ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬದ ತಯಾರಿಯಲ್ಲಿದ್ದವರಿಗೆ ಸಿಕ್ಕಿದ್ದು ಶವ...!

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ರಾಜಶೇಖರ-ವಾಣಿ ದಂಪತಿ ಅದೊಂದು ದಿನ ನನ್ನ ಕಚೇರಿಗೆ ಬಂದವರೇ ಒಂದೇ ಸಮನೆ ಕಣ್ಣೀರು ಸುರಿಸುತ್ತಿದ್ದರು. ‘ನಮ್ಮ ಮಗನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ ಎಳೆದುಕೊಂಡು ಹೋಗಿದ್ದಾರೆ. ಅವರು ಯಾವ ಠಾಣೆಯ ಪೊಲೀಸರು, ಏನು–ಎತ್ತ ಒಂದೂ ತಿಳಿದಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ಗೋಗರೆದರು.

ಅವರನ್ನು ಸಮಾಧಾನಪಡಿಸಿ ವಿಷಯ ಏನೆಂದು ಕೇಳಿದೆ. ಅದಕ್ಕೆ ಅವರ ತಂದೆ, ‘ನಾನು ಗಾರ್ಮೆಂಟ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಮಗ ಶಿವಶೇಖರ ಈಗ ತಾನೇ ಬಿ.ಇ ಮುಗಿಸಿದ್ದಾನೆ, ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಶ್ರೀಮಂತನ ಮಗಳು ರೇಖಾ ಎಂಬಾಕೆ ಆತನ ಬೆನ್ನು ಬಿದ್ದಿದ್ದಾಳೆ ಎಂಬ ವಿಷಯ ನಮಗೆ ಗೊತ್ತಾಯಿತು. ಒಬ್ಬಳೇ ಮಗಳು ಆಕೆ. ಅವರ ಅಂತಸ್ತಿಗೆ ನಾವು ಸರಿಹೊಂದುವುದಿಲ್ಲ. ಮಗನಿಗೆ ಕೆಲಸವೂ ಇಲ್ಲ. ಆದ್ದರಿಂದ ಅವನು ತನ್ನ ಕಾಲ ಮೇಲೆ ನಿಲ್ಲುವವರೆಗೂ ಮದುವೆಯೆಲ್ಲಾ ಬೇಡ ಎಂದು ಸುಮ್ಮನಿದ್ದೆವು. ಆಮೇಲೆ ಗೊತ್ತಾಯಿತು. ನಮ್ಮ ಮಗನಿಗೂ ಆಕೆಯ ಮೇಲೆ ಇಷ್ಟವಿಲ್ಲವೆಂದು. ‘ನನ್ನನ್ನು ಪ್ರೀತಿಸು’ ಎಂದು ರೇಖಾ ಅವನಿಗೆ ತುಂಬಾ ಹಿಂಸೆ ಕೊಡುತ್ತಿದ್ದಾಳೆ. ಅದನ್ನು ತಿರಸ್ಕರಿಸಿದಾಗಲೆಲ್ಲಾ, ‘ನಿನ್ನನ್ನು ನೋಡಿಕೊಳ್ಳುತ್ತೇನೆ, ಏನು ಮಾಡಬೇಕು ಎಂದು ನನಗೆ ಗೊತ್ತಿದೆ’ ಎಂದು ಗಲಾಟೆ ಮಾಡಿ ಹೋಗುತ್ತಾಳಂತೆ. ಅವಳೇ ಹೀಗೆ ಏನಾದರೂ...’

ಇಷ್ಟು ಹೇಳುತ್ತಿದ್ದಂತೆಯೇ, ನಾನು ‘ಗೊತ್ತಾಯಿತು ಬಿಡಿ’ ಎಂದು ಹೇಳಿ ಏನು ಮಾಡಬಹುದು ಎಂದು ಒಂದು ಕ್ಷಣ ಯೋಚಿಸಿದೆ. ನನಗೆ ತಕ್ಷಣ ನೆನಪಾಗಿದ್ದು ರೇಖಾ ಇರುವ ಪ್ರದೇಶದ ಕಾರ್ಪೊರೇಟರ್‌ ಲೋಕೇಶ್‌. ಆಗ ದಂಪತಿಗೆ ಸಮಾಧಾನಪಡಿಸಿ ‘ಹೆಚ್ಚಿನ ವಿವರ ಕಲೆ ಹಾಕುವೆ. ಏನಾದರೂ ಮಾಡಲು ಆಗುತ್ತದೆಯೇ ಎಂದು ಪರಿಶೀಲಿಸುತ್ತೇನೆ’ ಎಂದು ಧೈರ್ಯ ತುಂಬಿ ಕಳುಹಿಸಿದೆ.

ಲೋಕೇಶ್‌ ಅವರನ್ನು ಸಂಪರ್ಕಿಸಿ ಈ ವಿಷಯ ತಿಳಿಸಿದೆ. ಶಿವಶೇಖರನನ್ನು ಪೊಲೀಸರು ಹಿಡಿದುಕೊಂಡು ಹೋಗಿರುವುದರ ಹಿಂದೆ ರೇಖಾಳ ತಂದೆ ಪಳನಿಸ್ವಾಮಿ ಅವರದ್ದೇ ಕೈವಾಡ ಇದ್ದುದು ಲೋಕೇಶ್‌ ಅವರ ಮೂಲಕ ನನಗೆ ತಿಳಿಯಿತು. ‘ಶಿವಶೇಖರ ಎಂಬ ಯುವಕ ನನ್ನ ಮಗಳ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು ಪಳನಿಸ್ವಾಮಿ. ಠಾಣೆಯ ಕೆಳ ಹಂತದ ಪೊಲೀಸರೊಂದಿಗೆ ಶಾಮೀಲಾಗಿ ಈ ದೂರನ್ನು ಕೊಟ್ಟಿದ್ದರು. ಆದರೆ ಪೊಲೀಸರು ಅದುವರೆಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿರಲಿಲ್ಲ. ಹುಡುಗನನ್ನು ಹೆದರಿಸುವ ಸಲುವಾಗಿ ದೂರನ್ನು ನೀಡಿದ್ದರು. ಇಷ್ಟು ವಿಷಯ ನನಗೆ ತಿಳಿಯುತ್ತಲೇ, ಶಿವಶೇಖರನ ತಾಯಿಯ ಕೈಯಲ್ಲಿ ಹೈಕೋರ್ಟ್‌ಗೆ ಒಂದು ಹೇಬಿಯಸ್‌ ಕಾರ್ಪಸ್‌ ಅರ್ಜಿ ಹಾಕಿಸಿದೆ (ಕಾಣೆಯಾದ
ವರನ್ನು ಅಥವಾ ಅನಗತ್ಯವಾಗಿ ಪೊಲೀಸರು ಎಳೆದುಕೊಂಡು ಹೋದವರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಕೋರಿ ಸಲ್ಲಿಸುವ ಅರ್ಜಿ ಇದು).

ಬೆಳಿಗ್ಗೆ ಅರ್ಜಿ ದಾಖಲಿಸಿದೆ. ಇಂಥ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಕೋರ್ಟ್‌ ಅನ್ನು ಕೋರಿಕೊಂಡರೆ ಅದು ಮಾನ್ಯ ಮಾಡುವ ಕಾರಣ, ನಾನೂ ವಿನಂತಿಸಿಕೊಂಡೆ. ಅಂದೇ ಮಧ್ಯಾಹ್ನ 2.30ಕ್ಕೆ ಅರ್ಜಿಯು ವಿಚಾರಣೆಗೆ ಬಂತು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯ
ಮೂರ್ತಿಗಳು ಅಲ್ಲಿಯೇ ಹಾಜರಿದ್ದ ಸರ್ಕಾರಿ ವಕೀಲ ರಾಮಕೃಷ್ಣ ಅವರನ್ನು ಉದ್ದೇಶಿಸಿ, ಕೂಡಲೇ ಪ್ರಕರಣದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದರು.

ರಾಮಕೃಷ್ಣ ಅವರ ಬಗ್ಗೆ ಹೇಳಬೇಕೆಂದರೆ, ಅವರು ತುಂಬಾ ಪ್ರಾಮಾಣಿಕರಾದವರು. ಆತುರ ಸ್ವಭಾವದವರಾಗಿದ್ದರೂ ಏನು ಹೇಳಬೇಕೋ ಅದನ್ನು ನಿರ್ದಾಕ್ಷಿಣ್ಯವಾಗಿ ಹೇಳಿಬಿಡುತ್ತಿದ್ದರು. ಅವರ ಪ್ರಾಮಾಣಿಕತೆಯನ್ನು ಅರಿತಿದ್ದ ನಾನು, ಅವರು ಯಾವುದೇ ರೀತಿಯ ಪ್ರಲೋಭನೆಗೆ ಒಳಗಾಗದೇ ಈ ಪ್ರಕರಣದಲ್ಲಿನ ಸತ್ಯ ಹೊರಗೆ ತರುತ್ತಾರೆ ಎಂಬ ವಿಶ್ವಾಸದಲ್ಲಿ ಇದ್ದೆ.

ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಮೊದಲು ರಾಮಕೃಷ್ಣ ಅವರು ನನ್ನನ್ನು ಭೇಟಿ ಮಾಡಿದರು. ರೇಖಾಳ ತಂದೆ ಮಗಳ ಮೇಲಿನ ಮಮಕಾರದಿಂದ ಶಿವಶೇಖರನ ವಿರುದ್ಧ ಸುಳ್ಳು ಕೇಸು ದಾಖಲು ಮಾಡಿರುವುದಾಗಿ ಹೇಳಿದರು. ‘ನೀವು ಈಗ ಹೋಗಿ ಗಲಾಟೆ ಮಾಡಿ ರೇಖಾಳ ಕುಟುಂಬದವರ ವಿರುದ್ಧ ದೂರು ದಾಖಲಿಸಿದರೆ ಪ್ರಕರಣ ಬೇರೆ ರೂಪ ಪಡೆದುಕೊಳ್ಳುತ್ತದೆ. ಸುಖಾ ಸುಮ್ಮನೆ ಎರಡೂ ಕುಟುಂಬದವರು ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ. ಆದ್ದರಿಂದ ಇಬ್ಬರ ನಡುವೆ ರಾಜಿ ಮಾಡಿಸಿ ಕೇಸನ್ನು ಇಲ್ಲಿಯೇ ಮುಗಿಸುವುದು ಒಳ್ಳೆಯದು ಎಂದು ನನಗೆ ತೋರುತ್ತದೆ. ಏನು ಮಾಡುತ್ತಿರೋ ನೋಡಿ...’ ಎಂದರು.

ಪ್ರಕರಣ ವಿಚಾರಣೆಗೆ ಬಂತು. ಇರುವ ವಿಷಯವನ್ನು ಕೋರ್ಟ್‌ ಮುಂದೆ ತಿಳಿಸಿದೆ. ರೇಖಾಳ ತಂದೆ-ತಾಯಿಯನ್ನು ನ್ಯಾಯಮೂರ್ತಿಗಳು ಕೋರ್ಟ್‌ಗೆ ಕರೆಸಿ ಛೀಮಾರಿ ಹಾಕಿದರು. ಪೊಲೀಸರು ಶಿವಶೇಖರನನ್ನು ಕರೆದುಕೊಂಡು ಬಂದರು. ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದರು. ಶಿವಶೇಖರ ಹಾಗೂ ಅವರ ಪೋಷಕರ ಬಳಿ ರೇಖಾಳ ಪೋಷಕರು ಕ್ಷಮೆ ಕೋರಿದರು. ಒಟ್ಟಿನಲ್ಲಿ, ಸರ್ಕಾರಿ ವಕೀಲ ರಾಮಕೃಷ್ಣ ಅವರ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಆ ಪ್ರಕರಣ ಅಲ್ಲಿ ಸುಖಾಂತ್ಯವಾಯಿತು.
ವಿಚಾರಣೆ ಮುಗಿದಾಗ ಸಂಜೆ 4 ಗಂಟೆಯಾಗಿತ್ತು.

***

ಅದೇ ಸಂಜೆ 5 ಗಂಟೆಯ ಸಮಯ. ನಾನು ಕಚೇರಿಯಲ್ಲಿದ್ದೆ. ಮರುದಿನದ ಕೇಸುಗಳ ದಾಖಲೆಗಳನ್ನು ನೋಡುತ್ತಿದ್ದೆ. ನನ್ನ ಕಿರಿಯ ಸಹೊದ್ಯೋಗಿಗಳಾಗಲಿ, ಕಕ್ಷಿದಾರರಾಗಲಿ ಯಾರೂ ಇರಲಿಲ್ಲ. ಆಗ ರಾಮಕೃಷ್ಣ ಅವರು ಕಚೇರಿಗೆ ಬಂದರು.

‘ಇದೇ ದಾರಿಯಲ್ಲಿರುವ ನನ್ನ ಮನೆಗೆ ಹೋಗುತ್ತಿದ್ದೆ. ನಿಮ್ಮ ಕಚೇರಿ ಓಪನ್‌ ಆಗಿರು
ವುದನ್ನು ನೋಡಿ ಸುಮ್ಮನೇ ಮಾತಾಡಿಕೊಂಡು ಹೋಗುವ ಎಂದು ಬಂದೆ’ ಎಂದರು. ನಾವು ಇದೇ ಪ್ರಕರಣದ ಬಗ್ಗೆ ಒಂದಿಷ್ಟು ಮಾತನಾಡಿದೆವು. ತಾವು ಪೊಲೀಸರ ಬಾಯಿ ಹೇಗೆ ಬಿಡಿಸಿದೆ ಎಂಬ ಬಗ್ಗೆ ಅವರು ವಿವರಿಸುತ್ತಿದ್ದರು. ಹಾಗೆಯೇ ಮಾತನಾಡುತ್ತಾ ನನ್ನ ಟೇಬಲ್‌ ಮೇಲೆ ಇದ್ದ ವಿಸಿಟಿಂಗ್‌ ಕಾರ್ಡ್‌ ಅನ್ನು ಕೈಗೆತ್ತಿಕೊಂಡು ಜೇಬಿಗೆ ಹಾಕಿಕೊಂಡದ್ದನ್ನು ನಾನು ಗಮನಿಸಿದೆ.

ಅದೂ ಇದೂ ಮಾತನಾಡುತ್ತಾ ಅವರು ‘ನಾನು ಪರ್ಸ್‌ ತರುವುದನ್ನು ಮರೆತಿದ್ದೇನೆ. ನನಗೆ ಎರಡು ಸಾವಿರ ರೂಪಾಯಿ ಇದ್ದರೆ ಬೇಕಿತ್ತು’ ಎಂದು ಕೇಳಿದರು. ನನಗೇನೋ ಒಂದು ರೀತಿಯಲ್ಲಿ ಮುಜುಗರ ಆಯಿತು. ಈ ಪ್ರಕರಣದಲ್ಲಿ ತಾವು ಮಾಡಿದ ಸಹಾಯಕ್ಕೆ ಈ ರೀತಿಯಾಗಿ ಏನಾದರೂ ‘ಎಕ್ಸ್‌ಪೆಕ್ಟ್‌’ ಮಾಡುತ್ತಿದ್ದಾರಾ ಎಂದು ಒಂದು ಕ್ಷಣ ಯೋಚನೆ ಬಂತು. ಅವರ ಪ್ರಾಮಾಣಿಕತೆ ನನ್ನ ಕಣ್ಣೆದುರು ಬಂದರೂ, ಎರಡು ಸಾವಿರ ರೂಪಾಯಿ... ಎಂದುಕೊಂಡೆ. ಆದರೆ ಇರಲಿ ಬಿಡು, ಏನೋ ಕೇಳುತ್ತಿದ್ದಾರಲ್ಲ, ಕೊಡೋಣ. ಪ್ರಾಮಾಣಿಕ ವ್ಯಕ್ತಿ ಎಂದುಕೊಂಡು ಎರಡು ಮಾತನಾಡದೇ ದುಡ್ಡು ಕೊಟ್ಟೆ. ಮಾರನೆಯ ದಿನ ಹಿಂದಿರುಗಿಸುವುದಾಗಿ ಹೇಳಿದ ಅವರು, ಧನ್ಯವಾದ ಹೇಳಿ ಹೊರಟುಹೋದರು.

ನನ್ನ ಕೆಲಸ ಮುಂದುವರಿಸಿದೆ. ರಾತ್ರಿ ಸುಮಾರು ಎಂಟು ಗಂಟೆ ಆಯಿತು. ಕಚೇರಿಯಲ್ಲಿಯೇ ಇದ್ದೆ. ಮಳೆ ಅಬ್ಬರಿಸುತ್ತಿತ್ತು. ಆಗ ನನ್ನ ಸ್ನೇಹಿತನೂ ಆದ ಕಕ್ಷಿದಾರನೊಬ್ಬ ಕಚೇರಿಗೆ ಬಂದ. ‘ನಿಮ್ಮೊಂದಿಗೆ ಪ್ರತ್ಯೇಕವಾಗಿ ಮಾತನಾಡಬೇಕು. ನನ್ನ ಕಾರಿನಲ್ಲಿಯೇ ಮಾತನಾಡುತ್ತಾ ಹೋಗೋಣ. ಹಾಗೆಯೇ ನಿಮ್ಮನ್ನು ಮನೆಗೆ ಡ್ರಾಪ್‌ ಮಾಡುತ್ತೇನೆ. ನಿಮ್ಮ ಕಾರನ್ನು ತೆಗೆದುಕೊಂಡು ಹೋಗಲು ಡ್ರೈವರ್‌ಗೆ ಹೇಳಿ’ ಎಂದ. ನಾನು ಅವನ ಜೊತೆ ಹರಟುತ್ತಾ ಹೊರಟೆ.

ಕಾವೇರಿ ಚಿತ್ರಮಂದಿರದ ಬಳಿ ಬರುವಷ್ಟರಲ್ಲಿ ರಾಜಾಜಿನಗರದ ಪೊಲೀಸ್‌ ಕಾನ್‌ಸ್ಟೆಬಲ್‌ ರಂಗಸ್ವಾಮಿ ನನಗೆ ಕರೆ ಮಾಡಿದರು. ತಮ್ಮನ್ನು ಪರಿಚಯಿಸಿಕೊಂಡ ಅವರು, ‘ಸರ್‌ ಇಲ್ಲಿ ಸ್ಕೂಟರ್‌ ಅಪಘಾತವಾಗಿ, ಸವಾರ ಸತ್ತು ಹೋಗಿದ್ದಾರೆ. ಅವರ ಜೇಬಿನಲ್ಲಿ ನಿಮ್ಮ ವಿಸಿಟಿಂಗ್‌ ಕಾರ್ಡ್‌ ಇತ್ತು. ಅದಕ್ಕಾಗಿ ಕರೆ ಮಾಡುತ್ತಿದ್ದೇವೆ. ದಯವಿಟ್ಟು ಇಲ್ಲಿಗೆ ಬನ್ನಿ. ಶವವನ್ನು ಗುರುತಿಸಿ’ ಎಂದರು. ಒಂದು ಕ್ಷಣ ನಾನು ವಿಚಲಿತನಾದೆ. ದಿಗಿಲುಗೊಂಡು ಯಾರಿರಬಹುದು ಎಂದು ಯೋಚಿಸಿದೆ.

ತಕ್ಷಣ ನನಗೆ ಕೆಲ ಗಂಟೆಗಳ ಹಿಂದಷ್ಟೇ ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಹೋಗಿದ್ದ ರಾಮಕೃಷ್ಣ ಅವರ ಚಿತ್ರ ಕಣ್ಣೆದುರಿಗೆ ಬಂತು. ದೇವರೇ ಅವರು ಆಗದಿರಲಪ್ಪ ಎಂದುಕೊಳ್ಳುತ್ತಾ ಆತಂಕದಲ್ಲಿ ಸ್ಥಳಕ್ಕೆ ಧಾವಿಸಿದೆ. ಮಳೆ ಇನ್ನೂ ನಿಂತಿರಲಿಲ್ಲ. ಸ್ಕೂಟರ್ ಉಲ್ಟಾ ಆಗಿ ಬಿದ್ದಿತ್ತು. ಪಕ್ಕದಲ್ಲಿಯೇ ರಕ್ತದ ಮಡುವಿನಲ್ಲಿ ಶವ ಬಿದ್ದಿತ್ತು. ಮಳೆಯ ನೀರು ಕೆಂಪಾಗಿ ಹರಿಯುತ್ತಿತ್ತು. ಸಮೀಪದಲ್ಲಿಯೇ ಗಿಫ್ಟ್‌ ಪ್ಯಾಕ್‌ಗಳು ಬಿದ್ದಿದ್ದವು. ಮೃತ ವ್ಯಕ್ತಿ ರಾಮಕೃಷ್ಣ ಆಗದಿರಲಪ್ಪ ಎಂದು ದೇವರನ್ನು ನೆನೆಯುತ್ತಲೇ ನೋಡಿದೆ. ಆದರೆ ಅವರು ರಾಮಕೃಷ್ಣ ಅವರೇ ಆಗಿದ್ದರು. ದುಖಃ ಉಮ್ಮಳಿಸಿ ಬಂತು.

ಮಳೆ ಸುರಿಯುತ್ತಿದ್ದುದರಿಂದ ಯಾರೂ ನೆರವಿಗೆ ಬರಲಿಲ್ಲ. ಕಾನ್‌ಸ್ಟೆಬಲ್‌ ರಂಗಸ್ವಾಮಿ, ನಾನು ಮತ್ತು ನನ್ನ ಸ್ನೇಹಿತ ಮೂವರೂಸೇರಿ ಶವವನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗೊಣ ಎಂದುಕೊಂಡರೆ ಯಾರೂಅದಕ್ಕೆ ತಯಾರು ಆಗಲಿಲ್ಲ. ರಕ್ತಸಿಕ್ತವಾಗಿದ್ದ ಶವವನ್ನು ಕಾರಿನಲ್ಲಿ ಹಾಕಿಕೊಳ್ಳಲು ನನ್ನ ಸ್ನೇಹಿತ ಕೂಡ ಹಿಂಜರಿದ. ಆದರೂ ಅವನ ಮನವೊಲಿಸಿ ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋದೆ.

ರಾಮಕೃಷ್ಣ ಅವರ ಮನೆಯವರ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಅವರು ಇನ್ನೂ ಜೀವಂತ ಇರಬಹುದು ಎಂಬ ಒಂದೇ ಆಸೆ ನನಗಿತ್ತು. ಆದ್ದರಿಂದ ಆ ವ್ಯಕ್ತಿಯ ವಾರಸುದಾರ ನಾನೇ ಎಂದು ಹೇಳಿ ಅವರನ್ನು ಅಡ್ಮಿಟ್‌ ಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ಮುಗಿಸಿದೆ. ನಂತರ ವೈದ್ಯರು ಅವರು ಸತ್ತಿರುವುದಾಗಿ ಘೋಷಿಸಿ ಶವವನ್ನು ವಾಪಸು ತೆಗೆದುಕೊಂಡು ಹೋಗುವಂತೆ ಹೇಳಿದರು. ಮನೆಯವರನ್ನು ಹೇಗೆ ಸಂಪರ್ಕಿಸುವುದು ಎಂದು ಗೊಂದಲಗೊಂಡ ನಾನು ಕೊನೆಗೆ ಒಂದಿಷ್ಟು ವಕೀಲರನ್ನು ಸಂಪರ್ಕಿಸಿದೆ. ಆಗ ನನಗೆ ರಾಮಕೃಷ್ಣ ಅವರು ಮಧುಸೂದನ ನಾಯ್ಕ (ಈಗಿನ ಅಡ್ವೊಕೇಟ್‌ ಜನರಲ್‌) ಅವರ ಬಳಿ ಕೆಲಸ ಮಾಡಿದ ವಿಷಯ ತಿಳಿಯಿತು. ನಾಯ್ಕ ಅವರನ್ನು ಸಂಪರ್ಕಿಸಿದಾಗ ರಾಮಕೃಷ್ಣ ಅವರ ಮಾಹಿತಿ ಲಭ್ಯವಾಯಿತು. ಮೃತದೇಹವನ್ನು ರಾಮಕೃಷ್ಣ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ಮುಖ್ಯಸ್ಥರಾದ ಡಾ.ರಾಮು ಅವರು ಇದರ ಯಾವುದೇ ಖರ್ಚನ್ನು ಪಡೆದುಕೊಳ್ಳದೇ ಶವವನ್ನು ಸಾಗಿಸುವ ವ್ಯವಸ್ಥೆ ಮಾಡಿಕೊಟ್ಟರು.

ವಿಧಿಯಾಟ ನೋಡಿ. ಅಂದು ರಾಮಕೃಷ್ಣ ಅವರ ಮಗಳ ಹುಟ್ಟುಹಬ್ಬವಾಗಿತ್ತು. ರಾಮಕೃಷ್ಣ ಅವರ ಹೆಂಡತಿ ಗೀತಾ, ರಾಮಕೃಷ್ಣ ಅವರ ಶವವನ್ನು ಒಯ್ದಿದ್ದ ಆಸ್ಪತ್ರೆಯಲ್ಲಿಯೇ ವೈದ್ಯೆ ಆಗಿದ್ದರು. ಅಂದು ಮಗಳ ಹುಟ್ಟುಹಬ್ಬ ಇದ್ದುದರಿಂದ ರಾತ್ರಿಪಾಳಿಯ ಕೆಲಸದಿಂದ ವಿನಾಯಿತಿ ಪಡೆದು ಮನೆಗೆ ಹೋಗಿದ್ದರು. ಆ ಸಮಯಕ್ಕೆ ಸರಿಯಾಗಿ ರಾಮಕೃಷ್ಣ ಅವರ ಶವ ಆಸ್ಪತ್ರೆ ತಲುಪಿತ್ತು! ಮಗಳ ಹುಟ್ಟುಹಬ್ಬಕ್ಕೆಂದು ಉಡುಗೊರೆ ಖರೀದಿಗೆ ರಾಮಕೃಷ್ಣ ಅವರು ನನ್ನ ಬಳಿ ಹಣ ಪಡೆದಿದ್ದರು. ಮಗಳ ಹುಟ್ಟುಹಬ್ಬ ಎಂದು ಹೇಳಿದರೆ ಹಣವನ್ನು ನಾನು ವಾಪಸ್‌ ಪಡೆದುಕೊಳ್ಳುವುದಿಲ್ಲ ಎಂಬುದಕ್ಕೋ ಏನೋ ಅದನ್ನೂ ನನ್ನಿಂದ ಮುಚ್ಚಿಟ್ಟಿದ್ದರು. ನನ್ನ ಕಚೇರಿಯ ಬಳಿಯೇ ಇದ್ದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಹೆಂಡತಿಯ ಬಳಿ ಹಣ ಪಡೆಯಲು ಮುಜುಗರವಾಗಿಯೋ ಏನೋ ನನ್ನ ಬಳಿ ಹಣ ಪಡೆದು ಮಗಳಿಗೆ ಉಡುಗೊರೆ ಕೊಡಲು ಮುಂದಾಗಿದ್ದ ರಾಮಕೃಷ್ಣ ಅವರು ಶವವಾಗಿ ಮನೆಗೆ ಹೋದರು...!

ಬೆಳಿಗ್ಗೆಯಷ್ಟೇ ಹುಡುಗ-ಹುಡುಗಿಯ ಪ್ರಕರಣ
ವನ್ನು ಸುಖಾಂತ್ಯಗೊಳಿಸಿದ ಈ ಪ್ರಾಮಾಣಿಕ ವ್ಯಕ್ತಿ, ದಿನಾಂತ್ಯದಲ್ಲಿ ಇಹಲೋಕದ ಪಯಣ ಮುಗಿಸಿದ್ದರು, ಅದೇ ದಿನ ಅವರು ನನ್ನ ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಹೋದದ್ದು, ಅದನ್ನು ನೋಡಿ ಕಾನ್‌ಸ್ಟೆಬಲ್‌ ನನಗೆ ಕರೆ ಮಾಡಿದ್ದು... ಎಲ್ಲವೂ ವಿಚಿತ್ರ ಎನಿಸುತ್ತದೆ. ಹಾಗೆನೇ, ಈ ಅಪಘಾತಕ್ಕೆ ನಾನು ನೀಡಿದ ಹಣ ಕಾರಣವಾಯಿತೇ ಎನ್ನುವ ನೋವು ನನ್ನನ್ನು ಇಂದಿಗೂ ಕಾಡುತ್ತಿದೆ...

ಲೇಖಕರು ಹೈಕೋರ್ಟ್‌ ವಕೀಲರು

(ಹುಡುಗ-ಹುಡುಗಿ ಪ್ರಕರಣದ ಹೆಸರು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT