ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ ಹಂಪಿ

Last Updated 3 ಸೆಪ್ಟೆಂಬರ್ 2017, 6:33 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರವಾಸಿಗರಿಲ್ಲದೇ ಬಣಗುಡುತ್ತಿರುವ ಹಂಪಿಯಲ್ಲೀಗ ಬರೀ ಮೌನ ಆವರಿಸಿಕೊಂಡಿದೆ. ಎಲ್ಲೆಡೆ ಬಿಕೋ ಎನ್ನುತ್ತಿದೆ. ಸದಾ ಜನರಿಂದ ಗಿಜಿಗುಡುವ ಇಲ್ಲಿನ ಸ್ಮಾರಕಗಳ ಬಳಿ ಭದ್ರತಾ ಸಿಬ್ಬಂದಿ ಮತ್ತು  ಕಪಿಗಳು ಬಿಟ್ಟರೆ ಬೇರೆ ಯಾರೂ ಇಲ್ಲ. ಹಂಪಿಯ ರಥಬೀದಿ, ವಿರೂಪಾಕ್ಷೇಶ್ವರ ದೇವಸ್ಥಾನ, ಆನೆಸಾಲು ಮಂಟಪ, ಮಹಾನವಮಿ ದಿಬ್ಬ, ಕಮಲ್‌ ಮಹಲ್‌ ನಿರ್ಜನವಾಗಿವೆ.

ಯಾವ ಸ್ಮಾರಕಗಳ ಬಳಿ ಜನರಿರದ್ದರೂ ಕನಿಷ್ಠ ಪಕ್ಷ ಹೇಮಕೂಟದಲ್ಲಿ ಜನಜಾತ್ರೆ ಇರುತ್ತಿತ್ತು. ಕಾರಣ ಅಲ್ಲಿಂದ ಕಾಣುವ ಸೂರ್ಯಾಸ್ತದ ವಿಹಂಗಮ ನೋಟ ಕಣ್ತುಂಬಿಕೊಳ್ಳಲು ಜನ ಸೇರುತ್ತಿದ್ದರು. ಆದರೆ, ಅಲ್ಲೂ ಪ್ರವಾಸಿಗರ ಸುಳಿವು ಇಲ್ಲ.

ಪ್ರವಾಸಿಗರು ಬರದ ಕಾರಣ ಸ್ಥಳೀಯ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಹೋಟೆಲ್‌, ರೆಸಾರ್ಟ್‌, ಗೂಡಂಗಡಿಗಳು ನಡೆಯುತ್ತಿಲ್ಲ. ಕಡಲೆಕಾಯಿ, ಮೆಕ್ಕೆಜೋಳ, ಎಳನೀರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದವರು ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಪ್ರವಾಸಿಗರನ್ನು ನೆಚ್ಚಿಕೊಂಡು ಸುಮಾರು 100ಕ್ಕೂ ಹೆಚ್ಚು ಮಾರ್ಗದರ್ಶಿಗಳ (ಗೈಡ್‌ಗಳು) ಬದುಕು ನಡೆಯುತ್ತದೆ. ಆದರೆ, ಕೆಲಸವಿಲ್ಲದೇ ಅವರೂ ಸುಮ್ಮನೆ ಕೂರುವಂತಾಗಿದೆ.

‘ಆಗಸ್ಟ್‌ ಎರಡನೇ ವಾರದ ನಂತರ ಪ್ರವಾಸಿಗರು ಬರುವುದು ಕಡಿಮೆಯಾಗಿದೆ. ಕೆಲವು ದಿನಗಳಿಂದ ಬೆರಳೆಣಿಕೆಯಷ್ಟೂ ಪ್ರವಾಸಿಗರು ಬರುತ್ತಿಲ್ಲ. ಎಲ್ಲೆಡೆ ಮೌನ ಆವರಿಸಿಕೊಂಡಿದೆ. ಬಿಕೋ ಎನ್ನುತ್ತಿದೆ’ ಎಂದು ಮಾರ್ಗದರ್ಶಿ ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾತಾವರಣ ತಂಪಾಗಿರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ನಿರೀಕ್ಷೆಯಿತ್ತು. ಅಲ್ಲದೇ ನಡು ನಡುವೆ ಹಬ್ಬ ಹರಿದಿನಗಳು ಕೂಡ ಬಂದಿದ್ದವು. ಕನಿಷ್ಠ ಪಕ್ಷ ರಜಾ ದಿನಗಳಂದು ಜನ ಬರಬಹುದಾಗಿತ್ತು. ಆದರೆ, ಅದೇಕೋ ಗೊತ್ತಿಲ್ಲ. ಜನ ಈ ಕಡೆ ಸುಳಿಯುತ್ತಿಲ್ಲ’ ಎಂದು ಹೇಳಿದರು.

‘ಹಂಪಿಯಲ್ಲಿ ಸುಮಾರು 100 ಗೈಡ್‌ಗಳಿದ್ದೇವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೂ ಕೂಡ ಎಲ್ಲರಿಗೂ ಕೆಲಸ ಸಿಗುತ್ತದೆ ಎಂಬ ಖಚಿತತೆ ಇಲ್ಲ. ಅಂತಹದ್ದರಲ್ಲಿ ಪ್ರವಾಸಿಗರೇ ಇಲ್ಲವೆಂದ ಮೇಲೆ ಪರಿಸ್ಥಿತಿ ಏನಾಗಿರಬಹುದು ನೀವೇ ಊಹಿಸಿ’ ಎಂದರು.

‘ಹಂಪಿಯ ಬಹುತೇಕ ಜನ ಪ್ರವಾಸಿಗರನ್ನೇ ನೆಚ್ಚಿಕೊಂಡು ಬೇರೆ ಬೇರೆ ಕೆಲಸ ಮಾಡುತ್ತಾರೆ. ಜನರೇ ಬರದಿದ್ದರೆ ಕೆಲಸ ಹೇಗೆ ನಡೆಯುತ್ತದೆ. ಅವರ ಹೊಟ್ಟೆ ಹೇಗೆ ತುಂಬುತ್ತದೆ. ಎಲ್ಲ ವಿರೂಪಾಕ್ಷನ ಲೀಲೆ’ ಎಂದು ಸುಮ್ಮನಾದರು.

‘ಎಳನೀರು ಮಾರಾಟ ಮಾಡಿ ಕುಟುಂಬ ನಡೆಸುತ್ತೇನೆ. ನಿತ್ಯ ಏನಿಲ್ಲವೆಂದರೂ ಕನಿಷ್ಠ ₹800ರಿಂದ ಸಾವಿರ ರೂಪಾಯಿ ವ್ಯಾಪಾರ ಆಗುತ್ತಿತ್ತು. ಆದರೆ, ವಾರದಿಂದ ₹200 ವ್ಯಾಪಾರವೂ ಆಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಇದ್ದರೆ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ’ ಎಂದು ಚೆನ್ನಪ್ಪ ತಿಳಿಸಿದರು.

‘ನದಿಯಲ್ಲಿ ನೀರು ಬಂದಿದೆ. ವಾತಾವರಣ ಸಂಪೂರ್ಣ ತಂಪಾಗಿದೆ. ಆದರೂ ಪ್ರವಾಸಿಗರು ಏಕೆ ಬರುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ಆಗಸ್ಟ್‌ನಿಂದ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಆದರೆ, ಯಾಕೋ ಈ ಬಾರಿ ಆ ರೀತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT