ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬರಲಿ ಸಿರಿಧಾನ್ಯ ಯುಗ

Last Updated 3 ಸೆಪ್ಟೆಂಬರ್ 2017, 8:10 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೃಷಿ ಎನ್ನುವುದು ವೈಯಕ್ತಿಕ ನಿರ್ಧಾರವಾದರೂ, ಅದು ಒಂದು ಸಮುದಾಯದ ಪ್ರಕ್ರಿಯೆ’ ಎಂದು ಬೆಂಗಳೂರಿನ ಮಿಲೆಟ್ಸ್‌ ಫೌಂಡೇಷನ್‌ನ ಅಧ್ಯಕ್ಷ ದ್ವಿಜೇಂದ್ರನಾಥ ಗುರು ಅಭಿಪ್ರಾಯಪಟ್ಟರು. ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಶನಿವಾರ ಪುನರ್ಚಿತ್‌ ಸಂಸ್ಥೆ ಏರ್ಪಡಿಸಿದ್ದ ಸಿರಿಧಾನ್ಯ ಮೇಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ನಿತ್ಯಬಳಕೆಯಲ್ಲಿದ್ದ ಸಿರಿಧಾನ್ಯಗಳು ಇದ್ದಕ್ಕಿದ್ದಂತೆ ಮಾಯವಾದವು. ಅವು ಎಲ್ಲಿ ಹೋದವು, ಏಕೆ ಹೋದವು ಮತ್ತು ಹೇಗೆ ಅವುಗಳನ್ನು ಮರಳಿ ತರಬೇಕು ಎನ್ನುವುದರ ಕುರಿತು ಚಿಂತನೆಗಳು ನಡೆಯಬೇಕಿದೆ ಎಂದರು.

ಈ ಬದಲಾವಣೆಯನ್ನು ಒಮ್ಮೆಗೆ ತರಲು ಸಾಧ್ಯವಿಲ್ಲ. ಹಂತಹಂತವಾಗಿ ಅವುಗಳ ಅಳವಡಿಕೆ ಮಾಡಬೇಕು. ಮಳೆ ಪ್ರಮಾಣ ಕಡಿಮೆ ಇರುವ ಚಾಮರಾಜನಗರದ ವಾತಾವರಣಕ್ಕೆ ಕಿರುಧಾನ್ಯ ಬೆಳೆ ಸೂಕ್ತವಾಗಿದೆ. ಬೇರೆ ಸ್ಥಳದಿಂದ ಬೀಜಗಳನ್ನು ತಂದು ಬಿತ್ತುವ ಬದಲು, ಇಲ್ಲಿಯೇ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಬೀಜಗಳನ್ನು ಹುಡುಕಿ ಬೆಳೆ ತೆಗೆಯಬೇಕು. ಅವು ಇಲ್ಲಿನ ಹವಾಮಾನಕ್ಕೆ ಬೇಗನೆ ಹೊಂದಿಕೊಳ್ಳುತ್ತವೆ ಎಂದು ತಿಳಿಸಿದರು.

ಈಗಿನ ಪೀಳಿಗೆಯವರಿಗೆ ಸಿರಿಧಾನ್ಯಗಳನ್ನು ಪರಿಚಯಿಸುವ ಅನಿವಾರ್ಯತೆ ಇದೆ. ಸಿರಿಧಾನ್ಯಗಳನ್ನು ಕೇವಲ ಬೆಳೆದರೆ ಸಾಲದು. ಅದರ ಸಂಸ್ಕರಣೆ, ಸೂಕ್ತ ರೀತಿಯಲ್ಲಿ ಮಾರಾಟ ಮತ್ತು ಬಳಕೆ ಕೂಡ ಆಗಬೇಕು ಎಂದು ಹೇಳಿದರು.

ಆರೋಗ್ಯಕ್ಕೆ ಪೂರಕ: ಇಂದಿನ ತಲೆಮಾರಿನ ಯುವಜನರಲ್ಲಿ ದೈಹಿಕ ದೌರ್ಬಲ್ಯಗಳು ಕಂಡುಬರುತ್ತಿವೆ. ಆಹಾರದಲ್ಲಿ ಶಕ್ತಿ ಇದ್ದರೆ ತಾನೆ ದೇಹದಲ್ಲಿಯೂ ಶಕ್ತಿ ಇರುವುದು. ಅದಕ್ಕೆ ಸಿರಿಧಾನ್ಯಗಳ ಸೇವನೆ ಅಗತ್ಯ ಎಂದು ತಿಳಿಸಿದರು.

ಅಕ್ಕಿಯಲ್ಲಿಯೂ ಆರೋಗ್ಯಕಾರಕ ಅಂಶಗಳಿವೆ. ಆದರೆ, ಭತ್ತದಿಂದ ಬೇರ್ಪಡಿಸುವಾಗ ತೌಡನ್ನು ಸಹ ಪ್ರತ್ಯೇಕಿಸಲಾಗುತ್ತದೆ. ನಿಜವಾದ ಪೌಷ್ಟಿಕಾಂಶ ಇರುವುದು ತೌಡಿನಲ್ಲಿ. ಸಿರಿಧಾನ್ಯಗಳನ್ನೂ ಇದೇ ರೀತಿ ತೌಡನ್ನು ಪ್ರತ್ಯೇಕಿಸಲಾಗುತ್ತಿದೆ. ಇದರಿಂದ ಪ್ರಯೋಜನವಾಗಲಾರದು ಎಂದರು.

ಸಿರಿಧಾನ್ಯ ಒಣಬೇಸಾಯ ಬೆಳೆ. ಒಂದೊಂದು ಪ್ರದೇಶದ ವಿಭಿನ್ನ ವಾತಾವರಣಕ್ಕೆ ಅನುಗುಣವಾಗಿ ಇದರ ಬೆಳೆ ಅವಧಿಯನ್ನು ಅಳವಡಿಸಿಕೊಳ್ಳಬಹುದು. ಅಲ್ಲದೆ, ಕಡಿಮೆ ತೇವಾಂಶ ಸಾಕಾಗಿರುವುದರಿಂದ ನೀರಿನ ಕೊರತೆಯಾದರೂ ತೊಂದರೆಯಾಗಲಾರದು ಎಂದು ವಿವರಿಸಿದರು.

ಇತರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿ ಸಿರಿಧಾನ್ಯಗಳನ್ನು ಬೆಳೆಯುವುದು ಹೆಚ್ಚು ಸೂಕ್ತ. ಮಳೆ ಇಲ್ಲದೆ ಒಣಗಿದ ಗಿಡಗಳು ಮಳೆಬಂದರೆ ಮತ್ತೆ ಹಸಿರಾಗುವ ಗುಣ ಹೊಂದಿವೆ. ಹೀಗಾಗಿ, ಸಿರಿಧಾನ್ಯಗಳು ಬಹುಮಾರ್ಗಗಳಲ್ಲಿ ಲಾಭಕರ ಎಂದರು.

ಸಿರಿಧಾನ್ಯದ ಕಾಳುಗಳನ್ನು ಬೇರ್ಪಡಿಸುವ ಯಂತ್ರೋಪಕರಣಗಳನ್ನು ಪರಿಚಯಿಸಲಾಗುತ್ತಿದೆ. ಸಾಮೂಹಿಕ ಬೆಳೆ ಪದ್ಧತಿ ಅಳವಡಿಕೆಯಾದರೆ ಮಾತ್ರ ಯಂತ್ರಗಳು ಉಪಯುಕ್ತವಾಗುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ಆವರಣದಲ್ಲಿ ಬೆಳೆದಿದ್ದ ಸಿರಿಧಾನ್ಯಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಸಿರಿಧಾನ್ಯಗಳ ಬೀಜಗಳ ಬಳಕೆ, ಬಿತ್ತನೆ ಮತ್ತು ಮಾರಾಟದವರೆಗಿನ ವಿವಿಧ ಹಂತಗಳ ಬಗ್ಗೆ ಸ್ಥಳೀಯ ರೈತರಿಗೆ ಮಾಹಿತಿ ನೀಡಲಾಯಿತು. ಸಿರಿಧಾನ್ಯ ಬೀಜಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ರೈತರು ಸವಿದರು.

ಪುನರ್ಚಿತ್‌ ಸಂಸ್ಥೆಯ ಟ್ರಸ್ಟಿಗಳಾದ ಡಾ. ಎ.ಆರ್. ವಾಸವಿ, ಕೆ. ವೆಂಕಟರಾಜು, ಸಂಸ್ಥೆಯ ಪಿ. ವೀರಭದ್ರನಾಯ್ಕ, ಎಚ್‌. ಮುತ್ತುರಾಜ್‌, ಹೊನ್ನೇರು ಯುವ ಸಮುದಾಯ ಸಂಘಟನೆ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT