ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆಗೆ ವೇದಿಕೆ ಸಿದ್ಧ

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್‌ ಮೂಲಕ ಮದುವೆ ವಿಚ್ಛೇದನ ಪಡೆಯುವ ಪದ್ಧತಿ ‘ತಪ್ಪು’, ‘ಕಾನೂನುಬಾಹಿರ’ ಮತ್ತು ‘ಅಸಾಂವಿಧಾನಿಕ’ ಎಂದು ಸುಪ್ರೀಂಕೋರ್ಟ್‌ ಬಹುಮತದ ತೀರ್ಪು ನೀಡಿದೆ. ಇದು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ತ್ವರಿತಗೊಳಿಸಲು ವೇದಿಕೆ ಸಿದ್ಧಪಡಿಸಿದೆ.

‘ಹಿಂದೂಗಳು ಏಕರೂಪ ನಾಗರಿಕ ಸಂಹಿತೆಯನ್ನು ಯಾಕೆ ಬಯಸುತ್ತಿದ್ದಾರೆ? ಅವರ ಇಚ್ಛೆಯನ್ನು ಇತರರ ಮೇಲೆ ಹೇರುವುದು ಇದರ ಉದ್ದೇಶವೇ’ ಎಂದು ವಿರೋಧ ಪಕ್ಷದಲ್ಲಿರುವ ಹಲವು ರಾಜಕೀಯ ಮುಖಂಡರು ಮತ್ತು ‘ಚಿಂತಕರು’ ಪ್ರಶ್ನಿಸುತ್ತಿದ್ದಾರೆ. ತಮ್ಮ ಜಾತ್ಯತೀತತೆಯನ್ನು ಬಹಿರಂಗವಾಗಿ ತೋರಿಸುವುದು ಈ ಪ್ರಶ್ನೆಯ ಉದ್ದೇಶ.

ಈ ಜನರು ಪ್ರಶ್ನೆಯನ್ನು ಸ್ವಲ್ಪ ಭಿನ್ನವಾಗಿ ಹೀಗೆಯೂ ಕೇಳಿಕೊಳ್ಳಬಹುದು ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳಬಹುದು: ‘ಭಾರತದ ಎಲ್ಲ ಪ್ರಜೆಗಳೂ ಏಕರೂಪ ನಾಗರಿಕ ಸಂಹಿತೆ ಅಡಿಯಲ್ಲಿ ಯಾಕೆ ಬರಬಾರದು? ಏಕರೂಪ ನಾಗರಿಕ ಸಂಹಿತೆ ವಿರುದ್ಧ ಪ್ರಶ್ನೆ ಕೇಳುವ ಹಲವರು ಪ್ರಸಿದ್ಧ ವಕೀಲರು ಮತ್ತು ರಾಜಕೀಯ ಪಕ್ಷಗಳ ಚತುರ ವಕ್ತಾರರು.

ಇವರು ವಾದಿಸಿ ಗೆಲ್ಲುವುದರಲ್ಲಿ ನಿಷ್ಣಾತರು. ಹಾಗಾಗಿ ವಾದ ಮಾಡಿ ಇವರನ್ನು ಗೆಲ್ಲುವುದು ಕಷ್ಟ. ಇವರು ನಿಜಕ್ಕೂ ಕರ್ಮಠವಾದ, ಕುತರ್ಕವನ್ನು ಹೊಂದಿರುವ ಜಾತ್ಯತೀತರೇ ಅಥವಾ ಉದಾರವಾದಿ ಸಂಪ್ರದಾಯವಾದಿಗಳೇ ಅಥವಾ ಇವರ ಹೇಳಿಕೆಗಳೆಲ್ಲವೂ ಮುಸ್ಲಿಮರನ್ನು ಓಲೈಸುವುದಕ್ಕಾಗಿ ಇರುವ ಶುದ್ಧ ರಾಜಕೀಯ ಹೇಳಿಕೆಗಳೇ ಎಂಬುದನ್ನು ಹೇಳುವುದು ಕಷ್ಟ.

ಇದು ಅವರ ವೈಯಕ್ತಿಕ ನಂಬಿಕೆ ಅಲ್ಲ, ಬದಲಿಗೆ ಬಿಜೆಪಿಯನ್ನು ವಿರೋಧಿಸುವ ಪಕ್ಷದ ಆದೇಶದ ಮೇರೆಗೆ ಇವರು ಹೀಗೆ ಹೇಳುತ್ತಿದ್ದಾರೆ ಎಂದು ಭಾವಿಸಬಹುದೇನೊ. ಹೀಗಾಗಿ ಇವರ ಈ ಭಾವನಾತ್ಮಕ ತೀವ್ರತೆಯ ಮಾತುಗಳು ಆ ಕ್ಷಣದ ರಾಜಕೀಯದ ಭಾಗವಾಗಿದ್ದರೆ ಅದಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಸಾಧ್ಯವಿಲ್ಲ.

ಅದೇ ರೀತಿಯಲ್ಲಿ, ಆಡಳಿತ ಮತ್ತು ಸರ್ಕಾರದಲ್ಲಿ ಅಧಿಕಾರಯುತ ಸ್ಥಾನದಲ್ಲಿರುವವರು ಮತ್ತು ಆಡಳಿತ ಪಕ್ಷದ ವಕ್ತಾರರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾಡುವ ಭಾಷಣದ ಧ್ವನಿ ಅನಗತ್ಯವಾಗಿ ಕರ್ಕಶವಾಗಿದೆ, ಆಕ್ರಮಣಕಾರಿಯಾಗಿದೆ. ಅವರು ಹೇಳುವ ವಿಚಾರವನ್ನು ಹೇಳಲೇ ಬೇಕೆಂದೇನಿಲ್ಲ. ಆದರೆ ಹೇಳುವ ಮೂಲಕ ಪರೋಕ್ಷವಾಗಿ ಇವರು ಅಲ್ಪಸಂಖ್ಯಾತ ಸಮುದಾಯದತ್ತ ಬೊಟ್ಟು ಮಾಡುತ್ತಾರೆ.

ಜಾತಿ, ಧರ್ಮ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ಪೌರರಿಗೂ ಅನ್ವಯವಾಗುವ ಸಮಾನ ಸಂಹಿತೆಯ ಜಾರಿಗೆ ತಡೆಯೊಡ್ಡಲು ಇದನ್ನು ಒಂದು ನೆಪವಾಗಿ ಅಲ್ಪಸಂಖ್ಯಾತರು ಬಳಸಿಕೊಳ್ಳುತ್ತಾರೆ.

ರಾಜಕೀಯ ಮತ್ತು ಧಾರ್ಮಿಕ ಗುಂಪುಗಳ ಎರಡೂ ಭಾಗಗಳಲ್ಲಿ ಇರುವ ಸಂಪ್ರದಾಯವಾದಿಗಳು ಮತ್ತು ಧರ್ಮಾಂಧರು ತಮ್ಮ ಗೊಡ್ಡು ಸಂಪ್ರದಾಯಗಳು, ಓಬಿರಾಯನ ಕಾಲದ ಪ್ರತಿಗಾಮಿ ಕಾನೂನುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಡುವುದು ನಿಶ್ಚಿತ. ಅದಕ್ಕಾಗಿ ತಮ್ಮವರು ಮತ್ತು ತಮ್ಮ ಮತ ಬ್ಯಾಂಕುಗಳ ಓಲೈಕೆಗೆ ಅವರು ಸಮಾಜವನ್ನು ಒಡೆಯುತ್ತಾರೆ. ಒಂದಲ್ಲ ಒಂದು ರಾಜ್ಯದಲ್ಲಿ ನಡೆಯುವ ಚುನಾವಣೆಗಳು ಅಥವಾ 2019ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯ ಹೆಸರಿನಲ್ಲಿ ಇದು ನಡೆಯುತ್ತಲೇ ಇರುತ್ತದೆ.

ಸಭ್ಯ, ಸಮಾನತೆಯಿಂದ ಕೂಡಿದ ಮತ್ತು ವಿದ್ಯಾವಂತವಾದ ಸಮಾಜದ ಕಾನೂನುಗಳು ಪ್ರಗತಿಪರವಾಗಿ ತಿದ್ದುಪಡಿಯಾಗುತ್ತಲೇ ಇರಬೇಕು. ನೂರಐವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಸತಿ ಮತ್ತು ಬಾಲ್ಯ ವಿವಾಹ ಪದ್ಧತಿ ಇತ್ತು. ರಾಜಾರಾಮ್‌ ಮೋಹನ್‌ ರಾಯ್‌ ಅವರಂತಹ ಶ್ರೇಷ್ಠ ಸಮಾಜ ಸುಧಾರಕರಿಂದಾಗಿ ಈ ಪದ್ಧತಿಗಳು ನಿರ್ಮೂಲನಗೊಂಡವು. ಈಗ ನಮ್ಮಲ್ಲಿ ಸತಿ ಪದ್ಧತಿ ಇಲ್ಲ, ಆದರೆ ವರದಕ್ಷಿಣೆಗಾಗಿ ಬೆಂಕಿ ಹಚ್ಚುವುದು ಮತ್ತು ಬಾಲ್ಯ ವಿವಾಹದ ಪ್ರಕರಣಗಳು ಈಗಲೂ ವರದಿಯಾಗುತ್ತಿವೆ.

ಭಾರತವು ಗಣರಾಜ್ಯವಾಗಿ ಘೋಷಣೆಯಾದ ಬಳಿಕ ಜೀತ ಪದ್ಧತಿಯನ್ನು ನಿಷೇಧಿಸಲಾಯಿತು. ಇಂತಹ ಹಲವು ಪದ್ಧತಿಗಳಿಗೆ ಕಾನೂನಿನ ಮಾನ್ಯತೆ ಇಲ್ಲದೇ ಇದ್ದರೂ ಇವು ದೇಶದ ವಿವಿಧ ಭಾಗಗಳಲ್ಲಿ ಈಗಲೂ ನಡೆಯುತ್ತಿವೆ. ಹಿಂದೂಗಳು ಒಂದು ಏಕರೂಪದ ಸಮುದಾಯ ಆಗಿಲ್ಲದಿರುವುದರಿಂದ ಅವರಲ್ಲಿ ಒಂದೇ ರೀತಿಯ ಪದ್ಧತಿಗಳು ಮತ್ತು ಆಚರಣೆಗಳು ಇಲ್ಲ.

ಇಲ್ಲಿ ಅಸಂಖ್ಯ ಜಾತಿಗಳು ಮತ್ತು ಉಪಜಾತಿಗಳಿವೆ. ಇವೆಲ್ಲವೂ ತಮ್ಮದೇ ಆದ ನಂಬಿಕೆಗಳು ಮತ್ತು ಪದ್ಧತಿಗಳನ್ನು ಹೊಂದಿವೆ. ಮದುವೆ ಮತ್ತು ಮರು ಮದುವೆಗೆ ಗಂಡು ಮತ್ತು ಹೆಣ್ಣಿಗೆ ಭಿನ್ನವಾದ ನಿಯಮಗಳಿವೆ; ಆಸ್ತಿ ಹಕ್ಕು ಕೂಡ ಇಲ್ಲಿ ಸಮಾನವಾಗಿ ಅನ್ವಯ ಆಗುವುದಿಲ್ಲ.

ಅತ್ಯಂತ ಸಣ್ಣ ವಯಸ್ಸಿನಲ್ಲಿ ಗಂಡ ಸತ್ತರೂ ಹೆಣ್ಣಿಗೆ ಮರು ಮದುವೆ ಅವಕಾಶ ಇಲ್ಲದ ಸ್ಥಿತಿ ದೇಶದ ಹಲವು ಭಾಗಗಳಲ್ಲಿ ಇದೆ. ಆದರೆ ಹೆಂಡತಿ ಸತ್ತ ಗಂಡು ಮರು ಮದುವೆ ಆಗುತ್ತಾನೆ ಮತ್ತು ಹೆಂಡತಿಯ ಅವಿವಾಹಿತ ತಂಗಿಯನ್ನು ಮದುವೆಯಾಗುವ ಪದ್ಧತಿ ಹಲವೆಡೆ ಇದೆ.

ಕುಖ್ಯಾತವಾದ ‘ಖಾಪ್‌ ಪಂಚಾಯಿತಿ’ಗಳಿರಲಿ ಅಥವಾ ಮರ್ಯಾದೆಗೇಡು ಹತ್ಯೆ ಇರಲಿ ಅಥವಾ ಪ್ರಾಚೀನವಾದ ಹತ್ತಾರು ಪದ್ಧತಿಗಳಿರಲಿ, ಆಸ್ತಿ ಹಕ್ಕು ಅಥವಾ ಮದುವೆ ಅಥವಾ ವಿಚ್ಛೇದನ ಅಥವಾ ಜೀವನಾಂಶ ಏನೇ ಇರಲಿ ಎಲ್ಲದರ ಪ್ರತಿಕೂಲ ಅಂಶಗಳನ್ನು ಹೆಣ್ಣಿನ ಮೇಲೆ ಹೇರಲಾಗುತ್ತದೆ. ಈ ಎಲ್ಲದಕ್ಕೆ ಸಂಬಂಧಿಸಿ ಅತಿ ಹೆಚ್ಚು ನರಳುವುದು ಹೆಣ್ಣೇ.

ಈ ಪರಿಸ್ಥಿತಿ ಮುಸ್ಲಿಮರಲ್ಲಿ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಿನ್ನವೇನಲ್ಲ. ಧರ್ಮ ಮತ್ತು ಅದು ನೀಡುವ ಅಧಿಕಾರದ ಹೆಸರಿನಲ್ಲಿ ಹೆಣ್ಣನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸಿಸಲಾಗುತ್ತದೆ; ಮಹಿಳೆಯರು ಅಪಮಾನ, ದಾರಿದ್ರ್ಯ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಮತ್ತು ಘನತೆಯ ನಿರಾಕರಣೆಗಳೆಲ್ಲವನ್ನೂ ಅನುಭವಿಸಬೇಕಾಗುತ್ತದೆ.

ಫತ್ವಾ ಹೊರಡಿಸುವುದು ಕಾನೂನುಬಾಹಿರ ಎಂದು ಮೂರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಫತ್ವಾ ಹೊರಡಿಸುವುದು ಸೇರಿ ಧರ್ಮದ ಆಚರಣೆ ತಮ್ಮ ಹಕ್ಕು ಎಂದು ಸಾಧಿಸಲು ಮೌಲ್ವಿಗಳು ಯತ್ನಿಸಿದ್ದರು. ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದ ಮಾವನ ಜತೆಯೇ ಸಂತ್ರಸ್ತೆ ಬದುಕಬೇಕು ಎಂಬ ಶಿಕ್ಷೆಯನ್ನು ಫತ್ವಾ ಮೂಲಕ ವಿಧಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಫತ್ವಾ ಹೊರಡಿಸುವುದೇ ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು.

ತಾನು ಅತ್ಯಾಚಾರ ಎಸಗಿದ್ದ ಸೊಸೆಯ ಜತೆಗೇ ಬದುಕಿ ಆಕೆಯನ್ನು ನೋಡಿಕೊಳ್ಳುವುದು ಮಾವನಿಗೆ ಇರುವ ಶಿಕ್ಷೆ. ಇತರರು ಈ ರೀತಿ ವರ್ತಿಸದಂತೆ ಈ ಶಿಕ್ಷೆ ತಡೆಯುತ್ತದೆ ಎಂಬ ವಿಚಿತ್ರ ವಾದವನ್ನು ಫತ್ವಾ ಹೊರಡಿಸಿದ್ದವರು ಮುಂದಿಟ್ಟಿದ್ದರು. ಈ ಶಿಕ್ಷೆಯಲ್ಲಿ ಅಡಗಿರುವ ಕ್ರೌರ್ಯ ಮತ್ತು ಅನಾಗರಿಕತೆಯನ್ನು ಶಿಕ್ಷೆ ಕೊಟ್ಟವರು ಗಣನೆಗೆ ತೆಗೆದುಕೊಂಡೇ ಇರಲಿಲ್ಲ.

ಅಷ್ಟೇ ಅಲ್ಲ, ಈ ಶಿಕ್ಷೆಯು ಇಂತಹ ಇನ್ನಷ್ಟು ಅತ್ಯಾಚಾರಗಳಿಗೆ ಕಾರಣವಾಗಬಹುದು ಎಂಬುದೂ ಅವರ ಗಮನಕ್ಕೆ ಬಂದಿರಲಿಲ್ಲ. ಜತೆಗೆ, ಆ ದುರದೃಷ್ಟ ಸಂತ್ರಸ್ತೆಯ ಗತಿಯೇನು? ಆಕೆಯ ಅಭಿಪ‍್ರಾಯವನ್ನು ಯಾರಾದರೂ ಕೇಳಿದ್ದರೇ? ಬಿಜೆ‍ಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು ಖಾಪ್‌ ಪಂಚಾಯಿತಿಗಳನ್ನು ಬೆಂಬಲಿಸಿದ್ದನ್ನು ಮತ್ತು ಅತ್ಯಾಚಾರದ ವಿರುದ್ಧ ಕಠಿಣ ಕಾನೂನನ್ನು ವಿರೋಧಿಸಿದ್ದನ್ನು ನಾವು ಕಂಡಿದ್ದೇವೆ.

‘ಹುಡುಗರು ಹುಡುಗರ ರೀತಿಯಲ್ಲಿಯೇ ವರ್ತಿಸುತ್ತಾರೆ’ ಅಥವಾ ‘ರಾತ್ರಿಯಲ್ಲಿ ಹೊರಗೆ ಹೋಗುವ ಮೂಲಕ ಅಥವಾ ತುಂಡು ಸ್ಕರ್ಟ್‌ ಧರಿಸುವ ಮೂಲಕ ಮಹಿಳೆಯರೇ ಅತ್ಯಾಚಾರಕ್ಕೆ ಪ್ರೇರಣೆ ನೀಡುತ್ತಿದ್ದಾರೆ’ ಎಂಬಂತಹ ಹೇಳಿಕೆಗಳನ್ನು ನೋಡಿದ್ದೇವೆ.

ಪಶ್ಚಿಮದ ಎಲ್ಲ ಪ್ರಬುದ್ಧ ಪ್ರಜಾಸತ್ತಾತ್ಮಕ ದೇಶಗಳಲ್ಲಿಯೂ ಪೌರರಿಗೆ ಖಾಸಗಿಯಾಗಿ ತಮ್ಮ ಧರ್ಮವನ್ನು ಆಚರಿಸುವುದಕ್ಕೆ ಸ್ವಾತಂತ್ರ್ಯ ಇದೆ. ಆದರೆ ಜಾತಿ, ಧರ್ಮ, ಬಣ್ಣ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ಪೌರರು ಮತ್ತು ವಲಸಿಗರಿಗೆ ಸಮಾನ ನಾಗರಿಕ ಮತ್ತು ಅಪರಾಧ ಸಂಹಿತೆ ಅನ್ವಯವಾಗುತ್ತದೆ. ಅಲ್ಲಿನ ನ್ಯಾಯಾಂಗ ವ್ಯವಸ್ಥೆ ಮತ್ತು ನಾಗರಿಕ ಸಂಹಿತೆಗಳು ಸುಮಾರು 200 ವರ್ಷಗಳ ಅವಧಿಯಲ್ಲಿ ರೂಪುಗೊಂಡಿವೆ.

ಕೆಲವೇ ದಶಕಗಳ ಹಿಂದೆ, ಅಮೆರಿಕದಲ್ಲಿ ಮಹಿಳೆಯರಿಗೆ ಮತ ಚಲಾವಣೆ ಹಕ್ಕು ಇರಲಿಲ್ಲ ಅಥವಾ ಗುಲಾಮಿ ಪದ್ಧತಿ ಮತ್ತು ಗುಲಾಮಿ ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಅಥವಾ ಸಲಿಂಗ ಕಾಮ ಪತ್ತೆಯಾದರೆ ಅಂಥವರನ್ನು ಜೈಲಿಗೆ ಅಟ್ಟುತ್ತಿದ್ದರು ಎಂಬುದನ್ನು ಈಗ ಯಾರೂ ನಂಬುವುದಕ್ಕೆ ಸಾಧ್ಯವಿಲ್ಲ.

ಹಿಂದೂಗಳು ಅಥವಾ ಮುಸ್ಲಿಮರು ಅಥವಾ ಇತರ ಅಲ್ಪಸಂಖ್ಯಾತರಿಗೆ ಏಕರೂಪದ ನಾಗರಿಕ ಸಂಹಿತೆ ಅನ್ವಯವಾಗಬೇಕು ಎಂಬ ಪರಿಕಲ್ಪನೆ ಯಾರೊಬ್ಬರ ಸ್ವತ್ತೂ ಅಲ್ಲ. ಫತ್ವಾಗಳು ಮತ್ತು ಷರೀಯ ನ್ಯಾಯಾಲಯಗಳಿಗಿಂತ ಖಾಪ್‌ ಪಂಚಾಯಿತಿಗಳೇ ಬಹುಶಃ ಮಹಿಳೆಯರ ಜತೆ ಹೆಚ್ಚು ಅಮಾನವೀಯವಾಗಿ ಮತ್ತು ಅನ್ಯಾಯದಿಂದ ವರ್ತಿಸಿವೆ ಹಾಗೂ ಸಮಾಜದ ಪ್ರಗತಿಗೆ ತೊಡಕು ಒಡ್ಡಿವೆ.

ಪ್ರತಿ ಪೌರನೂ ಏಕರೂಪ ನಾಗರಿಕ ಮತ್ತು ದಂಡ ಸಂಹಿತೆಯ ಅಡಿಯಲ್ಲಿ ಬರುವ ಮೂಲಕ ಕಾನೂನಿಗೆ ಎಲ್ಲರೂ ಸಮಾನರು ಎಂಬುದನ್ನು ದೃಢಪಡಿಸಬೇಕು. ಒಂದು ದೇಶವು ತನ್ನ ಮಹಿಳೆಯರನ್ನು ರಕ್ಷಿಸಲು ಅಸಮರ್ಥ ಎಂದಾದರೆ, ಅವರಿಗೆ ಕ್ರಿಯಾಶೀಲ ಹಾಗೂ ಉದಾರವಾದ ಜೀವನಕ್ಕೆ ಬೇಕಾದ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ನೀಡುವುದಿಲ್ಲ ಎಂದಾದರೆ ಆ ದೇಶ ಅನಾಗರಿಕ ಎಂದೇ ಅರ್ಥ.

ಈಗಿನ ಸರ್ಕಾರವು ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಮುತುವರ್ಜಿ ವಹಿಸಬೇಕು ಮತ್ತು ಈ ವಿಚಾರದಲ್ಲಿ ಪಕ್ಷದ ಕಠೋರವಾದಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇಡೀ ವಿಚಾರವನ್ನು ರಾಜಕೀಯ ಮುಕ್ತಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಲ್ಲಿ ಜಗತ್ತಿನ ಪ್ರಜಾಸತ್ತಾತ್ಮಕ ದೇಶಗಳ ಅತ್ಯುತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಿ, ನಮ್ಮ ವಿವಿಧ ಕಾನೂನುಗಳ ಉತ್ತಮ ಅಂಶಗಳನ್ನು ಸೇರಿಸಿ ಅತ್ಯುತ್ತಮವಾದ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಬೇಕು. ಇದು ಸಂಸತ್ತಿನಲ್ಲಿ ಅಂಗೀಕಾರವಾಗಿ ದೇಶದ ಕಾನೂನಾಗಬೇಕು ಮತ್ತು ಯಾವುದೇ ವಿನಾಯಿತಿ ಇಲ್ಲದೆ ಇಡೀ ದೇಶಕ್ಕೆ ಅನ್ವಯ ಆಗಬೇಕು.

ಹಾಗಾದರೆ ಮಾತ್ರ ಭಾರತ ನಿಜವಾದ ಅಭಿವೃದ್ಧಿ ಹೊಂದಿದ ಸಮಾಜವಾಗುತ್ತದೆ ಮತ್ತು ಆ ಪದದ ವ್ಯಾಪಕವಾದ ಅರ್ಥವನ್ನು ಧ್ವನಿಸುತ್ತದೆ. ತಮ್ಮ ಕ್ರಿಯಾಶೀಲ ಚೈತನ್ಯದ ಮೂಲಕ ಗಂಡು ಮತ್ತು ಹೆಣ್ಣು ಸಮಾನವಾದ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT