ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಕೊಳಚೆ ಇಲ್ಲಿಯೇ ಇದೆ!

Last Updated 4 ಸೆಪ್ಟೆಂಬರ್ 2017, 6:58 IST
ಅಕ್ಷರ ಗಾತ್ರ

ಚಾಮರಾಜನಗರ: ‘ಇಲ್ನೋಡಿ ಸಾರ್‌, ಹೇಗಿದೆ ಈ ಕಾಲುವೆ. ಇಲ್ಲಿಗೇ ಈ ಕಾಲುವೆ ಕೆಲಸ ನಿಂತಿದೆ. ಮುಂದೆ ನೀರು ಹರಿಯುವುದಿಲ್ಲ. ಮಳೆ ಬಂದರೆ ಸಾಕು ಜಮೀನಿನ ತುಂಬೆಲ್ಲ ಕೊಳಚೆ ನೀರು. ಆಚೆ ದಿಕ್ಕಿನಲ್ಲಿ ಗಲೀಜು ತುಂಬಿಕೊಂಡಿರುವ ಕಾರಣ ವ್ಯವಸಾಯ ಮಾಡದೆ ಹಾಗೆಯೇ ಬಿಟ್ಟಿದ್ದೇವೆ’ ಎಂದು ಚರಂಡಿಯ ದುಸ್ಥಿತಿ ತೋರಿಸಿದರು ಸ್ಥಳೀಯರಾದ ಚಿಕ್ಕಮಾದೇವ.

‘ಕೆಲವು ತಿಂಗಳ ಹಿಂದೆ ಈ ಚರಂಡಿಯೊಳಗೆ ಹಸು ಬಿದ್ದಿತ್ತು. ಅಗ್ನಿಶಾಮಕದಳದವರು ನಮ್ಮಿಂದ ಎತ್ತಲು ಸಾಧ್ಯವಿಲ್ಲ ಎಂದು ಹೊರಟುಹೋದರು. ಕೊನೆಗೆ ನಾವೇ ಸೊಂಟದ ಮಟ್ಟ ಹುಗಿಯುತ್ತಿದ್ದ ಕೊಳಚೆಗೆ ಇಳಿದು ಅದನ್ನು ಮೇಲೆತ್ತಿದೆವು. ಮಕ್ಕಳು ಆಟವಾಡುತ್ತಾ ಬಂದು ಇದರೊಳಗೆ ಬಿದ್ದರೆ ಏನು ಮಾಡುವುದು?’ ಎಂದು ಆತಂಕ ವ್ಯಕ್ತಪಡಿಸಿದರು ಮಾದಶೆಟ್ಟಿ.

ನಗರದ ತೆಕ್ಕೆಯೊಳಗೆ ಇರುವ ಚನ್ನಿಪುರಮೋಳೆ, ಜಾಲಹಳ್ಳಿಹುಂಡಿ, ಕೊಂಡದಮೋಳೆ, ಹಳೆವೂರು ಪ್ರದೇಶಗಳಲ್ಲಿ ಒಂದು ಸುತ್ತುಹಾಕಿದರೆ ನೂರೆಂಟು ಸಮಸ್ಯೆಗಳು ಕಾಣಿಸುತ್ತವೆ. ಉಪ್ಪಾರ ಸಮುದಾಯದ ಜನರೇ ವಾಸಿಸುವ ಈ ಪ್ರದೇಶದಲ್ಲಿ ಹೆಚ್ಚಿನ ಜನರು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಜನಪ್ರತಿನಿಧಿಗಳಿಗಾಗಲೀ, ಅಧಿಕಾರಿಗಳಾಗಲೀ ಇವುಗಳನ್ನು ಸರಿಪಡಿಸುವ ಆಸಕ್ತಿಯೇ ತೋರಿಲ್ಲ. ಕೊಟ್ಟ ಮನವಿಗಳೆಲ್ಲ ಕಸದಬುಟ್ಟಿ ಸೇರಿವೆ ಎಂಬ ಆಕ್ರೋಶ ಇಲ್ಲಿನ ಜನರದು.

ಮುಖ್ಯ ಚರಂಡಿ: ನಗರದ ಎಲ್ಲ ವಾರ್ಡ್‌ಗಳ ಕೊಳಚೆ ನೀರು ಸೇರುವುದು 24ನೇ ವಾರ್ಡ್‌ನ ಚನ್ನಿಪುರಮೋಳೆಯಿಂದ ಹಾದುಹೋಗುವ ಬೃಹತ್‌ ಚರಂಡಿಗೆ. ಯುಜಿಡಿ ಕಾಮಗಾರಿಯ ಉದ್ದೇಶದಂತೆ ಈ ನೀರು ಇಲ್ಲಿಂದ ಬೂದಿತಿಟ್ಟು ಗ್ರಾಮದಲ್ಲಿ ನಿರ್ಮಿಸುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಸೇರಬೇಕು. ಆದರೆ, ಯುಜಿಡಿ ಕಾಮಗಾರಿಯ ವಿಳಂಬದಿಂದ ಈ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ಇದರಿಂದ ಈ ಭಾಗದ ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ಚರಂಡಿಯ ತುಂಬ ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಕಸಕಡ್ಡಿ ಪ್ಲಾಸ್ಟಿಕ್‌ ವಸ್ತುಗಳು ರಾರಾಜಿಸುತ್ತಿವೆ. ಮಳೆ ಬಂದರೆ ಚರಂಡಿ ನೀರು ಉಕ್ಕಿ ಮನೆಯೊಳಗೆಲ್ಲ ನುಗ್ಗುತ್ತದೆ. ಜತೆಗೆ ಹಾವುಗಳೂ ಹರಿದಾಡುತ್ತವೆ. ಮಕ್ಕಳನ್ನು ಹೊರಗೆ ಕಳಿಸುವುದಕ್ಕೇ ಭಯವಾಗುತ್ತದೆ. ಊರಿನೆಲ್ಲೆಡೆ ಅಸಹನೀಯ ದುರ್ವಾಸನೆ ತುಂಬಿದೆ. ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲ. ಮಕ್ಕಳು ದೊಡ್ಡವರಿಗೆಲ್ಲ ಡೆಂಗಿ, ಚಿಕೂನ್‌ಗುನ್ಯಾ ಬಂದಿದೆ. 15 ದಿನವಾದರೂ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ಇಲ್ಲಿನ ಮಹಿಳೆಯರು ಸಾಲು ಸಾಲು ಸಮಸ್ಯೆಗಳನ್ನು ತೆರೆದಿಡುತ್ತಾರೆ.

ಸಿಹಿ ನೀರೇ ಇಲ್ಲ: ವಾರಕ್ಕೊಮ್ಮೆ ಸಿಹಿ ನೀರು ಬರುತ್ತಿತ್ತು. ಯುಜಿಡಿ ಕಾಮಗಾರಿ ಆರಂಭವಾದಾಗ ಸಿಹಿ ನೀರಿನ ಸಂಪರ್ಕವನ್ನೇ ತೆಗೆದುಹಾಕಲಾಗಿದೆ. ಈಗ ಹತ್ತು ಹದಿನೈದು ದಿನಕ್ಕೊಮ್ಮೆ ಕೊಳವೆಬಾವಿ ನೀರು ಬರುತ್ತಿದೆ. ಕುಡಿಯಲೂ ಅದನ್ನೇ ಬಳಸುವಂತಾಗಿದೆ ಎಂದು ಕೊಂಡದಮೋಳೆಯ ಮಂಜು ತಿಳಿಸಿದರು.

ರಸ್ತೆಗಳ ಗತಿಯೂ ಭಿನ್ನವಾಗಿಲ್ಲ. ಮ್ಯಾನ್‌ಹೋಲ್‌ಗಳನ್ನು ಅಳವಡಿಸಲು ಕಾಂಕ್ರೀಟ್‌ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆಯನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಮಳೆ ಬಂದರೆ ಕೆಸರು ಗದ್ದೆಯಂತಾಗುವುದರಿಂದ ಇಲ್ಲಿ ಓಡಾಡುವುದಕ್ಕೆ ಜನ ಹರಸಾಹಸ ಪಡಬೇಕಾಗಿದೆ.

ವಾರ್ಡ್‌ನಿಂದ ಆಯ್ಕೆಯಾದ ನಗರಸಭೆ ಸದಸ್ಯ ಕೆಂಪರಾಜು ಇಲ್ಲಿಗೆ ಭೇಟಿ ನೀಡಿ 7–8 ತಿಂಗಳೇ ಕಳೆದಿದೆ. ಎರಡು ತಿಂಗಳ ಹಿಂದೆ ಬಂದಿದ್ದ ಶಾಸಕ ಪುಟ್ಟರಂಗಶೆಟ್ಟರು ಚರಂಡಿ ಸರಿಪಡಿಸುವ ಭರವಸೆ ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT