ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪಾದನಾ ಕ್ಷೇತ್ರದಲ್ಲಿ ಭಾರತ ದಾಪುಗಾಲು

Last Updated 3 ಸೆಪ್ಟೆಂಬರ್ 2017, 5:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಅಧ್ಯಕ್ಷ ರಮೇಶ ಪಾಟೀಲ ಅಭಿಪ್ರಾಯಪಟ್ಟರು.

ದೇಶಪಾಂಡೆ ಫೌಂಡೇಷನ್, ಲಘು ಉದ್ಯೋಗ ಭಾರತಿ ಹಾಗೂ ಟಿಐಇ–ಹುಬ್ಬಳ್ಳಿ ಸಹಯೋಗದಲ್ಲಿ ಹುಬ್ಬಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೈಗಾರಿಕಾ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಇತ್ತೀಚೆಗೆ ಕೈಗಾರಿಕಾ ವಲಯದಲ್ಲಿ ರೋಬೊಟಿಕ್ ಮತ್ತು ಆಟೊಮೇಷನ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಉತ್ಪಾದನೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ’ ಎಂದರು.

‘ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಮತ್ತು ಅದರ ಅಗತ್ಯತೆ ಕುರಿತು ಅರಿವು ಮೂಡಿಸುವ ಕೆಲಸವನ್ನು ಕೆಸಿಸಿಐ ಮಾಡುತ್ತಿದೆ. ಅದಕ್ಕಾಗಿ ವಿವಿಧ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ಹೇಳಿದರು.

ಟೈ ಹುಬ್ಬಳ್ಳಿ ಅಧ್ಯಕ್ಷ ಸಂದೀಪ್ ಬಿಡಸಾರಿಯ, ‘ಆಟೊಮೇಷನ್ ತಂತ್ರಜ್ಞಾನವು ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸುತ್ತದೆ ಎಂಬ ತಪ್ಪು ಕಲ್ಪನೆ ಇದೆ.  ಹೊಸ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಉತ್ಪಾದನಾ ಪ್ರಮಾಣ ಹೆಚ್ಚುತ್ತದೆಯಲ್ಲದೆ, ಕೌಶಲಯುಕ್ತ ಕಾರ್ಮಿಕರ ವೇತನವೂ ಏರಿಕೆಯಾಗುತ್ತದೆ’ ಎಂದರು.

‘ಸ್ಥಿರ ಹಾಗೂ ಭಾರಿ ಪ್ರಮಾಣದ ಉತ್ಪಾದನೆ, ಕಡಿಮೆ ವೆಚ್ಚದಲ್ಲಿ ಅಪಾಯಕಾರಿ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ದೃಷ್ಟಿಯಿಂದ ಇಂತಹ ತಂತ್ರಜ್ಞಾನಗಳ ಅಳವಡಿಕೆ ಅನುಕೂಲಕಾರಿಯಾಗಿದೆ’ ಎಂದು ಗಮನ ಸೆಳೆದರು.

ಲಘು ಉದ್ಯೋಗ ಭಾರತಿ ಅಧ್ಯಕ್ಷ ಶ್ರೀಕಂಠ ದತ್ತ, ‘ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ವಲಯದಲ್ಲಷ್ಟೇ ಅಲ್ಲದೆ, ಕೃಷಿ ಕ್ಷೇತ್ರದಲ್ಲೂ ಆಟೊಮೇಷನ್ ತಂತ್ರಜ್ಞಾನ ಕಾಲಿಟ್ಟಿದೆ. ಸಾಮಾನ್ಯ ರೈತರಿಗೆ ಅಳವಡಿಸಿಕೊಳ್ಳಲು ಆರ್ಥಿಕವಾಗಿ ಹೊರೆಯಾಗುವುದರಿಂದ ಸರ್ಕಾರ ರೈತರ ಗುಂಪುಗಳನ್ನು ರಚಿಸಿ ಕೃಷಿ ಬಳಕೆಯ ಆಟೊಮೇಷನ್ ಯಂತ್ರಗಳನ್ನು ಒದಗಿಸಿ ಕೊಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಐಎಂಎಸ್‌ ಫೌಂಡೇಷನ್‌ನ ಡಾ. ಸುಂದರಮೂರ್ತಿ, ‘ಐಎಂಎಸ್ ಫೌಂಡೇಷನ್‌ ವತಿಯಿಂದ ಅ. 30, 31 ಹಾಗೂ ನವೆಂಬರ್ 1ರಂದು ಮೂರು ದಿನ ಬೆಂಗಳೂರಿನಲ್ಲಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರದರ್ಶನ (ಭಾರತ ಉತ್ಪಾದನಾ ಮೇಳ) ನಡೆಯಲಿದೆ. ಉದ್ಯಮಿಗಳು ಅಲ್ಲಿಗೆ ಬಂದು ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಬಹುದು’ ಎಂದರು.

ದೇಶಪಾಂಡೆ ಫೌಂಡೇಷನ್‌ನ ಸಿಇಒ ನವೀನ್ ಝಾ, ‘ದೊಡ್ಡವರು ತಮ್ಮ ಅಹಂ ಮತ್ತು ಶಿಷ್ಟಾಚಾರವನ್ನು ಬಿಟ್ಟು ಯುವಜನತೆಯ ಹೊಸ ಆಲೋಚನೆಗಳನ್ನು ಆಲಿಸಬೇಕು. ಆಗ ಅನೇಕ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತವೆ’ ಎಂದು ಹೇಳಿದರು.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT