ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿದನಗಳ ನಿಯಂತ್ರಣ; ನಗರಸಭೆ ನಿತ್ರಾಣ

Last Updated 4 ಸೆಪ್ಟೆಂಬರ್ 2017, 6:49 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಬೀದಿದನಗಳೇ ಕಾರಣವಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳದೆ ಎಚ್ಚರಿಕೆ ನೀಡುವುದಕ್ಕಷ್ಟೇ ಸೀಮಿತವಾಗಿದೆ. ಪರಿಣಾಮ ಬಿಡಾಡಿ ದನಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ.

ಗಾಂಧಿಚೌಕ್, ಸುಭಾಷ ಚೌಕ್ ಹಾಗೂ ಶಾಸ್ತ್ರಿ ಚೌಕ್, ಅಂಬೇಡ್ಕರ್ ಚೌಕ್, ಚಕ್ರಕಟ್ಟಾ, ರೈಲ್ವೆ ಸ್ಟೇಷನ್, ಬಸ್‌ ನಿಲ್ದಾಣ, ಹೊಸಳ್ಳಿ ಕ್ರಾಸ್, ಗಂಜ್ ಏರಿಯಾಗಳ ಪ್ರಮುಖ ರಸ್ತೆಗಳು ಬಿಡಾಡಿ ದನಗಳಿಗೆ ಆಶ್ರಯ ತಾಣವಾಗಿವೆ.

‘ಬೀದಿ ದನಗಳ ಹಾವಳಿ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದಾಗಿ ಸಂಚಾರ ಠಾಣೆಗೂ ನಾಗರಿಕರು ದೂರು ಸಲ್ಲಿಸಿದ್ದಾರೆ. ನಾಗರಿಕರ ದೂರಿನ ಹಿನ್ನೆಲೆಯಲ್ಲಿ ನಗರಸಭೆಗೆ ಪತ್ರ ಬರೆದು ಕ್ರಮಕ್ಕೆ ಮುಂದಾಗುವಂತೆ ತಿಳಿಸಿದ್ದೇವೆ’ ಎಂದು ಸಂಚಾರ ಠಾಣೆ ಪಿಎಸ್‌ಐ ಹರೀಬಾ ಹೇಳುತ್ತಾರೆ.

ಆದರೆ, ‘ಇದುವರೆಗೂ ನಗರಸಭೆ ಬೀದಿ ದನಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳದೇ ಇರುವುದು ನಗರ ಸುಗಮ ಸಂಚಾರ ವ್ಯವಸ್ಥೆಗೆ ಧಕ್ಕೆ ಒದಗಿದೆ’ ಎಂಬುದಾಗಿ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಎಚ್ಚರಿಕೆ ನೀಡಿದರೆ ಸಾಕೆ: ‘ನಗರಸಭೆ ನಡೆಸಿರುವ ಸಮೀಕ್ಷೆ ಪ್ರಕಾರ ನಗರದಲ್ಲಿ ಕನಿಷ್ಠ 2 ಸಾವಿರಕ್ಕೂ ಹೆಚ್ಚು ಬೀದಿದನಗಳಿವೆ ಎಂಬುದಾಗಿ ಕಂಡು ಬಂದಿದೆ. ಅಚ್ಚರಿ ಎಂದರೆ ನಗರಸಭೆಯ ಮುಂದಿನ ರಸ್ತೆಯನ್ನೇ ಅವುಗಳು ಆಕ್ರಮಿಸಿಕೊಂಡು ಮಲಗುತ್ತಿವೆ! ಆದರೂ, ನಗರಸಭೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.

ನಾಗರಿಕರಿಂದ ಒತ್ತಡ ಬಂದಾಗಲಷ್ಟೇ ನಗರಸಭೆ ಬೀದಿದನಗಳ ಮಾಲೀಕರಿಗೆ ಎಚ್ಚರಿಕೆಯ ಪ್ರಕಟಣೆ ಹೊರಡಿಸುತ್ತದೆ. ಕಠಿಣ ಕ್ರಮ ಜರುಗಿಸದ ಕಾರಣ ಮಾಲೀಕರೂ ಜಗ್ಗುವುದಿಲ್ಲ. ನಂತರ ಅದೇ ಸ್ಥಿತಿಯಲ್ಲಿ ನಾಗರಿಕರ ಗೋಳು ಮುಂದುವರಿಯುತ್ತದೆ’ ಎಂದು ಹಿರಿಯ ನಾಗರಿಕರಾದ ಅಯ್ಯಣ್ಣ ಹುಂಡೇಕರ್, ಸಿ.ಎಂ.ಪಟ್ಟೇದಾರ್ ಹೇಳುತ್ತಾರೆ.

ನಾಗರಿಕರ ನಿತ್ಯ ಹಿಡಿಶಾಪ: ಈಗೀಗ ನಗರದ ರಸ್ತೆ ಮಧ್ಯೆ ದ್ಚಿಚಕ್ರ ಚಲಾಯಿಸಲು ಹೃದಯ ಬಡಿತ ಹೆಚ್ಚುತ್ತದೆ. ರಸ್ತೆಯಲ್ಲಿ ದನಗಳ ಗುಂಪು ಮಲಗಿದ್ದರೆ ದ್ವಿಚಕ್ರ ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ದನಗಳ ಗುಂಪಿನಿಂದ ಹೊರಬಂದ ಮೇಲೇ ‘ಅಬ್ಬಾ! ಬಚಾವ್‌ ಆದೇವು’ ಎಂಬುದಾಗಿ ಸವಾರರು ನಿಟ್ಟುಸಿರು ಬಿಡುತ್ತಾರೆ. ಪರಿಸ್ಥಿತಿ ಗಂಭೀರವಾಗಿದ್ದರೂ ಕ್ರಮಕೈಗೊಳ್ಳದಿರುವ ನಗರಸಭೆ ವಿರುದ್ಧ ಇಡೀ ನಗರದ ನಾಗರಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT