ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಲೋಕದ ನಿಜಚಿತ್ರಣ ವಿವರಿಸುವ ‘ಜೋಕಪ್ಪನ‘ ಆಚರಣೆ

Last Updated 3 ಸೆಪ್ಟೆಂಬರ್ 2017, 7:20 IST
ಅಕ್ಷರ ಗಾತ್ರ

ದೇವದುರ್ಗ: ಭೂ ಲೋಕದಲ್ಲಿನ ಕಷ್ಟಗಳ ಕುರಿತು ದೇವಾನುದೇವತೆಗಳಿಗೆ ನಿಜ ಚಿತ್ರಣದ ವರದಿಯನ್ನು ನೀಡುತ್ತಾನೆ ಎಂಬ ನಂಬಿಕೆಯೊಂದಿಗೆ ಉತ್ತರ ಕರ್ನಾಟದಲ್ಲಿ ಗಣೇಶ .ಚೌತಿಯ ನಂತರ ಬರುವ ಜೋಕಪ್ಪನ ಆಚರಣೆ ಹಳ್ಳಿಗಳಲ್ಲಿ ಜೋಕಪ್ಪನ ಬರುವಿಕೆಗಾಗಿ ಕಾಯುವಂಥ ಸಂಪ್ರದಾಯ ಇಂದಿಗೂ ಇದೆ. ಗಣೇಶ ಚೌತಿಯ ನಂತರದ ಅಷ್ಟಮಿಯಂದು ಬಾರಿಕರ ಮನೆತನದಲ್ಲಿ ಜೋಕಪ್ಪ ಹುಟ್ಟುತ್ತಾನೆ. ನಂತರದ ಏಳು ದಿನಗಳ ಕಾಲ ಮಹಿಳೆಯರು ಗುಂಪಾಗಿ ರೈತರ ಮನೆ ಬಾಗಿಲಿಗೆ ತೆರಳಿ ಆಯಾ ಕುಟುಂಬದಲ್ಲಿನ ಯಜಮಾನರ ಮತ್ತು ಕುಟುಂಬದ ಸದಸ್ಯರ ಹೆಸರುಗಳನ್ನು ಕೇಳಿಕೊಂಡು ಹಾಡಿನಲ್ಲಿ ಪ್ರಸ್ತಾಪಿಸುತ್ತಾರೆ ಹೇಳುತ್ತಾರೆ.

ಸೆಪ್ಟೆಂಬರ್‌ 1ರಂದು ಜೋಕಪ್ಪ ಹುಟ್ಟಿದ್ದಾನೆ. ಅದೇ ದಿನದಂದಿಲೇ ಮಹಿಳೆಯರು ಮಣ್ಣಿನಿಂದ ಜೋಕಪ್ಪನ ಮೂರ್ತಿಯನ್ನು ನಿರ್ಮಿಸಿಕೊಂಡು ದೊಡ್ಡದಾದ ಬುಟ್ಟಿಯಲ್ಲಿ ಇಟ್ಟುಕೊಂಡು ಅದಕ್ಕೆ ವಿವಿಧ ಬಗೆಯ ಹೂವುಗಳನ್ನು ಹಾಕಿಕೊಂಡು ಬರುವುದು ಸಂಪ್ರದಾಯ ಇದೆ.

ಗಣೇಶೋತ್ಸವದ ನಂತರ ಭೂ ಲೋಕದಿಂದ ದೇವಲೋಕಕ್ಕೆ ತೆರಳುವ ಗಣಪತಿ, ಭೂ ಲೋಕದಲ್ಲಿ ಎಲ್ಲರೂ ಸುಭಿಕ್ಷರಾಗಿದ್ದಾರೆ, ನನಗೆ ಹೊಟ್ಟೆ ತುಂಬಾ ಕಡುಬು, ಹೋಳಿಗೆ ಮೋದಕ ಮತ್ತಿತರ ಸಹಿ ತಿನಿಸುಗಳ ಜೊತೆಗೆ ಮೃಷ್ಟಾನ್ನವನ್ನು ಮಾಡಿ ಉಣಿಸಿದ್ದರು ಎಂದು ಪರಮೇಶ್ವರನ ಮುಂದೆ ಹೇಳುತ್ತಾನೆ.

ಇದರ ಸತ್ಯಸತ್ಯೆಯನ್ನು ಅರಿಯಲು ಪರಮೇಶ್ವರನು ಜೋಕಪ್ಪನನ್ನು ಭೂಲೋಕಕ್ಕೆ ಕಳಿಸುತ್ತಾನೆ. ಒಂದು ವಾರಗಳ ಕಾಲ ಭೋಲೋಕವನ್ನು ಸಂಚರಿಸಿದ ಜೋಕಪ್ಪನಿಗೆ ಎಲ್ಲಿ ನೋಡಿದರೂ ಬರ, ರೈತರ ಕೊರಗು,ಊಟಕ್ಕಾಗಿ ಪರದಾಟ, ರೈತರ ಆತ್ಮಹತ್ಯ ಕಾಣುತ್ತದೆ. ಆಗ ಸಿಕ್ಕ ಹುಲ್ಲನ್ನೇ ಕೊಯ್ದು ಭೂಮಿ ತುಂಬೆಲ್ಲಾ ಓಡಾಡಿಕೊಂಡು ಮಳೆ ಭರಿಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾನೆ ಎನ್ನುವ ಪ್ರಸಂಗವನ್ನು ವಿವರಿಸುವ ‘ಹುಲ್ಲನ ಕೊಯ್ದು ಕಲಕಲ್ಲಾ ಇಡ್ಯಾಡ್ದ ಎನ್ನಯ ಮಳೆಯ ಕರಣಿಸೋ ಎಂದು ಹಾಡುತ್ತಾರೆ.

ಭೂ ಲೋಕದಲ್ಲಿನ ಜನ ಕಷ್ಟ ಅನುಭವಿಸುತ್ತಲಿದ್ದಾರೆ ಎನ್ನುವ ವರದಿಯನ್ನು ಹೊತ್ತು ದೇವಲೋಕಕ್ಕೆ ಜೋಕಪ್ಪ ತೆರಳುತ್ತಾನೆ. ಆಗ ಶಿವ ಈತನ ನಿಜವಾದ ವರದಿಯನ್ನು ಅರಿತುಕೊಂಡು ಮಳೆ ತರಿಸುವ ಮತ್ತು ಬರವನ್ನು ದೂರ ಮಾಡುವುದನ್ನು ಕರಣಿಸುತ್ತಾನೆ ಎನ್ನುವ ನಂಬಿಕೆ ಜನರಲ್ಲಿದೆ. ಈಗಾಗಿ ಗ್ರಾಮೀಣ ಭಾಗದಲ್ಲಿ ಗಣೇಶನಗಿಂತ ಜೋಕಪ್ಪನನ್ನು ಹೆಚ್ಚು ನಂಬುತ್ತಾರೆ ಎಂಬುವುದು ಜನಪದೀಯಿಂದ ತಿಳಿದು ಬರುತ್ತದೆ.

ಜೋಕಪ್ಪನನ್ನು ಒಂದು ವಾರಕಾಲ ಹೊತ್ತುಕೊಂಡು ಮನೆ, ಮನೆಗಳಿಗೆ ತೆರಳಿ ಆತನಿಗಾಗಿ ಕಟ್ಟಲಾದ ಹಾಡುಗಳನ್ನು ಹೇಳಿಕೊಂಡು ಮನೆಯವರು ನೀಡುವ ವಿವಿಧ ಬಗೆಯ ದವಸ ಧಾನ್ಯಗಳು ಸ್ವೀಕರಿಸುವುದು ಸಂಪ್ರದಾಯ ಇದೆ. ಈ ಪದ್ಧತಿಯನ್ನು ಆಚರಿಸಿಕೊಂಡು ಬಂದಿರುವ ಜಾನಪದ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಮೊದಲೆಲ್ಲಾ ಉತ್ತಮವಾಗಿ ಮಳೆ ಬರುತ್ತಿತ್ತು. ಜನರೂ ಕೂಡಾ ಸಾಕಷ್ಟು ಬೆಳೆಯುತ್ತಿದ್ದರು.

ಒಂದು ವಾರದ ಈ ಆಚರಣೆಯ ಸಂದರ್ಭದಲ್ಲಿ ರೈತರು ನೀಡುವ ಕಾಳು ಕಡಿ ಇಡೀ ವರ್ಷಕ್ಕೆ ಆಗುತ್ತಿತ್ತು. ಆದರೆ ಈಗ ಮಳೆ ಬೆಳೆ ಇಲ್ಲದೇ ನಮ್ಮ ಹಾಡು ಕೇಳುವವರೂ ಅಪರೂಪವಾಗಿದ್ದಾರೆ. ಪ್ರತಿ ಊರಲ್ಲಿಯೂ ಇದನ್ನೇ ನಂಬಿಕೊಂಡಿರುವ ಹತ್ತಾರೂ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಜೋಕಪ್ಪನನ್ನು ಹೊತ್ತುಕೊಂಡು ಬಂದಿದ್ದ ಸಿದ್ದಮ್ಮ ಅಳಲನ್ನು ಹೇಳಿಕೊಂಡಳು.

ಈಗ ಸುಮಾರು ಎರಡು,ಮೂರು ವರ್ಷಗಳಿಂದ ರೈತರ ಮನೆ ಬಾಗಿಲಿಗೆ ಜೋಕಪ್ಪನನ್ನು ಹೊತ್ತಿಕೊಂಡು ಹೋದರೆ ನಾನು ಸಾಗುವಳಿ ಮಾಡುವುದುನ್ನು ನಿಲ್ಲಿಸಿದ್ದೇವೆ. ಹೊಲದಲ್ಲಿ ಬೆಳೆ ಇಲ್ಲ ನಿಮ್ಮಗೆಲ್ಲಿ ನೀಡುವುದು ಎಂಬ ಉತ್ತರ ರೈತರಿಂದ ಬರತೊಡಗಿದೆ ಎಂದು ಜೋಕಪ್ಪನ ಹಾಡು ಹೇಳುತ್ತಿದ್ದ ಶರಣಮ್ಮ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT