ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಬಂದೂಕು ಹಿಡಿದ; ಕಲೆಗಾಗಿ ಬಣ್ಣ ಹಚ್ಚಿದ

Last Updated 3 ಸೆಪ್ಟೆಂಬರ್ 2017, 6:02 IST
ಅಕ್ಷರ ಗಾತ್ರ

ಸರಳತೆ, ಪ್ರಾಮಾಣಿಕತೆ, ಸೇವಾ ಮನೋಭಾವನೆ, ಧೈರ್ಯ, ಪ್ರತಿಭೆ, ರಾಷ್ಟ್ರೀಯತೆ, ಕ್ರೀಡಾಶಕ್ತಿ ಇವೆಲ್ಲ ಒಬ್ಬರಲ್ಲಿ ಮೇಳೈಸಿರುವುದು ಅಪರೂಪ ದಲ್ಲೇ ಅಪರೂಪ. ಅಂಥ ಅಪರೂಪದ ವ್ಯಕ್ತಿ ವಿನೋದ ಗಣಪತಿ ನಾಯ್ಕ.

ವಿನೋದ ಅವರು ಯಲ್ಲಾಪುರ ತಾಲ್ಲೂಕಿನ ಅರಬೈಲ ಗ್ರಾಮದ ಪಣಸಗುಳಿ ರೈತ ಮನೆತನದವರು. ಸದಾ ನಗುಮೊಗ. ರೈತನ ಮಗನಾದರು ನರನಾಡಿಯಲ್ಲಿ ತುಂಬಿ ಕೊಂಡಿದ್ದು ಅಗಾಧ ರಾಷ್ಟ್ರಪ್ರೇಮ. ನಂತರದ್ದು ಕಲಾ ಸೇವೆ.

ಈ ಉತ್ಕಟತೆ ಬೆಟ್ಟದ ಮಡಿಲಲ್ಲಿ ಬೆಳೆದ ಸಂಭಾವಿತ ಹುಡುಗ ವಿನೋದ ತನ್ನ ಹದಿನಾಲ್ಕನೆ ವಯಸ್ಸಿನಲ್ಲಿಯೇ ಬಣ್ಣ ಬಳಿಯುವಂತೆ ಮಾಡಿತು. ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕದಲ್ಲಿ ‘ಭೇಷ್’ ಅನಿಸಿಕಂಡರೂ ವಿನೋದನ ಮನಸ್ಸು ದೇಶದ ರಕ್ಷಣೆಗಾಗಿ ಹಾತೊರೆ ಯುತ್ತಿತ್ತು. ಪಿ.ಯು.ಸಿ. ಮುಗಿಯುತ್ತಿ ದ್ದಂತೆ ಭಾರತದ ಸೇನಾಪಡೆಯ ಭೂದಳದಲ್ಲಿ ಸೈನಿಕನಾದ.

ಹದಿನೇಳು ವರುಷ ಪಂಜಾಬ್‌, ಹರಿಯಾಣ, ರಾಜಸ್ತಾನ, ಸಿಕ್ಕಿಂ ಮುಂತಾದ ಕಡೆ ಸೈನಿಕನಾಗಿ ಸೇವೆ ಸಲ್ಲಿಸಿದ ವಿನೋದ ಕಾರ್ಗಿಲ್‌ ಯುದ್ಧದಲ್ಲಿ ಶ್ರೀನಗರದ ಗಡಿಯ ನೆಲೆಯಲ್ಲಿ ಪ್ರಾಣ ಪಣವಿಟ್ಟು ಹೋರಾಡಿ ಕನ್ನಡಮ್ಮನ ವೀರ ಮಗನಾಗಿ ಮೆರೆದದ್ದು ಈಗ ಇತಿಹಾಸ. ಹಾಗಾಗಿ, ಸೇನೆಯಿಂದ ಮರಳುವಾಗ ಸಾವಿರ ಸೈನಿಕರಲ್ಲಿ ನಾಲ್ಕೈದು ಸೈನಿಕರಿಗೆ ಕೊಡಮಾಡುವ ‘ಮಾದರಿ ಸೈನಿಕ’ ಬಿರುದಿಗೆ ವಿನೋದ ಪಾತ್ರರಾದರು.

ಸೇನೆಯಿಂದ ಮರಳಿದ ವಿನೋದ ಅವರಿಗೆ ನಾಟಕದ ಗೀಳು ಮತ್ತೆ ಚಿಗುರೊಡೆಯಿತು. ಏಳು ನಾಟಕಗಳನ್ನು ಬರೆದ ವಿನೋದ ಹದಿನೇಳು ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕಗಳ ಪಾತ್ರಧಾರಿಯಾಗಿ, ಸಂಘಟಕರಾಗಿ, ತರಬೇತಿ ದಾರರಾಗಿಯು ಸೇವೆ ಸಲ್ಲಿಸಿದ್ದ ವಿನೋದ ಅವರಿಂದ ನೂರಾರು ಪ್ರತಿಭೆಗಳು ರಂಗವನ್ನೇರುವಂತಾದರು.

ಶ್ರೀಗುರು ಜಿಲ್ಲಾ ರಂಗ ಭೂಮಿ ಕಲಾವಿದರ ವೇದಿಕೆಯ ಕೋಶಾಧ್ಯಕ್ಷರಾದ ವಿನೋದ ಅವರನ್ನು ಜಿಲ್ಲಾ ಮಟ್ಟದ ‘ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉತ್ತಮ ಕ್ರೀಡಾಪಟುವಾಗಿರುವ ವಿನೋದ ಅವರು ಸೇನೆ ಹಾಗೂ ಕಲಾರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಮನಗಂಡು ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದವು.

ನಲವತ್ತೊಂಬತ್ತು ವರುಷ ಸಾಯುವ ವಯಸ್ಸಲ್ಲ. ಆರೋಗ್ಯವಂತರಾದ ವಿನೋದ ಅವರನ್ನು ಅಪಘಾತವೊಂದು ಸಾವಿನ ಮನೆಗೆ ಕರೆದೊಯ್ಯಿತು. ಭಾನುವಾರ (ಸೆ.3) ಯಲ್ಲಾಪುರ ನಗರದಲ್ಲಿ ವಿನೋದ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT