ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದ ಅಲೆಮಾರಿಗಳ ಬಿದಿರು ಕಾಯಕ

Last Updated 3 ಸೆಪ್ಟೆಂಬರ್ 2017, 8:59 IST
ಅಕ್ಷರ ಗಾತ್ರ

ಶ್ರೀನಿವಾಸಪುರ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕು. ಆದ್ದರಿಂದ ಕಲೆ, ಸಾಹಿತ್ಯ, ವ್ಯಾಪಾರ, ವೈವಾಹಿಕ ಸಂಬಂಧಗಳು ಆಂಧ್ರದೊಂದಿಗೆ ನಡೆಯುತ್ತವೆ. ಅದೇ ರೀತಿ ಅಲ್ಲಿನ ಕುಶಲ ಕರ್ಮಿಗಳೂ ಇಲ್ಲಿಗೆ ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.

ಬಿದಿರು ಹಾಗೂ ಈಚಲಿನಿಂದ ತಯಾರಿಸಿದ ವಿವಿಧ ವಸ್ತುಗಳನ್ನು ಮಾರುವ ಆಂಧ್ರಪ್ರದೇಶದ ಜನರು ತಾಲ್ಲೂಕು ಕೇಂದ್ರದ ಹೊರ ಭಾಗದ ರಸ್ತೆ ಬದಿಯಲ್ಲಿ ಒಂದೆರಡು ತಿಂಗಳು ನೆಲೆಸುವರು. ಬಿದಿರು ಅಥವಾ ಈಚಲು ದಬ್ಬೆಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ನಿರ್ವಹಿಸುವರು.

ಹಸಿ ಬಿದಿರಿನ ಬೊಂಬನ್ನು ಕತ್ತಿಯಿಂದ ಸೀಳಿ, ಹಸಿರು ಹಾಗೂ ಬಿಳಿ ಭಾಗವನ್ನು ಪ್ರತ್ಯೇಕಿಸುತ್ತಾರೆ. ಹೂದಾನಿ, ಬುಟ್ಟಿ, ಕೋಳಿ ಮಕ್ಕರಿ ಹೀಗೆ ಹಲವು ವಿವಿಧ ಬಗೆಯ ಹಾಗೂ ಬೇರೆ ಬೇರೆ ಗಾತ್ರದ ವಸ್ತುಗಳನ್ನು ಸುಂದರವಾಗಿ ಹೆಣೆಯುವರು.ಇವುಗಳನ್ನು ರಸ್ತೆ ಬದಿಯಲ್ಲಿಯೇ ಪ್ರದರ್ಶನಕ್ಕಿಟ್ಟು ಮಾರಾಟ ಮಾಡುವರು.

ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೇ ಇವರ ಗ್ರಾಹಕರು. ಅಲ್ಲದೆ ಜನರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದೆ. ಮನೆಯ ಒಳಗೆ ಹಾಗೂ ಹೊರಗೆ ಆಲಂಕಾರಿಕ ವಸ್ತುಗಳನ್ನು ಇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಾಗಾಗಿ ಇವರು ತಯಾರಿಸುವ ವಸ್ತುಗಳಿಗೆ ಬೇಡಿಕೆ ಇದೆ.

‘ಕಲಾತ್ಮಕ ವಸ್ತುಗಳನ್ನು ಹೆಣೆಯಲು ಅಗತ್ಯವಾದ ಗುಣಮಟ್ಟದ ಬಿದಿರು ಸ್ಥಳೀಯವಾಗಿ ದೊರೆಯುವುದಿಲ್ಲ. ಮೈಮುರಿದು ದುಡಿದರೆ ದಿನದ ಕೂಲಿಗೆ ಮೋಸವಾಗುವುದಿಲ್ಲ’ ಎಂದು ಈ ಕುಶಲ ಕರ್ಮಿಗಳು ಹೇಳುವರು. ಎಂಬುದು ಬಿದಿರು ಕಲಾವಿದರ ಅಭಿಪ್ರಾಯ.

ಈಚಲು ಎಲೆಯ ದಂಟಿನಿಂದಲೂ ಆಲಂಕಾರಿಕ ವಸ್ತುಗಳನ್ನು ತಯಾರಿಸುವರು. ಬಿದಿರಿಗೆ ಹೋಲಿಸಿದರೆ ಈಚಲು ವೆಚ್ಚದಾಯಕವಲ್ಲ. ನಾಟಿ ಕೋಳಿ ಮರಿ ಸಾಕಲು, ಹುಂಜಗಳನ್ನು ಇಡಲು ವಿಶೇಷವಾಗಿ ಎತ್ತರದ ಬುಟ್ಟಿಗಳನ್ನು ಹೆಣೆಯುತ್ತಾರೆ.

ಊಟದ ಬುಟ್ಟಿ, ಹೂ ಬುಟ್ಟಿ, ವಿವಿಧ ಆಕಾರದ ಹೂದಾನಿಗಳನ್ನು ಹೆಣೆಯುವರು. ಕೆಲವು ಸಲ ತಾವು ಹೆಣೆದ ವಸ್ತುಗಳಿಗೆ ಆಕರ್ಷಕವಾಗಿ ಬಣ್ಣಗಳನ್ನು ಬಳಿಯುವರು. ಅನ್ಯ ರಾಜ್ಯದಿಂದ ವಲಸೆ ಬರುವ ಅಲೆಮಾರಿಗಳ ಈ ಕಾಯಕ ಹಿಂದಿನಿಂದಲೂ ನಡೆದು ಬಂದಿದೆ. ಇಲ್ಲಿನ ಭಾಷಾ ಸಾಮರಸ್ಯ ಹಾಗೂ ಜನರ ಸ್ನೇಹಮಯ ಒಡನಾಟ ಅವರಿಗೆ ಶ್ರೀರಕ್ಷೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT