ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ

Last Updated 3 ಸೆಪ್ಟೆಂಬರ್ 2017, 9:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಶನಿವಾರ ನಸುಕಿನಲ್ಲಿ ಹಾಗೂ ಸಂಜೆ ಧಾರಾಕಾರ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಎರಡು ತಾಸಿಗೂ ಹೆಚ್ಚು ಕಾಲ ಎಡಬಿಡದೆ ಸುರಿದಿದೆ. ನಂತರ ಇಡೀ ದಿನ ಬಿಸಿಲಿನ ವಾತಾವರಣವಿತ್ತು. ಪುನಃ ಸಂಜೆ 4 ಗಂಟೆ ವೇಳೆಗೆ ಆರಂಭವಾದ ಮಳೆ 6 ಗಂಟೆವರೆಗೆ ಧಾರಾಕಾರವಾಗಿ ಸುರಿದಿದ್ದು, ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಜಿಲ್ಲೆಯ ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಾಜಕಾಲುವೆಗಳು, ಹಳ್ಳ, ಕಲ್ಯಾಣಿ, ಪುಷ್ಕರಣಿಗಳು ಭರ್ತಿಯಾಗಿವೆ. ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಳೆಯ ತೀವ್ರತೆಗೆ ಹಲವೆಡೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ತಂತಿಗಳು ತುಂಡಾಗಿವೆ.

ಮಳೆಯಿಂದಾಗಿ ಚರಂಡಿಗಳು ಕ್ಷಣಮಾತ್ರದಲ್ಲಿ ಜಲಾವೃತವಾಗಿದ್ದರಿಂದ ಕೊಳಚೆ ನೀರು ರಸ್ತೆಗೆ ಹರಿದು ಅವಾಂತರ ಸೃಷ್ಟಿಸಿತು. ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ಮಲಮೂತ್ರ ಹಾಗೂ ಕೊಳಚೆ ನೀರು ಮೇಲೆ ಹರಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಹಲವು ಬಡಾವಣೆಗಳಲ್ಲಿ ರಾತ್ರಿಯಿಡೀ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನರಿಗೆ ಸಮಸ್ಯೆಯಾಯಿತು. ಸ್ಥಳೀಯರು ರಸ್ತೆಗೆ ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬಂತು. ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

ಸಂಪರ್ಕ ಕಡಿತ: ನಗರದ ಖಾದ್ರಿಪುರ, ಕೀಲುಕೋಟೆ, ಶಹಿನ್‌ಷಾನಗರ ಹಾಗೂ ಹೊರವಲಯದ ಸಹಕಾರನಗರ, ಅರಹಳ್ಳಿ ರಸ್ತೆಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಬಸ್‌ ಮುಳುಗುವಷ್ಟು ನೀರು ಶೇಖರಣೆಯಾಗಿದ್ದು, ಸುತ್ತಮುತ್ತಲಿನ ಬಡಾವಣೆಗಳಿಗೆ ಸಂಪರ್ಕ ಕಡಿದು ಹೋಗಿದೆ.

ಕೀಲುಕೋಟೆ, ಗಾಂಧಿನಗರ, ರಹಮತ್‌ನಗರ, ಫುಲ್‌ಷಾ ಮೊಹಲ್ಲಾ, ಮಿಲ್ಲತ್‌ನಗರ, ಅಂಬೇಡ್ಕರ್‌ನಗರ, ಕಾರಂಜಿಕಟ್ಟೆ, ಶಹಿನ್‌ಷಾನಗರ, ಖಾದ್ರಿಪುರ, ಚಾಮುಂಡೇಶ್ವರಿ ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಹಾಗೂ ರಾಜಕಾಲುವೆಯ ಕೊಳಚೆ ನೀರು ನುಗ್ಗಿದೆ. ಮನೆಯಲ್ಲಿನ ದಿನಸಿ ಪದಾರ್ಥಗಳು, ಪೀಠೋಪಕರಣಗಳು ಹಾಗೂ ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ. ನಿವಾಸಿಗಳು ಮಳೆ ನೀರಿನಲ್ಲೇ ರಾತ್ರಿ ಕಳೆಯುವಂತಾಯಿತು.

ರೈತಾಪಿ ವರ್ಗಕ್ಕೆ ಖುಷಿ: ಎರಡು ತಿಂಗಳಿನಿಂದ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿ ಮರೆಯಾಗಿದ್ದ ಮಳೆಯನ್ನು ನಂಬಿ ಸಾಕಷ್ಟು ರೈತರು ಬಿತ್ತನೆ ಮಾಡಿದ್ದರು. ನಂತರ ಮಳೆ ಕೈಕೊಟ್ಟಿದ್ದರಿಂದ ಬೀಜಗಳ ಮೊಳಕೆಯೊಡೆಯಲೇ ಇಲ್ಲ. ಮತ್ತಷ್ಟು ರೈತರು ಬಿತ್ತನೆಗೆ ಮಳೆಯನ್ನು ಕಾಯುತ್ತಿದ್ದರು.

ಸತತ ಬರದಿಂದ ನಲುಗಿದ್ದ ರೈತಾಪಿ ವರ್ಗಕ್ಕೆ ವರುಣದೇವ ಖುಷಿ ಕೊಟ್ಟಿದ್ದು, ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಈಗಾಗಲೇ ಬಿತ್ತನೆಯಾಗಿರುವ ರಾಗಿ, ಅವರೆ, ನೆಲಗಡಲೆ ಹಾಗೂ ತೊಗರಿ ಬೆಳೆಗೆ ಮಳೆಯಿಂದ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT