ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿಯ ಅನಾವರಣ ‘ಅಘನಾಶಿನಿ’

Last Updated 3 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ಶಿರಸಿ: ಸಹಸ್ರಾರು ಜನರು, ಜೀವಿಗಳಿಗೆ ನಿತ್ಯದ ತುತ್ತು ನೀಡುವ ಮಮತೆ ತಾಯಿ ಅಘನಾಶಿನಿ ತನ್ನ ನೋವು ನಲಿವು ಗಳನ್ನು ಹೇಳಿಕೊಳ್ಳುವ ‘ಅಘನಾಶಿನಿ’ ಸಾಕ್ಷ್ಯಚಿತ್ರವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಅಘನಾಶಿನಿ ನದಿಯ ಜುಳು ಜುಳು ನಾದ ಕಿಕ್ಕಿರಿದು ಜನರು ತುಂಬಿದ್ದ ಸಭಾಭವನದಲ್ಲಿ ಮಾರ್ದನಿಸಿತು.

ಲ್ಯಾಂಡ್‌ಸ್ಕೇಪ್ ವಿಝಾರ್ಡ್ಸ್‌, ಪರಿಸರ ಪ್ರೇಮಿಗಳ ಸಂಘಟನೆಯು ಅಶ್ವಿನಿಕುಮಾರ್ ಭಟ್ ನಿರ್ದೇಶನದಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರದ ಕನ್ನಡ ಅವತರ­ಣಿಕೆಯ ಬಿಡುಗಡೆ ಶನಿವಾರ ಇಲ್ಲಿ ನಡೆಯಿತು. ಘಟ್ಟದ ಮೇಲಿನ ಮಲೆ­ನಾಡು, ಘಟ್ಟದ ಕೆಳಗಿನ ಕರಾವಳಿಗಳ ನಡುವೆ ಅವಿನಾಭಾವ ಸಂಬಂಧ ಬೆಸೆದಿರುವ ಕನ್ಯೆ ಅಘನಾಶಿನಿ.

ಈ ನದಿ ತನ್ನ ಒಡಲಲ್ಲಿ ಪೋಷಿಸಿರುವ ಜೀವ­ರಾಶಿಗಳು, ಅವುಗಳ ಅನನ್ಯತೆ ಕೇಂದ್ರೀ­ಕರಿಸುವ ಮೂಲಕ ನದಿ ಸಂರಕ್ಷಣೆಯ ಮಹತ್ವವನ್ನು ಸಾರುವ ಕಾರ್ಯ ಸಾಕ್ಷ್ಯಚಿತ್ರದಲ್ಲಿ ಸಾಕಾರಗೊಂಡಿದೆ. ಒಮ್ಮೆಲೇ ತೆರೆದುಕೊಳ್ಳುವ ಜಲ­ತಾಯಿ ಅಘನಾಶಿನಿಯ ವಿಹಂಗಮ ನೋಟ, ಉಂಚಳ್ಳಿ ಜಲಪಾತದಲ್ಲಿ ಕಂಡಿ­ರುವ ಇಂದ್ರಧನುಷ್, ಅಪರೂಪದ ಸಿಂಗಳೀಕ, ರಾಮಪತ್ರೆ ಜಡ್ಡಿ ಕಾಡು, ಹಕ್ಕಿ–ಪಕ್ಷಿಗಳು, ಜಲಚರ­ಗಳು, ಬೇಸಿಗೆಯ ವೇದನೆ, ಮುಂಗಾರಿನ ವೈಯ್ಯಾರ, ಹಾಲಕ್ಕಿಗರ ಸುಗ್ಗಿ ಕುಣಿತ, ಬಿಳಚು ಬದುಕು ಇಂತಹ 15ಕ್ಕೂ ಹೆಚ್ಚು ಕತೆಗಳನ್ನು ಹೇಳುವ ಸಾಕ್ಷ್ಯಚಿತ್ರ ಅಚ್ಚರಿಗಳನ್ನು ಅರಳಿಸುತ್ತ ಸಾಗುತ್ತದೆ. ಅಘನಾಶಿನಿಯ ದನಿಯಾಗಿರುವ ಚಿತ್ರ ತಂಡದ ಸಹನಾ ಬಾಳ್ಕಲ್ ಕನ್ನಡ ನಿರೂಪಣೆಯಲ್ಲಿ ನದಿಯ ಸಂಭ್ರಮವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 41 ನಿಮಿಷಗಳ ಸಾಕ್ಷ್ಯಚಿತ್ರ ಮುಗಿಯುವ ಹೊತ್ತಿಗೆ ಅಘನಾಶಿನಿ ಪ್ರೇಕ್ಷಕರ ಮೈ, ಮನಸ್ಸನ್ನು ಆವರಿಸಿತ್ತು.

ಅಶ್ವಿನಿಕುಮಾರ್ ಭಟ್ ಮಾತನಾಡಿ, ‘ವಿವಿಧ ಜನಾಂಗ, ಸಮುದಾಯಗಳನ್ನು ಬೆಸೆದಿರುವ ಅಪೂರ್ವ ನದಿ ಅಘನಾಶಿನಿ. ಈ ನದಿಯ ತಟದಲ್ಲಿ ಸಹಸ್ರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ’ ಎಂದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಪ್ರಕೃತಿ ಸೃಷ್ಟಿಯಷ್ಟೇ ಅದ್ಭುತವಾಗಿ ಸಾಕ್ಷ್ಯಚಿತ್ರ ಮೂಡಿ­ಬಂದಿದೆ. ಚಿತ್ರ ತಂಡದಲ್ಲಿ ಯುವ ಜನರೇ ಇದ್ದಾರೆ. ಇಂದಿನ ಯುವ ಸಮೂಹ ಮತ್ತೆ ಪ್ರಕೃತಿಯೆಡೆಗೆ ಒಲವು ತೋರುತ್ತಿರುವುದು ಆಶಾದಾಯಕ­ವಾಗಿದೆ’ ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ಆಡಳಿತ ಮಾಡು­ವ­ವರ ಜೊತೆಗೆ ಆಡಳಿತ ನಡೆಸುವ­ವರು ಈ ಚಿತ್ರವನ್ನು ನೋಡ­ಬೇಕು. ಆಗ ನದಿ ಸಂರಕ್ಷಣೆಯ ಮಹತ್ವ ಮನದಟ್ಟಾಗುತ್ತದೆ. ಪಶ್ಚಿಮಘಟ್ಟದ ಉಳಿವಿಗೆ ಈ ಚಿತ್ರ ದೊಡ್ಡ ಕಾಣಿಕೆಯಾಗಿದೆ’ ಎಂದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯ ಹಸಿರನ್ನು ಉಳಿಸುವ ನಿಟ್ಟಿನಲ್ಲಿ ಸಾಕ್ಷ್ಯಚಿತ್ರ ಮೈಲಿಗಲ್ಲಾಗಿದೆ. ನೀರು, ನದಿಯನ್ನು ಅದರಷ್ಟೇ ಬಿಟ್ಟರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಚಿತ್ರ ಅದ್ಭುತವಾಗಿ ಕಟ್ಟಿಕೊಡುತ್ತದೆ’ ಎಂದರು.

‘ಮಲಿನಮುಕ್ತ ಅಘನಾಶಿನಿ ಸಾವಿರಾರು ಕತೆಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಇದನ್ನು ಇಲ್ಲಿನ ಜನರಿಗೆ ತಿಳಿಸಿಕೊಡುವ ಕಾರ್ಯವನ್ನು ಮಿಝಾರ್ಡ್ಸ್‌ ತಂಡ ಮಾಡಿದೆ’ ಎಂದು ಅರಣ್ಯ ವಿಜ್ಞಾನಿ ಪ್ರೊ. ಆರ್. ವಾಸುದೇವ ಅಭಿಪ್ರಾಯಪಟ್ಟರು.

ಡ್ರೋನ್ ಮೂಲಕ ಚಿತ್ರಗಳನ್ನು ಸೆರೆ ಹಿಡಿದಿರುವ ಸುನಿಲ್ ತಟ್ಟೀಸರ ಮಾತ­ನಾಡಿ, ‘ಡ್ರೋನ್ ಬಳಕೆಯ ವಿಭಿನ್ನ ಅನುಭವ ಅಘನಾಶಿನಿ ತಟದಲ್ಲಿ ಸಿಕ್ಕಿತು. ಅನೇಕ ಸವಾಲುಗಳನ್ನು ಎದುರಿಸಿ ಚಿತ್ರೀಕರಣ ಮಾಡಲು ಯಶಸ್ವಿಯಾಗಿ­ದ್ದೇವೆ’ ಎಂದರು. ‘ಚಿತ್ರದಲ್ಲಿ ಎಲ್ಲ ವಿಷಯಗಳ ಮೇಲೆ ಪ್ರತ್ಯೇಕ ಅಧ್ಯಯನ ನಡೆಸಬಹುದು’ ಎಂದು ಮಂಜುನಾಥ ಮಾವಿನಕೊಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT