ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77ರಲ್ಲೂ 20 ಕಿ.ಮೀ. ಸೈಕಲ್ ಹೊಡೆಯುವ ಕಾಯಕಯೋಗಿ

Last Updated 4 ಸೆಪ್ಟೆಂಬರ್ 2017, 9:34 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಕಣಿವೆಬಿಳಚಿಯ ಎ.ಮಂಜಪ್ಪ ಸುಮಾರು 40 ವರ್ಷಗಳಿಂದ ಪ್ರಜಾವಾಣಿ ಬಳಗಕ್ಕೆ ಸೇರಿದ ಪ್ರಕಟಣೆಗಳನ್ನು ವಿತರಿಸುತ್ತಾ ಕಾಯಕ ಯೋಗಿಯಾಗಿದ್ದಾರೆ. 77ರ ವಯಸ್ಸು ದಾಟಿರುವ ಮಂಜಪ್ಪ 1977ಕ್ಕೂ ಮೊದಲು ಬೇರೆ ಏಜೆಂಟರಿಂದ ಪತ್ರಿಕೆಗಳನ್ನು ಪಡೆದು ವಿತರಿಸುವ ಕೆಲಸ ಮಾಡುತ್ತಿದ್ದರು. ಗ್ರಾಮಸ್ಥರ ಪ್ರೋತ್ಸಾಹದಿಂದ 1981ರಲ್ಲಿ ಪ್ರಜಾವಾಣಿ ಪತ್ರಿಕೆಯ ವಿತರಕರಾಗಿ ಕಾರ್ಯ ನಿರ್ವಹಿಸುತ್ತಾ ಓದುಗರ ವಿಶ್ವಾಸ ಗಳಿಸಿದ್ದಾರೆ.

ಆರಂಭದಲ್ಲಿ ಕಣಿವೆಬಿಳಚಿ ಸೇರಿದಂತೆ, ಕೆಂಗಾಪುರ, ಹೊಸಳ್ಳಿ, ಕಂಸಾಗರ ಮುಂತಾದ ಗ್ರಾಮಗಳಿಗೆ ಕಾಲುನಡಿಗೆಯಲ್ಲಿ ಸಂಚರಿಸಿ ಪತ್ರಿಕೆಗಳನ್ನು ವಿತರಿಸುತ್ತಿದ್ದರು. ಆಮೇಳೆ ಹಳೆಯ ಬೈಸಿಕಲ್‌ ಖರೀದಿಸಿ ಮನೆ ಮನೆ ಸುತ್ತಿ ಪತ್ರಿಕೆಗಳನ್ನು ಸರಿಯಾದ ವೇಳೆಗೆ ತಲುಪಿಸತೊಡಗಿದರು. ಈಗಲೂ ಅವರು ವಿತರಣೆಗೆ ಬೈಸಿಕಲ್‌ ಮೇಲೆ 20 ಕಿ.ಮೀ. ಸಂಚರಿಸಿಯೇ ಪತ್ರಿಕೆ ಹಂಚುತ್ತಿರುವುದು ಹರೆಯದ ಯುವಕರನ್ನೂ ನಾಚಿಸುತ್ತದೆ.

‘ನನಗೆ ಪ್ರಜಾವಾಣಿ ಪತ್ರಿಕೆ ಹಂಚುವಿಕೆಯಲ್ಲಿ ಸಂಪೂರ್ಣ ತೃಪ್ತಿ ಸಿಕ್ಕಿದೆ. ಗ್ರಾಮದ ಹೆಚ್ಚಿನ ಜನ ವಿವೇಕಿಗಳಾಗಿದ್ದಾರೆ. ಪತ್ರಿಕೆಯ ಮೌಲ್ಯ ಅವರಿಗೆ ತಿಳಿದಿದೆ. ಪ್ರತಿದಿನ ಓದುಗರು ನನಗಾಗಿ ಕಾಯುತ್ತಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸುವುದು ನನ್ನ ಕಾಯಕ.

ಈವರೆಗೆ ಯಾವ ಗ್ರಾಹಕನೂ ಪತ್ರಿಕೆಯ ಹಣ ಕೊಡದೆ ಮೋಸಮಾಡಿಲ್ಲ. ಕೆಲವು ದಿನ ತಡವಾದರೂ ಸುಧಾರಿಸಿಕೊಂಡು ಹೋಗುತ್ತಿದ್ದೇನೆ. ಆದರೆ ಪ್ರತಿ ತಿಂಗಳೂ ಪತ್ರಿಕೆಯ ವಿತರಕರಿಗೆ ನಿಗದಿತ ಸಮಯಕ್ಕೆ ಹಣ ತಲುಪಿಸುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಈಗಿನ ಟಿ.ವಿ.ಮಾಧ್ಯಮದ ಪೈಪೋಟಿಯಲ್ಲಿಯೂ ಪ್ರಜಾವಾಣಿ ಪತ್ರಿಕೆಯ ಸಂಖ್ಯೆಯನ್ನು ಕಡಿಮೆ ಮಾಡದೇ ಓದುಗರು ಪತ್ರಿಕೆ ಕೊಳ್ಳುವಂತೆ ಮಾಡುವಲ್ಲಿ ಸಫಲನಾಗಿರುವ ಹೆಮ್ಮೆ ನನ್ನದು’ ಎನ್ನುತ್ತಾರೆ ಮಂಜಪ್ಪ.

ಇಂತಹ ನಿಷ್ಠಾವಂತರನ್ನು ಗುರುತಿಸಿ ವಿವಿಧ ಸಂಘಟನೆಗಳು ಮತ್ತು ಸ್ಥಳೀಯ ಆಡಳಿತ ಸನ್ಮಾನಿಸಬೇಕು ಎನ್ನುತ್ತಾರೆ ಕಣಿವೆಬಿಳಚಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಮಂಜಪ್ಪ. ಇಂತಹ ಹಿರಿಯ ಪತ್ರಿಕಾ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ವತಿಯಿಂದ ಮಾಸಾಶನ ನೀಡುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನಿತಾ ನರಸಿಂಗರಾವ್‌ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT