ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮಕ್ಕೆ ವಿರುದ್ಧವಾಗಿ ನಡೆಯುವುದು ಸಲ್ಲ’

Last Updated 3 ಸೆಪ್ಟೆಂಬರ್ 2017, 5:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಸ್ಲಿಮರು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಹೊರತು ವಿರುದ್ಧವಾಗಿ ನಡೆಯಬಾರದು’ ಎಂದು ಮೌಲಾನಾ ಜಹೀರುದ್ದೀನ್‌ ಖಾಜಿ ಶನಿವಾರ ಇಲ್ಲಿ ಕಿವಿಮಾತು ಹೇಳಿದರು. ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೂ ಮುನ್ನ ನೆರೆದಿದ್ದ ಸಹಸ್ರಾರು ಮುಸಲ್ಮಾನರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು ‘1,400 ವರ್ಷಗಳ ಹಿಂದೆಯೇ ಶರಿಯತ್ ಕಾನೂನು ನಮ್ಮಲ್ಲಿ ಇದೆ.

ಸ್ವಾತಂತ್ರ್ಯ ಬಂದ ನಂತರ 1952ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಜಾರಿಯಾಯಿತು. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಇದರಿಂದ ಅವರು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ. ಆದರೆ, ಮಕ್ಕಳಿಗೆ ಇಸ್ಲಾಂ ಧರ್ಮ, ತತ್ವ–ಸಿದ್ಧಾಂತ ಹೇಳಿಕೊಡುವುದನ್ನು ಮರೆಯಬಾರದು’ ಎಂದರು.

‘ಇಸ್ಲಾಂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಸ್ಥಾನ ಇದೆ. ಅವರನ್ನು ಗೌರವದಿಂದ ಕಾಣಲಾಗುತ್ತದೆ. ಇದೀಗ ತಲಾಖ್‌ ಬಗ್ಗೆ ಹೊಸ ಚರ್ಚೆಗಳು ಬಂದು ಹೊಸ ಕಾನೂನು ತರಲಾಗಿದೆ. ಒಂದೇ ಬಾರಿಗೆ ಮೂರು ಸಲ ತಲಾಖ್‌ ಹೇಳುವ ಪದ್ಧತಿ ನಮ್ಮಲ್ಲಿ ಅಪರೂಪ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವ ಯಾವ ಮುಸಲ್ಮಾನನೂ ಆ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.

‘ಮದುವೆ ಆರತಕ್ಷತೆ ಸಂದರ್ಭದಲ್ಲಿ ಡಿ.ಜೆ ಸಂಗೀತ ಹಾಕಿಕೊಂಡು ಕುಣಿಯಬಾರದು. ವಿವಾಹಕ್ಕೆ ಮತ್ತು ಚುನಾವಣೆಗಾಗಿ ದುಂದುವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡಿದರು. ‘ದೇಶದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೆ–ಬೆಳೆಯಾಗಿ ಸಮೃದ್ಧಿ ನೆಲೆಸಲಿ. ಪ್ರಕೃತಿ ವಿಕೋಪಗಳು ಆಗದೇ ಎಲ್ಲರೂ ಶಾಂತಿ–ಸಹಬಾಳ್ವೆಯಿಂದ ಜೀವನ ನಡೆಸಬೇಕು’ ಎಂದು ಸಾಮೂಹಿಕ ಪ್ರಾರ್ಥನೆ ವೇಳೆ ಪ್ರಾರ್ಥಿಸಿದರು.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ ಜಬ್ಬಾರ್‌ ಖಾನ್‌ ಹೊನ್ನಾಳಿ ಅವರು ಬೇಗನೇ ಗುಣಮುಖರಾಗಲಿ ಎಂದು ಮೌಲಾನಾ ಅವರು ಪ್ರಾರ್ಥಿಸಿದರು. ಸಹಸ್ರಾರು ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನ, ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಜನರೇ ಕಾಣುತ್ತಿದ್ದರು. ಪ್ರಾರ್ಥನಾ ಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ, ಅಂಜುಮನ್‌ ಎ ಇಸ್ಲಾಂ ಸಂಸ್ಥೆ ಕಾರ್ಯದರ್ಶಿ ಅಬ್ದುಲ್‌ ವಹಾಬ್‌ ಮುಲ್ಲಾ, ‘ಹುಡಾ’ ಅಧ್ಯಕ್ಷ ಅನ್ವರ್‌ ಮುಧೋಳ, ಮಾಜಿ ಸಚಿವ ಇಸ್ಮಾಯಿಲ್‌ ಕಾಲೆಬುಡ್ಡೆ, ಬಾಬಾಜಾನ ಮುಧೋಳ, ಮಹ್ಮದ್ ಯೂಸುಫ್‌, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಪೊಲೀಸ್ ಕಮಿಷನರ್‌ ಎಂ.ಎನ್‌. ನಾಗರಾಜ, ಡಿಸಿಪಿ (ಕಾನೂನು–ಸುವ್ಯವಸ್ಥೆ) ರೇಣುಕಾ ಸುಕುಮಾರ್‌ ಇದ್ದರು. ಅಲ್ತಾಫ ಹಳ್ಳೂರ ವಂದಿಸಿದರು.

ಸಾಮೂಹಿಕ ಪ್ರಾರ್ಥನೆ ಬಳಿಕ ಮೌಲಾನ ಅವರು ಮೂರುಸಾವಿರ ಮಠಕ್ಕೆ ತೆರಳಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಸತ್ಕರಿಸಿದರು. ಹಬ್ಬಕ್ಕೆ ಶುಭಾಶಯ ಕೋರಿದ ಶ್ರೀಗಳು ‘ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಯತ್ನಿಸಬೇಕು’ ಎಂದು ಸಂದೇಶ ನೀಡಿದರು.
ಹಳೇ ಹುಬ್ಬಳ್ಳಿ ಮೈದಾನದಲ್ಲಿ ಪಾಲಿಕೆ ಸದಸ್ಯ ಅಲ್ತಾಫ ಕಿತ್ತೂರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT