ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ಷಧಾರೆ’ ಮೋಡಬಿತ್ತನೆಗೆ ಚಾಲನೆ

Last Updated 4 ಸೆಪ್ಟೆಂಬರ್ 2017, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸತತ ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಭಾನುವಾರ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.  ಮಧ್ಯಾಹ್ನ 3.35 ರಿಂದ ಸಂಜೆ 5.20ರ ವರೆಗೆ ಕಲಘಟಗಿ, ಹಳಿಯಾಳ ಮತ್ತು ಶಿಗ್ಗಾವಿ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಿತು. ಮೋಡ ಬಿತ್ತನೆ ಬಳಿಕ ಶಿಗ್ಗಾವಿಯಲ್ಲಿ ಮಾತ್ರ ಮಳೆಯಾಗಿರುವುದಾಗಿ ತಿಳಿದುಬಂದಿದೆ.

ಅಮೆರಿಕಾದ ಫೈಲಟ್‌ ಬೈರನ್‌ ಪಿ.ಎಂಡೊರ್‌ಸನ್‌ ಮತ್ತು ಸಹ ಫೈಲಟ್‌ ರಕ್ಷಿತ್‌ ಅವರು ‘ಬೀಚ್‌ ಕ್ರಾಫ್ಟ್‌– ಎನ್‌ 267ಸಿಬಿ’ ವಿಮಾನದ ಮೂಲಕ ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಿದರು.  ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌. ಶಿವಳ್ಳಿ ಅವರು ವಿಮಾನದಲ್ಲಿ ಕುಳಿತು ಮೋಡಬಿತ್ತನೆ ಕಾರ್ಯವನ್ನು ವೀಕ್ಷಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜಿನಿಯರ್‌ ಪ್ರಕಾಶ್‌ ಕುಮಾರ್‌, ‘₹35 ಕೋಟಿ ಮೊತ್ತದಲ್ಲಿ ಮೋಡಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ದಕ್ಷಿಣ ಕರ್ನಾಟಕ ಭಾಗದಲ್ಲಿ 10 ದಿನ ಮೋಡಬಿತ್ತನೆ ಮಾಡಲಾಗಿದೆ. ಚಿಂತಾಮಣಿ, ಬಾಗೇಪಲ್ಲಿ, ಶಿರಾ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಮಳೆಯಾಗಿರುವ ವರದಿಯಾಗಿದೆ’ ಎಂದು ತಿಳಿಸಿದರು.

‘ಸದ್ಯ ಒಂದು ವಿಮಾನ ಮಾತ್ರ ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇನ್ನೊಂದು ವಿಮಾನ ಹಾರಾಟಕ್ಕೆ ದೆಹಲಿಯ ಡಿಜಿಸಿಯಿಂದ ಅನುಮತಿ ಸಿಕ್ಕಿಲ್ಲ’ ಎಂದರು. ‘ಎಲ್ಲ ಮೋಡಗಳು ಬಿತ್ತನೆಗೆ ಯೋಗ್ಯವಾಗಿರುವುದಿಲ್ಲ. ಕಪ್ಪು ಮೋಡಗಳು ಮಾತ್ರ ಬಿತ್ತನೆಗೆ ಯೋಗ್ಯ­ವಾಗಿರುತ್ತವೆ. ಅಂತಹ ಮೋಡಗಳ ಬಗ್ಗೆ ಮಾಹಿತಿ ಪಡೆದು ಬಿತ್ತನೆ ಮಾಡಲಾಗು­ವುದು. ಮೋಡ ಬಿತ್ತನೆಯಾಗಿ ಅರ್ಧ ಗಂಟೆ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂದು ನಿರ್ದಿಷ್ಟವಾಗಿ ತಿಳಿಯಲು ಸಮಯ ಬೇಕಾಗುತ್ತದೆ’ ಎಂದು ಹೇಳಿದರು.

ಚಾಲನೆ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಮೋಡ ಬಿತ್ತನೆ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಚಾಲನೆ ನೀಡಿದರು. ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಸಿ.ಎಸ್‌.ಶಿವಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕ ಬಿ.ಆರ್‌.ಯಾವಗಲ್‌, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ನೇಹಲ್‌ ರಾಯಮಾನೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ಇದ್ದರು.

ಭಾರತಕ್ಕೆ ಮೂರನೇ ಬಾರಿ
ಸೌದಿ ಅರೇಬಿಯಾ, ಆಫ್ರಿಕಾ ಮತ್ತು ಭಾರತದಲ್ಲಿ ಇದುವರೆಗೆ ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವುದಾಗಿ ಅಮೆರಿಕಾದ ಫೈಲಟ್‌ ಬೈರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೋಡ ಬಿತ್ತನೆ ಸಂಬಂಧ ಭಾರತಕ್ಕೆ ಬರುತ್ತಿರುವುದು ಇದು ಮೂರನೇ ಬಾರಿ ಎಂದ ಅವರು, ವಿಮಾನವನ್ನು ಸುಮಾರು 6 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಮೂಲಕ ಮೋಡಗಳಿಗೆ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಇದಕ್ಕೆ ‘ಬೇಸ್‌ ಸೀಡಿಂಗ್‌’ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಒಂದು ಗಂಟೆಗೆ ₹ 3 ಲಕ್ಷ
ಮೋಡ ಬಿತ್ತನೆ ವಿಮಾನದ ಕಾರ್ಯಾಚರಣೆಗೆ ಒಂದು ಗಂಟೆಗೆ ಸುಮಾರು ₹ 3 ಲಕ್ಷ ವೆಚ್ಚವಾಗುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ತಿಳಿಸಿದರು. ಬಹುತೇಕ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯೊಳಗೆ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಸಮಯ ಮೋಡ ಬಿತ್ತನೆಗೆ ಯೋಗ್ಯವಾಗಿರುತ್ತದೆ ಎಂದು ಹೇಳಿದರು.

* * 

ಮೋಡ ಬಿತ್ತನೆಯಿಂದ ಮಳೆಯಾಗುವ ನಿರೀಕ್ಷೆ ಇದೆ. ಹಿಂಗಾರು ಬಿತ್ತನೆಗೆ ಅನು­ಕೂಲ­ವಾಗ­ಲಿದೆ. ಅಲ್ಲದೇ, ಜನ, ಜಾನು­ವಾರು­­ಗಳಿಗೆ ಕುಡಿಯುವ ನೀರು ಲಭಿಸಲಿದೆ
ಎಚ್‌.ಕೆ.ಪಾಟೀಲ
ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT