ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೆಯ ಐತಿಹಾಸಿಕ ವನದುರ್ಗ ಕೋಟೆ

Last Updated 3 ಸೆಪ್ಟೆಂಬರ್ 2017, 7:26 IST
ಅಕ್ಷರ ಗಾತ್ರ

ಶಹಾಪುರ: ಖಾಕಿ ಪಡೆಯು ಕಾನೂನು ರಕ್ಷಣೆ ಕರ್ತವ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿ ಕೆಲಸ ನಿರ್ವಹಿಸುವ ತುಡಿತದಿಂದ ವನದುರ್ಗ ಕೋಟೆ ಹಾಗೂ ಹೊಸಕೇರಾ ಬೇಟೆ ಅರಮನೆಯ ಸ್ವಚ್ಛತಾ ಅಭಿಯಾನ ಕೈಗೊಂಡು ಯಶಸ್ವಿಯಾಗಿದೆ. ಗ್ರಾಮಸ್ಥರು ಮತ್ತು ಯುವಕರು ಇದಕ್ಕೆ ಸಾಥ್‌ ನೀಡಿದ್ದರು. ಈಗ ಈ ಎರಡೂ ತಾಣಗಳು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ವನದುರ್ಗ ಗ್ರಾಮದಿಂದ ತುಸು ಅನತಿ ದೂರದಲ್ಲಿರುವ ಕೋಟೆಯ ಸುತ್ತ ಜಾಲಿ ಗಿಡಗಳು ಬೆಳೆದಿದ್ದವು. ಕೋಟೆಯ ಒಳಗಡೆ ತ್ಯಾಜ್ಯದಿಂದ ಪರಿಸರ ಹಾಳಾಗಿತ್ತು. ಗೋಗಿ ಠಾಣೆಯ ಪಿಎಸ್‌ಐ ಕೃಷ್ಣಾ ಸುಬೇದಾರ ಗ್ರಾಮಕ್ಕೆ ಭೇಟಿ ನೀಡಿದಾಗೊಮ್ಮೆ ಕೋಟೆಯ ಸುತ್ತ ಬೆಳೆದ ಮುಳ್ಳುಕಂಟಿಯಿಂದ ತೊಂದರೆಯಾಗುತ್ತಿತ್ತು.

ಅಲ್ಲದೆ, ಅವರಿಗೆ ಬೇಸರವೂ ಆಗುತ್ತಿತ್ತು. ಇದಕ್ಕೆ ಪರಿಹಾರ ಹುಡಕಬೇಕು ಎಂದು ಸ್ವಚ್ಛತಾ ಅಭಿಯಾನಕ್ಕೆ ತೀರ್ಮಾನಿಸಿ ಗ್ರಾಮದ ಯುವಪಡೆ ಹಾಗೂ ಮುಖಂಡರ ಮನವೊಲಿಸಿದರು.

‘ಅಭಿಯಾನಕ್ಕೆ ಕೈಜೋಡಿಸಲು ಮನವಿ ಮಾಡಿದಾಗ ಯುವಕರು ಮತ್ತು ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದರು. ಆಗಸ್ಟ್‌ನಲ್ಲಿ ಒಂದು ತಿಂಗಳ ಕಾಲ ಸತತ ಜೆಸಿಬಿ ಯಂತ್ರದ ಸಹಾಯದಿಂದ ಇಡೀ ಕೋಟೆಯ ಪ್ರದೇಶವನ್ನು ಸ್ವಚ್ಛಗೊಳಿಸಿದೆವು. ಇದರಿಂದ ಕೋಟೆಯ ಚಿತ್ರಣವೇ ಬದಲಾಗಿದೆ’ ಎಂದು ಸುಬೇದಾರ ಅವರು ತಿಳಿಸಿದರು.

‘ಕಂದಕದಲ್ಲಿ ಹೂಳು ತುಂಬಿದೆ. ನೀರು ಖಾಲಿಯಾದ ಬಳಿಕ ಸ್ವಚ್ಛ ಮಾಡಬೇಕು. ಕೋಟೆಯ ಕೆಲ ಭಾಗ ಕಳಚಿ ಬಿದ್ದಿದೆ. ಅದರ ದುರಸ್ತಿ ಆಗಬೇಕು. ಕೋಟೆಯ ಸಮಗ್ರವಾದ ವಿವರ ಹೇಳುವ ಮಾಹಿತಿ ಫಲಕವನ್ನು ಅಳವಡಿಸಬೇಕು. ಸರ್ಕಾರದ ಅನುದಾನಕ್ಕೆ ಕೈ ಚಾಚದೆ ಸಾಮಾಜಿಕ ಜವಾಬ್ದಾರಿ ಅರಿತು ಎಲ್ಲರೂ ಕೆಲಸ ಮಾಡಬೇಕು’ ಎಂದು ಅವರು ತಿಳಿಸಿದರು.

‘ವನದುರ್ಗ ಮಾರ್ಗದ ಮಧ್ಯದಲ್ಲಿರುವ ಹೊಸಕೇರಾ ಬೇಟೆ ಅರಮನೆಯು ಬಹಿರ್ದೆಸೆ ತಾಣವಾಗಿತ್ತು. ಗ್ರಾಮಸ್ಥರ ಜತೆಗೂಡಿ ಸ್ವಚ್ಛಗೊಳಿಸಲಾಗಿದೆ. ಈಗ ಕಣ್ಮನ ಸೆಳೆಯುತ್ತಿದೆ. ಅರಮನೆಯ ರಕ್ಷಣೆಗೆ ತುರ್ತಾಗಿ ತಂತಿಬೇಲಿ, ಕಂಪೌಂಡ್‌ ನಿರ್ಮಿಸಬೇಕಾಗಿದೆ. ಐತಿಹಾಸಿಕ ಸ್ಮಾರಕ ನಮ್ಮ ಕಣ್ಣು ಮುಂದಿನ ಬೆಳಕು.

ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಮಾಡಿ ಶ್ರಮದಾನದ ಮೂಲಕ ಎಂತಹ ಕೆಲಸವನ್ನು ನಿರ್ವಹಿಸಲು ಸಾಧ್ಯ. ಸಮಾಜಮುಖಿ ಕೆಲಸಗಳಿಗೆ ಎಲ್ಲಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಪ್ರೋತ್ಸಾಹಿಸಿ ಬೆನ್ನು ತಟ್ಟುತ್ತಾರೆ. ಆದರೆ ಮಾಡುವ ಮನಸ್ಸು, ಪ್ರಾಮಾಣಿಕತೆ, ಬದ್ಧತೆ ಇರಬೇಕು’ ಎನ್ನುತ್ತಾರೆ ಕೃಷ್ಣಾ ಸುಬೇದಾರ.

ಐತಿಹಾಸಿಕ ಕೋಟೆ: ಸುರಪುರ ಸಂಸ್ಥಾನದ ಗೋಸಾಲ ವಂಶದ ರಾಜಾ ಪಿಡ್ಡನಾಯಕ (ಕ್ರಿ.ಶ 1741ರಿಂದ 1746) ವನದುರ್ಗ ಕೋಟೆಯನ್ನು ನಿರ್ಮಿಸಿದ. 9 ಎಕರೆಗೂ ಅಧಿಕ ಕೋಟೆ ಸುತ್ತುವರೆದಿದೆ. ‘ವನ’ ಎಂದರೆ ಕಾಡು, ‘ದುರ್ಗ’ ಅಂದರೆ ಕೋಟೆ. ಗ್ರಾಮ ಪ್ರವೇಶಿಸುವವರೆಗೂ ಕೋಟೆ ಕಾಣುವುದಿಲ್ಲ. ಕಾಡಿನ ಮಧ್ಯ ತಗ್ಗು ಪ್ರದೇಶದಲ್ಲಿ ಕೋಟೆ ಇದೆ. ಸೈನಿಕರಿಗೆ ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವ ಕೋಟೆ ಇದಾಗಿತ್ತು.

‘ಕೋಟೆಯ ಸುತ್ತ ಆಳವಾದ ಕಂದಕವಿದ್ದು, ಅದರಲ್ಲಿ ಸದಾ ನೀರು ಇರುತ್ತಿತ್ತು. ಶತ್ರುಗಳು ಸರಳವಾಗಿ ಕೋಟೆ ಪ್ರವೇಶ ಮಾಡದಂತೆ ತಡೆಯುವುದು ಕಂದಕದ ಮೂಲ ಉದ್ದೇಶ. ಕೋಟೆಯ ಬಗ್ಗೆ ಇನ್ನಷ್ಟು ಆಳ ಅಧ್ಯಯನ ಹಾಗೂ ಸಂಶೋಧನೆ ನಡೆಸಬೇಕು’ ಎನ್ನುತ್ತಾರೆ ಹಿರಿಯ ಸಂಶೋಧಕ ಭಾಸ್ಕರರಾವ ಮುಡಬೂಳ.

ಹೊಸಕೇರಾ ಬೇಟೆ ಅರಮನೆ: ಸುರುಪುರ ಸಂಸ್ಥಾನದ ರಾಜಾ ದೇವಿಂದ್ರ ವೆಂಕಟ ನಾಯಕ (1774–1801) ಅವಧಿಯಲ್ಲಿ ಹೊಸಕೇರಾ ಬೇಟೆ ಅರಮನೆ ನಿರ್ಮಿಸಿದ್ದ. ರೋಮನ್‌ ಶೈಲಿಯಲ್ಲಿರುವ ಕಟ್ಟಡವು ನೆಲಮಟ್ಟದಿಂದ ಎರಡು ಅಂತಸ್ತು ಇದ್ದು, ಕೆರೆ ಅಂಗಳಕ್ಕೆ ಹೊಂದಿಕೊಂಡಿದೆ. ಪ್ರಾಣಿಗಳು ನೀರು ಹರಸಿ ಕೆರೆಯಂಗಳಕ್ಕೆ ಬಂದರೆ ಅರಸರು ಅರಮನೆಯಲ್ಲಿ ಕುಳಿತು ಶಿಕಾರಿ ಮಾಡುತ್ತಿದ್ದರು. ಕಟ್ಟಡದ ಕೆಲವು ಕಡೆ ಕಿಂಡಿಗಳನ್ನು ಬಿಡಲಾಗಿದೆ. ತುಪಾಕಿಯಿಂದ ಗುಂಡು ಹೊಡೆಯಲು ಇವು ಸಹಕಾರಿಯಾಗಿದ್ದವು. ಈಗ ಕೆರೆ ಬತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT