ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಕೋಣಗಳಿಂದ ಹಾವಳಿ

Last Updated 3 ಸೆಪ್ಟೆಂಬರ್ 2017, 9:21 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ನಳ್ಳಿ, ಕಲ್ಮನೆ, ಗಬ್‌ಗಲ್‌ ಪ್ರದೇಶಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದ್ದು, ಅಪಾರ ಪ್ರಮಾಣದ ಬೆಳೆ ನಾಶಗೊಳಿಸುತ್ತಿವೆ. ಶನಿವಾರ ಮುಂಜಾನೆ ನಿಡ್ನಳ್ಳಿ ಲೋಕಪ್ಪಗೌಡ ಎಂಬುವವರ ಕಾಫಿ ತೋಟಕ್ಕೆ ದಾಳಿ ನಡೆಸಿರುವ ಕಾಡುಕೋಣಗಳ ಗುಂಪು, ತೋಟದಲ್ಲಿ ತಿರುಗಾಡಿ ಫಸಲು ತುಂಬಿದ ಕಾಫಿಗಿಡಗಳನ್ನು ಮುರಿದು ಹಾನಿಗೊಳಿಸಿವೆ.

‘ಹೆಮ್ಮಕ್ಕಿ ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಬರುವ ಕಾಡುಕೋಣಗಳು, ಗುಂಪು ಗುಂಪಾಗಿ ದಾಳಿ ನಡೆಸುತ್ತವೆ. ಆಹಾರಕ್ಕಾಗಿ ತೋಟದೊಳಗೆ ತಿರುಗಾಡುವುದರಿಂದ, ಕಾಫಿ, ಕಾಳು ಮೆಣಸು, ಬಾಳೆ ಬೆಳೆಯೆಲ್ಲವೂ ನಾಶವಾಗುತ್ತಿವೆ. ಹಗಲು ವೇಳೆಯಲ್ಲಿಯೇ ಕಾಡುಕೋಣಗಳ ಗುಂಪು ತೋಟ ಪ್ರವೇಶಿಸಿದ ಹಲವು ಘಟನೆಗಳು ನಡೆದಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯಗೊಂಡಿದ್ದಾರೆ. ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

‘ಈ ಬಾರಿ ಮಳೆಯ ವೈಪರಿತ್ಯದಿಂದ ಈ ಭಾಗದಲ್ಲಿ ಫಸಲಿನ ಪ್ರಮಾಣವೂ ಕಡಿಮೆಯಾಗಿದ್ದು, ಅಳಿದುಳಿದ ಕಾಫಿ ಬೆಳೆಯನ್ನು ಕಾಡುಕೋಣಗಳು ಹಾನಿಗೊಳಿಸುತ್ತಿವೆ. ಬೆಳೆದು ನಿಂತು ಫಸಲು ನೀಡುವ ಕಾಫಿ ಗಿಡಗಳನ್ನು ಮುರಿದು ಹಾನಿಗೊಳಿಸಿದರೆ, ಕನಿಷ್ಠ 2 ರಿಂದ ಮೂರು ವರ್ಷಗಳ ಕಾಲ ಫಸಲು ಕಾಣದೇ ಪರದಾಡಬೇಕಾಗುತ್ತದೆ.

ಕಾಡುಕೋಣಗಳ ಹಾವಳಿಯಿಂದ ಈಭಾಗದಲ್ಲಿ ಹೊಸದಾಗಿ ಕೃಷಿ ಮಾಡುವುದು ಕನಸಿನ ಮಾತಾಗಿದೆ. ಹೊಸದಾಗಿ ಯಾವುದೇ ಸಸಿ ನೆಟ್ಟರೂ ಕಾಡುಕೋಣಗಳು ತಿಂದು ಹಾನಿಗೊಳಿಸುತ್ತವೆ. ಈ ಭಾಗದ ಎಲ್ಲಾ ರೈತರ ಕಾಫಿ ತೋಟಗಳು ಸಹ ಕಾಡುಕೋಣಗಳ ದಾಳಿಗೆ ಒಳಗಾಗಿವೆ. ಕೂಡಲೇ ಅರಣ್ಯ ಇಲಾಖೆಯು ಕಾಡುಕೋಣ ಹಾವಳಿ ತಡೆಯಲು ಮುಂದಾಗಬೇಕು ಹಾಗೂ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥ ಸುರೇಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT