ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯ ದಲಿತ್‌ ಕಾರ್ಡ್‌ ಕ್ಲಿಕ್‌ ಆಗಿಲ್ಲ’

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜಿಗ್ನೇಶ್ ಮೇವಾನಿ ಗುಜರಾತ್ ರಾಜ್ಯದವರು. ‌ಹೊಸ ತಲೆಮಾರಿನ ದಲಿತ ನಾಯಕರಲ್ಲಿ ಇವರ ಹೆಸರು ಮೊದಲ ಸಾಲಿನಲ್ಲಿದೆ. ಕಾನೂನು ಪದವಿ ಪಡೆದಿರುವ ಜಿಗ್ನೇಶ್, ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ಗುಜರಾತ್‌ನ ‌ಊನಾದಲ್ಲಿ ಸತ್ತ ದನಗಳನ್ನು ಸಾಗಿಸುತ್ತಿದ್ದ ದಲಿತರ ಮೇಲೆ ಗೋರಕ್ಷಕರಿಂದ ನಡೆದ ಅಮಾನವೀಯ ಹಲ್ಲೆ ವಿರೋಧಿಸಿ ನಡೆದ ಹೋರಾಟವನ್ನು ಮುನ್ನಡೆಸಿದವರು ಮೇವಾನಿ. ‘ಊನಾ ಚಲೋ’ ಸಂಘಟಿಸುವ ಮೂಲಕ ದೇಶದಲ್ಲಿ ಹೊಸ ಸಂಚಲನ ಮೂಡಿಸಿದರು. ದಲಿತರು, ಶೋಷಿತರು ಮತ್ತು ಹಿಂದುಳಿದವರ ಐಕಾನ್ ಆಗಿದ್ದಾರೆ. ದಲಿತರಿಗೆ ಭೂಮಿಯ ಹಕ್ಕು ಕೊಡಿಸುವ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದಲ್ಲಿ ಪಾಲ್ಗೊಳ್ಳಲು ಈಚೆಗೆ ಬೆಂಗಳೂರಿಗೆ ಬಂದಿದ್ದ ಮೇವಾನಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ದಲಿತರ ಹಕ್ಕುಗಳ ಕುರಿತಾದ ಹೋರಾಟದಿಂದ ಗುಜರಾತ್‌ ಮತ್ತು ಇತರ ರಾಜ್ಯಗಳಲ್ಲಿ ದಲಿತರ ಜೀವನದಲ್ಲಿ ಬದಲಾವಣೆ ಆಗಿದೆಯೇ?

ಗುಜರಾತ್‌ ಮಾದರಿ ಅತ್ಯಂತ ವಿಚ್ಛಿದ್ರಕಾರಿ. ಬಡವರು, ದಲಿತರು ಮತ್ತು ಮುಸ್ಲಿಮ್‌ ವಿರೋಧಿ. ಮೇಲ್ವರ್ಗ ಮತ್ತು ಮೇಲ್ಜಾತಿಗಳ ಪರವಾದದ್ದು. ಪ್ರಧಾನಿ ಮೋದಿ ಇದನ್ನು ಇಡೀ ದೇಶದ ಮೇಲೆ ಹೇರಲು ಹೊರಟಿದ್ದಾರೆ. ದೇಶದ ಮೂಲೆ ಮೂಲೆಗೂ ಆ ಮಾದರಿಯನ್ನು ಹರಡುವ ಪ್ರಯತ್ನ ನಡೆಸಿದ್ದಾರೆ. ಈ ವಿಚಾರವನ್ನು ಎಲ್ಲ ಕಡೆಗಳಲ್ಲೂ ನಾನು ಪ್ರಸ್ತಾಪಿಸುತ್ತಿದ್ದೇನೆ. ಗುಜರಾತಿನಲ್ಲಿ ನೂರಾರು ಬಗೆಯ ಅಸ್ಪೃಶ್ಯತೆಗಳು ಚಾಲ್ತಿಯಲ್ಲಿವೆ. ಸಾವಿರಾರು ಪೌರ ಕಾರ್ಮಿಕರು ಈಗಲೂ ಮಲ ಹೊರುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ ಕೊಡುವ ವ್ಯವಸ್ಥೆಯೂ ಅಲ್ಲಿಲ್ಲ. ದಲಿತರು ಪೊಲೀಸ್‌ ರಕ್ಷಣೆಯಲ್ಲಿ ಬದುಕುತ್ತಿದ್ದಾರೆ. ರಕ್ಷಣೆ ಇಲ್ಲದಿದ್ದರೆ ನಿರ್ನಾಮವಾಗುವ ವಾತಾವರಣ ಇದೆ. ಸತ್ತ ದನಗಳು ಮತ್ತು ಅವುಗಳ ಅವಶೇಷ ಎತ್ತುವುದಿಲ್ಲ ಎಂಬ ಕಾರಣಕ್ಕೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

* ದಲಿತರ ಸಿಟ್ಟು ಶಮನ ಮಾಡಲು ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿದ್ದಾರಲ್ಲ?

ರೋಹಿತ್‌ ವೇಮುಲ ಆತ್ಮಹತ್ಯೆ, ಊನಾ ಘಟನೆ ಮತ್ತು ಉತ್ತರ ಪ್ರದೇಶದ ಸಹರನ್‌ಪುರದಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಾಕಿದ ಪ್ರಕರಣಗಳನ್ನು ಮುಚ್ಚಿ ಹಾಕಲು ಫ್ಯಾಸಿಸ್ಟ್‌ ಶಕ್ತಿಗಳು ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡುವ ಪರಿಸ್ಥಿತಿ ಬಂದರೂ ಕೋವಿಂದ್‌ ಸಂತೋಷದಿಂದಲೇ ಅದಕ್ಕೆ ಸಹಿ ಹಾಕುತ್ತಾರೆ. ಬಿಜೆಪಿಯ ‘ದಲಿತ್‌ ಕಾರ್ಡ್‌’ ಕ್ಲಿಕ್‌ ಆಗಿಲ್ಲ. ದಲಿತನನ್ನು ರಾಷ್ಟ್ರಪತಿ ಮಾಡಿದ್ದರಿಂದಲೇ ಸಮುದಾಯ ಸಮಾಧಾನಗೊಂಡಿಲ್ಲ. ಅವರಲ್ಲಿ ಸಾಕಷ್ಟು ಸಿಟ್ಟು, ನೋವು ಇದೆ. ಅದನ್ನು ಶಮನ ಮಾಡುವುದು ಸುಲಭದ ವಿಷಯ ಅಲ್ಲ.

* ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ?

ಗುಜರಾತಿನಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಚುನಾವಣೆಯಲ್ಲಿ ಮತ ಯಂತ್ರವನ್ನು ದುರ್ಬಳಕೆ ಮಾಡಬಹುದು. ಚುನಾವಣೆ ಗೆಲ್ಲಲೆಂದು ಅಮಿತ್‌ ಷಾ ಕಾರ್ಯತಂತ್ರ  ಅಲ್ಲಿ ನಡೆಯುತ್ತಿರುವ ಪಟೇಲರ ಹೋರಾಟ, ರೈತ ಮತ್ತು ದಲಿತರ ಹೋರಾಟಗಳಿಂದಾಗಿ ಬಿಜೆಪಿ ಗೆಲುವು ಸುಲಭವಲ್ಲ.

* ನೀವು ಕಾಂಗ್ರೆಸ್‌ ದಾಳವಾಗಿ ವರ್ತಿಸುತ್ತಿದ್ದೀರಿ ಎಂಬುದಾಗಿ ಬಿಜೆಪಿಯವರು ಟೀಕಿಸುತ್ತಿದ್ದಾರಲ್ಲ?

ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಜಿದ್ದಿನ ಹೋರಾಟ ನಡೆಸುತ್ತಿದ್ದೇನೆ. ಈ ಸಂಬಂಧ ಇಲ್ಲಿಯವರೆಗೆ ಬಿಜೆಪಿಯವರು ನನ್ನ ಮೇಲೆ ಯಾವುದೇ ಆರೋಪಗಳನ್ನು ಮಾಡಿಲ್ಲ. ಆದರೆ, ನನ್ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದಾರೆ. ಬಿಜೆಪಿಯವರು ಯಾವುದೇ ಆರೋಪ ಮಾಡಿದರೂ ಅದಕ್ಕೆ ಕೇರ್‌ ಮಾಡೊಲ್ಲ.

* ಭೂಮಿ ಮತ್ತು ವಸತಿ ಹಕ್ಕು ಹೋರಾಟ ಜಾಗತೀಕರಣದ ಸಂದರ್ಭದಲ್ಲಿ ಪ್ರಸ್ತುತವೇ?

ಭೂ ರಹಿತರಿಗೆ ಭೂಮಿ ಕೊಡಿಸುವುದು ಅತ್ಯಂತ ಮಹತ್ವದ ಹೋರಾಟ ಎಂದೇ ನನ್ನ ಭಾವನೆ. ಇದು ಜಾತಿ ವಿನಾಶಕ್ಕೆ ಮುಖ್ಯ ಭೂಮಿಕೆಯಾಗುತ್ತದೆ. ಭೂಮಿ ಸಿಕ್ಕವರಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಮೊದಲ ಪಂಚ ವಾರ್ಷಿಕ ಯೋಜನೆಯಲ್ಲಿ ಭೂ ಸುಧಾರಣೆ ಅಂಶವನ್ನು ಸೇರಿಸಲಾಗಿತ್ತು. ಇದರಿಂದಾಗಿ ದೇಶ ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ವಿಕಾಸಕ್ಕೆ ಭದ್ರ ಬುನಾದಿ ಆಯಿತು. ಇದು ಸಾಮಾಜಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಮಾತ್ರವಲ್ಲದೆ, ದೇಶದಲ್ಲಿ ಹೊಸ ಸಂಪತ್ತನ್ನು ಸೃಷ್ಟಿಸಿತು. ಊಳಿಗಮಾನ್ಯ ವ್ಯವಸ್ಥೆ ಕಿತ್ತೊಗೆದು, ಉತ್ಪಾದನೆ ಆಧರಿತ ಕೃಷಿ ವ್ಯವಸ್ಥೆ ರೂಪುಗೊಳ್ಳಲು ಸಹಾಯವಾಯಿತು. ಜನಸಾಮಾನ್ಯರ ಕೊಳ್ಳುವ ಶಕ್ತಿಯೂ ವೃದ್ಧಿಯಾಯಿತು. ಈಗ ಜಿಡಿಪಿ ಬಗ್ಗೆ ಮಾತನಾಡುವವರಿಗೆ ಮಾನವ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆ ಬಗ್ಗೆ ಕಳಕಳಿ ಇಲ್ಲ, ಸಮಾಜದ ಸಮಗ್ರ ವಿಕಾಸದ ಕಾಳಜಿಯೂ ಇಲ್ಲ. ಇದೇ ‘ಗುಜರಾತ್‌ ಮಾದರಿ’.

ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಸಂದರ್ಭದಲ್ಲಿ ಭೂಮಿಗೆ ಬೇಡಿಕೆ ಸಲ್ಲಿಸುವುದು ಅಸಾಮಾನ್ಯ ವಿಚಾರವೇ ಸೈ. ದೇಶದ ಕೃಷಿ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟನ್ನು ಗ್ರಾಮೀಣ ಜನರು ಅರಿತಿದ್ದಾರೆ. ಇಂತಹ ಕಷ್ಟಗಳ ನಡುವೆಯೇ ಸ್ವಂತ ಭೂಮಿ ಹೊಂದಿ ಕೃಷಿ ಮಾಡಬೇಕೆಂಬ ಹಂಬಲ ದಲಿತರದ್ದು. ಆದ್ದರಿಂದ ದಲಿತರಿಗೆ ಭೂಮಿಯ ಹಕ್ಕು ನೀಡಬೇಕು.ದಲಿತರಿಗೆ ಭೂಮಿ ಹಂಚಿಕೆ ಮಾಡುವ ಭರವಸೆ ಕಾಗದದಲ್ಲೇ ಉಳಿದಿದೆ. ಗುಜರಾತ್‌ನಲ್ಲಿ ಒಂದು ವರ್ಷದ ನಮ್ಮ ಹೋರಾಟದ ಫಲವಾಗಿ ಸಣ್ಣ ಯಶಸ್ಸು ಸಿಕ್ಕಿದೆ. ಗೋವುಗಳನ್ನು ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿ ಕೊಡಿ ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಚಾಲನೆ ನೀಡಿದ್ದೇವೆ. 

* ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ಭೂಮಿ ಹಂಚುವ ಬಗ್ಗೆ ರಾಜ್ಯ ಸರ್ಕಾರಗಳ ಧೋರಣೆ ಹೇಗಿದೆ? ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆಯೇ?

ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೂ ಭೂಮಿ ಹಂಚಲು ಹಿಂದೇಟು ಹಾಕುತ್ತಿವೆ. ಕರ್ನಾಟಕದಲ್ಲಿ 1996 ರ ಬಳಿಕ ಭೂ ಮಂಜೂರಾತಿ ಕೋರಿ ಸಲ್ಲಿಸಿರುವ 4 ಲಕ್ಷ ಅರ್ಜಿಗಳ ವಿಲೇವಾರಿ ಆಗಿಲ್ಲ. ಮನೆಗಳಿಗಾಗಿ 10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ನಗರ ಪ್ರದೇಶದಲ್ಲಿ ಕೊಳೆಗೇರಿ ವಾಸಿಗಳು ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಗುಜರಾತಿನಲ್ಲಿ ಅಡಾಣಿ, ಅಂಬಾನಿ, ಎಸ್ಸಾರ್‌ ಮತ್ತಿತರ ಕಂಪೆನಿಗಳಿಗೆ ಭೂಮಿ ಸುಲಭವಾಗಿ ಸಿಗುತ್ತದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಂದು ಇಂಚೂ ಭೂಮಿ ಕೊಟ್ಟಿಲ್ಲ. ಕೃಷಿ ಸಮಸ್ಯೆಯಿಂದಾಗಿ ಭೂಮಿ ಅವರ ಬಳಿಯೇ ಉಳಿಯುವುದು ಕಷ್ಟ ಎಂಬ ಸ್ಥಿತಿ ಇದೆ. ಭೂಮಿ ಅವರ ಬಳಿಯೇ ಉಳಿಯಬೇಕು. ಇಲ್ಲವಾದರೆ ಸಂವಿಧಾನದ ಆಶಯವೇ ವಿಫಲವಾಗುತ್ತದೆ.

ಕೇಂದ್ರ ಸರ್ಕಾರದ ವಿಚಾರಕ್ಕೆ ಬಂದರೆ, ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಮೋದಿ, ನವ ಭಾರತ ಸೃಷ್ಟಿಸುತ್ತಾರೆ, ಉದ್ಯೋಗಗಳ ಪ್ರಮಾಣ ಹೆಚ್ಚುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆ ಕನಸುಗಳೆಲ್ಲ ನುಚ್ಚು ನೂರಾಗಿವೆ. ಮಧ್ಯಮ ವರ್ಗ ನಿರಾಶೆಗೊಂಡಿದೆ. ಕೊಟ್ಟ ಭರವಸೆಗಳಲ್ಲಿ ಶೇ 1ರಷ್ಟೂ ಈಡೇರಿಲ್ಲ.  ಜನರ ಗಮನ ಬೇರೆಡೆ ಸೆಳೆಯಲು ನೋಟು ರದ್ದತಿ, ಜಿಎಸ್‌ಟಿ ಜಾರಿ ಮಾಡಲಾಗಿದೆ. ಇದರಿಂದ ನಿರುದ್ಯೋಗ ಪ್ರಮಾಣ ಶೇ 7. 3 ರಷ್ಟು ಹೆಚ್ಚಾಗಿದೆ.

* ಮೀಸಲಾತಿಗೆ  ಒತ್ತಾಯಿಸಿ ಹಲವು ಮುಂದುವರಿದ ವರ್ಗಗಳು ದೇಶದೆಲ್ಲೆಡೆ ಹೋರಾಟ  ನಡೆಯುತ್ತಿವೆ. ಇದಕ್ಕೆ ನಿಮ್ಮ ಬೆಂಬಲ ಇದೆಯೇ?

ಮೊದಲನೆಯದಾಗಿ, ಕರ್ನಾಟಕದಲ್ಲಿ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಬೆಂಬಲಿಸುತ್ತೇನೆ. ನಾನು ನಾಸ್ತಿಕ, ಯಾವುದೇ ಧರ್ಮಕ್ಕೂ ಸೇರಿದವನಲ್ಲ. ಲಿಂಗಾಯತರ ಸ್ವತಂತ್ರ ಧರ್ಮದ ಬೇಡಿಕೆ ನ್ಯಾಯೋಚಿತವಾಗಿದೆ. ದೇಶದಲ್ಲಿರುವ ಎಲ್ಲರನ್ನೂ ಹಿಂದೂ ಧರ್ಮದ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಪ್ರಯತ್ನ ಸಂವಿಧಾನಬಾಹಿರ ನಡೆ. ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮರಾಠರು, ಜಾಟ್‌, ಪಟೇಲರು, ಮೀಸಲಾತಿ ಸೌಲಭ್ಯ ಪಡೆದವರು, ಪಡೆಯದೆ ಇರುವವರು ಎಲ್ಲರೂ ಒಟ್ಟಾಗಿ ಉದ್ಯೋಗ ಕೊಡಿ ಎಂದು ಮೋದಿಯವರನ್ನು ಕೇಳಬೇಕು. ಉದ್ಯೋಗ ಸೃಷ್ಟಿಸುವ ಭರವಸೆ ಏನಾಗಿದೆ ಎಂದು ಪ್ರಶ್ನಿಸಬೇಕು. ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಅವರ ಮಾತು ಕಾರ್ಯಗತವಾಗಿದ್ದರೆ ಈವರೆಗೆ 6 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು.

* ಕರ್ನಾಟಕದಲ್ಲಿ ದಲಿತರ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಇಟ್ಟಿರುವುದಾಗಿ ಸರ್ಕಾರ ಹೇಳಿದೆ, ಇದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ. ಇದರಿಂದ ದಲಿತರ ಬದುಕು ಹಸನಾಗಬಲ್ಲದೇ?

ದಲಿತರ ಅಭಿವೃದ್ಧಿ ಜಾತಿ ವ್ಯವಸ್ಥೆ ನಿರ್ಮೂಲನೆಯಿಂದ ಮಾತ್ರ ಸಾಧ್ಯ. ದೊಡ್ಡ ಗಾತ್ರದ ಬಜೆಟ್‌ ಇಡಬಹುದು, ಆದರೆ, ಅದು ಪ್ರಾಮಾಣಿಕವಾಗಿ ಜಾರಿ ಆಗುತ್ತದೆ ಎಂಬ ಖಾತರಿ ಇಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಈ ರೀತಿ ಇಟ್ಟ ಹಣದ ಹಂಚಿಕೆ ಸರಿಯಾಗಿ ಆಗುತ್ತಿಲ್ಲ. ಹಣ ಕೆಲವೇ ಜನರ ಜೇಬು ಸೇರುತ್ತಿದೆ ಅಥವಾ ಬೇರೆ ಉದ್ದೇಶಗಳಿಗೆ ಬಳಕೆ ಆಗುವುದೇ ಹೆಚ್ಚು.

* ನಿಮ್ಮ ಹೋರಾಟದ ಮುಂದಿನ ಗುರಿ ಏನು. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತೀರೆ?

2019 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪತನವೇ ನಮ್ಮ ಗುರಿ. ಈ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಮಹಾ ಸಂಘಟನೆಯನ್ನು ರೂಪಿಸುತ್ತೇವೆ. ದಲಿತರು, ಮುಸ್ಲಿಮರು, ಸೇವಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿಸಿಕೊಂಡು ಹೋರಾಟ ಮುನ್ನಡೆಸುತ್ತೇವೆ. ಮೋದಿ ಪತನದ ನಂತರವೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮದು ಕೇವಲ ಚುನಾವಣಾ ಉದ್ದೇಶದ ಹೋರಾಟ ಅಲ್ಲ. ಅದಕ್ಕಿಂತ ಮಹ್ವತದ್ದನ್ನು ಸಾಧಿಸಬೇಕಿದೆ. ರಾಜಕೀಯವಾಗಿ ಯಾರ ಪರವಾದ ನಿಲುವನ್ನೂ ತೆಗೆದುಕೊಳ್ಳುವುದಿಲ್ಲ. ಬಿಜೆಪಿಗಿಂತ ಕಾಂಗ್ರೆಸ್‌ ಒಳ್ಳೆಯದೋ, ಕೆಟ್ಟದ್ದೊ ಎಂಬ ವಿಚಾರಕ್ಕೆ ನಾನು ಹೋಗುವುದಿಲ್ಲ. ಆದರೆ, ಬಿಜೆಪಿ ದಿವಾಳಿ ಆದ, ಮಧ್ಯಯುಗೀಯ ಮೌಲ್ಯಗಳನ್ನು ಪ್ರತಿಪಾದಿಸುವ,  ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆ ಪ್ರತಿಪಾದಿಸುವ ಆರ್‌ಎಸ್ಎಸ್‌ನ ಕೂಸು. ಇದು ನನ್ನ ಮೊದಲ ಶತ್ರು. ಕಾಂಗ್ರೆಸ್‌ ಅನ್ನು 60 ವರ್ಷಗಳಿಂದ ನೋಡಿದ್ದೇವೆ. ಆದರೆ, ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದಿಲ್ಲ. ಹಿಂದೂ ರಾಷ್ಟ್ರವೆಂದರೆ, ಬ್ರಾಹ್ಮಣ್ಯವನ್ನು ಜೀವಂತವಾಗಿಡುವ ವ್ಯವಸ್ಥೆ. ಇದು ದಲಿತರು ಮತ್ತು ಮುಸ್ಲಿಮರ ಪಾಲಿಗೆ ನರಕ. ಈ ವ್ಯವಸ್ಥೆಯಲ್ಲಿ ದಲಿತರು ಮತ್ತು ಮುಸ್ಲಿಮರು ಬದುಕುಳಿಯುವುದೂ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT