ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಂದ ದೂರವಾದ ನೀರಿನ ಘಟಕ!

Last Updated 4 ಸೆಪ್ಟೆಂಬರ್ 2017, 7:13 IST
ಅಕ್ಷರ ಗಾತ್ರ

ಮಡಿಕೇರಿ: ಸರ್ಕಾರವು ಯಾವುದೇ ಯೋಜನೆ ಅನುಷ್ಠಾನಕ್ಕೆ ತಂದರೂ ಅದು ಸಾರ್ವಜನಿಕರಿಗೆ ಅನುಕೂಲ ಆಗಬೇಕು. ಅದು ಸುಲಭವಾಗಿ ಹಾಗೂ ಹತ್ತಿರದಲ್ಲೇ ಬಳಕೆಗೆ ಬರುವಂತಾಗಬೇಕು. ಆದರೆ, ಮಡಿಕೇರಿಯಲ್ಲಿ ಶುದ್ಧ ನೀರಿನ ಘಟಕ ಆರಂಭಿಸಲಾಗಿದ್ದು ಸಾರ್ವಜನಿಕರಿಂದ ಮಾರು ದೂರವಿದೆ; ಅದು ನಾಗರಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ!

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅವರ 2015–16ನೇ ಸಾಲಿನ ಅನುದಾನದ ಅಡಿ ₨ 9.95 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿತ್ತು. ಅದು ಆರಂಭಗೊಂಡು ಮೂರು ತಿಂಗಳು ಕಳೆದಿದ್ದು ‘ಮಂಜಿನ ನಗರಿ’ಯ ಜನರ ಬಳಕೆಗೆ ಮಾತ್ರ ಬರುತ್ತಿಲ್ಲ. ದೂರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿರ್ಮಾಣ ಮಾಡಿರುವುದೇ ಅದಕ್ಕೆ ಪ್ರಮುಖ ಕಾರಣ.

ಜನವಸತಿ ಅಥವಾ ನಗರದ ಹೃದಯಭಾಗದಲ್ಲಿ ತೆರೆದಿದ್ದರೆ ಎಲ್ಲರೂ ಬಳಕೆ ಮಾಡಿಕೊಳ್ಳಲು ಸಾಧ್ಯವಿತ್ತು. ನಿವೇಶನ ಕೊರತೆಯ ನೆಪವೊಡ್ಡಿ ದೂರದಲ್ಲಿ ಸ್ಥಾಪಿಸಿರುವ ಪರಿಣಾಮ ಜನರ ಉಪಯೋಗಕ್ಕೆ ಬರುತ್ತಿಲ್ಲ.

‘₨ 5ಕ್ಕೆ 20 ಲೀಟರ್‌ ಶುದ್ಧ ನೀರು ಕೊಡಲಾಗುತ್ತಿದೆ. ನಿತ್ಯ 30 ಕ್ಯಾನ್‌ ಮಾತ್ರ ನೀರು ತೆಗೆದುಕೊಂಡು ಹೋಗುತ್ತಾರೆ. ಹತ್ತಿರದ ಹೋಟೆಲ್‌, ಪೆಟ್ರೋಲ್‌ ಬಂಕ್‌, ಸರ್ಕಾರಿ ಕಚೇರಿಯ ಸಿಬ್ಬಂದಿ ಮಾತ್ರ ಇಲ್ಲಿಂದ ನೀರು ಕೊಂಡೊಯ್ಯುತ್ತಾರೆ. ಸುದರ್ಶನ ವೃತ್ತದ ಸುತ್ತಮುತ್ತ, ಸಿದ್ದಾಪುರ ರಸ್ತೆಯ ನಿವಾಸಿಗಳಿಗೆ ಮಾತ್ರ ಅನುಕೂಲವಿದೆ’ ಎನ್ನುತ್ತಾರೆ ಸಿಬ್ಬಂದಿ.

‘ರಾಜಾಸೀಟ್‌ ಬಳಿ ಮತ್ತೊಂದು ಘಟಕ ತೆರೆಯಲು ಕಟ್ಟಡ ನಿರ್ಮಿಸಲಾಗುತ್ತಿದೆ. ಅದು ಆರಂಭವಾದರೆ ಸ್ಟೋನ್‌ ಹಿಲ್ಸ್‌, ಹೊಸ ಬಡಾವಣೆ, ಚೌಡೇಶ್ವರಿ ನಗರ, ರಾಜಾಸೀಟ್‌ ಸುತ್ತಮುತ್ತಲ ಅಂಗಡಿ, ಹೋಟೆಲ್‌, ಕ್ಲಬ್‌ ಮಹೀಂದ್ರಾ ರಸ್ತೆಯ ನಿವಾಸಿಗಳೂ ಶುದ್ಧ ನೀರು ಕುಡಿಯಬಹುದು’ ಎನ್ನುತ್ತಾರೆ ಅವರು.

ಮೈಸೂರು ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಘಟಕ ಮಾತ್ರ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬರುತ್ತಿಲ್ಲ. ಯಾವಾಗಲೂ ಖಾಲಿ ಇರುತ್ತದೆ. ಆಟೊ, ನಾಲ್ಕು ಚಕ್ರದ ವಾಹನವುಳ್ಳವರು ಮಾತ್ರ ನೀರು ಕೊಂಡೊಯ್ಯಲು ಸಾಧ್ಯವಿದೆ.

ಪುಟಾಣಿ ನಗರ, ಮಹದೇವಪೇಟೆ, ಮಾರುಕಟ್ಟೆ, ಕಾನ್ವೆಂಟ್‌ ಜಂಕ್ಷನ್‌, ಪೊಲೀಸ್‌ ವಸತಿಗೃಹ, ಡೇರಿ ಫಾರಂ, ಕೈಗಾರಿಕಾ ಬಡಾವಣೆಯ ನಿವಾಸಿಗಳಿಗೆ ಈಗ ಸ್ಥಾಪಿಸಿರುವ ಕುಡಿಯುವ ನೀರಿನ ಘಟಕ ಬಳಕೆಗೆ ಬರುತ್ತಿಲ್ಲ. ಹೀಗಾಗಿ, ಈ ಬಡಾವಣೆಯ ನಿವಾಸಿಗಳು ಇಂದಿಗೂ ನಗರಸಭೆ ಪೂರೈಸುವ ಮಣ್ಣು ಮಿಶ್ರಿತ ನೀರನ್ನೇ ಬಳಕೆ ಮಾಡುವ ಅನಿವಾರ್ಯತೆಯಿದೆ. ಹೃದಯಭಾಗದಲ್ಲಿ ಸ್ಥಾಪಿಸಿದ್ದರೆ ಜನರು ನಡೆದುಕೊಂಡು ಬಂದಾದರೂ ನೀರು ಕೊಂಡೊಯ್ಯಲು ಸಾಧ್ಯವಿತ್ತು ಎನ್ನುತ್ತಾರೆ ನಾಗರಿಕರು.

ಕಾಲರಾ ಭೀತಿ: ಎರಡು ತಿಂಗಳ ಹಿಂದೆ ನಗರದಲ್ಲಿ ಸುರಿದ ಮಳೆಯಿಂದ ಕುಡಿಯುವ ನೀರು ಪೂರೈಸುವ ಕೂಟುಹೊಳೆಗೆ ಕಲುಷಿತ ನೀರು ಮಿಶ್ರಣಗೊಂಡು ಕಾಲರಾ ಭೀತಿ ಎದುರಾಗಿತ್ತು. ಸಾಕಷ್ಟು ಮಕ್ಕಳು ಜ್ವರ, ವಾಂತಿಯಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮಳೆ ಬಂದ ಸಂದರ್ಭಗಳಲ್ಲಿ ನೀರು ಕಲುಷಿತಗೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಜನವಸತಿ ಪ್ರದೇಶ ಅಥವಾ ನಾಲ್ಕೈದು ಬಡಾವಣೆಗೆ ತೆರಳುವ ಮಾರ್ಗದಲ್ಲಿ ಈ ನೀರಿನ ಘಟಕ ತೆರೆದಿದ್ದರೆ ಬಹುತೇಕರಿಗೆ ಅನುಕೂಲ ಆಗುತ್ತಿತ್ತು ಎನ್ನುತ್ತಾರೆ ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT