ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಧರ್ಮ: ಅನುಮಾನವೇ ಬೇಡ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯಲ್ಲಿ ಜುಲೈ 1ರಂದು ನಾನು ಬರೆದ ‘ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?’ ಎಂಬ ಲೇಖನಕ್ಕೆ ಬಂದಿರುವ ಪರ–ವಿರೋಧದ ಅಭಿಪ್ರಾಯಗಳಿಗೆ ನಾನಿಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ.

ವಿವಿಧ ಪ್ರತಿಕ್ರಿಯೆಗಳು ಒಂದು ಕಡೆ; ಇದನ್ನು ಕುರಿತ ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕೀಯ ನಿಲುವುಗಳು ಮತ್ತೊಂದು ಕಡೆ ಹಾಗೂ ಹಿಂದೂ ಧರ್ಮದ ಕೆಲವು ಮಠಾಧೀಶರ ಮತ್ತು ಆರ್‌ಎಸ್‌ಎಸ್‌ ಸರಸಂಘಚಾಲಕರ ಅಭಿಪ್ರಾಯಗಳು ಮಗದೊಂದು ಕಡೆ ಸೇರಿ ಬಹುದಿನಗಳಿಂದ ಕಗ್ಗಂಟಾಗಿರುವ ಲಿಂಗಾಯತ-ವೀರಶೈವ ದ್ವಂದ್ವವು ಇಂದು ವಿಚಿತ್ರ ಆಯಾಮ ಪಡೆದುಕೊಂಡಿದೆ.

ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗವೆಂದು ವಾದಿಸುವ ‘ವೀರಶೈವ’ರಿಗೆ, ಹಿಂದೂ ಮಠಾಧೀಶರು, ಆರ್‌ಎಸ್‌ಎಸ್ ಹಾಗೂ ಈಗ ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯು 2018ರ ವಿಧಾನಸಭೆ ಚುಣಾವಣೆಯ ಹಿನ್ನೆಲೆಯಲ್ಲಿ ಬೆಂಬಲ ನೀಡುತ್ತಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸೈದ್ಧಾಂತಿಕವಾಗಿ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಸಾಬೀತುಪಡಿಸಲು ಸಾಧ್ಯವಿದೆ. ಆದರೆ ಈ ವಿಷಯ ದಲ್ಲಿ ಇಂದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತವೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಮತ್ತು ವೀರಶೈವ ಬಣಗಳು ಈಗ ನಡೆಸುತ್ತಿರುವ ಬಲಾಬಲ ಪ್ರದರ್ಶನ ಸಾರ್ವಜನಿಕರ ಕುತೂಹಲ ಕೆರಳಿಸಿದೆ.

ಲಿಂಗಾಯತ ಧರ್ಮವನ್ನು 12ನೆಯ ಶತಮಾನದಲ್ಲಿ ಸ್ಥಾಪಿಸಿದವರು ಬಸವಣ್ಣನವರೇ ಎಂಬುದಕ್ಕೆ ಬಲವಾದ ಪುರಾವೆಯೇ ವಚನಶಾಸ್ತ್ರ. ಹಿಂದೂಗಳಿಗೆ ಪವಿತ್ರವಾದ ವೇದ, ಆಗಮ, ಉಪನಿಷತ್ತುಗಳನ್ನು ನೂರಾರು ವಚನಗಳು ನಿರ್ದಯವಾಗಿ, ಕಠಿಣ ಶಬ್ದಗಳಲ್ಲಿ ತಿರಸ್ಕರಿಸುತ್ತವೆ. ಎರಡನೆಯ ಪುರಾವೆಯೆಂದರೆ– ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಶರಣರು ಜಾರಿಗೊಳಿಸಿದ ಲಿಂಗಾಯತರ ದೈನಂದಿನ ಆಚರಣೆಗಳು. ಹುಟ್ಟಿದ ಮಗುವಿಗೆ- ಹೆಣ್ಣು-ಗಂಡೆಂಬ ಭೇದವಿಲ್ಲದೆ- ಮೂರನೆಯ ದಿನ ಲಿಂಗವನ್ನು ಕಟ್ಟಲಾಗುತ್ತದೆ.

ಹಿಂದೂಗಳ ಹದಿನಾರು ಸಂಸ್ಕಾರಗಳಿಗೆ ವಿರುದ್ಧವಾಗಿ ತೀರಾ ಭಿನ್ನವಾದ ನಾಲ್ಕೇ ಸಂಸ್ಕಾರಗಳು ಲಿಂಗಾಯತರಲ್ಲಿವೆ. ಲಿಂಗಾಯತ ಮದುವೆಯಲ್ಲಿ ಹೋಮ, ಹವನ, ಸಪ್ತಪದಿ, ಅಗ್ನಿಸಾಕ್ಷಿಯಾಗಿ ಶಪಥಗಳಿಲ್ಲ. ಸತ್ತವರನ್ನು ಹಿಂದೂಗಳಂತೆ ಸುಡುವ ಬದಲಿಗೆ ಲಿಂಗಾಯತರು ನಗ್ನವಾಗಿಸಿ ಹೂಳುತ್ತಾರೆ. ಲಿಂಗಾಯತದಲ್ಲಿ ಸ್ವರ್ಗ– ನರಕಗಳಿಲ್ಲದ್ದರಿಂದ ಪುನರ್ಜನ್ಮವಿಲ್ಲ. ‘ಕರ್ಮಸಿದ್ಧಾಂತ’ವನ್ನು ತಿರಸ್ಕರಿಸಿ ‘ಕಾಯಕ’ದ ಮುಖಾಂತರ ಶ್ರಮಕ್ಕೆ ಸಮಾನತೆಯನ್ನೂ ಮಹತ್ವವನ್ನೂ ನೀಡಿ ಜಾತಿಯೆಂಬ ವಿಷಬೀಜವನ್ನೂ ‘ವರ್ಣಾಶ್ರಮ ಸಿದ್ಧಾಂತ’ವನ್ನೂ ಲಿಂಗಾಯತವು ಕಿತ್ತೊಗೆದಿದೆ. ದುಡಿದು ಗಳಿಸಿ ಉಳಿಸಿದ್ದನ್ನು ಸಮಾಜಕ್ಕೆ ನೀಡುವ ‘ದಾಸೋಹ’ ಲಿಂಗಾಯತರ ಅಭಿವೃ
ದ್ಧಿಗೆ ಮೂಲಮಂತ್ರವಾಗಿದೆ. ಅದರಿಂದಲೇ ಸಾವಿರಾರು ಶಾಲಾಕಾಲೇಜುಗಳು, ಉಚಿತ ಪ್ರಸಾದ ನಿಲಯಗಳು, ದಾನದತ್ತಿಗಳು ಇಂದು ಅಸ್ತಿತ್ವದಲ್ಲಿವೆ. ‘ಇಷ್ಟಲಿಂಗ’ ಪೂಜೆಯಿಂದಾಗಿ ಸ್ಥಾವರಲಿಂಗಕ್ಕೆ ಮಹತ್ವವಿಲ್ಲ. ದೇವಾಲಯ ಸಂಸ್ಕೃತಿ ಲಿಂಗಾಯತರಲ್ಲಿಲ್ಲ. ಏಕದೇವೋಪಾಸನೆ ಮುಖ್ಯ ಅಂಶ. ಈ ಎಲ್ಲ ಸಂಸ್ಕಾರಗಳನ್ನು ಇಂದಿಗೂ ಲಿಂಗಾಯತರು ಮತ್ತು ವೀರಶೈವರು ಆಚರಿಸುತ್ತಾರೆ ಎಂಬುದು ವಿಚಿತ್ರವಾದರೂ ಸತ್ಯ!

ಮೇಲೆ ವಿವರಿಸಿದಂತೆ ಶರಣ ಧರ್ಮ ಹಿಂದೂ ಧರ್ಮಕ್ಕೆ ಸಂಪೂರ್ಣ ವಿರುದ್ಧವಾಗಿದ್ದರೂ, ಮೇಲಿನ ಎಲ್ಲ ಆಚರಣೆಗಳನ್ನು ವೀರಶೈವರೂ ಪಾಲಿಸುತ್ತಿದ್ದರೂ ‘ತಾವು ವೇದ, ಆಗಮ, ಉಪನಿಷತ್ತುಗಳನ್ನು ಒಪ್ಪಿದ್ದಾಗಿ, ತಾವೇ ಈ ಧರ್ಮವನ್ನು ಸ್ಥಾಪಿಸಿದ್ದಾಗಿ, ಅದು ಹಿಂದೂ ಧರ್ಮದ ಭಾಗ’ ಎಂದು ಹೇಳುತ್ತಿರುವುದಕ್ಕೆ ಕಾರಣ ನಿಗೂಢವಾಗಿಲ್ಲ.

ಬಸವಣ್ಣ ಯಾವುದೇ ಮಠ ಸ್ಥಾಪಿಸಲಿಲ್ಲ. ಮಠೀಯ ಸಂಸ್ಕೃತಿ ಅವನದಲ್ಲ, ಯಾವುದೇ ಮಠಾಧೀಶನೂ ಅವನಲ್ಲ. ಈಗಿರುವ ಲಿಂಗಾಯತ ಮಠಗಳೆಲ್ಲವೂ ಬಸವಣ್ಣನನ್ನು ಕೂಡಿಕೊಂಡವರು ಬಸವಣ್ಣನ ನಂತರ ಕಟ್ಟಿಕೊಂಡ ಸಂಘಟನೆಗಳು. ಬಸವಣ್ಣನ ಕ್ರಾಂತಿಕಾರಕ ವಿಚಾರಗಳಿಗೆ ಮಾರು ಹೋಗಿ ಲಿಂಗಾಯತವನ್ನು ಸೇರಿಕೊಂಡವರಲ್ಲಿ ಬಹುತೇಕರು ದಲಿತರಲ್ಲದೇ ಆಗ ಪ್ರಚಲಿತವಿದ್ದ ಶೈವಪಂಥಗಳಾದ ಕಾಳಾಮುಖಿ, ಕಾಪಾಲಿಕ, ಪಾಶುಪತ್ಯ, ನಾಥಪಂಥ, ಕಾಶ್ಮೀರಿ ಶೈವ ಹಾಗೂ ಆಂಧ್ರದ ಆರಾಧ್ಯ ಶೈವರು ಮುಖ್ಯ. ಮೊದಲಿನ 5 ವರ್ಗಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಲಿಂಗಾಯತ ಮಠಗಳಾಗಿ ಮಾರ್ಪಟ್ಟವು ಎನ್ನುವುದು ಐತಿಹಾಸಿಕ ಸತ್ಯ. ಅವೇ ಇಂದಿನ ಬಹುತೇಕ ವಿರಕ್ತ ಮಠಗಳು!

ಇದೇ ಹಿನ್ನೆಲೆಯಲ್ಲಿ ಸುತ್ತೂರಿನಂತಹ ಕೆಲವು ಮಠಾಧೀಶರು ತಮ್ಮ ಮಠವು 12ನೆಯ ಶತಮಾನಕ್ಕಿಂತ ಪೂರ್ವದ್ದೆಂದು ಹೇಳುತ್ತಾರೆ. ಹೌದು, ಆದರೆ ಅವು ಕಾಳಾಮುಖಿ ಮಠಗಳಾಗಿದ್ದವು. ಈಗ ಅಲ್ಲಿ ಕಾಳಾಮುಖಿ ಆಚರಣೆಗಳು ನಡೆಯುತ್ತಿಲ್ಲ (ಮುಖಕ್ಕೆ ಮಸಿ ಹಚ್ಚಿಕೊಳ್ಳುವುದು, ರುಂಡಮಾಲೆ ಧರಿಸುವುದು, ತಲೆಬುರುಡೆಯೊಂದಿಗೆ ಭಿಕ್ಷೆಗೆ ಹೋಗುವುದು, ನರಮಾಂಸ ತಿನ್ನುವುದು ಇತ್ಯಾದಿ). ಅವರು ಬಸವಣ್ಣನನ್ನೇ ಅನುಸರಿಸುತ್ತಾರೆ. ಆದ್ದರಿಂದ ಅವರು ಹೇಳುವುದು ಅರ್ಧ ಸತ್ಯ.

ಆದರೆ ಆರಾಧ್ಯ ಬ್ರಾಹ್ಮಣರು ಲಿಂಗಾಯತರಾಗಿ ಮಾರ್ಪಟ್ಟರೂ ಸುಮಾರು ಎರಡು ಶತಮಾನಗಳ ನಂತರ ತಮ್ಮ ಮೂಲ ಧರ್ಮವನ್ನು ಮರೆಯಲಾರದೆ ವೈದಿಕ ಅಂಶಗಳನ್ನು ಕ್ರಮೇಣ ಲಿಂಗಾಯತದಲ್ಲಿ ಬೆರೆಸತೊಡಗಿದರು. ಆ ಕಾಲದಲ್ಲಿ (13-14ನೆಯ ಶತಮಾನ) ಹುಟ್ಟಿದ್ದೇ ಅವರ ಧರ್ಮ ಗ್ರಂಥ ‘ಸಿದ್ಧಾಂತ ಶಿಖಾಮಣಿ’. ಚಿದಾನಂದ ಮೂರ್ತಿಯವರೇ 1998ರಲ್ಲಿ ಬರೆದ ‘ವಚನಶೋಧ’ ಎಂಬ ಗ್ರಂಥದಲ್ಲಿ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಡಾ. ಎಂ.ಆರ್. ಸಾಖರೆಯವರು 1942ರಲ್ಲಿಯೇ ಈ ಸಂಗತಿಯನ್ನು ಸಂಶೋಧಿಸಿದ್ದಾರೆ. ಡಾ.ಎಂ.ಎಂ. ಕಲಬುರ್ಗಿಯವರೂ ಇದೇ ಮಾತನ್ನು ಬರೆದರು. ಕುಂದೂರಿನ ಡಾ. ಇಮ್ಮಡಿ ಶಿವಬಸವ ಸ್ವಾಮಿಗಳು, ಬಸರೂರು ಸುಬ್ಬರಾಯರು 2015ರ ಸುದೀರ್ಘ ಗ್ರಂಥಗಳಲ್ಲಿ ಈ ಸಂಗತಿಯನ್ನು ರುಜುವಾತುಪಡಿಸಿದ್ದಾರೆ. ಆದ್ದರಿಂದ ಸಿದ್ಧಾಂತ ಶಿಖಾಮಣಿಯು ಇತ್ತೀಚಿನ ಗ್ರಂಥವೆಂಬುದು ಸ್ಪಷ್ಟ!

12ನೆಯ ಶತಮಾನದಲ್ಲಿ ಬಸವಣ್ಣನನ್ನು ಮೆಚ್ಚಿದ್ದ ಮಲ್ಲಿಕಾರ್ಜುನ ಪಂಡಿತಾರಾಧ್ಯರ, ಬಸವಣ್ಣನ ಕಾಲದಲ್ಲಿದ್ದ ಹಿರಿಯ ಶೈವ ರೇವಣಸಿದ್ಧರ, ಮರುಳದೇವನೆಂಬ ಶರಣರ, ಏಕಾಂತದ ರಾಮಯ್ಯನೆಂಬ ಶರಣರ ಹೆಸರುಗಳನ್ನು ಸ್ವಲ್ಪ ಬದಲಿಸಿಕೊಂಡು ಕೆಲ ಕಾಲದ ನಂತರ ಕ್ರಮವಾಗಿ ಶ್ರೀಶೈಲದಲ್ಲಿ ಪಂಡಿತಾರಾಧ್ಯರ, ಬಾಳೆಹಳ್ಳಿಯಲ್ಲಿ ರೇಣುಕರ, ಉಜ್ಜನಿಯಲ್ಲಿ ಮರುಳಾರಾಧ್ಯರ ಹಾಗೂ ಕೇದಾರದಲ್ಲಿ ಏಕೋರಾಮಾರಾಧ್ಯರ ಪೀಠಗಳನ್ನು ಸ್ಥಾಪಿಸಿಕೊಂಡರೆಂದು ಚಿದಾನಂದ ಮೂರ್ತಿಯವರು ಹೇಳಿದ್ದಾರೆ.

ಕಾಶಿಯ ವಿಶ್ವಾರಾಧ್ಯ ಪೀಠವಂತೂ 17ನೆಯ ಶತಮಾನದಲ್ಲಿ ಸ್ಥಾಪನೆಯಾಯಿತು ಎಂದು ತಿಳಿದಿದೆ. ‘ಚತುರಾಚಾರ್ಯ ಚರಿತ್ರೆ’ಯಲ್ಲಿ ಆವರೆಗೆ ಕೇವಲ ನಾಲ್ಕೇ ನಾಲ್ಕು ಪೀಠಗಳಿದ್ದವೆಂದು ತಿಳಿಯುತ್ತದೆ. ರಂಭಾಪುರಿ ಪೀಠವು ಕ್ರಿ.ಶ. 1543ರ ಸುಮಾರಿಗೆ ಸ್ಥಾಪನೆಯಾಯಿತು ಎಂದು ಕಲಬುರ್ಗಿಯವರು ಶಾಸನಗಳ ಅಧ್ಯಯನದಿಂದ ಪ್ರತಿಪಾದಿಸಿದ್ದರು. ಆದ್ದರಿಂದ ಪಂಚಪೀಠಗಳು ಇತ್ತೀಚಿನ ಸಂಘಟನೆಗಳು, ಅವು ಹೇಳುವುದು ಬರೀ ಪುರಾಣ, ಐತಿಹಾಸಿಕ ಸತ್ಯವಲ್ಲ!

ಹಿಂದೂ ದೇವಾಲಯ ಸಂಸ್ಕೃತಿಯನ್ನು ಪಂಚಪೀಠಗಳೇ 15ನೆಯ ಶತಮಾನದಿಂದ ಮತ್ತೆ ಲಿಂಗಾಯತದಲ್ಲಿ ಸೇರಿಸಿದವು. ಇಷ್ಟಲಿಂಗದೊಡನೆ ಸ್ಥಾವರಲಿಂಗ ಪೂಜೆಯನ್ನೂ ಪ್ರಚುರಪಡಿಸಿದವು. ಬಸವಣ್ಣನ ‘ಜಂಗಮ’ವನ್ನು ಜಾತಿಯನ್ನಾಗಿ ಮಾಡಿ ಪುರೋಹಿತಶಾಹಿಯನ್ನು ಲಿಂಗಾಯತದಲ್ಲಿ ಪುನಃ ಸ್ಥಾಪಿಸಿದವು. ಅಚ್ಚ ಕನ್ನಡವನ್ನು ಬಿಟ್ಟು ಕಳೆದ 100 ವರ್ಷಗಳಲ್ಲಿ ಸಂಸ್ಕೃತದ ವ್ಯಾಮೋಹ ಬೆಳೆಸಿಕೊಂಡವು. ಹೀಗೆ ಬಸವಣ್ಣನ ಲಿಂಗಾಯತವನ್ನು ‘ಕುಲ’ಗೆಡಿಸಿವೆ ಎಂದರೂ ತಪ್ಪಲ್ಲ!

ಇಲ್ಲಿ ರಂಗನಾಥ ದಿವಾಕರರು 1936ರಲ್ಲಿ ಬರೆದ ‘ವಚನಶಾಸ್ತ್ರ ರಹಸ್ಯ’ದಲ್ಲಿನ ಮಾತು ತುಂಬ ಪ್ರಸ್ತುತ: ‘ಉಪನಿಷತ್ತಿನಲ್ಲಿ ಇರುವುದೆಲ್ಲವೂ ವಚನ ಸಾಹಿತ್ಯದಲ್ಲಿದೆ. ಆದರೆ ವಚನಸಾಹಿತ್ಯದಲ್ಲಿ ಇರುವುದೆಲ್ಲವೂ ಉಪನಿಷತ್ತಿನಲ್ಲಿ ಇಲ್ಲ’. 1880ರಿಂದ 1940ರ ವರೆಗೆ ಪಂಚಪೀಠಗಳ ಬೆಂಬಲಿಗರು ತಾವು ‘ಲಿಂಗೀ ಬ್ರಾಹಣ’ರೆಂದು ಹೇಳಿಕೊಳ್ಳುತ್ತಿದ್ದರು. ಅದು ಸಾಧ್ಯವಾಗದಿದ್ದಾಗ, ‘ವೀರಶೈವ’ರೆಂದು ಪ್ರಾರಂಭಿಸಿದರು. 2002ರಲ್ಲಿ ಆಗಿನ ಪ್ರಧಾನಿ ವಾಜಪೇಯಿ ಅವರಿಗೆ ಕೊಟ್ಟ ಮನವಿಯಲ್ಲಿ ‘ನಮ್ಮ ಮೂಲಜಾತಿಯವರಾದ ‘ವೀರ ಮಾಹೇಶ್ವರ’ರೆಲ್ಲರನ್ನೂ ‘ಬೇಡ ಜಂಗಮ’ ರೆಂದು ಪರಿಗಣಿಸಬೇಕು’ ಎಂದು ವಿನಂತಿಸಿಕೊಂಡರು. ಹೀಗಿರುವಾಗ ಇವರ ನಿಜಜಾತಿ ಹಾಗೂ ಧರ್ಮ ಯಾವುದು ಎಂಬುದು ಬಹುತೇಕ ಲಿಂಗಾಯತರಿಗೆ ಇನ್ನೂ ತಿಳಿಯದು.

ಆರ್ಥರ್‌ ಮೈಲ್ಸ್‌ ಎಂಬ ಆಂಗ್ಲ ವಿದ್ವಾಂಸ ಹೇಳಿದಂತೆ ‘ಹಿಂದೂ ಎಂಬ ಮಹಾಸಾಗರದಲ್ಲಿ ಲಿಂಗಾಯತವೆಂಬ ನಡುಗಡ್ಡೆಯನ್ನು ಮಹಾಸಾಗರದ ಅಲೆಗಳು ತಿಂದುಹಾಕುತ್ತಿವೆ’ ಎನ್ನುವುದು ಇಲ್ಲಿ ಪ್ರಸ್ತುತ. ಹಾಗೆಯೇ ಹಿಂದೂ ಧರ್ಮ ವಿರೋಧಿಯಾಗಿದ್ದ ಬಸವನನ್ನು ‘ಹಿಂದೂಕರಣ’ಗೊಳಿಸಲು, ಒಬ್ಬ ಹಿಂದೂ ‘ಆಚಾರ್ಯ’ ಎಂಬಂತೆ ಬಿಂಬಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT