ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಆರೋಪ

Last Updated 4 ಸೆಪ್ಟೆಂಬರ್ 2017, 7:37 IST
ಅಕ್ಷರ ಗಾತ್ರ

ಮೈಸೂರು: ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ರಾಜ್ಯವನ್ನು ನಿರ್ಲಕ್ಷಿಸುತ್ತಲೇ ಬರುತ್ತಿರುವ ಕೇಂದ್ರ ಸರ್ಕಾರ, ಈ ಬಾರಿ ನಡೆಸಿದ ಸಂಪುಟ ವಿಸ್ತರಣೆಯಲ್ಲಿಯೂ ಅನ್ಯಾಯ ಎಸಗಿದೆ. ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ರಾಜ್ಯಕ್ಕೆ ನೀಡಿಲ್ಲ ಎಂದು ಸಂಸದ ಧ್ರುವನಾರಾಯಣ ಕಿಡಿಕಾರಿದರು.

ಬಿಜೆಪಿಯಲ್ಲಿ ರಾಜ್ಯದಿಂದ 16 ಸಂಸದರು ಇದ್ದರೂ ಕೆಲವೇ ಮಂದಿ ಅಷ್ಟೇ ಸಂಪುಟದಲ್ಲಿದ್ದಾರೆ. ಅವರಿಗೂ ಪ್ರಮುಖ ಖಾತೆಗಳನ್ನು ನೀಡಿಲ್ಲ. ಈ ಬಾರಿಯಾದರೂ ತಾರತಮ್ಯ ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಲತಾಯಿ ಧೋರಣೆ ಮುಂದುವರಿದಿದೆ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರದ್ದಾದ ಶೇ 99ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಹಾಗಿದ್ದರೆ, ಕಪ್ಪುಹಣ ತೊಡೆದು ಹಾಕಿದ್ದು ಹೇಗೆ? ನಕಲಿ ನೋಟುಗಳನ್ನು ತಡೆಗಟ್ಟಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.

ನೋಟುಗಳನ್ನು ಚಲಾವಣೆಯಿಂದ ರದ್ದು ಮಾಡುವಾಗ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟ ಹಾಕುವ ಉದ್ದೇಶ ಇದೆ ಎಂದು ಮೋದಿ ಹೇಳಿದ್ದರು. ಆದರೆ, ನೋಟು ರದ್ದತಿ ಬಳಿಕ ದೇಶದಲ್ಲಿ ಉಗ್ರರ ಕೃತ್ಯಗಳು ಹೆಚ್ಚಾಗಿವೆ. ನೋಟು ರದ್ದತಿಗೆ ಕೇಂದ್ರ ನೀಡಿದ ಯಾವುದೇ ಉದ್ದೇಶಗಳೂ ಈಡೇರಿಲ್ಲ ಎಂದು ಅವರು ಟೀಕಿಸಿದರು.

ನೋಟು ರದ್ದತಿ ಬಳಿಕ ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದೆ. 2015–16ನೇ ಸಾಲಿನಲ್ಲಿ ಆರ್‌ಬಿಐ ನೋಟುಗಳ ಮುದ್ರಣಕ್ಕೆ ₹ 3,421 ಕೋಟಿ ವ್ಯಯಿಸುತ್ತಿತ್ತು. ಮರುವರ್ಷ ₹ 7,965 ಕೋಟಿ ವೆಚ್ಚ ಮಾಡಿದೆ. 132 ಮಂದಿ ಮಂದಿ ನೋಟು ಬದಲಾವಣೆಗಾಗಿ ಸಾಲಿನಲ್ಲಿ ನಿಂತು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಸಣ್ಣ ಮತು ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ಇದರಿಂದ 20 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇಷ್ಟೆಲ್ಲ ದುಷ್ಪರಿಣಾಮವಾದರೂ ರಾಹುಲ್ ಗಾಂಧಿ ಸುಮ್ಮನಿದ್ದಾರೆ. ಇದು ಅವರ ಅಸಮರ್ಥತೆಯೇ ಎಂಬ ಪ್ರಶ್ನೆಗೆ ನಸುನಗುತ್ತಾ ಪ್ರತಿಕ್ರಿಯಿಸಿದ ಅವರು, ‘ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತಮ ಸಂಘಟಕರು’ ಎಂದಷ್ಟೇ ಹೇಳಿದರು.

ಶಾಸಕ ಗೋವಿಂದ ಕಾರಜೋಳ ಅವರು ಹಿರಿಯರು. ಆದರೆ, ರಾಹುಲ್ ಗಾಂಧಿ ಅವರ ವೈಯಕ್ತಿಕ ವಿಷಯ ಕುರಿತು ಆಡಿರುವ ಮಾತುಗಳು ಅವರಿಗೆ ಗೌರವ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಅಂತರಾಳ ಗೊತ್ತಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಎಲ್ಲ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮತೋಲಿತ ಸಂಪುಟ ರಚಿಸಿದ್ದಾರೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT