು. ಆದರೆ ಭಾರತದಲ್ಲಿ ಆಗ ವಿಶ್ವಮಟ್ಟದ ಟೂರ್ನಿಗಳ ಬಗ್ಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಒಲಿಂಪಿಕ್ಸ್‌ ಮತ್ತು ಏಷ್ಯನ್ ಗೇಮ್ಸ್‌ಗಳಿಗಷ್ಟೇ ಪ್ರಾಮುಖ್ಯತೆ ಇತ್ತು. ಬ್ರೆಜಿಲ್‌ನಲ್ಲಿ ನಡೆಯುತ್ತಿದ್ದ ಟೂರ್ನಿಗೆ ಹೋಗಲು ತಂಡಕ್ಕೆ ಆರ್ಥಿಕ ಸಹಾಯ ದೊರೆಯಲಿಲ್ಲ. ಅಲ್ಲದೇ ಬೂಟು ಧರಿಸಿಯೇ ಆಡಬೇಕು ಎಂದು ಫಿಫಾ ನಿಯಮ ಮಾಡಿತ್ತು. ಅದರಿಂದಾಗಿ ಟೂರ್ನಿಯಲ್ಲಿ ಆಡಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಆದರೆ ಅಹಮದ್ ಅವರ ಸಾಧನೆಯ ಓಟ ನಿಲ್ಲಲಿಲ್ಲ. ಅವರಿದ್ದ ತಂಡವು 1951ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿತು. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತಂಡದಲ್ಲಿಯೂ ಅಹಮದ್ ಇದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ ಯುಗೊಸ್ಲಾವಿಯಾ ತಂಡವು 10–1ರಿಂದ ಭಾರತಕ್ಕೆ ಸೋಲುಣಿಸಿತು. ಅದರಲ್ಲಿ ಖಾನ್ ಅವರು ಏಕೈಕ ಗೋಲು ಗಳಿಸಿದ್ದರು.

ಬೆಂಗಾಲದ ಪಂಚ ಪಾಂಡವರು
ಅಹಮದ್ ಅವರಿಗೆ ಬೆಂಗಳೂರಿನಲ್ಲಿದ್ದಷ್ಟೇ ಸಂಖ್ಯೆಯ ಅಭಿಮಾನಿಗಳು ಕೋಲ್ಕತ್ತದಲ್ಲಿಯೂ ಇದ್ದರು. ಬಂಗಾಳದ ಫುಟ್‌ಬಾಲ್ ಪ್ರೇಮಿಗಳ ಮನಸ್ಸನ್ನು ಅವರು ಗೆದ್ದಿದ್ದರು. ಸುಮಾರು ಒಂದು ದಶಕದ ಕಾಲ ಈಸ್ಟ್‌ ಬೆಂಗಾಲ್ ತಂಡಕ್ಕೆ ಆಡಿದ್ದರು. ಆಗ ಅಹಮದ್ ಅವರೊಂದಿಗೆ ಸಲೆ, ಧನರಾಜ್, ಅಪ್ಪಾರಾವ್ ಮತ್ತು ವೆಂಕಟೇಶ್ ಅವರೂ ತಂಡದಲ್ಲಿದ್ದರು. ಇವರು ‘ಪಂಚ ಪಾಂಡವರು ಎಂದೇ ಖ್ಯಾತರಾದವರು. ಬೆಂಗಾಲ್ ತಂಡದ ಪ್ರಮುಖ ವಿಜಯಗಳ ರೂವಾರಿಗಳೂ ಇವರಾಗಿದ್ದರು.

ಎದುರಾಳಿಯ ರಕ್ಷಣಾ ಆಟಗಾರರನ್ನು ವಂಚಿಸುತ್ತ ಚೆಂಡನ್ನು ಗೋಲುಪೆಟ್ಟಿಗೆಯತ್ತ ಅಹಮದ್ ಅವರು ತೆಗೆದುಕೊಂಡು ಹೋಗುತ್ತಿದ್ದ ಪರಿಯನ್ನು ‘ಉರಗ ಚಲನೆ’ಗೆ ಹೋಲಿಕೆ ಮಾಡಿದವರೂ ಇದ್ದಾರೆ. ಅದಕ್ಕಾಗಿಯೇ ಅವರನ್ನು ‘ಸ್ನೇಕ್ ಚಾರ್ಮರ್’ ಎಂದೂ ಕರೆಯುತ್ತಿದ್ದರು.

ಬರಿಗಾಲ ಫುಟ್‌ಬಾಲ್‌ ಆಟದ ಕಾಲದ ಒಲಿಂಪಿಕ್ಸ್‌ನ ಏಕೈಕ ಕೊಂಡಿಯಾಗಿದ್ದ ಅಹಮದ್ ಖಾನ್ ಅವರು ಈಗಿಲ್ಲ. ಅವರು ನೆಟ್ಟುಹೋಗಿರುವ ಮೈಲುಗಲ್ಲುಗಳನ್ನು ಮುಟ್ಟುವ ಅಪ್ರತಿಮ ಆಟಗಾರರ ನಿರೀಕ್ಷೆಯಲ್ಲಿ ಭಾರತದ ಫುಟ್‌ಬಾಲ್ ಕ್ಷೇತ್ರ ಇಂದಿಗೂ ಇದೆ. ಭಾರತ ತಂಡವು ಮತ್ತೊಮ್ಮೆ ಒಲಿಂಪಿಕ್ಸ್‌ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಆಡುವ ಅರ್ಹತೆ ಗಳಿಸಿದರೆ ಅಹಮದ್ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಅದಾಗಬಹುದು. 

***

ಅವರ ಆಟ ಅದ್ಭುತ ರಸದೌತಣ ನೀಡುತ್ತಿತ್ತು. ಚೆಂಡನ್ನು ನಿಯಂತ್ರಿಸುವಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು. ಅರುಮೈನಾಯಗಮ್ 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದ ಆಟಗಾರ ಬಹಳ ಶಿಸ್ತಿನ ಮನುಷ್ಯನಾಗಿದ್ದರು. ಕಟ್ಟುನಿಟ್ಟಿನ ಆದೇಶಗಳನ್ನು ನಮಗೆ ನೀಡುತ್ತಿದ್ದರು. ಅವರು ಆಡುವುದನ್ನು ನಾನು ನೋಡಿಲ್ಲ. ಆದರೆ ಅವರ ಸ್ನೇಹಿತರು, ಸಹೋದರರಿಂದ ಕೇಳಿದಾಗಲೆಲ್ಲ ಅಪಾರ ಹೆಮ್ಮೆಯಾಗುತ್ತದೆ. ಅವರು ಮಹಾನ್ ವ್ಯಕ್ತಿತ್ವದವರಾಗಿದ್ದರು.

–ಅಬ್ದುಲ್ ಮಜೀದ್ ಖಾನ್, ಅಹಮದ್ ಖಾನ್ ಅವರ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT