ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ರಾಜಕಾರಣಕ್ಕೆ ಪುರೋಹಿತ್ ಬಲಿಪಶು?

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅತ್ಯಂತ ಹೀನವಾದ ಭಯೋತ್ಪಾದನೆ ಕೃತ್ಯದ ಆರೋಪದಲ್ಲಿ ಕೆಲವು ವ್ಯಕ್ತಿಗಳನ್ನು ವರ್ಷಾನುಗಟ್ಟಲೆ ಜೈಲಿನಲ್ಲಿ ಇರಿಸುವುದು ಮತ್ತು ಸರ್ಕಾರ ಬದಲಾದ ಬಳಿಕ ಅವರು ದೇಶದ್ರೋಹಿಗಳಲ್ಲ, ದೇಶಪ್ರೇಮದ ಹೀರೊಗಳು ಮತ್ತು ಆ ವರೆಗೆ ಹೀರೊಗಳಾಗಿದ್ದವರು ಕಪಟಿಗಳು ಎಂದು ಬಿಂಬಿಸುವ ಮಾಯಾಜಾಲ ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯವೇನೋ.

2008ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾದ ಲೆ.ಕ. ಶ್ರೀಕಾಂತ್ ಪ್ರಸಾದ್ ಪುರೋಹಿತ್ 2017ರ ಆಗಸ್ಟ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶ್ರೀಕಾಂತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಎಂಟು ಮಂದಿಯ ವಿರುದ್ಧ ಮಾಲೇಗಾಂವ್‍ನಲ್ಲಿ ಸ್ಫೋಟ ನಡೆಸಿದ ಆರೋಪ ಇದೆ.

ಮಾಲೇಗಾಂವ್ ಸ್ಫೋಟದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಮಹಾರಾಷ್ಟ್ರ ಭಯೋತ್ಪಾದನಾ ತಡೆ ಘಟಕ (ಎಟಿಎಸ್). 2008ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಈ ತನಿಖೆ ವೇಳೆ ಎಟಿಎಸ್ ಮುಖ್ಯಸ್ಥರಾಗಿದ್ದರು. ಬಳಿಕ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‍ಐಎ) ವಹಿಸಲಾಯಿತು.

ಎಟಿಎಸ್ ಮತ್ತು ಎನ್‍ಐಎ ಎರಡು ಪ್ರತ್ಯೇಕ ಆರೋಪಪಟ್ಟಿಗಳನ್ನು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಲ್ಲಿಸಿವೆ. ಎಟಿಎಸ್ ಸಲ್ಲಿಸಿದ ಆರೋಪಪಟ್ಟಿ ಮತ್ತು ಎನ್‍ಐಎ ಸಲ್ಲಿಸಿದ ಆರೋಪಪಟ್ಟಿಗೆ ಯಾವ ತಾಳಮೇಳವೂ ಇಲ್ಲ. ಪುರೋಹಿತ್ ವಿರುದ್ಧ ಎಟಿಎಸ್ ಬಲವಂತದಿಂದ ಸುಳ್ಳು ಸಾಕ್ಷಿ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು ಎಂದು ಎನ್‍ಐಎ ಆರೋಪಪಟ್ಟಿ ಹೇಳುತ್ತದೆ.

ಸಾಧ್ವಿ ಪ್ರಜ್ಞಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತು. ಆದರೆ ಪುರೋಹಿತ್‍ಗೆ ನಿರಾಕರಿಸಿತು. ಬಳಿಕ ಸುಪ್ರೀಂಕೋರ್ಟ್ ಜಾಮೀನು ನೀಡಿ ಅವರು ಬಿಡುಗಡೆಯಾದರು. ಪುರೋಹಿತ್ ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಕೇಂದ್ರದಿಂದ ಉತ್ತೀರ್ಣರಾಗಿ ಮರಾಠಾ ಲಘು ಪದಾತಿ ದಳ ಸೇರಿದ್ದು 1994ರಲ್ಲಿ.

2002ರಿಂದ 2005ರ ನಡುವಣ ಅವಧಿಯಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಗುಪ್ತಚರ ಕಾರ್ಯಾಚರಣೆಯ ಭಾಗವಾಗಿದ್ದರು. ಗಡಿಯಲ್ಲಿ ಶತ್ರುವನ್ನು ಗುರುತಿಸುವ ಎಂಐ-25 ಎಂಬ ಮಹತ್ವಾಕಾಂಕ್ಷೆಯ ಕಾರ್ಯಾಚರಣೆ ಅದು.

ಪುರೋಹಿತ್ ಅವರು ಹುಟ್ಟಿದ್ದು ಪುಣೆಯ ಸುಸಂಸ್ಕೃತ ಕುಟುಂಬದಲ್ಲಿ. ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. ನೆರೆಯವರ ಪ್ರಕಾರ, ಪುರೋಹಿತ್ ಮೃದು ಮಾತಿನ ಉತ್ಸಾಹಿ ಯುವಕ. ಅವರು ಕಠಿಣ ಶ್ರಮಕ್ಕೆ ಹೆಸರಾದ, ಅಪಾರ ದೇಶಪ್ರೇಮದ, ಪ್ರತಿಭಾವಂತ ಅಧಿಕಾರಿ ಎಂದು ಅವರ ಮೇಲಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

2005ರ ಬಳಿಕ ಪುರೋಹಿತ್ ಅವರನ್ನು ನಾಸಿಕ್‍ನ ದೇವಲಲಿಯಲ್ಲಿ ನಿಯೋಜಿಸಲಾಗುತ್ತದೆ. ‘ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಅವರನ್ನು ಅಲ್ಲಿ ಪುರೋಹಿತ್ ಭೇಟಿಯಾಗುತ್ತಾರೆ. ಮಾಲೇಗಾಂವ್ ಸ್ಫೋಟ ನಡೆಸಿದೆ ಎಂದು ಹೇಳಲಾಗುವ ಅಭಿನವ ಭಾರತ ಸಂಘಟನೆ ಕಟ್ಟಿದವರು ಈ ಉಪಾಧ್ಯಾಯ. ಅವರಿಂದಾಗಿಯೇ ಪುರೋಹಿತ್ ಅದರೊಳಕ್ಕೆ ಸೇರಿಕೊಳ್ಳುತ್ತಾರೆ’ ಎಂದು ಎಟಿಎಸ್ ಆರೋಪಪಟ್ಟಿ ಹೇಳುತ್ತದೆ. ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪದಲ್ಲಿ ಉಪಾಧ್ಯಾಯ ಅವರೂ ಜೈಲಿನಲ್ಲಿದ್ದಾರೆ.

ಒಂದು ಸರ್ಕಾರದ ಅವಧಿಯಲ್ಲಿ ಕಪ್ಪಾದದ್ದು, ಮತ್ತೊಂದು ಸರ್ಕಾರದ ಆಡಳಿತದಲ್ಲಿ ಬಿಳಿಯಾದದ್ದರ ವೃತ್ತಾಂತವಾಗಿಯೂ ಮಾಲೇಗಾಂವ್ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ‘ಕೇಸರಿ ಭಯೋತ್ಪಾದನೆ’ ಎಂದು ಯುಪಿಎ ಸರ್ಕಾರ ಅಂಟಿಸಿದ್ದ ಹಣೆಪಟ್ಟಿ ಈಗ ನಿಧಾನವಾಗಿ ಕಳಚಿಬೀಳುತ್ತಿದೆ.

ಸರಿ ಭಯೋತ್ಪಾದನೆಯ ಪರಿಕಲ್ಪನೆ ಮುಖ್ಯವಾಹಿನಿಯ ಚರ್ಚೆಯ ವಿಷಯವಾದದ್ದು 2010ರಲ್ಲಿ. ಆಗ ಗೃಹ ಸಚಿವರಾಗಿದ್ದ ಚಿದಂಬರಂ ಅವರು ಗುಪ್ತಚರ ಅಧಿಕಾರಿಗಳ ಸಭೆಯಲ್ಲಿ ಮೊದಲ ಬಾರಿಗೆ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಬಳಸಿದ್ದರು. ಇದಕ್ಕೆ ಪ್ರತಿಯಾಗಿ, ಆಗ ಗುಜರಾತ್

ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ‘ಭಗವಾ ಗೌರವ ಆಂದೋಲನ’ ಎಂಬ ಅಭಿಯಾನವನ್ನೇ ನಡೆಸಿದ್ದರು. ಭಾರತಕ್ಕೆ ಹಿಂದೂ ಭಯೋತ್ಪಾದನೆಯ ಅಪಾಯ ಇದೆ ಎಂಬ ವಿಚಾರವನ್ನು ಭಾರತದಲ್ಲಿದ್ದ ಅಮೆರಿಕದ ರಾಯಭಾರಿಯ ಜತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಚರ್ಚಿಸಿದ್ದರು ಎಂಬ ವಿಚಾರ ವಿಕಿಲೀಕ್ಸ್ ಕೇಬಲ್ ಸೋರಿಕೆಯಲ್ಲಿ ಬಹಿರಂಗವಾಗಿದೆ.

2013ರಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರೂ ‘ಕೇಸರಿ ಭಯೋತ್ಪಾದನೆ’ಯ ಬಗ್ಗೆ ಹೇಳಿಕೆ ನೀಡಿದ್ದರು. ಬಿಜೆಪಿಯ ಭಾರಿ ಪ್ರತಿರೋಧದಿಂದ ಆ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆಯಬೇಕಾಯಿತು. ಆದರೆ, ಎನ್‍ಐಎ ತನಿಖಾ ವರದಿಗಳ ಆಧಾರದಲ್ಲಿಯೇ ಶಿಂಧೆ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಆಗ ಗೃಹ ಕಾರ್ಯದರ್ಶಿಯಾಗಿದ್ದ, ಈಗ ಬಿಜೆಪಿ ಸಂಸದರಾಗಿರುವ ಆರ್.ಕೆ ಸಿಂಗ್ ಸಮರ್ಥಿಸಿಕೊಂಡಿದ್ದರು.

ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಆರೋಪಿ ಸ್ವಾಮಿ ಅಸೀಮಾನಂದ ವಿರುದ್ಧ ಇರುವ ಭಯೋತ್ಪಾದನೆ ಆರೋಪಗಳನ್ನು ಕೈಬಿಡಲು ಎನ್‍ಐಎ ಈಗ ಮುಂದಾಗಿದೆ. ಮಾಲೇಗಾಂವ್ ಪ್ರಕರಣದ ಆರೋಪಿಗಳ ವಿರುದ್ಧ ಹಾಕಲಾಗಿದ್ದ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ) ಆರೋಪಗಳನ್ನು ಕೈಬಿಡಲಾಗಿದೆ. ಅದಕ್ಕೂ ಹಿಂದೆ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲ್ಯಾನ್ ಅವರನ್ನು ಬದಲಾಯಿಸಲಾಗಿತ್ತು. ‘ಆರೋಪಿಗಳ ಬಗ್ಗೆ ಮೃದು ಧೋರಣೆ ತಳೆಯುವಂತೆ ನನಗೆ ಸೂಚಿಸಲಾಗಿತ್ತು. ಅದು ಸಾಧ್ಯವಿಲ್ಲ ಎಂದದ್ದಕ್ಕೆ ನನ್ನನ್ನು ತೆಗೆದು ಹಾಕಲಾಗಿದೆ’ ಎಂದು 2014ರಲ್ಲಿ ಸಾಲ್ಯಾನ್ ಆರೋಪಿಸಿದ್ದರು.

ಗುಪ್ತಚರ ಕೆಲಸದ ಭಾಗವಾಗಿ ತಾನು ಅಭಿನವ ಭಾರತ ಸಂಘಟನೆಯೊಳಗೆ ‘ನುಸುಳಿದ್ದೆ’ ಎಂಬುದು ಪುರೋಹಿತ್ ಅವರು ಮುಂದಿಡುತ್ತಿರುವ ಅತ್ಯಂತ ಬಲವಾದ ಸಮರ್ಥನೆ. ಅಭಿನವ ಭಾರತ ಸಂಘಟನೆಯ ಚಟುವಟಿಕೆಗಳ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಹಿಂದಿನ ಯುಪಿಎ ಸರ್ಕಾರ ಇದ್ದಾಗ ಸೇನಾ ಗುಪ್ತಚರ ವಿಭಾಗದ ಮಹಾ ನಿರ್ದೇಶಕರು ಸಿದ್ಧಪಡಿಸಿದ್ದ ವರದಿ ಬೇರೆಯೇ ಕತೆ ಹೇಳುತ್ತದೆ.

ಮಾಲೇಗಾಂವ್ ಸ್ಫೋಟದ ಬಗ್ಗೆ ಎಟಿಎಸ್‍ಗೆ ಖಚಿತ ಮಾಹಿತಿ ದೊರೆತ ಬಳಿಕವಷ್ಟೇ ‘ಪ್ರಜ್ಞಾ ಅವರು ಸ್ಫೋಟದಲ್ಲಿ ಭಾಗಿಯಾಗಿದ್ದರು’ ಎಂಬ ಮಾಹಿತಿಯನ್ನು ಪುರೋಹಿತ್ ಸೇನೆಗೆ ತಿಳಿಸಿದ್ದಾರೆ ಎಂದು ಈ ವರದಿ ಹೇಳುತ್ತದೆ (ಮುಖ್ಯವಾಹಿನಿಯ ಹೆಚ್ಚಿನ ಪತ್ರಿಕೆಗಳಲ್ಲಿ ಈ ವರದಿ ಪ್ರಕಟವಾಗಿದೆ).

ವರದಿಯ ಅಂಶಗಳು ಹೀಗಿವೆ: ‘ಪ್ರಜ್ಞಾ ಮತ್ತು ಉಪಾಧ್ಯಾಯ ಅವರಿಗೆ ಪುರೋಹಿತ್ ಅವರು ಕರೆ ಮಾಡಿ ಎಚ್ಚರಿಕೆಯಿಂದ ಇರುವಂತೆ ಮತ್ತು ಸಿಮ್ ಬದಲಾಯಿಸುವಂತೆ ಸೂಚಿಸಿದ್ದರು. ಅಭಿನವ ಭಾರತದೊಳಕ್ಕೆ ಅವರು ಗುಪ್ತಚರ ಕೆಲಸದ ಭಾಗವಾಗಿ ‘ನುಸುಳಿದ್ದರು’ ಎಂಬುದು ಕತೆಯ ಒಂದು ಭಾಗ ಮಾತ್ರ.

‘ಇಸ್ಲಾಂ ಬಗ್ಗೆ ನನ್ನ ಗಂಡನಿಗೆ ಗಾಢ ದ್ವೇಷ ಇದೆ. ಹಾಗಾಗಿ ಮುಸ್ಲಿಮರ ವಿರುದ್ಧದ ಚಟುವಟಿಕೆಯಲ್ಲಿ ಅವರು ನೇರವಾಗಿ ಭಾಗಿಯಾಗಿರಬಹುದು’ ಎಂದು ಪುರೋಹಿತ್ ಪತ್ನಿ ಹೇಳಿದ್ದಾರೆ. ಸೇನೆಯು ನೀಡಿದ್ದ ಬಂದೂಕನ್ನು ಪುರೋಹಿತ್ ಮಾರಿದ್ದಾರೆ ಮತ್ತು ಅದರ ಬದಲಿಗೆ ಸೇನೆಯಿಂದ ಬೇರೊಂದು ಬಂದೂಕು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಲೇಗಾಂವ್ ಸ್ಫೋಟಕ್ಕಾಗಿ ಬಾಂಬ್ ತಯಾರಿಸುವ ಸ್ಥಳದಲ್ಲಿ ಪುರೋಹಿತ್ ಇದ್ದರು’.

ಪುರೋಹಿತ್ ಅವರನ್ನು ವಜಾ ಮಾಡುವಂತೆ ಸ್ಫೋಟದ ಬಳಿಕ ಸೇನಾ ನ್ಯಾಯಾಲಯ ಶಿಫಾರಸು ಮಾಡಿತ್ತು. ಆದರೆ ಈ ಆದೇಶವನ್ನು ರದ್ದು ಮಾಡುವಂತೆ ಪುರೋಹಿತ್ ಅವರು ಸೇನೆಯ ಮೇಲ್ಮನವಿ ನ್ಯಾಯಮಂಡಳಿಯನ್ನು ಕೋರಿದ್ದಾರೆ. ಜಾಮೀನಿನಲ್ಲಿ ಬಿಡುಗಡೆಯಾಗಿರುವ ಅವರಿಗೆ ಮತ್ತೆ ಸೇನಾ ಸಮವಸ್ತ್ರ ನೀಡಲಾಗಿದೆ.

ಇಡೀ ಪ್ರಕರಣದಲ್ಲಿ ಹಲವು ವಿರೋಧಾಭಾಸಗಳಿವೆ. ಸ್ಫೋಟದ ಪ್ರಮುಖ ಆರೋಪಿ ಪ್ರಜ್ಞಾ ವಿರುದ್ಧದ ಆರೋಪಗಳನ್ನು ಕೈಬಿಡಲು ಸಿದ್ಧತೆ ನಡೆದಿದೆ. ಅದೇ ಹಾದಿಯಲ್ಲಿ ಪುರೋಹಿತ್ ವಿರುದ್ಧದ ಆರೋಪಗಳೂ ಇವೆ. ಆದರೆ ಸ್ಫೋಟದಲ್ಲಿ ಪ್ರಜ್ಞಾ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸೇನೆಗೆ ನೀಡಿದವರು ಇದೇ ಪುರೋಹಿತ್. ಹಾಗಾಗಿ ಇಬ್ಬರೂ ಪ್ರಾಮಾಣಿಕರಾಗಿಲು ಸಾಧ್ಯವಿಲ್ಲ ಎಂಬುದು ತರ್ಕ ಮಾತ್ರ.

ಭಾರತದಲ್ಲಿ ಮಾನವ ಹಕ್ಕುಗಳಿಗೆ ದೊಡ್ಡ ಬೆಲೆಯೇನೂ ಇಲ್ಲ ಎಂಬುದು ಮಾಲೇಗಾಂವ್ ಮತ್ತು ಅಂತಹ ಹಲವು ಸ್ಫೋಟಗಳಲ್ಲಿ ಸತ್ತವರ ಕುಟುಂಬದವರು, ಗಾಯಗೊಂಡವರು ಮತ್ತು ಸ್ಫೋಟದ ಆರೋಪ ಹೊತ್ತು ಜೈಲು ಸೇರಿದವರಿಗೆ ಚೆನ್ನಾಗಿ ಗೊತ್ತಿದೆ. 2005ರಲ್ಲಿ ಹೈದರಾಬಾದ್ ಸ್ಫೋಟ ಪ್ರಕರಣದ ಆರೋಪಿಗಳೆಂದು 12 ವರ್ಷ ಜೈಲಿನಲ್ಲಿದ್ದ 10 ಮಂದಿ ನಿರ್ದೋಷಿಗಳು ಎಂದು ಅಲ್ಲಿನ ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದೆ. ಆದರೆ ಅವರಲ್ಲಿ ಇಬ್ಬರ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಸ್ಫೋಟವೊಂದರ ಆರೋಪ ಇನ್ನೂ ಇದೆ.

ಎಂ.ಎ. ಅಂತಿಮ ವರ್ಷದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಕಾಶ್ಮೀರದ ಮುಹಮ್ಮದ್ ರಫೀಕ್ ಶಾ ಅವರನ್ನು ಸ್ಫೋಟ ಆರೋಪದಲ್ಲಿ 2005ರಲ್ಲಿ ಬಂಧಿಸಲಾಗಿತ್ತು. ಅವರು ನಿರ್ದೋಷಿ ಎಂದು ದೆಹಲಿಯ ನ್ಯಾಯಾಲಯವೊಂದು ಫೆಬ್ರುವರಿಯಲ್ಲಿ ಆದೇಶ ನೀಡಿದೆ. 25ನೇ ವರ್ಷಕ್ಕೆ ಜೈಲು ಸೇರಿದ ಅವರಿಗೆ ಈಗ 37 ವರ್ಷ.

ಪುರೋಹಿತ್ ಪ್ರಕರಣ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮೊದಲನೆಯದಾಗಿ, ಮಾನವ ಹಕ್ಕುಗಳಿಗೆ ಇಲ್ಲಿ ದೊರೆಯುವ ಬೆಲೆ, ಎರಡನೆಯದಾಗಿ ನಮ್ಮ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯ ದಕ್ಷತೆ. ಇನ್ನೊಂದು ಬಹಳ ಮುಖ್ಯವಾದ ವಿಚಾರ: ಒಂದು ಸರ್ಕಾರದ ಅವಧಿಯಲ್ಲಿ ದೇಶದ್ರೋಹಿ (ಉದಾಹರಣೆಗೆ ಪುರೋಹಿತ್) ಅನಿಸಿಕೊಂಡವರು ಮತ್ತೊಂದು ಸರ್ಕಾರದ ಅವಧಿಯಲ್ಲಿ ದೇಶಪ್ರೇಮದ ಹೀರೋ ಆಗುವುದು, ದೇಶಪ್ರೇಮಿ ಹೀರೊ ಆಗಿದ್ದವರು (ಉದಾಹರಣೆಗ ಕರ್ಕರೆ) ಮತ್ತೊಂದು ಸರ್ಕಾರದಲ್ಲಿ ಹಿಂದಿನ ಸರ್ಕಾರದ ಕೈಗೊಂಬೆಯಾಗಿದ್ದ ಭ್ರಷ್ಟ ಅನಿಸಿಕೊಂಡರೆ ಅದು ಯಾವ ದೇಶಕ್ಕಾದರೂ ದೊಡ್ಡ ಅಪಾಯವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT