ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಪಥದಲ್ಲಿ ನಡೆಸಿದ ಮಾದರಿ ಆಶ್ರಮ

Last Updated 3 ಸೆಪ್ಟೆಂಬರ್ 2017, 6:43 IST
ಅಕ್ಷರ ಗಾತ್ರ

ಬಾದಾಮಿಯ ಶ್ರೀಮದ್ವೀರಶೈವ ಶಿವಯೋಗಮಂದಿರದಲ್ಲಿ ಗುರುವಿರಕ್ತ ಮಠಾಧೀಶರ ಮತ್ತು ವೀರಶೈವ ಲಿಂಗಾಯತ ಸದ್ಭಾವನಾ ಸಮಾವೇಶವನ್ನು ಸೋಮವಾರ (ಸೆ.4) ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಶಿವಯೋಗಮಂದಿರ ಸಂಸ್ಥೆ ಸ್ಥಾಪನೆಯ ಹಿನ್ನೆಲೆ ಅರಿಯುವುದು ಪ್ರಸ್ತುತವೆನಿಸಲಿದೆ.

ವೀರಶೈವ ಲಿಂಗಾಯತ ಸಮಾಜದ ಜಾಗೃತಿ ಮತ್ತು ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯು ಲಿಂ. ಕುಮಾರ ಶಿವಯೋಗಿಗಳ ಎರಡು ಕಣ್ಣುಗಳು ಇದ್ದಂತೆ. 19 ನೇ ಶತಮಾನದ ಕೊನೆಗೆ ಮತ್ತು 20 ಶತಮಾನದ ಆರಂಭದಲ್ಲಿ ಕುಮಾರ ಶ್ರೀಗಳು ನಾಡಿನಾದ್ಯಂತ ಸಂಚರಿಸಿ ಅಖಿಲ ಭಾರತ ಶ್ರೀಮದ್ವೀರಶೈವ ಸಮಾಜದ ಹತ್ತು ಸಮಾವೇಶಗಳನ್ನು ಸಂಘಟಿಸಿದ್ದರು.

ಸಮಗ್ರ ಸಮಾಜ ನಿರ್ಮಾಣವೇ ವೀರಶೈವದ, ವೀರಶೈವರ ಉಳಿವು ಮತ್ತು ಉನ್ನತಿ. ಧಾರ್ಮಿಕ–ಆಧ್ಯಾತ್ಮಿಕ, ಸಾಮಾಜಿಕ–ಶೈಕ್ಷಣಿಕ, ಸಾಂಸ್ಕೃತಿಕ–ಸಾಹಿತ್ಯಿಕ, ಸಾಧಕ–ಸನ್ಯಾಸಿಕ, ವೈಜ್ಞಾನಿಕ–ವೈಚಾರಿಕ ಉದ್ದೇಶಗಳು ಕುಮಾರ ಶ್ರೀಗಳ ಸಾಧನೆಯ ಪಥಗಳಾಗಿದ್ದವು.

ಕುಮಾರ ಶ್ರೀಗಳು ಶರಣರ ಜೀವನ ಸಾಧನೆಗಳಿಂದ ಸ್ಫೂರ್ತಿ ಪಡೆದು ಬಸವಣ್ಣನವರ ಸಮನ್ವಯ ದೃಷ್ಟಿ, ಅಲ್ಲಪ್ರಭುವಿನ ಪೂರ್ಣದೃಷ್ಟಿಗಳೆರಡರ ಸಾಕ್ಷಿ ಸಂಗಮವಾಗಿದ್ದರು. ಶ್ರೀಗಳು ಹೋದಲ್ಲೆಲ್ಲ ಶಿವಶರಣರ ವಚನಗಳನ್ನು ತಮ್ಮ ವಾಣಿಯಿಂದ ಪ್ರಸಾರ ಮಾಡಿದರು. ವಚನ ಪಿತಾಮಹ ಫ.ಗು. ಹಳಕಟ್ಟಿ  ಅವರು ಶ್ರೀಗಳ ಶರಣ ಧರ್ಮದ ಪ್ರಸಾರದ ನಿಲುವು ಸ್ಪಷ್ಟಪಡಿಸುತ್ತದೆ.

ಕುಮಾರ ಶ್ರೀಗಳ ಯೋಚನೆ ಮತ್ತು ಯೋಜನೆಯಲ್ಲಿ  ‘ಸತ್ಯ’ ಇದೆ ಎಂಬುದನ್ನು ಅಂಶವನ್ನು ಒಪ್ಪಿಕೊಂಡ ಹರ್ಡೇಕರ ಮಂಜಪ್ಪ, ಎಸ್‌.ಸಿ. ನಂದಿಮಠ, ವೈ. ನಾಗೇಶಶಾಸ್ತ್ರಿ, ಎಸ್‌.ಎಸ್‌. ಬಸವನಾಳ, ದ್ಯಾಂಪುರ ಚನ್ನಕವಿ ಮತ್ತು ಡಾ. ಜ.ಚ.ನಿ ಪ್ರಾಜ್ಞರು ಕುಮಾರ ಶ್ರೀಗಳನ್ನು ವೈಚಾರಿಕ ಮನೋಧರ್ಮದ ‘ಯುಗಪುರುಷ’ ಎಂದು ಕರೆದು ಗೌರವಿಸಿದ್ದಾರೆ.

ಅಂದಿನ ಕಾಲದಲ್ಲಿ ಶಾಲೆಗಳು ಇಲ್ಲದ ಸಮಯದಲ್ಲಿ ಸಾಲಿಮಠ, ಓದಿಸುವ ಮಠಗಳು ವೀರಶೈವ ಮಠಮಾನ್ಯಗಳು ಅಕ್ಷರ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದವು. ಆಧುನಿಕ ಶಿಕ್ಷಣ ಆರಂಭವಾಗುವುದರ ಜೊತೆಗೆ ಗತ ಇತಿಹಾಸದ ವೀರಶೈವ ಪರಂಪರೆ ಮತ್ತು ಸಮಾಜ, ವಚನ ಮುಂತಾಗಿ ಸಾಹಿತ್ಯ ಪರಂಪರೆ, ಕಾಯಕ, ದಾಸೋಹ, ಸಮಾನತೆ ಮುಂತಾದ ಸಾಮಾಜಿಕ ಮೌಲ್ಯಗಳ ಪ್ರಜ್ಞೆ ಮೂಡತೊಡಗಿ ಇಡೀ ಸಮಾಜವೇ ಜಾಗೃತವಾಯಿತು.

ಕುಮಾರ ಶ್ರೀಗಳು ಶಿಕ್ಷಣದಿಂದ ವೀರಶೈವ ಸಮಾಜವು ಪ್ರಗತಿಗೆ ಸಾಧ್ಯ ಎಂದು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸಮಾಜದ ಭಕ್ತರಿಗೆ ಮಠ ಮಾನ್ಯಗಳಿಗೆ ಕರೆ ನೀಡಿದರು. ಶಿರಸಂಗಿ ಲಿಂಗರಾಜರು, ವಾರದ ಮಲ್ಲಪ್ಪನವರು, ಶೆಟ್ಟರ ಮಹಾಂತಪ್ಪನವರು, ಹುಬ್ಬಳ್ಳಿ ಶ್ರೀಗಳು, ಸಕ್ಕರಿ ಕರಡೆಪ್ಪನವರು, ಕಂಬಿ ಸಿದ್ದರಾಮಣ್ಣ, ಗುಬ್ಬಿ ಹುಚ್ಚಪ್ಪ, ಕಬ್ಬಳ್ಳಿ ಚೆನ್ನಪ್ಪ ಇವರೆಲ್ಲ  ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ವಿಜಯಪುರ, ಸೊಲ್ಲಾಪುರ, ಮೈಸೂರ, ತುಮಕೂರು,  ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕನ್ನಡ , ಸಂಸ್ಕೃತ ಶಾಲೆ ಮತ್ತು ಉಚಿತ ಪ್ರಸಾದ ನಿಲಯಗಳ ಆರಂಭದಿಂದ ವೀರಶೈವ ಸಮಾಜ ಸುಶಿಕ್ಷಿತವಾಗಲು ಕಾರಣವಾಯಿತು. ಲಿಂ. ಗುರುಕುಮಾರ ಶ್ರೀಗಳು ಶ್ರೀಮದ್ವೀರಶೈವ ಶಿವಯೋಗಮಂದಿರದ ಸ್ಥಾಪನೆ ಕುರಿತು ಸಮಾಜದ ಭಕ್ತರನ್ನು, ಮುಖಂಡರನ್ನು ಮುಂದಿಟ್ಟುಕೊಂಡು ಬಾಗಲಕೋಟೆಯಲ್ಲಿ 1908ರಲ್ಲಿ ಜರುಗಿದ ಅಖಿಲ ಭಾರತ ಶ್ರೀಮದ್ವೀರಶೈವ ಮಹಾಸಭೆಯ ನಾಲ್ಕನೆಯ ಸಮ್ಮೇಳನದಲ್ಲಿ ನಿರ್ಣಯಕೈಗೊಳ್ಳಲಾಯಿತು.

ಮಠಾಧಿಪತಿಗಳಾಗುವ ಮುನ್ನ ವಟುಗಳಿಗೆ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ, ಯೋಗ ಮತ್ತು ಸಂಸ್ಕೃತ ಶಿಕ್ಷಣದ ಸಂಸ್ಕಾರ ಕೊಡುವ ಅಪರೂಪದ ಸಂಸ್ಥೆಯನ್ನು ಸ್ಥಾಪಸಿಸಬೇಕು ಎಂಬ ಹಂಬಲವನ್ನು ಶ್ರೀಗಳು  ಹೊಂದಿದ್ದರು. ಇಳಕಲ್‌–ಚಿತ್ತರಗಿ ಸಂಸ್ಥಾನ ಮಠದ 16 ನೇ ಪೀಠಾಧೀಶರಾದ ವಿಜಯಮಹಾಂತ ಶ್ರೀಗಳ ಮಾರ್ಗದರ್ಶನದಲ್ಲಿ ಬನಶಂಕರಿ ಮತ್ತು ಮಹಾಕೂಟ ದೇವಾಯಲದ ಸಮೀಪದ ನಿಸರ್ಗ ಸೌಂದರ್ಯ ಬೆಟ್ಟದ ಮಲಪ್ರಭಾ ನದಿ ತಟದ ಪ್ರಶಾಂತವಾದ ಸ್ಥಳದಲ್ಲಿ ಫೆ.7, 1909ರಂದು ‘ಲಿಂಗಮುದ್ರೆ’ ಸ್ಥಾಪಿಸುವ ಮೂಲಕ ಶಿವಯೋಗಮಂದಿರವನ್ನು ಆರಂಭಿಸಿದರು.

ವೀರಶೈವ ಲಿಂಗಾಯತ ಧರ್ಮದ ಜಾಗೃತಿಗೆ ಶಿವಯೋಗಮಂದಿರವನ್ನು ಸ್ಥಾಪಿಸಿ ಇಲ್ಲಿ ವಟು ಸಾಧಕರಿಗೆ ಯೋಗ, ಸಂಸ್ಕೃತ ಅಭ್ಯಾಸ, ಸಾಮಾಜಿಕ ಮತ್ತು ಆಧ್ಯಾತ್ಮಿಕ ತರಬೇತಿಯೊಂದಿಗೆ ಮಠಾಧೀಶರನ್ನು ಸೃಷ್ಟಿಸಿ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅರ್ಪಿಸಿದರು. ಕುಮಾರ ಶ್ರೀಗಳು ಶಿವಯೋಗಮಂದಿರದಲ್ಲಿ 63 ವಟು ಸಾಧಕರಿಗೆ ತರಬೇತಿ ನೀಡಿದರು. ವೀರಶೈವ ಸಮಾಜದ ಮತ್ತು ಧರ್ಮದ ಏಕೀಕರಣ ಇವೆರಡನ್ನೂ ಕ್ರಿಯಾಶೀಲಗೊಳಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಮಹಾ ಜಂಗಮ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ವಿಭೂತಿ ತಯಾರಿಕೆ ಘಟಕವನ್ನು ಆರಂಭಿಸಿದರು. ಗೋಶಾಲೆ ತೆರೆದರು. ಪ್ರಾಚೀನ ತಾಡವೋಲೆ ಗ್ರಂಥಗಳನ್ನು ರಕ್ಷಿಸಿದರು. ಸಂಸ್ಕೃತ ಪಾಠ ಶಾಲೆ, ವಿವಿಧ ಭಾಷೆಯ ಗ್ರಂಥಗಳನ್ನು ಸಂಗ್ರಹಿಸಿ ವಾಚನಾಲಯ ಮಾಡಿದರು. ಕೃಷಿಗೆ ಮಹತ್ವ ಕೊಟ್ಟರು. ಬಿಳಿ ತೊನ್ನು ರೋಗಕ್ಕೆ ಆಯುರ್ವೇದ ಔಷಧಿಯನ್ನು ತಯಾರಿಸಿದರು. ಜೀವಿತದ ವರೆಗೂ 1904ರಿಂದ 1927ರ ವರೆಗೆ ಅಖಿಲ ಭಾರತ ಶ್ರೀಮದ್ವೀರಶೈವ ಸಮಾಜಕ್ಕಾಗಿ ಶ್ರಮಿಸಿದರು.  

1867 ರಲ್ಲಿ ಜೋಯಿಸರಹರಳಳ್ಳಿ ಜನಿಸಿದ ಹಾಲಯ್ಯ ಮುಂದೆ ಕುಮಾರ ಶ್ರೀಗಳಾಗಿ ವೀರಶೈವ ಲಿಂಗಾಯತ ಧರ್ಮದ ಸಂಘಟನೆ ಮತ್ತು ವಟುಸಾಧಕರಿಗೆ ವಿದ್ಯೆಯನ್ನು ಧಾರೆಯೆರೆದು 1930ರಲ್ಲಿ ಲಿಂಗೈಕ್ಯ ರಾದರು. ನಂತರದಲ್ಲಿ ಸದಾಶಿವ ಶ್ರೀಗಳು ಶಿವಯೋಗಮಂದಿರ ಸಂಸ್ಥೆಯ ಪೀಠಾಧಿಕಾರಿಗಳಾದರು. ಲಿಂ. ಕುಮಾರ  ಶ್ರೀಗಳು ಆರಂಭಿಸಿದ ಹಿಂದಿನ ಎಲ್ಲ ಸಂಸ್ಥೆಗಳನ್ನು ಮುನ್ನಡೆಸುತ್ತ ಬಂದರು. ಇಲ್ಲಿ ಅಧ್ಯಯನಗೈದ ಸಾವಿರಾರು ವಟು ಸಾಧಕರು ಇಂದು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಗುರು–ವಿರಕ್ತಪೀಠಗಳ ಪರಂಪರೆಯ ಮಠಾಧೀಶರಾಗಿ ವೀರಶೈವ ಲಿಂಗಾಯತ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

ಈಗ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿರುವ  ಡಾ. ಸಂಗನಬಸವ ಶ್ರೀಗಳು ಭಕ್ತರ ಮತ್ತು ಸರ್ಕಾರದ ನೆರವಿನೊಂದಿಗೆ ₹ 20 ಕೋಟಿಗೂ ಅಧಿಕ ವೆಚ್ಚದಲ್ಲಿ ಶಿವಯೋಗಮಂದಿರ ಸಂಸ್ಥೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ನೇತೃತ್ವದಲ್ಲಿ ಶಿವಯೋಗಮಂದಿರದಲ್ಲಿ ಸೆ. 4ರಂದು ಗುರುವಿರಕ್ತ ಪೀಠಾಧೀಶರ ಮತ್ತು ವೀರಶೈವ ಲಿಂಗಾಯತ ಸಮಾಜದ ಬೃಹತ್‌ ಸಮ್ಮೇಳನ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT