ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಾಪುರ ಬುಲ್ಸ್‌ನ ನೂತನ ಸಾರಥಿ..

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಕ್ರಿಕೆಟ್‌ ಲೋಕ ಕಂಡ ಪ್ರತಿಭಾನ್ವಿತ ಆಟಗಾರರಲ್ಲಿ ಭರತ್‌ ಚಿಪ್ಲಿ ಕೂಡ ಒಬ್ಬರು. ಎಳವೆಯಿಂದಲೇ ಕ್ರಿಕೆಟ್‌ನ ಪಾಠಗಳನ್ನು ಕಲಿತ ಅವರು ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ವಿವಿಧ ವಯೋಮಿತಿಯೊಳಗಿನವರ ಡಿವಿಷನ್‌ ಕ್ರಿಕೆಟ್‌ ಲೀಗ್‌ಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದ ಅವರು 22ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಅಡಿ ಇಟ್ಟಿದ್ದರು.

‘ಮಿಲಿಯನ್‌ ಡಾಲರ್‌ ಬೇಬಿ’ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲೂ (ಐಪಿಎಲ್‌) ಚಿಪ್ಲಿ ಮೋಡಿ ಮಾಡಿದ್ದರು. 2008ರ ಚೊಚ್ಚಲ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದ ಅವರು ಬಳಿಕ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳಲ್ಲೂ ಆಡಿ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದ್ದರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ನ (ಕೆಪಿಎಲ್‌) ಹಿಂದಿನ ಆವೃತ್ತಿಗಳಲ್ಲಿ ಸ್ಫೋಟಕ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಚಿಪ್ಲಿ, ಈ ಬಾರಿ ಬಿಜಾಪುರ ಬುಲ್ಸ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಅವರು ಹೊಸ ಜವಾಬ್ದಾರಿ ಮತ್ತು ತಮ್ಮ ಮುಂದಿರುವ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಬುಲ್ಸ್‌ ತಂಡದ ಸಾರಥ್ಯ ಸಿಕ್ಕಿದೆ. ಹೇಗನಿಸುತ್ತಿದೆ?
ತುಂಬಾ ಖುಷಿಯಾಗಿದೆ. ಈ ಬಾರಿಯ ಕೆಪಿಎಲ್‌ನಲ್ಲಿ ಬುಲ್ಸ್‌ ತಂಡವನ್ನು ಮುನ್ನಡೆಸುವ ಅವಕಾಶ ಸಿಗಬಹುದೆಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ನೀಡಿರುವ ಫ್ರಾಂಚೈಸ್‌ಗೆ ಕೃತಜ್ಞನಾಗಿದ್ದೇನೆ. ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ.

* ಈಗ ನಿಮ್ಮ ಮುಂದಿರುವ ಸವಾಲುಗಳೇನು?
ತಂಡದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರಿದ್ದಾರೆ. ಅವರನ್ನು ಪ್ರತಿ ಹಂತದಲ್ಲೂ ಹುರಿದುಂಬಿಸಬೇಕು.ಈ ಮೂಲಕ ಎಲ್ಲರನ್ನು ಒಗ್ಗೂಡಿಸಿ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಬೇಕು.

* 2015ರಲ್ಲಿ ನಿಮ್ಮ ತಂಡ ಚಾಂಪಿಯನ್‌ ಆಗಿತ್ತು. ಆದರೆ ಹೋದ ವರ್ಷ ಪ್ರಶಸ್ತಿ ಉಳಿಸಿಕೊಳ್ಳಲು ಆಗಲಿಲ್ಲವಲ್ಲ?
ಹೋದ ಬಾರಿಯೂ ನಾವು ತುಂಬಾ ಚೆನ್ನಾಗಿ ಆಡಿದ್ದೆವು. ನಾಕೌಟ್‌ ಪ್ರವೇಶಿಸಬೇಕಾದರೆ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಗೆಲ್ಲಬೇಕಿತ್ತು. ಆ ಪಂದ್ಯದಲ್ಲಿ ನಮ್ಮಿಂದ ಗುಣಮಟ್ಟದ ಸಾಮರ್ಥ್ಯ ಮೂಡಿಬಂದಿರಲಿಲ್ಲ. ಹೀಗಾಗಿ ನಿರಾಸೆ ಎದುರಾಗಿತ್ತು.

* ಕೆಪಿಎಲ್‌ನಿಂದ ಆಗಿರುವ ಲಾಭಗಳೇನು?
ಕೆಪಿಎಲ್‌ ಶುರುವಾದ ನಂತರ ಕರ್ನಾಟಕದಲ್ಲಿ ಕ್ರಿಕೆಟ್‌ಗೆ ಹೊಸ ಮೆರುಗು ಸಿಕ್ಕಿದೆ. ಗ್ರಾಮೀಣ ಭಾಗದಿಂದ ಸಾಕಷ್ಟು ಆಟಗಾರರು ಮುನ್ನೆಲೆಗೆ ಬಂದಿದ್ದಾರೆ. ಹೊಸ ವಿಷಯಗಳನ್ನು ಕಲಿಯಲು ಯುವ ಆಟಗಾರರಿಗೆ, ಲೀಗ್‌ ವೇದಿಕೆಯಾಗಿದೆ.

* ಬಿಜಾಪುರ ಬುಲ್ಸ್‌ ತಂಡದ ಬಗ್ಗೆ ಹೇಳಿ?
ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರಿದ್ದಾರೆ.ಜೊತೆಗೆ ಉತ್ತಮ ಆಲ್‌ರೌಂಡರ್‌ಗಳನ್ನೂ ಹೊಂದಿದ್ದೇವೆ. ಬೌಲಿಂಗ್‌ನಲ್ಲಿ ನಾವು ಬಲಿಷ್ಠರಾಗಿದ್ದೇವೆ. ಕೆ.ಸಿ. ಕಾರ್ಯಪ್ಪ, ಎಚ್‌.ಎಸ್‌.ಶರತ್‌ ಮತ್ತು ಅಭಿಮನ್ಯು ಮಿಥುನ್‌ ಅವರು ಪರಿಣಾಮಕಾರಿ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

* ಐಪಿಎಲ್‌ನಲ್ಲಿ ಆಡಿದ ಅನುಭವ ಹೇಗಿತ್ತು?
ಐಪಿಎಲ್‌ನಲ್ಲಿ ಆಡಿದ್ದು ನಿಜಕ್ಕೂ ವಿಶೇಷ ಅನುಭವ ನೀಡಿದೆ. ಕ್ರಿಕೆಟ್‌ ಲೋಕ ಕಂಡ ದಿಗ್ಗಜ ಆಟಗಾರರ ಜೊತೆ ಬೆರೆಯುವ ಮತ್ತು ಅವರಿಂದ ಅನೇಕ ವಿಷಯಗಳು ಮತ್ತು ಕೌಶಲಗಳನ್ನು ಅರಿತುಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ.

* ನೀವು ರಣಜಿ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಆಡಿದ್ದೀರಿ. ಆದರೆ ಭಾರತ ತಂಡವನ್ನು ಪ್ರತಿನಿಧಿಸಲು ಆಗಲಿಲ್ಲವಲ್ಲ ?
ರಣಜಿ ಮತ್ತು ಐಪಿಎಲ್‌ನಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ. ಭಾರತ ತಂಡದಲ್ಲಿ ಸ್ಥಾನ ಗಳಿಸಬೇಕೆಂಬುದು ಎಲ್ಲರ ಕನಸಾಗಿರುತ್ತದೆ. ಆ ಹಾದಿ, ಹೇಳಿಕೊಳ್ಳುವಷ್ಟು ಸುಲಭದ್ದಂತೂ ಅಲ್ಲ. ಸ್ಥಿರ ಸಾಮರ್ಥ್ಯ ತೋರಲು ವಿಫಲನಾಗಿದ್ದರಿಂದ ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಮರೀಚಿಕೆಯಾಯಿತು.

* ಈ ಬಾರಿಯ ಕೆಪಿಎಲ್‌ ಆಟಗಾರರ ಹರಾಜಿನಲ್ಲಿ ನಿಮಗೆ ನಿರೀಕ್ಷಿಸಿದಷ್ಟು ಮೊತ್ತ ಸಿಗಲಿಲ್ಲವಲ್ಲ?
ಫ್ರಾಂಚೈಸ್‌ಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಾಗ, ಅವರು ಈ ಹಿಂದೆ ಹೇಗೆ ಆಡಿದ್ದರು, ಪ್ರಸ್ತುತ,ಲಯದಲ್ಲಿದ್ದಾರೊ ಇಲ್ಲವೊ, ಹೀಗೆ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರುತ್ತಾರೆ. ಹೋದ ಆವೃತ್ತಿಯಲ್ಲಿ ನಿರೀಕ್ಷಿಸಿದಷ್ಟು ಚೆನ್ನಾಗಿ ಆಡಿರಲಿಲ್ಲ. ಹೀಗಾಗಿಯೇ ಫ್ರಾಂಚೈಸ್‌ಗಳು ದೊಡ್ಡ ಮೊತ್ತದ ಬಿಡ್‌ ಮಾಡಲು ಹಿಂದೇಟು ಹಾಕಿರಬಹುದು.

* ಹೋದ ಬಾರಿ ಉತ್ತಪ್ಪ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಅವರು ಇಲ್ಲ. ಅವರ ಅನುಪಸ್ಥಿತಿ ಕಾಡಬಹುದೇ?
ರಾಬಿನ್‌ ಉತ್ತಪ್ಪ ಶ್ರೇಷ್ಠ ಆಟಗಾರ. ದೇಶಿ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವಿ. ಟಿ-20ಯಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಅವರಲ್ಲಿದೆ. ಈ ಬಾರಿ ಅವರು ಕೆಪಿಎಲ್‌ನಲ್ಲಿ ಆಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಪ್ರತಿ ಸಲವೂ ಲೀಗ್‌ನಲ್ಲಿ ಹೊಸಬರು ಮಿಂಚುತ್ತಿದ್ದಾರೆ. ಹೀಗಾಗಿ ಉತ್ತಪ್ಪ ಅನುಪಸ್ಥಿತಿ ಅಷ್ಟಾಗಿ ಕಾಡದು.

* ಈ ಬಾರಿ ನಿಮ್ಮ ತಂಡ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ?
ಈ ಸಲ ಟ್ರೋಫಿ ಎತ್ತಿ ಹಿಡಿದು ಹಿಂದಿನ ನಿರಾಸೆ ಮರೆಯುವುದು ನಮ್ಮ ಗುರಿ. ಇದಕ್ಕಾಗಿ ವಿಶೇಷ ಬಗೆಯ ತರಬೇತಿಗಳನ್ನು ಕೈಗೊಂಡಿದ್ದೇವೆ. ಆಟಗಾರರಿಗೆ ಏಕಾಗ್ರತೆ ಬಹಳ ಅಗತ್ಯ. ಆದ್ದರಿಂದ ಪ್ರತಿ ದಿನವೂ ಯೋಗಾಭ್ಯಾಸ ಮಾಡುತ್ತಿದ್ದೇವೆ. ಆಟಗಾರರ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸುವ ಸಲುವಾಗಿ ಫ್ರಾಂಚೈಸ್‌ ನಮಗಾಗಿ ಬಂಡೀಪುರದಲ್ಲಿ ಸಫಾರಿ ಹಮ್ಮಿಕೊಂಡಿತ್ತು. ಸುಂದರ ಪರಿಸರದಲ್ಲಿ ಎಲ್ಲರೂ ಬೆರೆತಿದ್ದು ತುಂಬಾ ಖುಷಿ ನೀಡಿತು.

* ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಬಹುದು ಅಂತಾ ಭಾವಿಸುತ್ತೀರಿ?
ಟಿ-20 ಕ್ರಿಕೆಟ್‌ನಲ್ಲಿ ಪಂದ್ಯದ ದಿನ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಇಂತಹವರೇ ಚಾಂಪಿಯನ್ ಆಗಬಹುದು ಅಂತಾ ಈಗಲೇ ಹೇಳುವುದು ಕಷ್ಟ. ನಾವು ಶಕ್ತಿಯುತವಾಗಿದ್ದೇವೆ. ಹುಬ್ಬಳ್ಳಿ ಟೈಗರ್ಸ್‌ ಕೂಡ ಬಲಿಷ್ಠವಾಗಿದೆ. ಇತರ ತಂಡಗಳನ್ನೂ ಕಡೆಗಣಿಸುವಂತಿಲ್ಲ.

* ಈ ಬಾರಿ ರಾಕ್‌ಸ್ಟಾರ್ಸ್‌ ತಂಡ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಮೈದಾನಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಬಹುದೆ?
ಗೊತ್ತಿಲ್ಲ. ಈ ಬಾರಿ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಲೀಗ್‌ನ ಎಲ್ಲಾ ಪಂದ್ಯಗಳು ನೇರ ಪ್ರಸಾರವಾಗಲಿವೆ. ಹೀಗಾಗಿ ಸಾಕಷ್ಟು ಪ್ರಚಾರ ಸಿಗಲಿದೆ. ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್‌ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ಹಿಂದೆಲ್ಲಾ ಅಲ್ಲಿ ಪಂದ್ಯಗಳು ನಡೆದಾಗ ಮೈದಾನ ಕಿಕ್ಕಿರಿದು ತುಂಬಿರುತ್ತಿತ್ತು. ಈ ಬಾರಿ ಅಲ್ಲಿ ಪ್ರೇಕ್ಷಕರ ಸಂಖ್ಯೆ ಅಲ್ಪ ಕ್ಷೀಣಿಸಬಹುದು ಅಂದುಕೊಂಡಿದ್ದೇನೆ.

* ನಿಮ್ಮ ತಂಡದ ಮಾಲೀಕರ ಬೆಂಬಲದ ಬಗ್ಗೆ ಹೇಳಿ?
ಕಿರಣ್‌ ಕಟ್ಟೀಮನಿ ಅವರು ಮೊದಲಿನಿಂದಲೂ ನಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ. ಆಟಗಾರರು ಏನೇ ಕೇಳಿದರೂ ಇಲ್ಲ ಎಂದು ಹೇಳಿಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಆಟಗಾರರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ನಾವೆಲ್ಲಾ ಒಂದು ಕುಟುಂಬದಂತೆ ಇದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT