ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪಕ್ಷಗಳ ದುರಾಡಳಿತ ಖಂಡಿಸಿ ಹೋರಾಟ’

Last Updated 4 ಸೆಪ್ಟೆಂಬರ್ 2017, 9:32 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ರೈತರ, ಶ್ರೀ ಸಾಮಾನ್ಯರ ಕಾಳಜಿಯನ್ನು ಮರೆತು ದುರಾಡಳಿತವನ್ನು ನಡೆಸುತ್ತಿದ್ದಾರೆ. ಅವರ ವಿರುದ್ಧ ಹೋರಾಡಲು ಜನರ ಬಳಿ ಬಂದಿದ್ದೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು. ಪಟ್ಟಣದ ತೇರುಬೀದಿಯಲ್ಲಿ ಭಾನುವಾರ ನಡೆದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಮೊಳಕಾಲ್ಮುರು ಕ್ಷೇತ್ರದ ಜನರು ಬರಗಾಲದ ಹೊಡೆತಕ್ಕೆ ಸಿಕ್ಕು ನಲುಗಿದ್ದಾರೆ. ಇಲ್ಲಿನ ಅನ್ನದಾತ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾನೆ. ಅವರ ನೆರವಿಗೆ ಯಾವ ಸರ್ಕಾರಗಳು ಧಾವಿಸಿಲ್ಲ. ದೇಶದಲ್ಲಿ ಹಿಂದೆಂದೂ ಕಂಡರಿಯದಂತಹ ಕೆಟ್ಟ ಆಡಳಿತವನ್ನು ನೋಡುತ್ತಿದ್ದೇವೆ. ಮುಸ್ಲಿಂ ಸಮುದಾಯವನ್ನು ಶೋಷಣೆ ಮಾಡುತ್ತಿದ್ದಾರೆ.

ಯಾವ ಪಕ್ಷದವರಿಗೂ ರೈತರ, ಶ್ರೀಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಹಿಂದು ಮುಸ್ಲಿಂ ಸಮುದಾಯದ ಭಾವೈಕ್ಯತೆಗೆ ಶ್ರಮಿಸುತ್ತಿರುವ ಏಕೈಕ ಪಕ್ಷ ಜೆಡಿಎಸ್‌ ಆಗಿದೆ’ ಎಂದರು.
’ನಾನು ಪ್ರಧಾನಿಯಾಗಿ ಹತ್ತೂವರೆ ತಿಂಗಳಲ್ಲಿ ದೇಶದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಪ್ರಧಾನಿಯಾಗಿ ಕೇವಲ 10 ದಿನದಲ್ಲಿ ದೇಶದ ರೈತರಿಗೆ ರಸಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಪರಿಕರಗಳ ಮೇಲೆ ಶೇ 90ರಷ್ಟು ಸಬ್ಸಿಡಿಯನ್ನು ಘೋಷಿಸಲಾಯಿತು.

ಸ್ಥಳಿಯ ಆಡಳಿತದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕಾರ್ಯಮಾಡಿದ್ದೇನೆ. ಇಲ್ಲಿನ ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸಿದ್ದೇನೆ’ ಎಂದು ತಿಳಿಸಿದರು. 45 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತ ಎಚ್.ವಿಶ್ವನಾಥ್‌ರನ್ನು ಕಾಂಗ್ರೆಸ್‌ ಹೀನಾಯವಾಗಿ ನಡೆಸಿಕೊಂಡಿದೆ. ಸಿದ್ದರಾಮಯ್ಯ ಅವರಿಗೆ ಸೋನಿಯಾಗಾಂಧಿ ಅವರನ್ನು ಪರಿಚಯ ಮಾಡಿಸಿದ್ದೇ ಈ ವಿಶ್ವನಾಥ್. ಆದರೆ, ಅವರನ್ನೇ ಪಕ್ಷದಲ್ಲಿ ಮೂಲೆಗುಂಪು ಮಾಡಿದ ಸಿದ್ದರಾಮಯ್ಯ ರಾಜಕೀಯವಾಗಿ ಲಾಭ ಪಡೆದರು ಎಂದು ಆರೋಪಿಸಿದರು.

ಎಲ್ಲಾ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್‌ ಹೇಳಿದಂತೆ ನಡೆಯುತ್ತದೆ. ಆದರೆ ಜೆಡಿಎಸ್‌ ಪಕ್ಷಕ್ಕೆ ರಾಜ್ಯದ ಜನರೇ ಹೈಕಮಾಂಡ್. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ದೇಶದಲ್ಲಿ ಗ್ರಾಮವಾಸ್ತವ್ಯ, ದಲಿತರ ಮನೆಯಲ್ಲಿ ಸಹಭೋಜನ, ಏಡ್ಸ್‌ ಪೀಡಿತ ಮಹಿಳೆ ಮನೆಯಲ್ಲಿ ಊಟ ಸೇರಿದಂತೆ ಹಲವು ಪ್ರಗತಿಪರ ಕಾರ್ಯಗಳನ್ನು ಕೈಗೊಂಡು ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ಪಟೇಲ್‌ ಜಿ.ಎಂ. ತಿಪ್ಪೇಸ್ವಾಮಿಯವರನ್ನು ಗೆಲ್ಲಿಸುವ ಮೂಲಕ ನಿಮ್ಮ ಕಷ್ಟಗಳಿಗೆ ವಿಧಾನಸೌಧದಲ್ಲಿ ಧ್ವನಿಯಾಗುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಂದೇಶ ನೀಡಿದರು. ‘ನಾನು ನಾಲ್ಕಾರು ವರ್ಷಗಳ ಕಾಲ ಬದುಕಿರುತ್ತೇನೆ. ಅಷ್ಟರಲ್ಲಿ ಈ ಜಿಲ್ಲೆಯ ಎಲ್ಲಾ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತನೆ ಮಾಡಿಯೇ ತೀರುತ್ತೇನೆ’ ಎಂದು ಶಪಥ ಮಾಡಿದರು.

ರಾಜ್ಯ ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿದರು. ಶಾಸಕ ಸುರೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯರಾದ ರಮೇಶ್‌ಬಾಬು, ಚೌಡರೆಡ್ಡಿ ತೂಪಲ್ಲಿ, ‌ ಮುಖಂಡರಾದ ಕಲ್ಲೇರುದ್ರೇಶಪ್ಪ, ಶಾಮಯ್ಯ, ಶಿಪ್ರಸಾದ್‌ಗೌಡ್ರು, ಡಾ.ಸುಧಾಕರ್, ಜಿಲ್ಲಾಧ್ಯಕ್ಷ ಡಿ.ಯಶೋಧರ, ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಕೃಷ್ಣಮೂರ್ತಿ, ಮುಖಂಡರಾದ ಕಾಂತರಾಜ್, ಕೆ.ಸಿ.ವೀರೇಂದ್ರ (ಪಪ್ಪಿ), ಪ್ರತಾಪ್‌ಜೋಗಿ, ಜಿ.ಟಿ.ದೇವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT