ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯದಕ್ಷತೆಗೆ ಮೋದಿ ಮನ್ನಣೆ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ದೇಶದ ಮೊದಲ ಪೂರ್ಣಾವಧಿ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಪಾತ್ರರಾಗಿದ್ದಾರೆ.

ರಾಜ್ಯ ದರ್ಜೆಯ ಸಚಿವೆಯಾಗಿದ್ದ ನಿರ್ಮಲಾ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ದೊರೆತದ್ದಷ್ಟೇ ಅಲ್ಲದೆ ಭಾರಿ ಮಹತ್ವದ ರಕ್ಷಣಾ ಖಾತೆಯೂ ದೊರೆತಿದೆ. ಹೆಚ್ಚುವರಿಯಾಗಿ ರಕ್ಷಣಾ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಅರುಣ್‌ ಜೇಟ್ಲಿ ಅವರಿಂದ ನಿರ್ಮಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಶಸ್ತ್ರಾಸ್ತ್ರ ಮತ್ತು ಸೇನೆಗೆ ಬೇಕಿರುವ ಸಲಕರಣೆಗಳ ತಯಾರಿಕೆಯಲ್ಲಿ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳನ್ನು ಭಾಗಿಯಾಗಿಸುವುದು ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದನ್ನು ಜಾರಿಗೆ ತರುವ ಭಾರಿ ಸವಾಲು ಅವರ ಮುಂದೆ ಇದೆ.

ಅಲ್ಲದೆ, ಪಾಕಿಸ್ತಾನ ಮತ್ತು ಚೀನಾ ಜತೆಗೆ ಗಡಿ ವಿವಾದ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿದೆ. ಪಾಕಿಸ್ತಾನದಿಂದ  ಉಗ್ರರ ನುಸುಳುವಿಕೆ ಹೆಚ್ಚಾಗಿದೆ.  ಇಂತಹ ಸಂದರ್ಭದಲ್ಲಿ ಪೂರ್ಣಾವಧಿ ರಕ್ಷಣಾ ಸಚಿವರು ಇಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಈ ಸನ್ನಿವೇಶದಲ್ಲಿ ರಕ್ಷಣಾ ಸಚಿವೆ ಹುದ್ದೆ ವಹಿಸಿಕೊಳ್ಳುತ್ತಿರುವ ನಿರ್ಮಲಾ ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಇದೇ 6ರಂದು ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಒಳ್ಳೆಯ ಕೆಲಸ ಮಾಡುವ ಸಚಿವರಿಗೆ ಇನ್ನೂ ಹೆಚ್ಚಿನ ಮತ್ತು ಮಹತ್ವದ ಜವಾಬ್ದಾರಿಯನ್ನು ಈ ಸರ್ಕಾರ ವಹಿಸುತ್ತದೆ ಎಂಬುದಕ್ಕೆ ನಿರ್ಮಲಾ ಅವರ ಬಡ್ತಿ ಒಂದು ಉದಾಹರಣೆ ಎಂದು ಸಂಪುಟ ವಿಸ್ತರಣೆ ಬಳಿಕ ಮಾತನಾಡಿದ ಜೇಟ್ಲಿ ಹೇಳಿದ್ದಾರೆ.

‘ಹೊಸ ರಕ್ಷಣಾ ಸಚಿವರಾಗಿ ನಿರ್ಮಲಾ ಅವರು ಬಂದಿರುವುದು ಈ ಸಂಪುಟ ಪುನರ್‌ರಚನೆಯ ಮಹತ್ವದ ಅಂಶ. ನನಗೆ ಅತ್ಯಂತ ದಕ್ಷವಾದ ಉತ್ತರಾಧಿಕಾರಿ ದೊರಕಿದ್ದಾರೆ. ನಾವು ಆರಂಭಿಸಿದ ಕೆಲಸವನ್ನು ಅವರು ಮುಂದಕ್ಕೆ ಒಯ್ಯಲಿದ್ದಾರೆ’ ಎಂದು ಜೇಟ್ಲಿ ಹೇಳಿದ್ದಾರೆ.

ರಕ್ಷಣಾ ಸಚಿವಾಲಯದಲ್ಲಿ ಈ ವರೆಗೆ ಪುರುಷ ಪ್ರಾಬಲ್ಯವೇ ಇತ್ತು. ಇದೇ ಮೊದಲಿಗೆ ಮಹಿಳೆಯೊಬ್ಬರು ಸಚಿವಾಲಯದ ಸಂಪೂರ್ಣ ಹೊತ್ತುಕೊಂಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಎರಡು ಬಾರಿ (1975ರ ನವೆಂಬರ್‌ನಿಂದ ಡಿಸೆಂಬರ್‌ ಮತ್ತು 1980 ಜನವರಿಯಿಂದ 1982 ಜನವರಿ) ಹೆಚ್ಚುವರಿಯಾಗಿ ರಕ್ಷಣಾ ಖಾತೆಯನ್ನು ಹೊಂದಿದ್ದರು.

ಜಪಾನ್‌ನಲ್ಲಿ ನಡೆಯುವ ರಕ್ಷಣಾ ಸಚಿವರ ದ್ವಿಪಕ್ಷೀಯ ಸಭೆಯಲ್ಲಿ ಜೇಟ್ಲಿ ಅವರೇ ಭಾಗವಹಿಸಲಿ
ದ್ದಾರೆ. ಭಾನುವಾರ ಸಂಜೆಯೇ ಜೇಟ್ಲಿ ಟೋಕಿಯೊಕ್ಕೆ ಹೊರಟಿದ್ದಾರೆ. ಕೊನೆ ಕ್ಷಣದಲ್ಲಿ ನಿರ್ಮಲಾ ಅವರ ಪ್ರವಾಸದ ವ್ಯವಸ್ಥೆ ಮಾಡಿಕೊಳ್ಳುವುದು ಅಸಾಧ್ಯವಾದ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ.

‘ಇನ್ನೂ ಎರಡು ದಿನ ರಕ್ಷಣಾ ಸಚಿವನಾಗಿ ಮುಂದುವರಿಯಲಿದ್ದೇನೆ. ಭದ್ರತೆಗೆ ಸಂಬಂಧಿಸಿದ ಮಾತುಕತೆಯಲ್ಲಿ ಭಾಗವಹಿಸಲಿದ್ದೇನೆ. ಈ ಮಾತುಕತೆ ಬಳಿಕ ನಿರ್ಮಲಾ ಅಧಿಕಾರ
ವಹಿಸಿಕೊಳ್ಳಲಿದ್ದಾರೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

‘ಸಣ್ಣ ಪಟ್ಟಣದಿಂದ ಬಂದ, ಪಕ್ಷದ ನಾಯಕರ ಮಾರ್ಗದರ್ಶನದಲ್ಲಿಯೇ ಬೆಳೆದ ನನ್ನಂಥವರಿಗೆ ಇಂತಹ ಹೊಣೆಗಾರಿಕೆ ವಹಿಸಿದಾಗ ಅದು ದೇವರ ಅನುಗ್ರಹ ಎಂದೇ ಅನಿಸಿಬಿಡುತ್ತದೆ. ಇಲ್ಲದಿದ್ದರೆ ಇದು ಅಸಾಧ್ಯ’ ಎಂದು ಪ್ರಮಾಣವಚನ ಸ್ವೀಕಾರದ ಬಳಿಕ ನಿರ್ಮಲಾ ಸಂತಸ ಹಂಚಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ ಸಂತಸ: ರಕ್ಷಣಾ ಸಚಿವೆಯಾಗಿ ನಿರ್ಮಲಾ ಅವರಿಗೆ ಬಡ್ತಿ ನೀಡಿದ್ದನ್ನು ಆರ್‌ಎಸ್‌ಎಸ್‌ ಶ್ಲಾಘಿಸಿದೆ. ಮಹತ್ವದ ಹುದ್ದೆಗೆ ಮಹಿಳೆಯ ನೇಮಕ ಬಹಳ ದೊಡ್ಡ ಮತ್ತು ಗಮನಾರ್ಹವಾದ ನಿರ್ಧಾರ ಎಂದು ಹೇಳಿದೆ.
*
ಇದೊಂದು ಬಹಳ ದೊಡ್ಡ ಹೊಣೆಗಾರಿಕೆ. ಭದ್ರತೆಯ ಸಂಪುಟ ಸಮಿತಿಯಲ್ಲಿ ನಾನು ಮತ್ತು ಸುಷ್ಮಾ ಸ್ವರಾಜ್‌ ಸೇರಿ ಇಬ್ಬರು ಮಹಿಳೆಯರು ಇರುವುದು ಇನ್ನೂ ಮಹತ್ವದ ಅಂಶ.
- ನಿರ್ಮಲಾ ಸೀತಾರಾಮನ್‌
ರಕ್ಷಣಾ ಸಚಿವೆ

*
ದೇವರ ಹೆಸರಿನಲ್ಲೇ ಎಲ್ಲರ ಪ್ರಮಾಣ
ಹೊಸದಾಗಿ ಸಚಿವರಾದ ಮತ್ತು ರಾಜ್ಯ ದರ್ಜೆಯಿಂದ ಬಡ್ತಿ ಪಡೆದ ಎಲ್ಲ 13 ಮಂದಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಅಲ್ಫೋನ್ಸ್‌ ಕಣ್ಣಂತಾನಂ, ಹರ್ದೀಪ್‌ ಪುರಿ ಮತ್ತು ನಿರ್ಮಲಾ ಸೀತಾರಾಮನ್‌ ಇಂಗ್ಲಿಷ್‌ನಲ್ಲಿ ಮತ್ತು ಇತರರು ಹಿಂದಿಯಲ್ಲಿ ಪ್ರಮಾಣ ಮಾಡಿದರು. ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಅವರೂ ಹಿಂದಿಯಲ್ಲಿ ಪ್ರಮಾಣ ಮಾಡಿದರು.

ಕಟ್ಟುನಿಟ್ಟಿನ ಕೋವಿಂದ್‌
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು  ಎಂಬುದು ಮತ್ತೊಮ್ಮೆ ಸಾಬೀತಾಯಿತು. ಧರ್ಮೇಂದ್ರ ಪ್ರಧಾನ್‌ ಅವರು ಎರಡು ಪದಗಳನ್ನು ಸರಿಯಾಗಿ ಉಚ್ಚರಿಸಲಿಲ್ಲ. ಕೋವಿಂದ್‌ ಅವರು ಎರಡು ಬಾರಿ ಹೇಳಿಕೊಟ್ಟು ಪ್ರಧಾನ್‌ ಸರಿಯಾಗಿ ಉಚ್ಚರಿಸುವಂತೆ ನೋಡಿಕೊಂಡರು. ಪ್ರಧಾನ್‌ ಅವರ ಮಾತೃಭಾಷೆ ಒಡಿಯಾ. ಬಿಹಾರದ ರಾಜ್ಯಪಾಲರಾಗಿದ್ದಾಗ ಕೋವಿಂದ್‌ ಅವರು ಲಾಲು ಪ್ರಸಾದ್‌ ಮಗ ತೇಜ್‌ ಪ್ರತಾಪ್‌ ತಪ್ಪಾಗಿ ಉಚ್ಚರಿಸಿದ್ದನ್ನು ಹೀಗೆಯೇ ಸರಿಪಡಿಸಿದ್ದರು.

ಎಡದಿಂದ ಬಲಕ್ಕೆ ಬಂದ ಕಣ್ಣಂತಾನಂ
ಅಲ್ಫೋನ್ಸ್‌ ಕಣ್ಣಂತಾನಂ ಎಡದಿಂದ ಬಲಕ್ಕೆ ಸರಿದವರು. ಬಿಜೆಪಿ ಸೇರುವ ಮೊದಲು 2006ರಲ್ಲಿ ಎಡರಂಗ ಬೆಂಬಲದಲ್ಲಿ ಅವರು ಕೇರಳ ವಿಧಾನಸಭೆಗೆ ಆಯ್ಕೆಯಾಗಿದ್ದರು. 2011ರಲ್ಲಿ ಅವರು ಬಿಜೆಪಿ ಸೇರಿದರು.

ಅಡ್ವಾಣಿ, ಜೋಷಿ ಇರಲಿಲ್ಲ
ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರ ಗೈರು ಸಮಾರಂಭದಲ್ಲಿ ಎದ್ದು ಕಂಡಿತು. ಸಾಮಾನ್ಯವಾಗಿ ಇಂತಹ ಸಮಾರಂಭಗಳನ್ನು ಅವರು ತಪ್ಪಿಸುವುದಿಲ್ಲ. ಮಾರ್ಗದರ್ಶಕ ಮಂಡಳಿಯ ಇನ್ನೊಬ್ಬ ಸದಸ್ಯ ಮುರಳಿ ಮನೋಹರ ಜೋಷಿ ಅವರೂ ಸಮಾರಂಭದಲ್ಲಿ ಇರಲಿಲ್ಲ. ವಿರೋಧ ಪಕ್ಷಗಳಿಂದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ಮಾತ್ರ ಇದ್ದರು.

ಚೀನಾಕ್ಕೆ ತೆರಳಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಬಿಡುವಿಲ್ಲದ ಕೆಲಸಗಳ ದಿನ. ಪ್ರಮಾಣ ವಚನ ಮುಗಿದ ಕೂಡಲೇ ಅವರು ಬ್ರಿಕ್ಸ್‌ ಸಮಾವೇಶದಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದರು. ಸಮಾರಂಭದ ಬಳಿಕ ಚೀನಾಕ್ಕೆ ಹೋಗಬೇಕಿದ್ದುದರಿಂದ ಬಡ್ತಿ ಪಡೆದ ನಾಲ್ವರು ಮತ್ತು ಹೊಸದಾಗಿ ಸೇರ್ಪಡೆಯಾದ ಒಂಬತ್ತು ಮಂದಿಯಲ್ಲಿ ಸಮಾರಂಭಕ್ಕೆ ಮೊದಲೇ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT