ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಚಳಿಗೂ ನಿಲ್ಲದ ಶ್ರಮದ ಕಾಯಕ

ಅಕ್ಷರ ಗಾತ್ರ

ದಾವಣಗೆರೆ: ಜಿಟಿ ಜಿಟಿ ಮಳೆ ಸುರಿಯಲಿ, ಮೈ ನಡುಗಿಸುವ ಚಳಿಯೇ ಇರಲಿ, ಇವರ ಕಾಯಕಕ್ಕೆ ತಡೆಯಿಲ್ಲ. ಹೊತ್ತು ಮೂಡುವ ಮುನ್ನ ಓದುಗರ ಮನೆ ಬಾಗಿಲಿಗೆ ದಿನಪತ್ರಿಕೆ ಹೊತ್ತು ತರುವ ವಿತರಕರದ್ದು ಶ್ರಮದ ಕಾಯಕ. ಓದುಗರಿಗೆ ಪತ್ರಿಕೆ ಮುಟ್ಟಿಸಿದ ಮೇಲಷ್ಟೆ ನಿಟ್ಟುಸಿರು ಬಿಡುವವರು ಇವರು. ಈ ಕಾಯಕ ಜೀವಿಗಳಿಗೆ ಬೆರಳೆಣಿಕೆ ದಿನಗಳಲ್ಲಷ್ಟೆ ರಜೆ. ಇವರ ಶ್ರಮ ಗೌರವಿಸುವುದಕ್ಕೆಂದು ಸೆಪ್ಟೆಂಬರ್‌ 4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತಿದೆ. ಈ ದಿನಾಚರಣೆಯ ನೆಪದಲ್ಲಿ ವಿತರಕರ ಶ್ರಮವನ್ನು ನೆನೆಯುವ ಪ್ರಯತ್ನ ಇಲ್ಲಿದೆ...

ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮದಲ್ಲಿಯೂ ಸ್ಪರ್ಧೆ ಸೃಷ್ಟಿಯಾಗಿದೆ. ಈ ಹಿಂದೆ ಒಂದು ಸಂಸ್ಥೆಯ ಪತ್ರಿಕೆ ವಿತರಿಸುತ್ತಿದ್ದವರು ಈಗ ಐದಾರು ಬಗೆಯ ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ಧಾವಂತದಲ್ಲಿರುತ್ತಾರೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಪ್ರತಿಗಳನ್ನು ಒಂದೆರಡು ತಾಸಿನಲ್ಲಿ ಹಂಚುತ್ತಾರೆ.

ಸಾವಿರಕ್ಕೂ ಅಧಿಕ ವಿತರಕರು: ನಗರದಲ್ಲಿ ‘ಪ್ರಜಾವಾಣಿ’ ಸೇರಿದಂತೆ ಇತರೆ ಪತ್ರಿಕೆಗಳನ್ನು ಹಂಚುವ 10 ಮುಖ್ಯ ಏಜೆಂಟರಿದ್ದಾರೆ. ಇವರಿಗೆ 150ಕ್ಕೂ ಅಧಿಕ ಉಪ ಏಜೆಂಟ್‌ಗಳಿದ್ದು, ಸುಮಾರು 1 ಸಾವಿರ ಜನ ಸಹಾಯಕರಾಗಿ ದುಡಿಯುತ್ತಿದ್ದಾರೆ. ಇವರು ನಿತ್ಯವೂ ಬೆಳಿಗ್ಗೆ ಪತ್ರಿಕೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಡ ವಿದ್ಯಾರ್ಥಿಗಳು. ಓದಿಗೆ, ಕುಟುಂಬಕ್ಕೆ ಸಹಾಯವಾಗಲಿ ಎಂಬ ಕಾರಣಕ್ಕೆ ನಿತ್ಯವೂ ಮುಂಜಾನೆ 4ರಿಂದ ಮನೆ ಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ‘ಪ್ರಜಾವಾಣಿ’ಯ ಮುಖ್ಯ ಏಜೆಂಟ್‌ ಅರುಣ್‌ ಕುಮಾರ್‌.

‘ಗಣೇಶ ಚತುರ್ಥಿ, ಆಯುಧ ಪೂಜೆ, ನರಕ ಚತುರ್ದಶಿ ಹಾಗೂ ಯುಗಾದಿ ಹಬ್ಬದ ದಿನ ಪತ್ರಿಕೆ ಮುದ್ರಣ ಇರುವುದಿಲ್ಲ. ಈ ಹಬ್ಬಗಳ ಮರುದಿನ ಮಾತ್ರ ನಮಗೆಲ್ಲಾ ರಜೆ. ಉಳಿದಂತೆ ನಮ್ಮ ಮನೆಯಲ್ಲಿ ಎಂತಹ ಸಭೆ, ಸಮಾರಂಭಗಳಿದ್ದರೂ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುತ್ತೇವೆ. ಕೆಲವೊಮ್ಮೆ ಪತ್ರಿಕೆ ವಿತರಿಸುವ ಹುಡುಗರು ರಜೆ ಹಾಕಿದಾಗ ತೊಂದರೆಯಾಗುತ್ತದೆ. ನಾವೇ ಅವರ ಕೆಲಸ ಮಾಡುತ್ತೇವೆ’ ಎಂದು ಹೇಳುತ್ತಾರೆ ಅವರು.

ಮಳೆಗಾಲದಲ್ಲಿ ತೊಂದರೆ: ‘ಮಳೆಗಾಲದ ಸಮಯದಲ್ಲಿ ಪತ್ರಿಕೆಗಳ ವಿತರಕರಿಗೆ ತುಂಬಾ ತೊಂದರೆಯಾಗುತ್ತದೆ. ವ್ಯಾನ್‌ಗಳಿಂದ ಬಂಡಲ್‌ಗಳನ್ನು ಇಳಿಸಿಕೊಳ್ಳಲೂ ಕಷ್ಟ. ವಿತಕರಿಗೆ, ಹುಡುಗರಿಗೆ ಪತ್ರಿಕೆ ಹಂಚುವುದು ದೊಡ್ಡ ಸವಾಲು. ಮಳೆ ನೀರು ಸ್ವಲ್ಪ ಬಿದ್ದರೂ ಪತ್ರಿಕೆಗಳು ಹಾಳಾಗುತ್ತವೆ. ಗ್ರಾಹಕರು ಪತ್ರಿಕೆ ಪಡೆಯುವುದಿಲ್ಲ. ವಿತರಕರಿಗೆ ಅನುಕೂಲವಾಗಲೆಂದು ಶಿವಮೊಗ್ಗದಲ್ಲಿ ನಿರ್ದಿಷ್ಟವಾದ ಜಾಗ ಮೀಸಲಿಡಲಾಗಿದೆ. ಅದರಂತೆ ದಾವಣಗೆರೆಯ ನಗರಪಾಲಿಕೆ ಆವರಣ ಅಥವಾ ಹೈಸ್ಕೂಲ್‌ ಮೈದಾನದಲ್ಲಿ ನಿರ್ದಿಷ್ಟ ಜಾಗ ಮೀಸಲಿಟ್ಟರೆ ನಮಗೆ ಅನುಕೂಲವಾಗುತ್ತದೆ’ ಎಂದು ಬೇಡಿಕೆ ಮುಂದಿಡುತ್ತಾರೆ ವಿತರಕರಾದ ಅರುಣ್‌ಕುಮಾರ್‌ ಹಾಗೂ ಎ.ಎನ್‌.ಕೃಷ್ಣಮೂರ್ತಿ.

‘ಇದೊಂದು ಅಸಂಘಟಿತ ವಲಯವಾಗಿದ್ದು, ಅಂದಿನ ಪತ್ರಿಕೆಯನ್ನು ಅಂದೇ ಗ್ರಾಹಕರ ಮನೆಗೆ ಸಕಾಲಕ್ಕೆ ತಲುಪಿಸಿದರೆ ಮಾತ್ರ ನಮಗೆ ಕೂಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಮನೆ ಮನೆಗೆ ಪತ್ರಿಕೆ ಹಾಕಲು ಹುಡುಗರು ಬರುತ್ತಿಲ್ಲ. ನಾವೇ ಗ್ರಾಹಕರ ಮನೆಗೆ ಪತ್ರಿಕೆ ತಲುಪಿಸಬೇಕಾಗುತ್ತದೆ’ ಎನ್ನುತ್ತಾರೆ ಅರುಣ್‌ಕುಮಾರ್‌.

ವಿಮಾ ಸೌಲಭ್ಯಕ್ಕೆ ಮನವಿ: ಗ್ರಾಹಕರ ಮನೆಗೆ ಸಕಾಲಕ್ಕೆ ಪತ್ರಿಕೆ ವಿತರಿಸಬೇಕು ಎಂಬ ಧಾವಂತ ಇರುತ್ತದೆ. ಆ ಸಮಯದಲ್ಲಿ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಅಪಾಯ ಇರುತ್ತದೆ. ಪತ್ರಿಕೆ ವಿತರಕರಿಗೆ ಸರ್ಕಾರ ವಿಮಾ ಸೌಲಭ್ಯ ನೀಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು. ಓದುವ ಹುಮ್ಮಸ್ಸಿನಲ್ಲಿರುವ ಮನಸ್ಸುಗಳಿಗೆ ಪತ್ರಿಕೆ ತಲುಪಿಸುವ ಕಾಯಕ ಜೀವಿಗಳಿಗೂ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು ಎಂಬುದು ವಿತರಕರ ಬೇಡಿಕೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT