ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬಿಡಾಡಿ ದನಗಳದ್ದೇ ಸಾಮ್ರಾಜ್ಯ!

Last Updated 4 ಸೆಪ್ಟೆಂಬರ್ 2017, 6:09 IST
ಅಕ್ಷರ ಗಾತ್ರ

ಹೊಸಪೇಟೆ: ಬೀದಿ ನಾಯಿಗಳ ಉಪಟಳದಿಂದ ಬೇಸತ್ತು ಹೋಗಿರುವ ನಗರದ ಜನರಿಗೆ ಈಗ ಬಿಡಾಡಿ ದನಗಳಿಂದ ದೊಡ್ಡ ತಲೆ ನೋವು ಶುರುವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಗುಂಪು ಗುಂಪಾಗಿ ಬಿಡಾಡಿ ದಿನಗಳು ಬೀಡು ಬಿಡುತ್ತಿರುವುದರಿಂದ ದಾರಿ ಹೋಕರು ಹಾಗೂ ವಾಹನ ಸಂಚಾರರಿಗೆ ಕಿರಿಕಿರಿಯಾಗುತ್ತಿದೆ. ಇಂತಹುದೇ ನಿರ್ದಿಷ್ಟ ರಸ್ತೆ ಎಂಬುದಿಲ್ಲ. ನಗರದಲ್ಲಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಅವುಗಳದ್ದೇ ಕಾರುಬಾರು, ದರ್ಬಾರ್‌.

ನಗರದ ಕಾಲೇಜು ರಸ್ತೆ, ಹಂಪಿ ರಸ್ತೆ, ಬಳ್ಳಾರಿ ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ಹೊರವರ್ತುಲ ರಸ್ತೆಗಳ ಜತೆಗೇ ವಾಲ್ಮೀಕಿ ವೃತ್ತ, ಮೇನ್‌ ಬಜಾರ್‌, ರೋಟರಿ ವೃತ್ತ ಹೀಗೆ ಜನ ಹಾಗೂ ವಾಹನ ದಟ್ಟಣೆ ಅಧಿಕವಿರುವ ರಸ್ತೆ, ಸ್ಥಳಗಳನ್ನೇ ಬಿಡಾಡಿ ದನಗಳು ಅಡ್ಡಾ ಮಾಡಿಕೊಂಡಿವೆ. ರಸ್ತೆ ಮಧ್ಯದಲ್ಲಿ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಟಿ.ಬಿ. ಡ್ಯಾಂ, ವಾಲ್ಮೀಕಿ ವೃತ್ತದಲ್ಲಿ ಇತ್ತೀಚೆಗೆ ಅಪಘಾತ ಸಂಭವಿಸಿ ಇಬ್ಬರೂ ತೀವ್ರ ವಾಗಿ ಗಾಯಗೊಂಡಿದ್ದರು.

ಇಷ್ಟೆಲ್ಲ ಆದರೂ ನಗರಸಭೆ ಈ ಕುರಿತು ಯಾವುದೇ ಕ್ರಮ ಕೈಗೊಳ್ಳು ತ್ತಿಲ್ಲ. ನಗರದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿಹರಣಕ್ಕೆ ಕ್ರಮ ಕೈಗೊಳ್ಳಲು ವರ್ಷದ ಹಿಂದೆಯೇ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದುವರೆಗೆ ಟೆಂಡರ್‌ ಕರೆಯಲು ನಗರಸಭೆಗೆ ಸಾಧ್ಯವಾಗಿಲ್ಲ. ಪ್ರತಿ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಅದು ಅನುಷ್ಠಾನಕ್ಕೆ ಬರುವುದಿಲ್ಲ. ಇನ್ನು ಬಿಡಾಡಿ ದನಗಳಿಗೆ ಕಡಿವಾಣ ಹಾಕುವ ವಿಷಯ ದೂರದ ಮಾತಾಗಿಯೇ ಉಳಿದಿದೆ.

‘ಬೀದಿ ನಾಯಿ, ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಹಲವು ಸಲ ನಗರ ಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರಿಗೆ ದನ ಗಳಿಂದ ಬಹಳ ತೊಂದರೆಯಾಗುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಯೂಸುಫ್‌ ಪಟೇಲ್‌ ತಿಳಿಸಿದರು.

ಅಂದಹಾಗೆ ನಗರದಲ್ಲಿನ ಬಿಡಾಡಿ ದನಗಳಿಗೆ ರಸ್ತೆಗಳೇ ಕಾಯಂ ವಾಸಸ್ಥಾನ ವಲ್ಲ. ಹಗಲಲ್ಲಿ ರಸ್ತೆಯಲ್ಲಿ ಓಡಾಡಿ ಕೊಂಡಿರುವ ಅವುಗಳು ಸಂಜೆಯಾಗು ತ್ತಿದ್ದಂತೆ ಮಾಲೀಕರ ಮನೆ ಸೇರುತ್ತವೆ. ದನಗಳ ಮಾಲೀಕರು ಅವುಗಳನ್ನು ಉದ್ದೇಶಪೂರ್ವಕ ವಾಗಿಯೇ ಹೊರಗೆ ಬಿಡುತ್ತಾರೆ ಎಂಬ ಆರೋಪ ಇದೆ.

ಬಿಡಾಡಿ ದನಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರದಲ್ಲಿ ಎರಡು ಕೋಮಿನ ವರ ಮಧ್ಯೆ ದೊಡ್ಡ ಘರ್ಷಣೆಯೇ ಉಂಟಾಗುತ್ತಿತ್ತು. ಆದರೆ, ಪೊಲೀಸರ ಸಮಯ ಪ್ರಜ್ಞೆ, ಪರಿಸ್ಥಿತಿ ಯನ್ನು ಸೂಕ್ಷ್ಮ ವಾಗಿ ನಿಭಾಯಿಸಿದ ಕಾರಣ ಅದಕ್ಕೆ ಆಸ್ಪದ ಸಿಗಲಿಲ್ಲ. ‘ಸದಾ ರಸ್ತೆ ಮೇಲೆ ಓಡಾಡುತ್ತಿರುವ ಬಿಡಾಡಿ ದನಗಳನ್ನು ಇತ್ತೀಚೆಗೆ ಕೆಲವರು ಲಾರಿಯಲ್ಲಿ ತುಂಬಿ ಕೊಂಡು ಹೋಗುತ್ತಿದ್ದರು. ಆ ಪೈಕಿ ಕೆಲವು ದನಗಳನ್ನು ಗುರುತಿಸಿದ ಅದರ ಮಾಲೀಕ ಲಾರಿಯನ್ನು ತಡೆದಿದ್ದಾನೆ.

ಲಾರಿ ಕೊಂಡೊಯ್ಯುತ್ತಿದ್ದವನು ಹಾಗೂ ದನಗಳ ಮಾಲೀಕರು ಅನ್ಯ ಕೋಮಿ ನವರು. ಹಾಗಾಗಿ ಅದು ಕೋಮು ಬಣ ಪಡೆದುಕೊಂಡಿತ್ತು. ಎರಡೂ ಕೋಮಿನ ಅನೇಕ ಜನ ಸೇರಿದ್ದರು. ತಮ್ಮ ಕೆಲಸ ದವರು ತಮಗೆ ಸೇರಿದ ದನಗಳೊಂದಿಗೆ ಬೇರೆಯವರ ದನಗಳನ್ನು ಲಾರಿಯಲ್ಲಿ ಗೊತ್ತಿಲ್ಲದೇ ಹಾಕಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿ ಕೊಡಲಾಯಿತು. ಇದರಿಂದ ದೊಡ್ಡ ಅನಾಹುತ ತಪ್ಪಿತು’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದನಗಳ ವಿಚಾರದಲ್ಲಿ ಅವುಗಳ ಮಾಲೀಕರು ಗಂಭೀರವಾಗಿಲ್ಲ. ಹೊರ ಗಡೆ ಹೀಗೆಯೇ ಬಿಟ್ಟರೆ ಯಾರಾದರೂ ಅವುಗಳನ್ನು ಕದ್ದೊಯ್ಯಬಹುದು. ಹೊರಗೆ ಬಿಡದಂತೆ ಮಾಲೀಕರಿಗೆ ಸೂಚಿಸಲಾಗಿದೆ. ಅಲ್ಲದೇ ರಸ್ತೆ ಮೇಲೆ ಬಿಡಾಡಿ ದನಗಳು ಓಡಾಡದಂತೆ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT