ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಪೈಲ್ವಾನರ ಯಶೋಗಾಥೆ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬರೋಬ್ಬರಿ ಒಂದು ವರ್ಷದ ಹಿಂದಿನ ಮಾತು. ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕಂಚಿನ ಪದಕ ಸಾಧನೆ ಮಾಡಿದಾಗ, ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಸಂಭ್ರಮದ ವಾತಾವರಣ ಗರಿಗೆದರಿತ್ತು.

ಈಚೆಗಷ್ಟೇ ಅಂತಹದ್ದೇ ಉಲ್ಲಾಸ ಆ ಊರಿನಲ್ಲಿ ಮತ್ತೆ ಮನೆಮಾಡಿತ್ತು. ಹೋದ ತಿಂಗಳು ಫಿನ್ಲೆಂಡ್‌ನಲ್ಲಿ ನಡೆದಿದ್ದ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಂಜುಕುಮಾರಿ ಕಂಚು ಗೆದ್ದಿದ್ದು ಆ ಸಂತಸಕ್ಕೆ ಕಾರಣವಾಗಿತ್ತು.

ಈ ಎರಡೂ ಸಾಧನೆಗಳ ಹಿಂದೆ ಮಹತ್ವದ ಕಾಣಿಕೆ ನೀಡಿರುವ ಕುಸ್ತಿ ಕೋಚ್‌ಗಳಾಗಿರುವ ಆವಳಿ ಸಹೋದರರು ಗೋಕಾಕ್‌ನವರು. ರಾಮ್ ಬುಡಕಿ ಮತ್ತು ಶ್ಯಾಮ್ ಬುಡಕಿ ಈಗ ಭಾರತದ ಕುಸ್ತಿ ಕ್ಷೇತ್ರದಲ್ಲಿ ಕೋಚ್‌ಗಳಾಗಿ ದೊಡ್ಡ ಸಾಧನೆ ಮಾಡುವತ್ತ ದಾಪುಗಾಲಿಟ್ಟಿದ್ದಾರೆ.

ಆಗ ಸಾಕ್ಷಿ ಅವರಿಗೆ ತರಬೇತಿ ನೀಡಿದ್ದ ತಂಡದಲ್ಲಿ ಶ್ಯಾಮ್ ಇದ್ದರು. ಆದರೆ ಈ ಬಾರಿ ಮಂಜುಕುಮಾರಿ ಸೇರಿದಂತೆ ಭಾರತದ ಜೂನಿಯರ್ ಮಹಿಳಾ ತಂಡದಲ್ಲಿರುವ ಎಲ್ಲ ಕುಸ್ತಿಪಟುಗಳಿಗೂ ರಾಮ್ ಕೋಚ್ ಆಗಿದ್ದಾರೆ. ಮಂಜುಕುಮಾರಿ ಅವರು 59 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಪದಕ ಕೊರಳೆಗೇರಿಸಿಕೊಂಡು ಬಂದವರೇ ತಮ್ಮ ಕೋಚ್ ರಾಮ್‌ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದರು ಮಂಜುಕುಮಾರಿ.

ರಾಮ್ ಅವರು ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವೀಧರರು  ಆದರೆ, ಕೋಚಿಂಗ್‌ನಲ್ಲಿ ಎನ್ಐಎಸ್ ತರಬೇತಿ ಪಡೆದು ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಲಖನೌದಲ್ಲಿ ಸಬ್‌ ಜೂನಿಯರ್ ಬಾಲಕಿಯರ ತಂಡದ ಶಿಬಿರದ ಮುಖ್ಯ ಕೋಚ್ ಆಗಿದ್ದಾರೆ. ಆಲ್ಲಿಯೇ ಮಂಜುಕುಮಾರಿ ಅವರಿಗೂ ತರಬೇತಿ ನೀಡಿದ್ದಾರೆ.

ಶ್ಯಾಮ್ ಆವರು ಕರ್ನಾಟಕ ವಿಶ್ವವಿದ್ಯಾಲಯದ  ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರ. ಕೆಲಕಾಲ ಟಿ.ವಿ. ವಾಹಿನಿಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಕುಸ್ತಿ ಅಖಾಡದ ಮಣ್ಣಿನ ಸೋಗಡು ಅವರನ್ನು ಬಿಡಲಿಲ್ಲ. ವೃತ್ತಿಯನ್ನು ಬಿಟ್ಟು ಪ್ರವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಅದೂ ಅವರ ಕೈಹಿಡಿಯಿತು.

ಸಾಕ್ಷಿ ಮಲೀಕ್ ಅವರಿಗೆ ತರಬೇತಿ ನೀಡಿಧ್ದ ನಾಲ್ವರು ತರಬೇತುದಾರರಲ್ಲಿ ಶ್ಯಾಮ್ ಕೂಡ ಇದ್ದರು. ಕುಲದೀಪ್ ಸಿಂಗ್, ಮಂಜೀತ್‌ ರಾಣಿ, ಜಾರ್ಜಿಯಾದ ಪ್ರೊಬಿನೊ ದೊಬೊ ಅವರೊಂದಿಗೆ  ಕಾರ್ಯನಿರ್ವಹಿಸಿದ್ದರು.

ಅವಳಿ ಸಹೋದರರಿಬ್ಬರೂ ಬಾಲ್ಯದಿಂದಲೂ ಉತ್ತಮ ಕುಸ್ತಿಪಟುಗಳಾಗಿದ್ದವರು. ಇಬ್ಬರೂ  ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದರು. ಬೆಳಗಾವಿಯ ಡಿವೈಎಸ್‌ಎಸ್‌ನಲ್ಲಿ ತರಬೇತಿ ಪಡೆದಿದ್ದರು.

‘ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಸಾಕ್ಷಿ.  ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡುತ್ತಿದ್ದ ಕುಸ್ತಿಪಟು ಅವರು. ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ಅವಧಿ  ಅವರನ್ನು ಹತ್ತಿರದಿಂದ ನೋಡಿದ್ದೇನೆ. ತಮ್ಮ ಲೋಪಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಗುಣ ಅವರಲ್ಲಿದೆ. ಅಲ್ಲದೇ ಲೋಪಗಳನ್ನು ತಿದ್ದಿಕೊಳ್ಳಲು ನಮ್ಮ ಮಾರ್ಗದರ್ಶನ ಪಡೆದು ಶ್ರದ್ಧೆಯಿಂದ ರೂಢಿಸಿಕೊಳ್ಳುತ್ತಿದ್ದರು. ರಿಯೊ ಒಲಿಂಪಿಕ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ನಿಜಕ್ಕೂ ಚೆನ್ನಾಗಿ ಆಡಿದ್ದರು‘ ಎಂದು ಶ್ಯಾಮ್ ಮೆಲುಕು ಹಾಕುತ್ತಾರೆ.

‘ಗೀತಾ ಪೋಗಟ್, ಬಬಿತಾ ಪೋಗಟ್, ಸಾಕ್ಷಿ ಮಲೀಕ್ ಅವರ ಪ್ರೇರಣೆಯಿಂದಾಗಿ ಕುಸ್ತಿ ಕಲಿಯಲು ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. 2008ರಿಂದ ಇಲ್ಲಿಯವರೆಗೆ ಭಾರತದ ಕುಸ್ತಿಪಟುಗಳು ಪದಕ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಸಬ್‌ ಜೂನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಹೆಚ್ಚು ಕುಸ್ತಿಪಟುಗಳಿದ್ದಾರೆ. ಅದರೆ ಫಲವಾಗಿಯೇ ಮಂಜುಕುಮಾರಿ ಅವರಂತಹವರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ಜೂನಿಯರ್ ಕುಸ್ತಿಪಟುಗಳಿಗೆ ತರಬೇತಿ ನೀಡುವುದು ಬಹಳ ಸಂತಸದ ವಿಷಯ. ಎಳವೆಯಲ್ಲಿಯೇ ಉತ್ತಮ ಕೌಶಲಗಳನ್ನು ಕಲಿಸುತ್ತ ಅವರನ್ನು ಸಿದ್ಧಗೊಳಿಸಿ ರಾಷ್ಟ್ರೀಯಮಟ್ಟಕ್ಕೆ ಬೆಳೆಸುವುದು ತೃಪ್ತಿ ಕೊಡುತ್ತದೆ. ಅಂತಹ ಕಾರ್ಯವನ್ನು ರಾಮ್ ಮಾಡುತ್ತಿದ್ದಾರೆ’ ಎಂದು ಶ್ಯಾಮ್ ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT